ಮಂಗಳವಾರ, ಏಪ್ರಿಲ್ 13, 2021
24 °C

ಮಜ್ಜಿಗೆ ಬಳ್ಳಿಯ ಮಾರುವೇಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೃತ ಬೀಜ ಸಸ್ಯ ಸಾಮ್ರಾಜ್ಯದ ದ್ವಿದಳ ಗುಂಪಿನ ಆಸ್ಕಲಿಪಿಡಿಯೆಸಿ ಕುಟುಂಬಕ್ಕೆ ಸೇರಿದ ಈ ಎಲೆರಹಿತ ಬಳ್ಳಿಗೆ ಇಂಗ್ಲಿಷ್‌ನಲ್ಲಿ `ಗಾಗ್‌ಲೆಟ್ ಫ್ಲವರ್~ ಎನ್ನುತ್ತಾರೆ. ಸ್ಥಳೀಯವಾಗಿ ಇದನ್ನು ನಾವು `ಜಾತಿಲಿ, ಜುಟ್ಲೆ~ ಎಂಬ ಹೆಸರುಗಳಿಂದ ಕರೆಯುತ್ತೇವೆ. ರಾಯಚೂರು ಜಿಲ್ಲೆಯಲ್ಲಿ ಈ ಬಳ್ಳಿಗೆ `ಮಜ್ಜಿಗೆ ಬಳ್ಳಿ~ ಎಂದು ಹೆಸರು. ಇದರ ಸಸ್ಯಶಾಸ್ತ್ರೀಯ ನಾಮ ಸಿರೋಪಿಸಿಯಾ ಜನ್ಶಿಯಾ.ಇದು ಒಂದು ದುರ್ಬಲ ಅಡರು ಬಳ್ಳಿ. ಬೆಂಬಲಕ್ಕಾಗಿ ಮತ್ತೊಂದು ಸಸ್ಯದ ಸುತ್ತ ಬಳಸಿಕೊಂಡು ಬೆಳೆಯುತ್ತದೆ. ರಸಭರಿತ ತಂತಿಯಾಕಾರದ ಕಾಂಡ ಹಾಗೂ ಬೇರು ನೆಲದಡಿಯಲ್ಲಿ ಉಬ್ಬಿ ಆಹಾರ ಸಂಗ್ರಹಿಸುವ ಸಾಮರ್ಥ್ಯ ಪಡೆದಿರುತ್ತದೆ.

ಈ ಬಳ್ಳಿಯ ಹೂ ಅತ್ಯಂತ ಸೂಕ್ಷ್ಮ.ಪ್ಯಾರಾಷೂಟ್ ಆಕಾರದಲ್ಲಿದ್ದು, ಮೇಣದಲ್ಲಿ ತೀಡಿದಂತೆ ಕಾಣುವ ತಿಳಿ-ಹಸಿರು ಬಣ್ಣದಿಂದ ಕೂಡಿದೆ. ಕೊಳವೆಯಾಕಾರದ ದಳ ವಲಯ ಹೊಂದಿದ್ದು ಐದೂ ದಳಗಳು ತುದಿಯಲ್ಲಿ ಅಂಟಿಕೊಂಡು ಹೂಜಿಯಾಕಾರದ ಪಂಜರದಂತೆ ಕಾಣುತ್ತವೆ. ಸೂರ್ಯೋದಯದಲ್ಲಿ ಹೂ ಅರಳಿದಾಗ ತಿಳಿಹಸಿರು ಬಣ್ಣದೊಂದಿಗೆ ಕೆಂಪು-ಕೆನ್ನೀಲಿ ಮಚ್ಚೆಗಳನ್ನು ಕಾಣಬಹುದು. ಬಿಸಿಲಾದಂತೆ ಈ ಹೂಗಳು ಹಳದಿ ಬಣ್ಣ ಪಡೆಯುತ್ತವೆ.ದಕ್ಷಿಣ ಭಾರತದ ಸ್ಥಾನಿಕ ಸಸ್ಯವಾದ ಇದು ಬಯಲು ಸೀಮೆಯ ಕಳ್ಳಿ, ಕುರುಚಲು ಗಿಡಗಳ ಸಸ್ಯಾವರಣದಲ್ಲಿ ಅತ್ಯಂತ ವಿರಳವಾಗಿ ಕಂಡುಬರುತ್ತದೆ. ಅದು ಹೇಗೋ ರಾಯಚೂರು ಜಿಲ್ಲೆ ಲಿಂಗಸೂಗೂರ ತಾಲ್ಲೂಕಿನ ಗುಂತಗೋಳ ಅರಣ್ಯದಲ್ಲಿ ಒಂದೇ ಒಂದು ಬಳ್ಳಿ ಯಾರಿಗೂ ಕಾಣದಂತೆ ಸರ್ಕಾರಿ ಜಾಲಿ ಎಂಬ ಮುಳ್ಳು ಪೊದೆಯ ಬುಡದಲ್ಲಿ ಆಶ್ರಯ ಪಡೆದು ಯಾರಿಗೂ ನಿಲುಕದಂತೆ ಬೆಳೆಯುತ್ತಿದೆ.ಈ ಬಳ್ಳಿಯ ಇನ್ನೊಂದು ವಿಶೇಷ ಎಂದರೆ ತಂತಿಯಾಕಾರದ ಕಾಂಡ ಹಾಗೂ ಹೂ. ಈ ಮೂಲಕ ಛದ್ಮ ವೇಷ ಧರಿಸಿ ತನ್ನ ಇರುವಿಕೆಯ ಗೋಪ್ಯತೆ ಕಾಪಾಡಿಕೊಳ್ಳುತ್ತದೆ. ಆದ್ದರಿಂದ ಈ ಬಳ್ಳಿಯನ್ನು ಅದರ ವಾಸಸ್ಥಾನದಲ್ಲಿ ಪತ್ತೆ ಮಾಡುವುದು ಅತ್ಯಂತ ಕಷ್ಟ.ಈ ಬಳ್ಳಿಯ ಎಳೆಯ ಕಾಂಡದ ತುದಿಗಳು ಹುಳಿಯಾಗಿದ್ದು, ಎಳೆಯ ಹುಣಸೆ ರುಚಿಯನ್ನು ಹೋಲುವುದರಿಂದ ಸ್ಥಳೀಯರು `ಮಜ್ಜಿಗೆ ಬಳ್ಳಿ~ ಎಂದು ಕರೆದಿರಬಹುದು. ವೇದ ಕಾಲದಿಂದಲೂ ಇದು ಒಂದು ಪ್ರಸಿದ್ಧ ಔಷಧ ಬಳ್ಳಿ. ಜ್ವರ ನಿಗ್ರಹ, ನೋವು ನಿವಾರಣೆ, ಹುಣ್ಣು ನಿವಾರಣೆಗಾಗಿ ಹಾಗೂ ಯಕೃತ್ತಿನ ರಕ್ಷಣೆಗಾಗಿ ನಾಟಿ ವೈದ್ಯರು ಇದನ್ನು ಇಂದಿಗೂ ಬಳಸುತ್ತಾರೆ.ವಾಯುಗುಣ ಬದಲಾವಣೆ, ಮಾರಕವಾಗುವ ಸ್ಥಳೀಯವಲ್ಲದ ಸಸ್ಯಗಳ ಬೆಳವಣಿಗೆ, ಭೂಮಿ ಅತಿಕ್ರಮಣ ಹಾಗೂ ಔಷಧಿಗಾಗಿ ಮಿತಿ ಮೀರಿದ ಬಳಕೆಯಿಂದಾಗಿ `ಮಜ್ಜಿಗೆ ಬಳ್ಳಿ~ಯನ್ನು ದಕ್ಷಿಣ ಭಾರತದ ಅತ್ಯಂತ ವಿರಳ ಸಸ್ಯ ಎಂದು ಪರಿಗಣಿಸಲಾಗಿದೆ. ಮಾಹಿತಿ: 94486 48817

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.