ಗುರುವಾರ , ಜೂನ್ 24, 2021
28 °C

ಮತಗಟ್ಟೆಯಲ್ಲಿ ಸೌಲಭ್ಯ ಕಲ್ಪಿಸಿ...

ಪಾರ್ವತಿ ಪಿಟಗಿ,ಬೆಳಗಾವಿ Updated:

ಅಕ್ಷರ ಗಾತ್ರ : | |

ವನಿತಾ (ಹೆಸರು ಬದಲಿಸ­ಲಾ­ಗಿದೆ), ಬೆಳಗಾವಿ ಜಿಲ್ಲೆಯ ಸರ್ಕಾರಿ ಕಚೇರಿಯೊಂದರ ಕಂಪ್ಯೂಟರ್ ಆಪರೇಟರ್. ಈ ಹಿಂದೆ ಯಾವ ಚುನಾ­ವಣೆಯಲ್ಲಿಯೂ ಈ ಆಪರೇ­ಟರ್‌­ಗ­ಳನ್ನು ಚುನಾವಣೆ ಕೆಲಸಕ್ಕೆ ಹಾಕಿ­ರ­ಲಿಲ್ಲ. ಆದರೆ ಕಳೆದ ವಿಧಾನಸಭಾ ಚುನಾವ­ಣೆಗೆ ಇವರನ್ನೂ ಸಹಿತ ಫೋಟೊ ತೆಗೆಯುವ ಕೆಲಸಕ್ಕೆ ಸೇರಿಸಿ­ಕೊಂಡರು. ಚುನಾವಣಾ ಕೆಲಸಕ್ಕೆ ನಿಯೋಜನೆ­ಯಾದ ನೌಕರರು ಹಿಂದಿನ ದಿನವೇ  ತಮ್ಮ ಮತಗಟ್ಟೆಗಳಲ್ಲಿರಬೇಕು. ವನಿತಾ­ಳಿಗೆ ಅವಳ ಮತಗಟ್ಟೆಯಲ್ಲಿ ಮತ್ತೊಬ್ಬ ಶಿಕ್ಷಕಿ ಜೊತೆಯಾಗಿದ್ದುದರಿಂದ ಅಲ್ಲಿ ಅವಳು ತಂಗಬಹುದು ಎಂದು­ಕೊಂಡಳು. ಆದರೆ, ಆ ಶಿಕ್ಷಕಿ ತನ್ನ ಸಮಸ್ಯೆಯನ್ನು ಬಿಚ್ಚಿದಳು. ಪಾಪ ಅವಳಿಗೆ ಮೂರು ತಿಂಗಳಾಗಿತ್ತು.ಆಬಾ­ರ್ಶನ್ ಆಗುವ ಲಕ್ಷಣ ಕಂಡುಬಂದಾಗ, ಡ್ಯೂಟಿಗೆ ಜಾಯಿನ್ ಆದ ನಂತರ ಆರೋಗ್ಯ ಸಮಸ್ಯೆಯಿಂದ ಹೊರಟು ಹೋಗುವುದಾಗಿ ತಿಳಿಸಿದರು. ಆ ಮತ­ಗಟ್ಟೆಯ ಪಿಆರ್‌ಒ ‘ನಿಮಗ ಹಂಗ ಸಮಸ್ಯೆ ಇದ್ರ ಮೊದಲ ವಲ್ಯಾ ಅನ್ನ­ಬೇಕಿ­ತ್ತರಿ? ಈಗ ನಿಮ್ಮ ಡ್ಯೂಟಿನೂ ನಾವ ಮಾಡಬೇಕ. ಈಗ ಡ್ಯೂಟಿಗೆ ಹಾಜರ ಆಗಿ ನೀವು ಇಲ್ಲಿ ಇರೂದಿಲ್ಲಾ ಅಂದ್ರ ಮುಂದ ಭಾಳ ಕಠಿಣ ಆಕ್ಕತಿ ನೋಡ್ರಿ ಇದು ಸರಕಾರಿ ನೌಕರಿ. ಚುನಾವಣಾ ಕೆಲಸಕ್ಕ ಇಲ್ಲ ಅಂದ್ರ ನೆಡಿಯೂದಿಲ್ಲಾ. ಏನಾರ ಆಗಲಿ ನೀವು ಇಲ್ಲೆ ಇರೂದು ಚೊಲೊ’ ಎಂದೆಲ್ಲ ಆ ಶಿಕ್ಷಕಿ ಅಲ್ಲಿಂದ ಹೋಗಲು ಅಡ್ಡಿಪಡಿಸಿದರು.ಪಾಪ ನಿಜವಾದ ಸಮಸ್ಯೆಯನ್ನು ಗಂಡಸರಾದ ಆ ಅಧಿಕಾರಿಯ ಮುಂದೆ ಹೇಳಲಾಗದ ಆ ಶಿಕ್ಷಕಿ, ಆ ಅಧಿಕಾರಿ­ಯಿಂದ ಬೈಯಿಸಿ­ಕೊಳ್ಳಬೇಕಾಯಿತು. ಅಷ್ಟೇ ಅಲ್ಲ ಅವರು ಹೇಳುವಂತೆ ಅವಳ ನೌಕರಿ ಉಳಿಸಿ­ಕೊಳ್ಳಬೇಕೆಂದರೆ, ಹೊಟ್ಟೆ­ಯಲ್ಲಿ ಬೆಳೆಯುತ್ತಿರುವ ಕರುಳ­ಕುಡಿ ಎಲ್ಲಿ ಕಳಚಿ­ಹೋಗುವುದೋ ಎಂಬ ಭಯ,  ಅದನ್ನು ಉಳಿಸಿ­ಕೊಳ್ಳಲು ಹೋಗ­ಬೇಕೆಂದರೆ ಹೊಟ್ಟೆ­ಪಾಡಿ­ಗಿರುವ ನೌಕರಿ­ಯನ್ನು ಕಳೆದು­ಕೊಳ್ಳುವ ಭಯ! ಇದೇ ಹೊಯ್ದಾಟ­ದಲ್ಲಿಯೇ ಕೊನೆಗೆ ಶಿಕ್ಷಕಿ ಹೊರಟು­ಹೋದರು.ಶಿಕ್ಷಕಿ ಹೋದ ನಂತರ, ಹಾಡು ಹಗಲೇ ರೇಪ್ ಕೇಸ್‌ಗಳು ಹೆಚ್ಚುತ್ತಿ­ರುವ ಈ ದಿನಗಳಲ್ಲಿ ವನಿತಾ ಒಬ್ಬಳೇ ಅಲ್ಲಿರುವುದು ಸುರಕ್ಷಿತ ವಲ್ಲವೆನಿಸಿತು. ಮರಳಿ ತನ್ನ ಗ್ರಾಮಕ್ಕೆ ತೆರಳಿ ಮರುದಿನ 7 ಗಂಟೆಗೆ ಆ ಮತಗಟ್ಟೆಗೆ ಬರುವುದು ಅಸಾಧ್ಯವೆನಿಸಿತು. ಇನ್ನು ಬಿಟ್ಟು ಹೋಗಿ­ಬಿಟ್ಟರೆ ಕೆಲಸದಿಂದ ತೆಗೆಯುವರೆಂಬ ಭಯ. ಏನು ಮಾಡುವುದೆಂದು ಯೋಚನೆ ಮಾಡುತ್ತಲೇ ಅದೇ ಸಿಟಿ­ಯಲ್ಲಿರುವ ಸಂಬಂಧಿಯೊಬ್ಬರ ಮನೆಗೆ ಕರೆ ಮಾಡಿ ಕೇಳಿಕೊಂಡು ಅವರ ಮನೆಗೆ ನಡೆದಳು.ಮರುದಿನ ಮತ್ತೆ ಆಟೋಕ್ಕೆ ದುಡ್ಡು ಹಾಕಿ, ವನಿತಾ ಬಿದ್ದೆನೋ ಸತ್ತೆನೋ ಎನ್ನುತ್ತಾ ಕರ್ತವ್ಯಕ್ಕೆ ಹಾಜರಾದಳು. ಸಾಯಂಕಾಲದವರೆಗೂ ಎಲ್ಲರ ಫೋಟೊ ತೆಗೆದು ತೆಗೆದು ಸಾಕಾ­ಯಿತು. ಮತದಾನ ಮುಗಿದ ನಂತರ,   ಅವರು ತಿಳಿ­ಸಿದ ಸ್ಥಳಕ್ಕೆ ಹೋಗುವುದ­ರಲ್ಲಿ ಸಮಯ 6 ಗಂಟೆಯಾಗಿ ಹೋಗಿತ್ತು. ಅವರ ಕ್ಯಾಮೆರಾ ಅವರಿಗೆ ನೀಡಿ ಗೌರವ­ಧನಕ್ಕಾಗಿ ಅವಳೊಂದಿಗೆ ಇನ್ನು­ಳಿದ ಆಪರೇಟರ್‌ಗಳು ನಿಂತಿದ್ದರು. 

ಅವರ ಗೌರವಧನಕ್ಕಾಗಿ ಅವರನ್ನು ಕೇಳಿ ಇವರನ್ನ ಕೇಳಿ ಎಂದು ಅಲೆ­ದಾಡಿ­ಸಿ­ದರು.ಚುನಾವಣಾ ಅಧಿಕಾರಿಯನ್ನೇ ಕೇಳಿ­ದಾಗ, ‘ಗೊತ್ತಿಲ್ಲ ಇವರ ಪೇಮೆಂಟ್ ಬಗ್ಗೆ ಮಾತಾಡಿಲ್ಲಾ’ ಎಂದು ಒಂದೇ ವಾಕ್ಯದಲ್ಲಿ ಹೇಳಿ ಮುಗಿ­ಸಿ­ದರು. ಆಪರೇಟರ್‌ಗಳೆಲ್ಲ ‘ಹಂಗಾರ ನಮಗ ಕೆಲಸಾ ಆದ್ರು ಯಾಕ ಕೊಟ್ರು ಯಾರ ಕೊಟ್ರು ಅದು ಇವರಿಗೆ ತಿಳಿ­ಯೂ­ದಿಲ್ಲಾ? ಉಪವಾಸ ವನವಾಸ ಆಟೋಕ್ಕ ರೊಕ್ಕಾ ಬಡದ ಬಡದ ಕೆಲಸಾ ಮಾಡಿದ್ದು ಹೋತಾ?’ ಎಂದು ಅವಡುಗಚ್ಚಿದರಾದರೂ,  ಇವರಿಗೆ ಕೆಲಸ ನೀಡಿದ ಅಧಿಕಾರಿಗಳು ‘ನಾವೆಲ್ಲ ನಿಮ್ಮ ದುಡ್ಡ ಕೊಡಸ್ತೀವಿ ನೀವು ಈಗ ಹೋಗಿಬಿಡ್ರಿ’ ಎಂದಾಗ, ಬಡವನ ಕೋಪ ದವಡೆಗೆ ಮೂಲ ಎಂದು ಬಗೆದು ಮನೆಗೆ ತೆರಳಿದರು. ತಮ್ಮ ಕೈಯಿಂದ ಖರ್ಚು ಮಾಡಿ ಪರದಾಡಿದ ಆ ಆಪರೇಟರುಗಳಿಗೆ ಮುಂದೆ ಒಂದು ಕವಡೆಕಾಸು  ದೊರೆಯಲಿಲ್ಲ.ಇದು ಕೇವಲ ಒಬ್ಬ ವನಿತಾಳ ಕಥೆ ಅಲ್ಲ. ಚುನಾವಣಾ ಕೆಲಸಕ್ಕೆ ನಿಯೋಜಿಸ­ಲ್ಪಟ್ಟ ಎಷ್ಟೋ ಮಹಿಳೆಯರ ಕಥೆ. ಇದರ ಅರ್ಥ ಆ ಕೆಲಸವನ್ನು ಮಾಡ­ಬಾರ­ದೆಂದಲ್ಲ. ಈ ಕೆಲಸಕ್ಕೆ ಅನ್ಯಾಯ ಅಕ್ರಮಗಳು ನಡೆಯದಂತೆ ಖಂಡಿತ ಎಲ್ಲರೂ ಸಕ್ರಿಯವಾಗಿ ಭಾಗಿಯಾಗ­ಬೇಕು ಆದರೆ ಯಾರಿಗೂ ಅನ್ಯಾಯ­ವಾಗಬಾರದು.ಊಟ–ತಿಂಡಿ ಎಲ್ಲ­ಕ್ಕಿಂತ ಹೆಚ್ಚಾಗಿ ಮಹಿಳೆ­ಯರಿಗೆ  ಮತ­ಗಟ್ಟೆಯಲ್ಲಿ ತಂಗಲು ಸುರಕ್ಷಿತ ಸ್ಥಳ ಆಗಬೇಕಿದೆ. ಅಷ್ಟೇ ಅಲ್ಲ, ಕೆಲಸ ನೀಡಿದ ಸ್ಥಳಕ್ಕೆ ಹೋಗಲು ವಾಹನ ಸೌಕರ್ಯ­ನೀಡಬೇಕು. ಹಾಗಾದಾಗ ಮಾತ್ರ ಮತ­ಗಟ್ಟೆಗಳಲ್ಲಿ ತಂಗಲು ಭಯ­ಪಡುವ ಸಮಸ್ಯೆ ದೂರವಾಗುತ್ತದೆ. ಮತ್ತು ಚುನಾವಣಾ ಕೆಲಸವನ್ನು ಆಸಕ್ತಿಯಿಂದ ಮಾಡುವಂತಾಗುತ್ತದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.