ಮಂಗಳವಾರ, ಮಾರ್ಚ್ 2, 2021
30 °C

ಮಗು ಹೊರಟಿತು ಶಾಲೆಗೆ!

ಪವಿತ್ರಾ ಶೆಟ್ಟಿ Updated:

ಅಕ್ಷರ ಗಾತ್ರ : | |

ಮಗು ಹೊರಟಿತು ಶಾಲೆಗೆ!

ಮತ್ತೊಂದು ಶೈಕ್ಷಣಿಕ ವರ್ಷ ಆರಂಭವಾಗಿದೆ. ಇತ್ತ, ಮೊದಲ ಬಾರಿ ಸ್ಕೂಲಿಗೆ ಹೋಗುವ ಮಗುವಿನ ಮನಸ್ಸಿನಲ್ಲಿ ‘ಸೆಪರೇಷನ್‌ ಆ್ಯಂಕ್ಸೈಟಿ’ (ಅಪ್ಪ–ಅಮ್ಮನ ನೆರಳಿನಿಂದ ಮೊದಲ ಬಾರಿಗೆ ದೀರ್ಘ ಕಾಲ ಹೊರಗೆ ಹೋಗುವುದು) ಕಾಡುತ್ತಿದ್ದರೆ, ಹೊಸದಾಗಿ ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರ ಮನದಲ್ಲೂ ನೂರು ಬಗೆಯ ಆತಂಕದ ಅಲೆಗಳು ಎದ್ದಿವೆ. ತಾವು ಇಷ್ಟಪಟ್ಟು ಆಯ್ದುಕೊಂಡ ಶಾಲೆಯ ವಾತಾವರಣ ಮಗುವಿಗೆ ಒಗ್ಗುತ್ತದೋ–ಇಲ್ಲವೋ, ಅಕ್ಕರೆಯಿಂದ ಬೆಳೆಸಿದ ಮಕ್ಕಳ ತುಂಟತನ ಮತ್ತು ಮೊಂಡಾಟವನ್ನು ಆ ಶಾಲೆಯ ಶಿಕ್ಷಕರು ಮತ್ತು ಆಯಾಗಳು ಹೇಗೆ ನಿಭಾಯಿಸುತ್ತಾರೆ... ಹೀಗೆ ಮಕ್ಕಳ ಪೋಷಕರ ಆತಂಕ ಹೇಳತೀರದು.ಬೆಂಗಳೂರು ಮಹಾನಗರದಲ್ಲಿ ಸಾಕಷ್ಟು ಶಾಲೆಗಳಿವೆ. ಆದರೆ ಇಂದಿನ ಬಹುತೇಕ ಪೋಷಕರ ಗಮನ ನೆಟ್ಟಿರುವುದು ಕೆಲವೇ ಕೆಲವು ಪ್ರತಿಷ್ಠಿತ ವಿದ್ಯಾಕೇಂದ್ರಗಳತ್ತ. ತಮ್ಮ ಮಗು ಪ್ರತಿಷ್ಠಿತ ಶಾಲೆಯಲ್ಲಿಯೇ ಓದಬೇಕು. ಅಲ್ಲಿ ವ್ಯಾಸಂಗ ಮಾಡಿ ಮುಂದೆ ದೊಡ್ಡ ಪಗಾರದ ಹುದ್ದೆಯನ್ನು ಅಲಂಕರಿಸಬೇಕು ಎಂಬ ಆಸೆ ಪೋಷಕರದ್ದು. ಒಟ್ಟಿನಲ್ಲಿ ಮಕ್ಕಳ ಭವಿಷ್ಯದಲ್ಲೇ ತಮ್ಮ ಬದುಕಿನ ನೆಮ್ಮದಿ ಕಾಣುವ ಪೋಷಕರ ಓಡಾಟ, ಸೀಟಿಗಾಗಿ ಪರದಾಟ, ಮನೆಗಾಗಿ ಅಲೆದಾಟಗಳು ಚುರುಕಾಗುವುದು ಈ ಕಾಲದಲ್ಲಿಯೇ.ಎಷ್ಟೇ ಖರ್ಚಾದರೂ ಪರವಾಗಿಲ್ಲ ಮಕ್ಕಳ ಭವಿಷ್ಯ ಮುಖ್ಯ ಎನ್ನುವ ಪೋಷಕರ ಸಂಖ್ಯೆ ಹೆಚ್ಚಾಗಿರುವುದರಿಂದ ಅವರೆಲ್ಲರೂ ಬಹು ನಿರೀಕ್ಷೆಗಳೊಂದಿಗೆ ಪ್ರತಿಷ್ಠಿತ ಶಾಲೆಯ ಬಾಗಿಲು ತಟ್ಟುತ್ತಿದ್ದಾರೆ. ಈ ಮನೋಭಾವ ಹೆಚ್ಚುತ್ತಿರುವುದರಿಂದ ಪ್ರತಿಷ್ಠಿತ ಶಾಲೆಗಳಿಗೆ ಅರ್ಜಿ ಹಾಕಿ, ಅಲ್ಲಿ ಸೀಟು ದಕ್ಕಿಸಿಕೊಳ್ಳುವುದೂ ಒಂದು ಸಾಹಸ ಎನಿಸುತ್ತಿದೆ. ಶಾಲೆಯಲ್ಲಿ ಸೀಟು ಸಿಕ್ಕ ನಂತರ ಪೋಷಕರ ಮನದಲ್ಲಿ ಹಲವು ಯೋಜನೆಗಳು ಮೊಳೆಯುತ್ತವೆ. ತಮ್ಮ ಮಕ್ಕಳು ಓದುವ ಶಾಲೆ ಮನೆಗೆ ಹತ್ತಿರವಿರಬೇಕು ಎಂಬ ಉದ್ದೇಶ ವಾಸಸ್ಥಳ ಬದಲಾವಣೆಗೂ ಕಾರಣವಾಗುತ್ತಿದೆ. ಅದೇ ರೀತಿ, ಮಕ್ಕಳು ಓದುವ ಶಾಲೆಯ ವಾತಾವರಣ ಚೆನ್ನಾಗಿರಬೇಕು ಎಂಬ ಆಸೆಯೂ ಪೋಷಕರಲ್ಲಿ ಗರಿಗೆದರುತ್ತವೆ. ಅದಕ್ಕೆ ತಕ್ಕಂತೆ ನಗರದಲ್ಲಿರುವ ಶಾಲೆಗಳು ಪೋಷಕರ ಮನಸ್ಥಿತಿಗೆ ಸ್ಪಂದಿಸುತ್ತಿವೆ. ಶಾಲೆಗಳ ನಡುವೆಯೂ ಸ್ಪರ್ಧೆ ಹೆಚ್ಚಿರುವುದರಿಂದ ಮಕ್ಕಳನ್ನು ಆಕರ್ಷಿಸಲು ವಿವಿಧ ನಮೂನೆಯ ಆಟ, ಗ್ರೀಟಿಂಗ್ಸ್ ಮಾದರಿಯ ಅಂಕಪಟ್ಟಿಗಳನ್ನು ನೀಡುತ್ತಿವೆ. ಹಾಗಾಗಿ ಮಕ್ಕಳಿಗೆ ಶಾಲೆಯೆಂದರೆ ಈಗ ಭಯವಿಲ್ಲ. ನಗರದ ಒಂದಷ್ಟು ಮಂದಿ ಪೋಷಕರು ತಮ್ಮ ಮಕ್ಕಳನ್ನು ಮೊದಲು ಶಾಲೆಗೆ ಸೇರಿಸಿದ ಅನುಭವವನ್ನು ‘ಮೆಟ್ರೊ’ದೊಂದಿಗೆ ಹಂಚಿಕೊಂಡಿದ್ದಾರೆ.ಮಗುವಿಗಾಗಿ ಮನೆ ಬದಲಾವಣೆ

‘ನನ್ನ ಮಗಳನ್ನು ಈ ವರ್ಷ ಶಿಶುವಿಹಾರಕ್ಕೆ ಸೇರಿಸಿದ್ದೇನೆ. ಅವಳ ವಿದ್ಯಾಭ್ಯಾಸಕ್ಕಾಗಿ ಪ್ರಶಾಂತನಗರದಿಂದ ಪೀಣ್ಯಕ್ಕೆ ಮನೆ ಬದಲಾಯಿಸಿದ್ದಾಯಿತು. ಸುಮಾರು ಹತ್ತು ಶಾಲೆಗಳನ್ನು ವಿಚಾರಿಸಿ ಅವಳನ್ನು ಪೀಣ್ಯದ ಹತ್ತಿರದ ಐನ್‌ಸ್ಟೀನ್‌ ಶಾಲೆಗೆ ಸೇರಿಸಿದ್ದೇನೆ. ಇಲ್ಲಿ ಒಂದನೇ ತರಗತಿಯವರೆಗೂ ಇದೆ. ಹಾಗಾಗಿ ಇನ್ನು ಎರಡು ವರ್ಷ ಚಿಂತೆ ಇಲ್ಲ.ಆ ಶಾಲೆಯಲ್ಲಿರುವ ಆಯಾಗಳು ಹೇಗಿದ್ದಾರೆ, ಸ್ಕೂಲ್‌ನ ವಾತಾವರಣ ಹೇಗಿದೆ, ಯಾವ ರೀತಿ ಆಟ ಹೇಳಿಕೊಡುತ್ತಾರೆ ಎಂಬಿತ್ಯಾದಿ ವಿಷಯಗಳನ್ನು ಗಮನಿಸಿ ಮಗುವನ್ನು ಸ್ಕೂಲಿಗೆ ಸೇರಿಸಿದ್ದೇನೆ.ಮೊದಲ ದಿನ ಶಾಲೆಗೆ ಬಿಟ್ಟು ಬಂದಾಗ ಮನೆಯಲ್ಲಿ ಇರಲು ಬೇಸರವೆನಿಸುತ್ತಿತ್ತು. ಅಲ್ಲಿರುವ ಆಯಾಗಳು ಹೇಗೆ ನೋಡಿಕೊಳ್ಳುತ್ತಾರೋ, ಮಗು ನಿದ್ದೆ ಮಾಡಿದೆಯೋ ಇಲ್ಲವೋ ಎಂಬ ಚಿಂತೆ ಕಾಡುತ್ತಿತ್ತು. ಅವಳ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಸಮಾಧಾನ ಮಾಡಿಕೊಳ್ಳುತ್ತಿದ್ದೆ.ಮಗಳನ್ನು ಸ್ಕೂಲಿಗೆ ಸೇರಿಸುವ ಮೊದಲು ಸಾಕಷ್ಟು ತಯಾರಿ ಮಾಡಿಸಿದ್ದೆ. ಹಾಗಾಗಿ ಅವಳು ಶಾಲೆಗೆ ಹೋಗುವುದಕ್ಕೆ ಯಾವುದೇ ರೀತಿಯ ಹಟ ಮಾಡಿರಲಿಲ್ಲ.ಮಗುವನ್ನು ಒಂದು ಶಾಲೆಗೆ ಸೇರಿಸಬೇಕಾದರೆ ತುಂಬಾ ವಿಚಾರಿಸಬೇಕಾಗುತ್ತದೆ. ಮನೆಗೆ ಹತ್ತಿರವಿರುವ ಶಾಲೆಗೆ ಸೇರಿಸುವುದರಿಂದ ನಮ್ಮ ಸಮಯ ಉಳಿಯುತ್ತದೆ. ನಾನು ಸೇರಿಸಿದ ಶಾಲೆಯಲ್ಲಿ ಮಗುವಿನ ಮಾರ್ಕ್ಸ್‌ಕಾರ್ಡ್‌ ಅನ್ನು ಗ್ರೀಟಿಂಗ್‌ ಕಾರ್ಡ್‌ ರೀತಿ ಕೊಡುತ್ತಾರೆ. ಇದರಿಂದ ಮಕ್ಕಳಿಗೆ ಅಂಕದ ಪಟ್ಟಿ ಎಂದರೆ ಭಯವಾಗುವುದಿಲ್ಲ’– ಇದು ವಿದ್ಯಾ ಅವರ ಅನುಭವ.ಹೊಸ ಗೆಳೆಯರು ಸಿಕ್ಕರು

‘ನಾನು ಇತ್ತೀಚೆಗಷ್ಟೆ ಸ್ಕೂಲ್‌ಗೆ ಸೇರಿದ್ದೇನೆ. ಸ್ಕೂಲ್‌ಗೆ ಹೋಗುವುದಕ್ಕೆ ಬೇಜಾರಿಲ್ಲ. ಅಮ್ಮನನ್ನು ಬಿಟ್ಟು ಹೋಗುವುದಕ್ಕೆ ಸ್ವಲ್ಪ ಬೇಜಾರಾಗುತ್ತದೆ. ತುಂಬಾ ಫ್ರೆಂಡ್ಸ್‌ ಸಿಕ್ಕಿದ್ದಾರೆ. ಹೊಸ ಹೊಸ ಆಟ ಹೇಳಿಕೊಡುತ್ತಾರೆ. ಸ್ಕೂಲ್‌ ಎಂದರೆ ನನಗೆ ಭಯವಾಗಲ್ಲ’ ಎಂದು ಪುಟಾಣಿ ಹಂಸಿಕಾ ಪ್ರತಿಕ್ರಿಯಿಸುತ್ತಾಳೆ.ವಿಚಾರಣೆ ಅಗತ್ಯ

‘ನಾವಿರುವುದು ಎಲೆಕ್ಟ್ರಾನಿಕ್‌ ಸಿಟಿಯಲ್ಲಿ. ಈ ವರ್ಷ ಮಗಳನ್ನು ಶಾಲೆಗೆ ಸೇರಿಸಿದ್ದೇವೆ. ಅವಳನ್ನು ಸ್ಕೂಲಿಗೆ ಸಿದ್ಧ ಮಾಡುವುದರಲ್ಲಿ ಖುಷಿ ಇದೆ. ಆದರೆ ಕೆಲವು ಸಮಯ ಶಾಲೆಯಲ್ಲಿ ಏನು ಮಾಡುತ್ತಾಳೋ ಎಂಬ ಭಯವಿದೆ. ಮಗಳನ್ನು ಶಾಲೆಗೆ ಸೇರಿಸುವಾಗ ನಾಲ್ಕೈದು ಶಾಲೆಯಲ್ಲಿ ವಿಚಾರಿಸಿ ಸೇರಿಸಿದ್ದೇವೆ.ಅಲ್ಲಿರುವ ಟೀಚರ್ಸ್‌ಗಳು, ಅಲ್ಲಿಯ ಪ್ಲೇ ಹೋಂಗಳನ್ನು ಸರಿಯಾಗಿವೆ ಎಂದು ನೋಡಿಕೊಂಡಿದ್ದೇನೆ. ಮಗುವಿನ ಮೊದಲ ಶಾಲಾ ಅನುಭವ ಚೆನ್ನಾಗಿರಬೇಕು ಎಂಬುದು ನನ್ನ ಆಸೆ’– ರಮ್ಯಾ ತಮ್ಮ ಕಳಕಳಿಯನ್ನು ಹೇಳಿಕೊಂಡರು.ಮಕ್ಕಳ ಭವಿಷ್ಯದ ಕನಸಿನಲ್ಲಿ

‘ನಾವಂತೂ ಓದಿಲ್ಲ. ನಮ್ಮ ಮಗಳನ್ನು ಚೆನ್ನಾಗಿ ಓದಿಸಬೇಕು ಎಂಬ ಆಸೆಯಿಂದ ವಿಶಾಲ್‌ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದ್ದೇವೆ. ಕೂಲಿ ಕೆಲಸ ಮಾಡುತ್ತಿದ್ದೇನೆ. ಇದರಿಂದ ಬರುವ ಹಣದಿಂದ ಮಗುವಿನ ವಿದ್ಯಾಭ್ಯಾಸ, ಮನೆಯ ಖರ್ಚನ್ನು ನಿಭಾಯಿಸಬೇಕು.

ಮೊದಲೆಲ್ಲಾ ಮನೆಯ ಹತ್ತಿರವಿರುವ ಶಾಲೆಗೆ ಸೇರಿಸಿ ಬಿಡುತ್ತಿದ್ದರು. ಈಗ ನಾವು ಖರ್ಚು ಕಡಿಮೆ ಎಂದು ಯಾವುದೋ ಶಾಲೆಗೆ ಸೇರಿಸಿದರೆ ಆಗುವುದಿಲ್ಲ. ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಬೇಕಾಗುತ್ತದೆ. ತುಂಬಾ  ಮಕ್ಕಳು ಈ ಸ್ಕೂಲಿಗೆ ಬರುತ್ತಾರೆ. ಹಾಗಾಗಿ ನಾನು ಮಗಳನ್ನು ಈ ಸ್ಕೂಲಿಗೆ ಸೇರಿಸಿದ್ದೇನೆ.ಈ ವರ್ಷ ಅವಳನ್ನು ಒಂದನೇ ತರಗತಿಗೆ ಸೇರಿಸಿದ್ದೇನೆ. ಇಲ್ಲಿ ಹತ್ತನೇ ತರಗತಿವರೆಗೆ ಇರುವುದರಿಂದ ಪದೇ ಪದೇ ಬೇರೆ ಕಡೆ ಮನೆ ಬದಲಾಯಿಸುವ ರಗಳೆ ಇರುವುದಿಲ್ಲ. ಮಗುವಿಗೆ ಒಂದೇ ಕಡೆ ಓದಲು ಅನುಕೂಲವಾಗುತ್ತದೆ’ ಎಂದವರು ಮಂಜುಳಾ.

ಮೊದಲ ದಿನ ಮಗುವನ್ನು ಶಾಲೆಯ ಆವರಣದೊಳಗೆ ಬಿಟ್ಟು ಅದರ ಕಣ್ಣಿಗೆ, ಮಾತಿಗೆ ಎದೆಗೊಡುವ ಅಪ್ಪ–ಅಮ್ಮನ ಭಾವಜಗತ್ತು ಹೇಗೆಲ್ಲಾ ಇರುತ್ತದೆ, ಅಲ್ಲವೇ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.