ಬುಧವಾರ, ಜೂನ್ 16, 2021
23 °C

ಮತದಾನಕ್ಕೆ ಕ್ಷಣಗಣನೆ: ಒಲೈಕೆಗೆ ಅಂತಿಮ ಕಸರತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ರಾಜ್ಯದ ಪ್ರಮುಖ ಮೂರು ರಾಜಕೀಯ ಪಕ್ಷಗಳಿಗೆ ಅತ್ಯಂತ ಪ್ರತಿಷ್ಠಿತ ಕಣವಾಗಿ ಮಾರ್ಪಟ್ಟಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಮತದಾರರನ್ನು ಒಲಿಸಿಕೊಳ್ಳಲು ರಾಜಕೀಯ ಪಕ್ಷಗಳ ಮುಖಂಡರು ಮತದಾನಕ್ಕೆ ಒಂದು ದಿನ ಬಾಕಿ ಇರುವಂತೆ ಶನಿವಾರ ಕೊನೆಯ ಕ್ಷಣದವರೆಗೂ ಕಸರತ್ತು ನಡೆಸಿದರು.ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವುದರಿಂದ ಚುನಾವಣಾ ಕಣ ಕದನ ಕುತೂಹಲ ಕೆರಳಿಸಿದೆ. ಕಳೆದ 20 ದಿನಗಳಿಂದ ರಾಜಕೀಯ ಮುಖಂಡರ ಅಬ್ಬರದ ಪ್ರಚಾರ, ರೋಡ್ ಶೋಗಳಿಂದ ರಂಗೇರಿದ್ದ ಕಾಫಿನಾಡು ಚಿಕ್ಕಮಗಳೂರು, ಮಳೆ ಸುರಿದು ಬಿಡುವ ನೀಡಿದ ಅವಧಿಯಂತೆ ಶನಿವಾರ ಭಾಸವಾಗುತ್ತಿತ್ತು. ಮೂರು ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಮನೆಮನೆಗೆ ತೆರಳಿ ತಮ್ಮ ಪಕ್ಷಗಳ ಅಭ್ಯರ್ಥಿ ಪರ ಮತಯಾಚಿಸಿದರು. ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಗೆಲುವಿಗೆ ಪ್ರಾರ್ಥಿಸಿ ನಗರದ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಪಕ್ಷದ ಜಿಲ್ಲಾ ಘಟಕ ಅಧ್ಯಕ್ಷ ಎಂ.ಎಲ್.ಮೂರ್ತಿ ನೇತೃತ್ವದಲ್ಲಿ ಕೆಲ ಕಾರ್ಯಕರ್ತರು ಅಂಡೆಛತ್ರದ ಬಳಿ ಮನೆಮನೆಗೆ ತೆರಳಿ ಮತಯಾಚಿಸಿದರು.ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಮಲ್ಲಂದೂರು ರಸ್ತೆಯಲ್ಲಿ ಬೆಂಬಲಿಗರೊಂದಿಗೆ ಖಾಸಗಿ ಬಸ್‌ಗಳನ್ನು ತಡೆದು ಹತ್ತಿಳಿದು ಮತಯಾಚನೆ ಮಾಡಿದರು. ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಪರ ಶಾಸಕ ಸಿ.ಟಿ.ರವಿ ಮತ್ತು ಕಾರ್ಯಕರ್ತರು ಬಸವನಹಳ್ಳಿ ರಸ್ತೆಯಲ್ಲಿ ಮನೆಮನೆಗೆ ಭೇಟಿ ನೀಡಿ ಪ್ರಚಾರ ನಡೆಸಿದರು.ಬಹಿರಂಗ ಪ್ರಚಾರಕ್ಕೆ ಶುಕ್ರವಾರ ತೆರೆ ಬಿದ್ದಿದ್ದು, ನೀತಿ ಸಂಹಿತೆ ಜಾರಿಯಲ್ಲಿದ್ದುದರಿಂದ ಕ್ಷೇತ್ರದ ಮತದಾರರಲ್ಲದ ರಾಜಕೀಯ ನಾಯಕರು ಶುಕ್ರವಾರ ಸಂಜೆಯೇ ಜಿಲ್ಲೆಯಿಂದ ಹೊರ ನಡೆದಿದ್ದಾರೆ. 20 ದಿನಗಳಿಂದ ಭರ್ತಿಯಾಗಿದ್ದ ಜಿಲ್ಲೆಯ ಬಹುತೇಕ ಹೋಟೆಲ್‌ಗಳು, ಲಾಡ್ಜ್‌ಗಳು ಒಮ್ಮೆಗೇ ಖಾಲಿ ಖಾಲಿ ಎನಿಸಿದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.