ಶನಿವಾರ, ಫೆಬ್ರವರಿ 27, 2021
25 °C
ಧಾರವಾಡ ಸಾಹಿತ್ಯ ಸಂಭ್ರಮ 2016

ಮತ್ತೆ ಮತ್ತೆ ಕಾಡಿದ ‘ದಿನಕರ’

ಹೇಮಾ ವೆಂಕಟ್ Updated:

ಅಕ್ಷರ ಗಾತ್ರ : | |

ಮತ್ತೆ ಮತ್ತೆ ಕಾಡಿದ ‘ದಿನಕರ’

ಧಾರವಾಡ: ‘ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು/ ಕೊಳ್ಳಿರೀ ಮಗುವನ್ನು, ಎಮ್ಮ ಮನೆ ಬೆಳಕನ್ನು/ನಿಮ್ಮ ಮನೆಯನು ತುಂಬಲೊಪ್ಪಿಸುವೆವು...’ವಿ.ಸೀತಾರಾಮಯ್ಯ ಅವರ ಕರ್ನಾಟಕದ ಮನೆ ಮಾತಾಗಿರುವ ಈ ಕವಿತೆಯನ್ನು ಉಡುಪಿಯ ಗಮಕ ಕಲಾವಿದ ಚಂದ್ರಶೇಖರ ಕೆದ್ಲಾಯ ಹಾಡುತ್ತಿದ್ದರೆ, ಸಭಿಕರೆಲ್ಲ ತಮ್ಮ ಮಗಳನ್ನು ಮದುವೆ ಮಾಡಿ ಕಳುಹಿಸುವ ಕೊನೆಯ ಕ್ಷಣದ ಭಾವುಕ ಕ್ಷಣಕ್ಕೆ ಜಾರಿದರು.ಕೆದ್ಲಾಯರ ಗಾಯನದ ಶೈಲಿ ಹಾಗಿತ್ತು. ನಿಮ್ಮ ದೇವರೇ ಇವಳಿಗೆ ದೇವರು,,, ಎಂದು ಹಾಡು ಮುಗಿಸುವಾಗ ಎಲ್ಲರ ಕಣ್ಣಾಲಿಗಳು ಒದ್ದೆಯಾಗಿದ್ದವು. ಸಂಘಟಕ ಕಾಖಂಡಕಿ, ಕವಿ ಸಿದ್ಧಲಿಂಗ ಪಟ್ಟಣಶೆಟ್ಟಿ ಸೇರಿದಂತೆ ಅನೇಕ ಪುರುಷರೂ ಭಾವುಕರಾದರು.ಈ ದೃಶ್ಯ ಕಂಡುಬಂದದ್ದು ಧಾರವಾಡದಲ್ಲಿ ನಡೆಯುತ್ತಿರುವ ಸಾಹಿತ್ಯ ಸಂಭ್ರಮದ ಕೊನೆಯ ದಿನ ಭಾನುವಾರ ನಡೆದ ‘ಮತ್ತೆ ಮತ್ತೆ ಓದಬೇಕೆನಿಸುವ ಕವಿತೆಗಳು’ ಗೋಷ್ಠಿಯಲ್ಲಿ. ವಿ.ಸೀತಾರಾಮಯ್ಯ ಮತ್ತು ದಿನಕರ ದೇಸಾಯಿಯವರ ಕವಿತೆಗಳನ್ನು ಹಿರಿ-ಕಿರಿಯ ಕವಿಗಳು ಓದಿದರು.

ಹಿರಿಯ ಕವಿ ಚೆನ್ನವೀರ ಕಣವಿ ಅವರು ವಿ.ಸೀ ಅವರ ‘ಕಸ್ಮೈದೇವಾಯ’ ಕವಿತೆಯ ಸಾಲುಗಳನ್ನು  ಮನಮುಟ್ಟುವಂತೆ ಓದಿದರು.

ಅಂದಿನಾ ದೇವರುಗಳೆಲ್ಲ

ಮಡಿದುರುಲಿಹರು

ಇಂದ್ರ ವರುಣರು ಧನದ ಮಿತ್ರ

ಪೂಷಣರು

ಸಂದಿದ್ದ ದೈವತ್ವದಗ್ಗಳಿಕೆ

ಹೋಗಿಹುದು

ಅಂದಿನವರುನ್ನತಿಯ ಕಳಶ

ಕೂಲಿಹುದು... 


ಈ ಸಾಲುಗಳು ವಿ.ಸೀಯವರ ಮನಸ್ಸನ್ನು ಮುನ್ನಡೆಸಿದ ಧರ್ಮ ನಿರಪೇಕ್ಷವಾದ ನಿಲುವು ಎಂದು ಬಣ್ಣಿಸಿದರು.

ಲೇಖಕ ಎಸ್. ದಿವಾಕರ್, ದಿನಕರ ದೇಸಾಯಿ ಅವರ ‘ತೆರಿಗೆ ಅಧಿಕಾರಿಗಳಿಗೆ ಕವಿಗಳ ಮನವಿ’ ಎಂದು ಸುದೀರ್ಘ ಕವಿತೆಯ ಕೆಲ ಭಾಗಗಳನ್ನು ಓದಿದರು.

ಹೇ ಮಹಾಪ್ರಾಣಿಗಳೇ ನಿಮ್ಮ

ಸನ್ನಿಧಿಯಲ್ಲಿ

ಅರ್ಪಿಸುತ್ತೇನೆ ಈ ಸಣ್ಣ ಅರ್ಜಿ

ಸಮ ನಿಲುಮೆಯ ನಾವು

ಸ್ಪಷ್ಟಪಡಿಸಿದ್ದೇವೆ

ಕೊನೆಗೆ ನಿರ್ಣಯ ಮಾತ್ರ ನಿಮ್ಮ

ಮರ್ಜಿ...


ಎಂದು ಆರಂಭವಾಗುವ ಕವಿತೆಯನ್ನು ರಸವತ್ತಾಗಿ ಪ್ರಸ್ತುತಪಡಿಸಿದರು.

ಅಕ್ಬರ  ಸಿ.ಕಾಲಿಮಿರ್ಚಿ, ದೇಸಾಯಿಯವರ ‘ಸಾರ್ಥಕ’ ಕವಿತೆ ಓದಿದರು.

ನನ್ನ ದೇಹದ ಬೂದಿ ಗಾಳಿಯಲಿ

ತೂರಿಬಿಡಿ

ಹೋಗಿ ಬೀಳಲಿ ಭತ್ತ ಬೆಳೆಯುವಲಿ

ಬೂದಿ ಗೊಬ್ಬರವುಂಡು

ತೆನೆಯೊಂದು ನೆಗೆದು ಬರೆ

ಧನ್ಯವಾಯಿತು ಹುಟ್ಟು, ಸಾವಿನಲಿ ...
ಸಾಲುಗಳನ್ನು ಓದುತ್ತಿದ್ದಂತೆ ಮುಂದಿನ ಸಾಲುಗಳನ್ನು ಪ್ರೇಕ್ಷಕರು ಗುನುಗುತ್ತಿದ್ದರು. ಇದು ಕವಿತೆಯ ಶ್ರೇಷ್ಠತೆಯನ್ನು ತೋರಿಸುವಂತಿತ್ತು.

ಕವಿ ಕಾ.ವೆಂ. ಶ್ರೀನಿವಾಸಮೂರ್ತಿ, ವಿ.ಸೀ ಅವರ,’ಕಾದಿರುವಳು ಶಬರಿ ರಾಮ ಬರುವನೆಂದು, ತನ್ನ ಪೂಜೆಗೊಳುವನೆಂದು’ ಕವಿತೆಯನ್ನು ಮತ್ತು ಲತಾ ಗುತ್ತಿ, ‘ಅಮ್ಮ ಬಂದಿದ್ದಾಳೆ’ ಕವಿತೆಯನ್ನು ವಾಚಿಸಿದರು.

ಆರಿಫ್ ರಾಜಾ, ಐ.ಬಿ.ಸನದಿ, ರಂಜನಾ ನಾಯಕ್, ಶ್ರೀಪಾದ ಶೆಟ್ಟಿ ಅವರು ದಿನಕರ ದೇಸಾಯಿ ಅವರ ಆಯ್ದ ಕವಿತೆ ಮತ್ತು ಚುಟುಕಗಳನ್ನು ಓದಿ ರಂಜಿಸಿದರು. ದಿನಕರ ದೇಸಾಯಿಯವರ ಕೌಟುಂಬಿಕ ಮತ್ತು ರಾಜಕೀಯ ವಿಡಂಬನೆಯ ಚುಟುಕಗಳು ಹೆಚ್ಚು ಚಪ್ಪಾಳೆ ಗಿಟ್ಟಿಸಿದವು.

ಪದ್ಯಗಳ ನೋಡಿದರೆ ರೇಗುವಳು

ಅತ್ತೆ

ಹೆಂಡತಿಗೆ ವಿಪರೀತ ತಲೆನೋವು

ಮತ್ತೆ

ಮಕ್ಕಳಿಗೆ ಮಾತ್ರ ಅದು

ಪಂಚಕಜ್ಜಾಯ

ಜೀವನವೆ ಗದ್ಯಮಯ ಬಂದೊಡನೆ

ಪ್ರಾಯ

-------

ಅಖಿಲ ಕನ್ನಡ ನಾಡು ಒಡೆಯಲಿಕೆ

ಮಡಕೆ ಎಂದು ತಿಳಿದವರು

ಹೃದಯದ ಸೈಜು ಅಡಕೆ

ಯಾರಪ್ಪ ಬಂದರೂ

ಇದನೊಡೆಯಲಾರ

ವಜ್ರದಂತಿದೆ ಕನ್ನಡಿಗರ ನಿರ್ಧಾರ

–––

ಅರ್ಥವಾಗದ ಕವಿತೆ ಅತ್ಯಂತ ಶ್ರೇಷ್ಠ

ಅರ್ಥವಾದರೆ ನಿಮ್ಮ ತಲೆಗಿಲ್ಲ ಕಷ್ಟ

ಕಷ್ಟವಾದರೆ ತಲೆಗೆ ವ್ಯಾಯಾಮ

ಭರ್ತಿ

ಕೊನೆಯವರೆಗೂ ಉಳಿಯುವುದು ಕವಿಯ ಕೀರ್ತಿ...
. ಚೌಪದಿಗಳು ಸಾಹಿತ್ಯಾಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದವು. ಗೋಷ್ಠಿಯನ್ನು ಹಿರಿಯ ಲೇಖಕ ವಿಷ್ಣು ನಾಯ್ಕ ನಿರ್ದೇಶಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.