ಗುರುವಾರ , ಮೇ 6, 2021
27 °C
ಬಿರುಗಾಳಿಗೆ ಹಾರಿದ ಶೆಡ್ ತತ್ರಾಸ್: ಪರಿಹಾರಕ್ಕೆ ಆಗ್ರಹ

ಮತ್ತೆ ಅತಂತ್ರರಾದ ಕೊಲ್ಹಾರ ಸಂತ್ರಸ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ್ತೆ ಅತಂತ್ರರಾದ ಕೊಲ್ಹಾರ ಸಂತ್ರಸ್ತರು

ಕೊಲ್ಹಾರ: ಇಲ್ಲಿಗೆ ಸಮೀಪದ ಚಿಕ್ಕಗರಸಂಗಿ ಗ್ರಾಮದ ಸಂತ್ರಸ್ತರಿಗೆ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್‌ಗಳು ಇತ್ತೀಚೆಗೆ ಬೀಸಿದ ಭಾರಿ ಬಿರುಗಾಳಿಗೆ ಹಾರಿ ಬಿದ್ದಿದ್ದು, ನೆರೆಪೀಡಿತ ಸಂತ್ರಸ್ತ ಕುಟುಂಬಗಳು ಮತ್ತೆ ಅತಂತ್ರವಾಗಿ ಆತಂಕದಲ್ಲಿ ದಿನ ಕಳೆಯುವಂತಾಗಿದೆ.ಶೆಡ್‌ಗಳ ಪತ್ರಾಸ್‌ಗಳು ಬಿರುಗಾಳಿಗೆ ಹಾರಿ ಬಿದ್ದಿದ್ದು ಅಲ್ಲಿ ವಾಸಿಸುವ ಜನತೆ ಕೂದಲೆಳೆಯ ಅಂತರದಲ್ಲಿ ಅಂದು ಅಪಾಯದಿಂದ ಪಾರಾಗಿದ್ದರು. ವಾಸಿಸಲು ಆಸರೆಯಾಗಿದ್ದ ತಮ್ಮ ಶೆಡ್‌ಗಳು ನೆಲೆಕಚ್ಚಿದ್ದರಿಂದ ಕೆಲವರು ಮಕ್ಕಳು, ಮೊಮ್ಮಕ್ಕಳೊಂದಿಗೆ ಅಲ್ಲೇ ವಾಸಿಸುವ ಗತಿ ಬಂದಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಸುರಿದ ಭಾರಿ ಮಳೆಗೆ ಇಲ್ಲಿನ ಗ್ರಾಮಸ್ಥರಿಗೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪುನರ್‌ವಸತಿ ಕಲ್ಪಿಸಲಾಗಿದೆ.ಇತ್ತೀಚೆಗೆ ಬೀಸಿದ ಬಿರುಗಾಳಿಯಿಂದಾಗಿ ಇಲ್ಲಿನ ಶೆಡ್‌ಗಳು ಬಾಗಿ ನಿಂತಿವೆ. ತಗಡುಗಳನ್ನು ಗಟ್ಟಿಯಾಗಿ ಉಳಿಸಿಕೊಳ್ಳಲು ಅಳವಡಿಸಿದ್ದ ಕಟ್ಟಿಗೆಗಳು, ಮೊಳೆಗಳು ಸಡಿಲಾಗಿ ಅಸ್ತವ್ಯಸ್ತವಾಗಿವೆ. ಇದರಿಂದ ಸಂತ್ರಸ್ತರಿಗೆ ನೆಮ್ಮದಿಯ ಬದುಕು ಸಂಕಷ್ಟಕ್ಕೆ ಕನಸಾಗಿಯೇ ಉಳಿದಿದೆ.ಕಳೆದ ವರ್ಷ ಸರ್ಕಾರ ಸ್ವಯಂಸೇವಾ ಸಂಸ್ಥೆಗಳೊಂದಿಗೆ ಸೇರಿ ಇಲ್ಲಿರುವ ಸಂತ್ರಸ್ತರ ಜಾಗದಲ್ಲಿ ಸುಮಾರು ನೂರು ಆಸರೆ ಮನೆಗಳನ್ನು ನಿರ್ಮಿಸಿದೆ. ಆದರೆ ಕಳಪೆ ಕಾಮಗಾರಿ ಯಿಂದಾಗಿ ಅವು ಅಲ್ಪ ಮಳೆಗೆ ಸೋರುತ್ತವೆ. ಸರಿಯಾದ ಇಟ್ಟಿಗೆ, ಕಲ್ಲು, ಸಿಮೆಂಟ್ ಬಳಸದೇ ಆತುರಾತುರದಲ್ಲಿ ನಿರ್ಮಿಸಿ ಬಣ್ಣ ಬಳಿಯಲಾಗಿದೆ. ಇದರಿಂದ ಅವುಗಳಲ್ಲಿ ವಾಸಿಸಲು ಸಂತ್ರಸ್ತರು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ಅವು ತಮ್ಮ ಕುಟುಂಬದ ಎಲ್ಲ ಸದಸ್ಯರಿಗೂ ಸಾಕಾಗುವಷ್ಟು ಜಾಗವನ್ನು ಹೊಂದಿಲ್ಲ ಎಂದು ದೂರಿ ತಮ್ಮ ಹಳೆ ಮನೆಯಲ್ಲಿಯೇ ವಾಸಿಸುತ್ತಿದ್ದಾರೆ. ಹಲವಾರು ಆಸರೆ ಮನೆಗಳು ಜನರ ವಾಸವಿಲ್ಲದೆ ಧೂಳು ತಿನ್ನುತ್ತಿವೆ. ಮನೆಗಳ ಇಕ್ಕೆಲದಲ್ಲಿ ಮುಳ್ಳುಕಂಟಿಗಳು ಬೆಳೆದು ನಿಂತಿದ್ದು ಜಾನುವಾರುಗಳು ಮೇಯುವ ತಾಣಗಳಾಗಿ ಮಾರ್ಪಟ್ಟಿವೆ.ಬೇಸಿಗೆಯ ಬೇಗೆಗೆ ಸಿಕ್ಕು ಮೊದಲೇ ಹೈರಾಣಾಗಿರುವ ಸಂತ್ರಸ್ತರಿಗೆ ಈ ಬಿರುಗಾಳಿ ಮಳೆ ಭಯದಿಂದ ಜೀವನ ನಡೆಸುವಂತೆ ಮಾಡಿದೆ. ಅತ್ತ ಹಳೆ ಚಿಕ್ಕಗರಸಂಗಿಯ ಮೊದಲಿನ ಮನೆಗಳು ಬಿದ್ದಿದ್ದು, ಇತ್ತ ತಾತ್ಕಾಲಿಕ ಶೆಡ್‌ಗಳು ಒಂದೊಂದಾಗಿ ನೆಲ ಕಚ್ಚಿದರೆ `ಬಯಲೇ ಗತಿ' ಎನ್ನುತ್ತಾರೆ ಗೌರವ್ವ ಮಾದರ.ಶೆಡ್‌ಗಳು ಹಾರಿಬಿದ್ದು ನಾಲ್ಕೈದು ದಿನಗಳಾದರೂ ಸಂಬಂಧಪಟ್ಟ ಯಾವ ಅಧಿಕಾರಿಗಳೂ ಇತ್ತ ಗಮನಹರಿಸಿಲ್ಲ. ಸಂತ್ರಸ್ತರ ಗೋಳನ್ನು ಆಲಿಸಿಲ್ಲ. ಹಾಗಾಗಿ ಹೋರಾಟ ಮಾಡುವುದೊಂದೇ ಉಳಿದ ಮಾರ್ಗವೆಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.ಶಾಶ್ವತ ಪರಿಹಾರಕ್ಕೆ ಆಗ್ರಹ: ಸರ್ಕಾರ ಸಂತ್ರಸ್ತರಿಗಾಗಿ ನಿರ್ಮಿಸಿರುವ ಮನೆಗಳು ಕಳಪೆ ಗುಣಮಟ್ಟದ್ದಾಗಿವೆ. ಅವು ಅಲ್ಪ ಮಳೆಗೂ ಸೋರುತ್ತಿವೆ. ಅವುಗಳನ್ನು ಸರಿಯಾಗಿ ನಿರ್ಮಿಸಿ ಕೊಡಬೇಕು. ಬಿರುಗಾಳಿಗೆ ಹಾರಿಬಿದ್ದ ಶೆಡ್‌ಗಳನ್ನು ಪುನಃ ನಿರ್ಮಿಸಿಕೊಡಬೇಕು. ಇಲ್ಲಿ ವಾಸಿಸುತ್ತಿರುವ ಸುಮಾರು 50 ಸಂತ್ರಸ್ತರಿಗೆ ಇನ್ನೂ ಆಸರೆ ಮನೆಗಳನ್ನು ನಿರ್ಮಿಸಿ ಹಂಚಬೇಕು ಎಂದು ಆಗ್ರಹಿಸಿದ್ದಾರೆ.ಆಸರೆ ಮನೆಗಳಿರುವ ವಸತಿ ಪ್ರದೇಶದಲ್ಲಿನ ಮಕ್ಕಳ ಶಿಕ್ಷಣಕ್ಕಾಗಿ ಕೂಡಲೇ ಶಾಲಾ ಕಟ್ಟಡದ ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಚಿಕ್ಕಗರಸಂಗಿಯಲ್ಲದೇ ಜಿಲ್ಲೆಯಾದ್ಯಂತ ಇರುವ ಡೋಣೂರ, ತೊನಶ್ಯಾಳ, ರೋಣಿಹಾಳ ಗ್ರಾಮದ ಸಂತ್ರಸ್ತರಿಗೂ ಎಲ್ಲ ಮೂಲ ಸೌಕರ್ಯಗಳನ್ನು ಜಿಲ್ಲಾಡಳಿತ ಕೂಡಲೇ ಒದಗಿಸಿಕೊಟ್ಟು ಸಂತ್ರಸ್ತರ ಸಂಕಟಗಳಿಗೆ ಸ್ಪಂದಿಸ ಬೇಕು ಎಂದು ದಲಿತ ಪ್ಯಾಂಥರ್ ವಿಭಾಗೀಯ ಅಧ್ಯಕ್ಷ ಶ್ರಿಶೈಲ ಚಲವಾದಿ, ಸಂತ್ರಸ್ತರಾದ ಸಂಗಪ್ಪ ಮಾದರ, ದಶರಥ ವಾಲೀಕಾರ, ಹಣಮಂತ ಪೂಜಾರಿ, ರಾಚವ್ವ ಬಿರಾದಾರ, ಭೀರಪ್ಪ ವಾಲೀಕಾರ, ದುರ್ಗಪ್ಪ ಮಾದರ, ಪರಸಪ್ಪ ಗರಸಂಗಿ ಒತ್ತಾಯಿಸಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.