ಶನಿವಾರ, ಮೇ 15, 2021
23 °C

ಮತ್ತೆ ನ್ಯಾಯಾಂಗ ಬಂಧನಕ್ಕೆ ರೆಡ್ಡಿದ್ವಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್, (ಪಿಟಿಐ/ಐಎಎನ್‌ಎಸ್): ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಶ ದಲ್ಲಿದ್ದ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಅವರ ಭಾವ ಹಾಗೂ ಓಬಳಾಪುರಂ ಗಣಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಬಿ.ವಿ.ಶ್ರೀನಿವಾಸ ರೆಡ್ಡಿ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ ಅಕ್ಟೋಬರ್ 3ರವರೆಗೆ ವಿಸ್ತರಿಸಲಾಗಿದೆ.ಸಿಬಿಐ ಅಧಿಕಾರಿಗಳು ರೆಡ್ಡಿದ್ವಯರನ್ನು ವಿಚಾರಣೆಗಾಗಿ ಸೆ.13ರಿಂದ ಆರು ದಿನ ತಮ್ಮ ವಶಕ್ಕೆ ಪಡೆದಿದ್ದರು. ಸೋಮವಾರ ಅವರ ಈ ಮೊದಲಿನ ನ್ಯಾಯಾಂಗ ಬಂಧನದ ಅವಧಿ ಕೊನೆಗೊಂಡ ಕಾರಣ ಬೆಳಿಗ್ಗೆ 10.30ಕ್ಕೆ ಭಾರಿ ಬಿಗಿ ಭದ್ರತೆಯಲ್ಲಿ ಇಬ್ಬರನ್ನೂ ಸಿಬಿಐ ಕಚೇರಿಯಿಂದ ನಾಂಪಲ್ಲಿಯಲ್ಲಿರುವ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯಕ್ಕೆ ಕರೆತರಲಾಯಿತು. ನ್ಯಾಯಾಧೀಶರು ಮತ್ತೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸುತ್ತಿದ್ದಂತೆಯೇ ಜನಾರ್ದನ ರೆಡ್ಡಿ ತೀವ್ರ ಭಾವೋದ್ವೇಗಕ್ಕೆ ಒಳಗಾದರು. ಇವರೆಲ್ಲರಿಗೂ ನೋಟಿಸ್ ಜಾರಿ ಮಾಡಿರುವ ಸಿಬಿಐ ಅಧಿಕಾರಿಗಳು ಮಂಗಳವಾರ ಬಳ್ಳಾರಿಗೆ ಬಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಲೋಕಾಯಕ್ತ ವರದಿಯಲ್ಲಿ: ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿದ  ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಇತ್ತೀಚೆಗೆ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಈ ಮೂವರ ಹೆಸರೂ ಪ್ರಸ್ತಾಪವಾಗಿದೆ. ರೇಸಿಂಗ್ ಕಾಂಟ್ರಾಕ್ಟ್, ಟ್ರಾನ್ಸ್‌ಪೋರ್ಟ್ ರಿಸ್ಕ್ ವ್ಯವಹಾರವನ್ನು ಇವರೇ ನಿರ್ವಹಿಸಿದ್ದಾಗಿ ತಿಳಿಸಲಾಗಿದೆ.ಬಂಧಿತ ಜನಾರ್ದನರೆಡ್ಡಿ ಹಾಗೂ ಶ್ರೀನಿವಾಸರೆಡ್ಡಿ ಅವರ ಆಪ್ತರಾಗಿರುವ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ಗುರುಲಿಂಗನಗೌಡ, ಭಾಸ್ಕರರೆಡ್ಡಿ,  ಕುರುಗೋಡಿನ ಆನಂದ ಚೌಧರಿ ಅವರ ಮನೆ ಹಾಗೂ ರೈಸ್ ಮಿಲ್ ಮೇಲೆ ದಾಳಿ ನಡೆಸಿದ ಸಿಬಿಐ ಇದೀಗ ವ್ಯಾಪಕ ಗಣಿಗಾರಿಕೆ ನಡೆಯುತ್ತಿದ್ದ ಸಂಡೂರು ಮತ್ತು ಹೊಸಪೇಟೆ ಭಾಗದಲ್ಲಿ ಲಗ್ಗೆ ಇರಿಸಿದೆ.ರೆಡ್ಡಿದ್ವಯರ ಬಂಧನದ ನಂತರ ಬಳ್ಳಾರಿಯಲ್ಲೇ ಬೀಡುಬಿಟ್ಟಿದೆ ಎನ್ನಲಾದ ಸಿಬಿಐ ಅಧಿಕಾರಿಗಳ ತಂಡ, ಅವರ ಆಪ್ತರ ಚಲನವಲನವನ್ನು ಸೂಕ್ಷ್ಮವಾಗಿ ಅವಲೋಕಿಸಿ, ಸೂಕ್ತ ಮಾಹಿತಿ ಸಂಗ್ರಹಿಸಿದ್ದು, ಇನ್ನೂ ಕೆಲವರ ಮನೆಗಳ ಮೇಲೆ ದಾಳಿ ನಡೆಸುವ ಸಾಧ್ಯತೆಗಳೂ ದಟ್ಟವಾಗಿವೆ.ಬಳಿಕ ಇಬ್ಬರನ್ನೂ ಮತ್ತೆ ಚಂಚಲಗುಡ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಸೆ. 5ರಂದು ಬಳ್ಳಾರಿಯಲ್ಲಿ ಇಬ್ಬರನ್ನೂ ಬಂಧಿಸಿ ಹೈದರಾಬಾದ್‌ಗೆ ಕರೆತಂದಿದ್ದರು. ಅಂದೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ನಂತರ ಆರೋಪಿಗಳನ್ನು ಸೆ. 19ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ಇಬ್ಬರನ್ನೂ ಸೆ. 13ರಿಂದ ಆರು ದಿನ ಸಿಬಿಐ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. 

ರೆಡ್ಡಿಗೆ ಅಡ್ಡಿಯಾದ ತೆಲಂಗಾಣ...!

ಹೈದರಾಬಾದ್: ನಗರದಲ್ಲಿ ಸಕಲ ಜನಾಲು ಸಮ್ಮೆ (ಎಲ್ಲ ವರ್ಗಗಳ ಪ್ರತಿಭಟನೆ) ನಡೆಯುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಕಲಾಪ ಆರಂಭವಾಗುವ ಒಂದು ಗಂಟೆ ಮೊದಲೇ ಜನಾರ್ದನ ರೆಡ್ಡಿ ಮತ್ತು ಶ್ರೀನಿವಾಸ ರೆಡ್ಡಿ ಅವರನ್ನು ಸಿಬಿಐ ನ್ಯಾಯಾಲಯಕ್ಕೆ ಕರೆತರಲಾಗಿತ್ತು.ವಿಚಾರಣೆಗಾಗಿ ಅವರನ್ನು 9 ದಿನ ತನ್ನ ವಶಕ್ಕೆ ಒಪ್ಪಿಸುವಂತೆ ಸಿಬಿಐ ಅರ್ಜಿ ಸಲ್ಲಿಸಿತ್ತು. ರೆಡ್ಡಿಗಳ ಪರ ವಕೀಲರೂ ಜಾಮೀನು ಅರ್ಜಿ ಸಲ್ಲಿಸಿದ್ದರು.ನ್ಯಾಯಾಧೀಶರು ಅರ್ಜಿಗಳ ವಿಚಾರಣೆ ಕೈಗೆತ್ತಿಕೊಳ್ಳುವ ಮೊದಲೇ ನ್ಯಾಯಾಲಯ ಪ್ರವೇಶಿಸಿದ ತೆಲಂಗಾಣ ಪರ ವಕೀಲರ ಗುಂಪು ಕಲಾಪ ಬಹಿಷ್ಕರಿಸುವಂತೆ ಇತರ ವಕೀಲರ ಮೇಲೆ ಒತ್ತಡ ಹೇರಿತು. ಹೀಗಾಗಿ ರೆಡ್ಡಿಗಳ ಜಾಮೀನು ಅರ್ಜಿ ವಿಚಾರಣೆಗೇ ಬರಲಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.