ಸೋಮವಾರ, ಮೇ 23, 2022
30 °C

ಮಣ್ಣಲ್ಲಿ ಅನ್ನ ಹುಡುಕುವವರು !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಣ್ಣಲ್ಲಿ ಅನ್ನ ಹುಡುಕುವವರು ! ಮಣ್ಣಲ್ಲಿ ಚಿನ್ನ ಹುಡುಕುವುದು ಎಲ್ಲರಿಗೂ ಗೊತ್ತಿದೆ. ಆದರೆ ಮಣ್ಣಲ್ಲಿ ಅನ್ನ ಹುಡುಕುವುದೆಂದರೆ? ಹೌದು, ಒಕ್ಕಣೆ ಸಂದರ್ಭದಲ್ಲಿ ಮಣ್ಣು ಸೇರಿದ ದವಸ ಧಾನ್ಯಗಳನ್ನು ಸಾಂಪ್ರದಾಯಿಕ ವಿಧಾನದಿಂದ ಬೇರ್ಪಡಿಸಿ ಹೊಟ್ಟೆ ಹೊರೆಯುವ ಮಹಿಳೆಯರು  ಶ್ರೀನಿವಾಸಪುರ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿದ್ದಾರೆ !ಒಕ್ಕಣೆ ಮಾಡುವಾಗ  ರಾಗಿ ಅಥವಾ ಭತ್ತ ಮಣ್ಣನ್ನು ಸೇರುತ್ತದೆ. ಹೊಅಲಗಳಲ್ಲಿ ಮೆದೆ ಹಾಕಿದ ಕಡೆಯಲ್ಲಿ ಇಲಿಗಳು ಕತ್ತರಿಸಿ ಮತ್ತು ಗೆದ್ದಲು ಹಿಡಿದು ಕಾಳು ಮಣ್ಣಲ್ಲಿ ಬೆರೆಯುತ್ತದೆ.

ಮುಖ್ಯವಾಗಿ ರಾಗಿ ತೆನೆ ಅಥವಾ ಅರಿಯನ್ನು ವಾಹನ ಸಂಚಾರ ಇರುವ ರಸ್ತೆಗಳ ಮೇಲೆ ಹಾಕಿ ಒಕ್ಕಣೆ ಮಾಡುವಾಗ ಸುಮಾರು ರಾಗಿ ವಾಹನಗಳು ಓಡಾಡುವ ರಭಸಕ್ಕೆ ರಸ್ತೆ ಪಕ್ಕಕ್ಕೆ ಚೆಲ್ಲಲ್ಪಡುತ್ತದೆ. ಹಾಗೆ ಮಣ್ಣುಗೂಡಿದ ರಾಗಿಯನ್ನು ರೈತರು ಮುಟ್ಟುವುದಿಲ್ಲ.ಈ ದೆಸೆಯಲ್ಲಿ ಸಾಂಪ್ರದಾಯಿಕ ಕಣ ಪದ್ಧತಿ ಕಣ್ಮರೆಯಾಗಿ, ರೈತರು ರಸ್ತೆಗಳ ಮೇಲೆ ಕಾಳನ್ನು ಒಕ್ಕುವ ಉಪಾಯವನ್ನು ಕಂಡುಕೊಂಡಿದ್ದಾರೆ. ಭೋವಿ ಜನಾಂಗದ ಒಂದು ಸಮುದಾಯಕ್ಕೆ ಸೇರಿದ ಹಿರಿಯ ಮಹಿಳೆಯರು ರಾಗಿ ಬೆರೆತ ಮಣ್ಣನ್ನು ರಾಶಿ ಮಾಡಿ, ಮೊರದ ಸಹಾಯದಿಂದ ಮಾಟಿ, ಕೇರಿ, ತೂರಿ ರಾಗಿಯನ್ನು ಪ್ರತ್ಯೇಕಿಸುತ್ತಾರೆ.

ರಸ್ತೆಗಳ ಸಮೀಪ ಒಕ್ಕಣೆ ಸ್ಥಳಗಳಲ್ಲಿ ಮಹಿಳೆಯರು ಮಣ್ಣಿನಿಂದ ರಾಗಿಯನ್ನು ಬೇರ್ಪಡಿಸುವುದು ಸಾಮಾನ್ಯ ದೃಶ್ಯ. ಅದಕ್ಕೆ ಪರಿಣತಿ ಬೇಕು. ಆ ಕಲೆ ಅವರಿಗೆ ಅವರ ಹಿರಿಯರಿಂದ ಕರಗತವಾಗಿದೆ. ಹಳೆಯ ತಲೆಮಾರಿನ ವೃದ್ಧ ಬಡ ಮಹಿಳೆಯರು ವೃತ್ತಿಯಲ್ಲಿ ನಿರತರಾಗಿದ್ದಾರೆ.ಈ ಸಮುದಾಯದ ಪುರುಷರು ಹೊಲ, ಗದ್ದೆಗಳಲ್ಲಿ ಇಲಿ ಬಿಲಗಳನ್ನು ಅಗೆದು, ಇಲಿಗಳು ಬಿಲಗಳಲ್ಲಿ ದಾಸ್ತಾನು ಮಾಡಿಕೊಂಡಿರುವ ರಾಗಿ, ಭತ್ತದ ತೆನೆ ಸಂಗ್ರಹಿಸುತ್ತಾರೆ. ಅಲ್ಲೂ ಕಾಳು ಮಣ್ಣಲ್ಲಿ ಬೆರೆತುಹೋಗಿರುತ್ತದೆ. ಮಹಿಳೆಯರು ತೆನೆ, ಮಣ್ಣು ಹಾಗೂ ಕಾಳನ್ನು ಒಣಗಿಸಿ ಕಾಳನ್ನು ಬೇರ್ಪಡಿಸುತ್ತಾರೆ. ಬಿಲ ಅಗೆಯುವಾಗ ಸಿಗುವ ಇಲಿಗಳನ್ನು ಹಿಡಿದು ಸಾರು ಮಾಡುತ್ತಾರೆ. ಕೆರೆಗಳಲ್ಲಿ ಸಿಗುವ ಏಡಿ ಮತ್ತು ಗಂಟುಸೊಪ್ಪೆಂದರೆ ಇವರಿಗೆ ಪಂಚಪ್ರಾಣ.ಮೆದೆಗಳ ಬಳಿ ಮಣ್ಣು ಸೇರಿರುವ ರಾಗಿಯನ್ನು ಕೆಲವರು ಪುಕ್ಕಟೆಯಾಗಿ ವಿಂಗಡಿಸಿಕೊಳ್ಳಲು ಹೇಳಿದರೆ ಮತ್ತೆ ಕೆಲವರು ವಿಂಗಡಣೆ ಮಾಡಲಾದ ಕಾಳಿನಲ್ಲಿ ಮೂರನೇ ಒಂದು ಭಾಗ ಕೇಳುವುದುಂಟು. ಅನ್ಯಮಾರ್ಗವಿಲ್ಲದ ಬಡ ಮಹಿಳೆಯರು ಒಪ್ಪಿ ಕೆಲಸ ಮಾಡುತ್ತಾರೆ. ಬೆಳಿಗ್ಗೆಯಿಂದ ಸಂಜೆವರೆಗೆ ಕೈಯಾಡಿಸಿ, ರೆಟ್ಟೆ ನೋಯಿಸಿಕೊಂಡು ಸಿಕ್ಕಿದಷ್ಟು ಕಾಳನ್ನು ಕೊಂಡೊಯ್ಯುತ್ತಾರೆ. ಉಳಿದಂತೆ ಕೂಲಿ ಕೆಲಸವಿದೆ. ಮಣ್ಣು ಕೆಲಸ ನಂಬಿಕೊಂಡ ಅವರ ಪಾರಂಪರಿಕ ವೃತ್ತಿಗೆ ಜೆಸಿಬಿ ಯಂತ್ರಗಳು ಕಲ್ಲು ಹಾಕಿವೆ. ಧಾನ್ಯಗಳ ಸದ್ಬಳಕೆ ಹಾಗೂ ಸ್ಥಳೀಯವಾಗಿ ದೊರೆಯುವ ಆಹಾರದ ಮಹತ್ವವನ್ನು ಸಮಾಜ ಇವರಿಂದ ಕಲಿಯುವುದು ಬಹಳಷ್ಟಿದೆ.

-

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.