ಗುರುವಾರ , ಮೇ 26, 2022
23 °C

ಮತ್ತೆ ಬೆಳಗುವನೇ ಕಾರ್ಮಿಕ ಸೂರ್ಯ?

ಮಂಜುಶ್ರೀ ಎಂ. ಕಡಕೋಳ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ದಶಕಗಳ ಹಿಂದಿನ ಮಾತು. `ಕರ್ನಾಟಕ ಮ್ಯಾಂಚೆಸ್ಟರ್~ ಎಂದು ದಾವಣಗೆರೆ ಹೆಸರಾಗಿತ್ತು. ಹತ್ತಾರು ಮಿಲ್‌ಗಳನ್ನು ಹೊಂದಿದ್ದ ಈ ನಗರ ಕಾರ್ಮಿಕರ ಹೋರಾಟಕ್ಕೆ ಮುನ್ನುಡಿ ಬರೆದಿತ್ತು. ತನ್ನ ಒಡಲೊಳಗಿನ ಲಕ್ಷಾಂತರ ಕಾರ್ಮಿಕರಿಗೆ `ಅನ್ನದಾತ~ನಾಗಿದ್ದ ದಾವಣಗೆರೆ, ಅಂದು ಅಕ್ಷರಶಃ ಕಮ್ಯುನಿಸ್ಟರ ಭದ್ರಕೋಟೆಯಾಗಿತ್ತು. ಅದಕ್ಕೆಲ್ಲಾ ನಾಂದಿ ಹಾಡಿದ್ದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಸಂಘಟನೆ.1962ರಲ್ಲಿ ದಾವಣಗೆರೆ ಹತ್ತಿಗಿರಣಿಯಲ್ಲಿ ಆರಂಭವಾದ ಎಐಟಿಯುಸಿ ಸಂಘಟನೆ ಮುಂದೆ ನಗರದಲ್ಲಿಬರೆದಿದ್ದೆಲ್ಲವೂ ರಕ್ತಸಿಕ್ತ ಅಧ್ಯಾಯವೇ. ಹತ್ತಾರು ಮಿಲ್‌ಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರಿಗೆ ತಮ್ಮ ಮೂಲಭೂತ ಹಕ್ಕುಗಳ ಹೋರಾಟಕ್ಕೆ ನೇತೃತ್ವ ವಹಿಸಿದ್ದು ಕಾಂ. ಎಂ.ಸಿ. ನರಸಿಂಹನ್.ಅಂದಿನ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು ಕಾಂ.ಆವರಗೆರೆ ಗೌಡ್ರು ಶೇಖರಪ್ಪ, ಪಂಪಾಪತಿ, ವಿಠೋಬರಾವ್, ಮೂರ್ತಿ, ಸುರೇಶ್. ವಿವಿಧ ಮಿಲ್‌ಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರನ್ನು ಒಗ್ಗೂಡಿಸಿ, ಅವರ ಹಕ್ಕುಗಳಿಗಾಗಿ ಹೋರಾಟ ರೂಪಿಸುತ್ತಿದ್ದ ಈ ನಾಯಕರನ್ನು ಚಳವಳಿಯಿಂದ ವಿಮುಖಗೊಳಿಸಲು ಮಿಲ್‌ಗಳ ಮಾಲೀಕರು `ಚಕ್ರವ್ಯೆಹ~ವನ್ನೇ ರಚಿಸಬೇಕಾಯಿತು.ಸಂಘಟನೆ ವಿಘಟನೆಗೊಳಿಸಲು ಗೂಂಡಾಗಳನ್ನು ಬಳಸಿದ ಮಾಲೀಕ ವರ್ಗ, ಕೊಲೆ ಪ್ರಕರಣವೊಂದರಲ್ಲಿ ಕಾರ್ಮಿಕ ನೇತಾರರನ್ನು ಜೈಲಿಗೆ ಕಳುಹಿಸಿತು. ಆದರೂ, ವಿವಿಧ ಕೈಗಾರಿಕೆಗಳಲ್ಲಿ ಸಂಘಟನೆ ಮತ್ತಷ್ಟು ಬಲಗೊಂಡಿತು.ಸಂಘಟನೆಯ ಬಲ ಸಹಿಸದ ಬಂಡವಾಳಶಾಹಿ ಮಾಲೀಕ ವರ್ಗ ಶೇಖರಪ್ಪ, ಸುರೇಶ್, ಪಂಪಾಪತಿ ಅವರ ಮೇಲೆ ಹಲ್ಲೆ ನಡೆಸಲು ಸಂಚು ರೂಪಿಸಿತು. ಆ ಸಂಚಿನಲ್ಲಿ ಸುರೇಶ್, ಶೇಖರಪ್ಪ ಹತ್ಯೆಯಾದರೆ, ಅದೃಷ್ಟವಶಾತ್ ಪಂಪಾಪತಿ ಉಳಿದರು. 1962ರಿಂದ 74ರ ತನಕ ದಾವಣಗೆರೆ ಹಲವು ಹೋರಾಟಗಳಿಗೆ `ಮೂಕ ಸಾಕ್ಷಿ~ಯಾಯಿತು.1974ರಲ್ಲಿ ಪಂಪಾಪತಿ ಮತ್ತೆ ಕಾರ್ಮಿಕ ನಾಯಕರಾಗಿ ಹೊರ ಹೊಮ್ಮಿದ್ದು ನಗರಸಭೆಯ ಅಧ್ಯಕ್ಷ ಸ್ಥಾನ ಪಡೆಯುವ ಮೂಲಕ. ಯಾವ ಕಾರ್ಖಾನೆಯ ಮಾಲೀಕರು ಪಂಪಾಪತಿ ಅವರನ್ನು ಗಡೀ ಪಾರು ಮಾಡಬೇಕೆಂದು ಅಂದುಕೊಂಡಿದ್ದರೋ ಅವರೇ, ಪಂಪಾಪತಿ ಅವರನ್ನು ಸನ್ಮಾನಿಸುವ ಸಂದರ್ಭ ಒದಗಿತ್ತು.

 

ನಗರಸಭೆ ಅಧ್ಯಕ್ಷರಾಗಿ ನಗರದ ಸುತ್ತಮುತ್ತ ಆರು ಸಾವಿರಕ್ಕೂ ಹೆಚ್ಚಿನ ಗಿಡ ನೆಡುವ ಮೂಲಕ ನಗರದ ನಾಗರಿಕರಿಗೆ ಹಸಿರಿನ ಮಹತ್ವ ಪರಿಚಯಿಸಿದರು. ನಗರಸಭೆಗೆ ಮೊದಲ ಬಾರಿ `ನಗರಸಭೆ ಕಾರ್ಯಾಲಯ~ ಎಂದು ಕನ್ನಡದಲ್ಲಿ ಬೋರ್ಡ್ ಬರೆಸಿದ್ದ ಪಂಪಾಪತಿ, ನಿಜದ ನೆಲೆಯಲ್ಲಿ ನಗರಕ್ಕೆ ಹೋರಾಟ ಶಬ್ದದ ಅರ್ಥ ಮಾಡಿಸಿಕೊಟ್ಟಿದ್ದರು. ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಅವರು, ನಗರಕ್ಕೆ ಮೊದಲ ಬಾರಿಗೆ ಸಿಟಿಬಸ್ ಸೇವೆ ಸೌಲಭ್ಯ ಕಲ್ಪಿಸಿದ್ದರು.

 

ಶಾಸಕರಾಗಿದ್ದಾಗ ರಾಜ್ಯದ ವಿವಿಧ ಕಾರ್ಮಿಕರ ಪರವಾಗಿ ಅನಿರ್ದಿಷ್ಟ ಕಾಲ ಹೋರಾಟ ನಡೆಸಿದ್ದ ಕೀರ್ತಿಯೂ ಅವರದ್ದಾಗಿತ್ತು. ಅದಕ್ಕೆಲ್ಲಾ ಅವರಿಗೆ ಬೆನ್ನೆಲುಬಾಗಿದ್ದು ಎಐಟಿಯುಸಿ. ಅದರ ಪಡಿಯಚ್ಚಿನಲ್ಲೇ ಎಚ್.ಕೆ. ರಾಮಚಂದ್ರಪ್ಪ, ರಾಮರಾವ್, ಕಾಂತರಾವ್, ಎಂ.ಜಿ. ತಿಪ್ಪೇಸ್ವಾಮಿ, ಎಚ್.ವಿ. ವೀರಭದ್ರಪ್ಪ ಮತ್ತಿತರರು ನಾಯಕರಾಗಿ ಹೊರಹೊಮ್ಮುವಂತಾಯಿತು.ಆದರೆ, 90ರ ದಶಕದಲ್ಲಿ ಜಾಗತೀಕರಣ ದೆಸೆಯಿಂದ ಕಾವು ಕಳೆದುಕೊಂಡ ಹೋರಾಟ, ನಷ್ಟದ ಹಾದಿ ಹಿಡಿದ ಮಿಲ್‌ಗಳು ಇಂದು ಇತಿಹಾಸದ ಪುಟ ಸೇರಿವೆ. ಕೈಗಾರಿಕೆ-ಕಾರ್ಮಿಕ ಹೋರಾಟದ ನಡುವೆ ಕಾರ್ಮಿಕರು ಬೀದಿಪಾಲಾದರು. ಒಂದು ಕಾಲಕ್ಕೆ ಇಲ್ಲಿನ ಉತ್ಪನ್ನಗಳು ವಿದೇಶಕ್ಕೆ ರಫ್ತಾಗುತ್ತಿದ್ದವು ಎಂಬುದು ಮುಂದಿನ ಪೀಳಿಗೆಗೆ ದಂತಕತೆಯೇ ಆಯಿತು. ಆದರೂ ಹೋರಾಟದ ಕಾವು ಕಳೆದುಕೊಳ್ಳದ ನಾಯಕರು ವಿವಿಧ ವಲಯಗಳ ಕಾರ್ಮಿಕರ ಸಂಘಟನೆಯಲ್ಲಿ ನಿರತರಾಗಿದ್ದಾರೆ.ದಶಕದ ನಂತರ ದಾವಣಗೆರೆಯಲ್ಲಿ ಎಐಟಿಯುಸಿ ರಾಜ್ಯಮಟ್ಟದ ಸಮ್ಮೇಳನ ನಡೆಯುತ್ತಿದೆ. ಅಂದು ಪಂಪಾಪತಿ ನೆಟ್ಟ ಗುಲ್‌ಮೊಹರ್ ಮರಗಳಲ್ಲಿ ಇಂದಿಗೂ ಅರಳುತ್ತಿರುವ ಕೆಂಪು ಹೂವಿನಂತೆ ಈ ಸಮ್ಮೇಳನದಲ್ಲಿ `ಕಾರ್ಮಿಕ ಸೂರ್ಯ~ ಉದಯಿಸುವನೇ ಎಂಬುದು ದುಡಿಯುವ ವರ್ಗದ ಪ್ರಶ್ನೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.