ಶನಿವಾರ, ಜನವರಿ 18, 2020
20 °C
ಥಳುಕು ಬಳುಕು

ಮತ್ತೆ ಮತ್ತೆ ಪ್ರೇಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮೊ  ದಲ ಪ್ರೀತಿ ಭಗ್ನವಾದಾಗ ಏಳನೇ ಗ್ರೇಡ್‌ನಲ್ಲಿ ಓದುತ್ತಿದ್ದೆ. ಆಗ ಪ್ರೀತಿ ಎಂದರೇನು ಎಂದು ಗೊತ್ತಿರಲಿಲ್ಲ. ಇನ್ನೆಂದೂ ಬದುಕಿನಲ್ಲಿ ಯಾವ ಹುಡುಗಿಯನ್ನೂ ಪ್ರೀತಿಸಕೂಡದು ಎಂದುಕೊಂಡೆ. ಅಪ್ಪ–ಅಮ್ಮ ಜಗಳ ಆಡಿಕೊಂಡಿದ್ದನ್ನು ಹತ್ತಿರದಿಂದ ಕಂಡೆ. ಕೆಲವೊಮ್ಮೆ ಇಬ್ಬರೂ ಮದುವೆ ಮುರಿದುಕೊಳ್ಳಬೇಕೆಂಬ ತೀರ್ಮಾನಕ್ಕೆ ಬಂದುಬಿಡುತ್ತಿದ್ದರು. ನಾನು ಅವರ ಕಾದಾಟ ಕಂಡು ದಿಙ್ಮೂಢನಾಗುತ್ತಿದ್ದೆ. ಪ್ರೀತಿಯ ಮುಂದುವರಿದ ಭಾಗ ಮದುವೆ. ಮದುವೆಯ ಮುಂದುವರಿದ ಭಾಗ ಜಗಳ ಎಂದೇ ಅನಿಸುತ್ತಿತ್ತು. ಆದರೂ ನನಗೆ ಮತ್ತೆ ಪ್ರೇಮಾಂಕುರವಾಯಿತು, ಅದೂ ಸಿನಿಮಾ ನಟಿಯ ಜತೆಗೆ. ಅಷ್ಟು ಹೊತ್ತಿಗೆ ನಾನೂ ನಟನಾಗಿದ್ದೆ. ಆದರೆ ಇಬ್ಬರೂ ಪರಸ್ಪರ ಆ ಪ್ರೀತಿ ಮುಂದುವರಿಸದೇ ಇರಲು ತೀರ್ಮಾನಿಸಿದೆವು. ಆಮೇಲೆ ಜನರನ್ನು ಪ್ರೀತಿಸತೊಡಗಿದ್ದೇನೆ. ಸಿನಿಮಾಗಳನ್ನು ಮುದ್ದಿಸತೊಡಗಿದ್ದೇನೆ. ಚೆನ್ನಾಗಿದ್ದೇನೆ...’ರಣಬೀರ್‌ ಕಪೂರ್‌ ತಮ್ಮ ಬದುಕಿನ ಪ್ರೀತಿಯ ಗ್ರಾಫನ್ನು ಒಂದೇ ಉಸಿರಿನಲ್ಲಿ ಹೇಳಿಕೊಳ್ಳುವುದು ಹೀಗೆ. ಇಷ್ಟಾದ ನಂತರವೂ ಅವರಿಗೆ ಯಾವಾಗ ಯಾರ ಮೇಲೆ ಪ್ರೀತಿ ಹುಟ್ಟುತ್ತದೋ ಹೇಳಲಾಗದು ಎಂದೂ ಅನಿಸಿದೆ. ದೀಪಿಕಾ ಪಡುಕೋಣೆ ಹಾಗೂ ತಮ್ಮ ನಡುವೆ ವರ್ಷಗಳ ಹಿಂದೆ ಅಂಕುರಿಸಿದ ಪ್ರೇಮದ ಮಧುರ ಕ್ಷಣಗಳು ಅವರಿಗೆ ನೆನಪಿದೆಯೋ ಇಲ್ಲವೋ ಎಂಬ ಪ್ರಶ್ನೆಗೆ ಸದಾ ಬೆನ್ನುಮಾಡುತ್ತಾ, ಕತ್ರಿನಾ ಕೈಫ್‌ ಜೊತೆ ಕಡಲತಟದಲ್ಲಿ ಚೆಡ್ಡಿ ಹಾಕಿಕೊಂಡು ಓಡಾಡಿದ ಕ್ಷಣ ಖಾಸಗಿಯಾದದ್ದು ಎನ್ನುತ್ತಾ ಸುಮ್ಮನಾಗುತ್ತಾರೆ, ನಗುತ್ತಾರೆ.

ರಣಬೀರ್‌ ಪಿಯೂಸಿವರೆಗೆ ಮುಂಬೈನಲ್ಲೇ ಓದಿದವರು. ಆಮೇಲೆ ಅಪ್ಪ ರಿಶಿ ಕಪೂರ್‌ ನ್ಯೂಯಾರ್ಕ್‌ ವಿಮಾನ ಹತ್ತಿಸಿದರು. ಅಲ್ಲಿ ‘ಸ್ಕೂಲ್‌ ಆಫ್‌ ವಿಶುಯಲ್‌ ಆರ್ಟ್ಸ್‌’ ಹಾಗೂ ‘ಲೀ ಸ್ಟ್ರಾಸ್‌ಬರ್ಗ್‌ ಥಿಯೇಟರ್‌ ಫಿಲ್ಮ್‌ ಇನ್‌ಸ್ಟಿಟ್ಯೂಟ್‌’ನಲ್ಲಿ ಅಭಿನಯ, ನಿರ್ದೇಶನದ ಪಟ್ಟುಗಳನ್ನು ಕಲಿತರು.ಮುಂಬೈಗೆ ಮರಳಿದಾಗ ಅವರಿಗೆ ತಾವು ನಟನಾಗಬೇಕೋ, ನಿರ್ದೇಶಕ ಆಗಬೇಕೋ ಎಂಬ ಜಿಜ್ಞಾಸೆ ಇತ್ತು. ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ‘ಬ್ಲ್ಯಾಕ್‌’ ಚಿತ್ರದ ಸಹಾಯಕ ನಿರ್ದೇಶಕರಾದದ್ದು ಆ ಜಿಜ್ಞಾಸೆಯ ಕಾಲಘಟ್ಟದಲ್ಲೇ.ಅದೇ ಸಂಜಯ್‌ಲೀಲಾ ಬನ್ಸಾಲಿ ‘ಸಾವರಿಯಾ’ ಚಿತ್ರದ ಮೂಲಕ ನಾಯಕನಟನಾಗಿ ಅವರನ್ನು ಪರಿಚಯಿಸಿದರು. ಸಿನಿಮಾ ಓಡಲಿಲ್ಲ. ಆದರೆ ಚೊಚ್ಚಿಲ ಚಿತ್ರದ ಉತ್ತಮ ಅಭಿನಯಕ್ಕೆ ಅವರಿಗೆ ಫಿಲ್ಮ್‌ಫೇರ್‌ ಪ್ರಶಸ್ತಿ ಸಿಕ್ಕಿತು. ರಣಬೀರ್‌ ನಟರಾಗಿಯೇ ಉಳಿದುಕೊಂಡರು.

‘ಬಚ್ನಾ ಯೇ ಹಸೀನೋ’ ಚಿತ್ರವನ್ನು ರಣಬೀರ್‌ ಮರೆಯುವುದಿಲ್ಲ. ಅವರ ಬದುಕಿನ ಎರಡನೇ ಪ್ರೇಮ ಪ್ರಕರಣ ನಡೆದದ್ದು ಆ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲೇ. ಬಲು ಬೇಗ ದೀಪಿಕಾ ಹಾಗೂ ಅವರ ನಡುವಿನ ಪ್ರೇಮ ಪ್ರಕರಣ ಕೊನೆಗೊಂಡಿತು.ಆಮೇಲೆ ‘ವೇಕಪ್‌ ಸಿದ್‌’, ‘ಅಜಬ್‌ ಪ್ರೇಮ್‌ ಕಿ ಗಜಬ್‌ ಕಹಾನಿ’, ‘ರಾಕೆಟ್‌ ಸಿಂಗ್‌: ಸೇಲ್ಸ್‌ಮನ್‌ ಆಫ್‌ ದಿ ಇಯರ್‌’, ‘ರಾಕ್‌ಸ್ಟಾರ್‌’, ‘ಬರ್ಫಿ’ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದರು. ಬಾಕ್ಸಾಫೀಸ್‌ನಲ್ಲಿ ಅತಿ ದೊಡ್ಡ ಸದ್ದು ಮಾಡಿದ್ದು ಅವರ ಅಭಿನಯದ ‘ಯೇ ಜವಾನಿ ಹೈ ದೀವಾನಿ’. ಆ ಚಿತ್ರದಲ್ಲಿ ಅವರಿಗೆ ಮತ್ತೆ ದೀಪಿಕಾ ಪಡುಕೋಣೆ ಜೋಡಿಯಾದದ್ದು ವಿಶೇಷ.ಮತ್ತೆ ದೀಪಿಕಾ ಜೊತೆ ಕ್ಷಣಗಳನ್ನು ಕಳೆದಾಗ ಹಳೆಯ ಪ್ರೇಮದ ದಿನಗಳು ನೆನಪಾಗಲಿಲ್ಲವೇ ಎಂದು ಅವರನ್ನು ಕೇಳಿದವರು ಅನೇಕರಿದ್ದರು. ‘ಇಬ್ಬರಿಗೂ ಪರಸ್ಪರ ಗೌರವವಿದೆ, ನಮ್ಮ ನಮ್ಮ ಕೆಲಸಗಳನ್ನು ನಾವು ಮಾಡಿಕೊಂಡು ಹೋಗುತ್ತಿದ್ದೇವೆ’ ಎಂದಷ್ಟೇ ಅವರು ಹೇಳಿದ್ದರು.ಸಿನಿಮಾ ಹೊರತುಪಡಿಸಿದರೆ ರಣಬೀರ್‌ಗೆ ಇಷ್ಟವಾದದ್ದು ಫುಟ್‌ಬಾಲ್‌ ಆಟ. ಆಲ್‌ ಸ್ಟಾರ್ಸ್‌ ಫುಟ್‌ಬಾಲ್‌ ಕ್ಲಬ್‌ನ ಪರವಾಗಿ ಆಡಿ, ಮೆಚ್ಚುಗೆ ಗಳಿಸಿದ್ದ ಅವರಿಗೆ ಮತ್ತೆ ಯಾವಾಗ ಪ್ರೇಮಾಂಕುರ ಆಗುವುದೋ ಎಂಬುದೇ ಕುತೂಹಲ ಹಾಗೂ ನಿರೀಕ್ಷೆ!

 

ಪ್ರತಿಕ್ರಿಯಿಸಿ (+)