ಗುರುವಾರ , ಏಪ್ರಿಲ್ 15, 2021
26 °C

ಮಡೆಸ್ನಾನ ಬೇಡ ಎಡೆಸ್ನಾನ ಮಾಡಿ - ಹೈಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಚರಿಸುವ `ಮಡೆ ಸ್ನಾನ~ ಕುರಿತು ಮಹತ್ವದ ಆದೇಶ ನೀಡಿರುವ ಹೈಕೋರ್ಟ್, `ನಿರ್ದಿಷ್ಟ ಸಮುದಾಯವೊಂದರ ಜನ ಉಂಡು ಬಿಟ್ಟ ಎಂಜಲು ಎಲೆಯ ಮೇಲೆ ಭಕ್ತರು ಉರುಳುವ ಪದ್ಧತಿ ನಿಲ್ಲಿಸಬೇಕು~ ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ.`ಗರ್ಭಗುಡಿಯಲ್ಲಿ ದೇವರಿಗೆ ಅನ್ನವನ್ನು ನೈವೇದ್ಯದ ರೂಪದಲ್ಲಿ ನೀಡಬೇಕು. ನಂತರ ನೈವೇದ್ಯವನ್ನು ದೇವಸ್ಥಾನದ ಪ್ರಾಂಗಣದಲ್ಲಿಟ್ಟು ಭಕ್ತರಿಗೆ ಉರುಳುಸೇವೆಗೆ ಅವಕಾಶ ನೀಡಬಹುದು. ಈ ಆಹಾರವನ್ನು ಯಾವುದೇ ಸಮುದಾಯದವರೂ ಸೇವಿಸಕೂಡದು~ ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ  ಹೈಕೋರ್ಟ್ ವಿಭಾಗೀಯ ಪೀಠ ಗುರುವಾರ ನೀಡಿದ ಆದೇಶದಲ್ಲಿ ಹೇಳಿದೆ.ಮಡೆ ಸ್ನಾನ ಪದ್ಧತಿ ನಿಷೇಧಿಸಬೇಕು ಎಂದು ಕೋರಿ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, `ಜಾತಿ ಆಧಾರಿತ ಪಂಕ್ತಿಭೇದವನ್ನು ಸರ್ಕಾರ ಯಾವುದೇ ಕಾರಣಕ್ಕೂ ಪ್ರೋತ್ಸಾಹಿಸಬಾರದು. ಅನ್ನದ ಮೇಲೆ ಉರುಳುವ ಹರಕೆ ಸಂಪೂರ್ಣ ಸ್ವಯಂಪ್ರೇರಿತ ಆಗಿರಬೇಕು~ ಎಂದು ನಿರ್ದೇಶನ ನೀಡಿದೆ. `ಮಡೆ ಸ್ನಾನದಲ್ಲಿ ಎಲ್ಲ ಸಮುದಾಯದವರೂ ಪಾಲ್ಗೊಳ್ಳುತ್ತಾರೆ. ಇದನ್ನು ಆಚರಿಸುವಂತೆ ಯಾರ ಮೇಲೂ ಒತ್ತಡ ಹೇರುವುದಿಲ್ಲ~ ಎಂದು ಕುಕ್ಕೆ ಸುಬ್ರಹ್ಮಣ್ಯ ಭಾಗದ ಮಲೆಕುಡಿಯರ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.`ಸ್ವಇಚ್ಛೆಯಿಂದ ಮಾಡುತ್ತಾರೆ~ ಎಂಬ ವಾದವನ್ನು ಪ್ರಶ್ನಿಸಿದ ಮುಖ್ಯ ನ್ಯಾಯಮೂರ್ತಿ ಸೇನ್, `ಎಂಜಲು ಎಲೆಯ ಮೇಲೆ ಉರುಳುವುದರಿಂದ ತನಗೆ ಒಳ್ಳೆಯದಾಗುತ್ತದೆ ಎಂದು ಭಾವಿಸುವುದು ಸ್ವಇಚ್ಛೆಯಿಂದ ಎನ್ನಲಾಗದು. ಆ ರೀತಿಯ ಭಾವನೆಯನ್ನು ವ್ಯಕ್ತಿಯಲ್ಲಿ ಯಾರೋ ಮೂಡಿಸಿರ ಬೇಕು~ ಎಂದರು.`ಮಡೆ ಸ್ನಾನ ನಿಷೇಧಿಸುವ ವಿಚಾರದಲ್ಲಿ ವ್ಯಕ್ತಿಯ ಪ್ರಜ್ಞಾ ಸ್ವಾತಂತ್ರ್ಯವನ್ನೂ ಗಣನೆಗೆ ತೆಗೆದುಕೊಳ್ಳಬೇಕಲ್ಲವೇ?~ ಎಂದು ನ್ಯಾಯಮೂರ್ತಿ ನಾಗರತ್ನ ಪ್ರಶ್ನಿಸಿದರು. `ಪ್ರಜ್ಞಾ ಸ್ವಾತಂತ್ರ್ಯಸಂವಿಧಾನದ ಎಲ್ಲೆಯನ್ನು ಮೀರುವಂತಿಲ್ಲ~  ಎಂದು ರವಿವರ್ಮ ಕುಮಾರ್ ವಿವರಣೆ ನೀಡಿದರು.`ಸರ್ಕಾರ ಪಂಕ್ತಿಭೇದವನ್ನು ಬೆಂಬಲಿಸುವುದಿಲ್ಲ. ದೇವಸ್ಥಾನ ಪ್ರಾಂಗಣದಲ್ಲಿ (ಮಡೆ ಸ್ನಾನ ಆಚರಿಸುವ ಸ್ಥಳ) ಊಟ ಬಡಿಸುವುದನ್ನು ನಿಲ್ಲಿಸುತ್ತೇವೆ. ಆಗ ಅಲ್ಲಿ ಮಡೆ ಸ್ನಾನ ಆಚರಣೆಗೆ ಅವಕಾಶ ಇರುವುದಿಲ್ಲ~ ಎಂದು ಸರ್ಕಾರದ ಪರ ವಕೀಲರು ಹೇಳಿಕೆ ಸಲ್ಲಿಸಿದರು. ಸರ್ಕಾರದ ಹೇಳಿಕೆ ಆಧರಿಸಿ ನ್ಯಾಯಪೀಠ ಆದೇಶ ನೀಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.