ಶನಿವಾರ, ಮೇ 8, 2021
25 °C

ಮತ್ತೆ ಶುರುವಾದ ಬೀದಿನಾಯಿ ಕಾಟ

ಪ್ರಜಾವಾಣಿ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರದಲ್ಲಿ ಮತ್ತೆ ಬೀದಿ ನಾಯಿ ಹಾವಳಿ ಆರಂಭವಾಗಿದೆ. ನಾಯಿ ಕಡಿತಕ್ಕೆ ತುತ್ತಾಗುವರು ಹಾಗೂ ಬೆನ್ನತ್ತಿದ್ದ ನಾಯಿ ಹಿಂಡಿನ ದಾಳಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ವಾಹನದಿಂದ ಬಿದ್ದು ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಳಗೊಳ್ಳುತ್ತಿದೆ.ರಸ್ತೆಯ ಪಕ್ಕದ ಕಸದ ರಾಶಿ, ಸಂತೆ ಮೈದಾನ, ಹೋಟೆಲ್, ವಾಣಿಜ್ಯ ಸಂಕೀರ್ಣಗಳ ತ್ಯಾಜ್ಯ ವಿಸರ್ಜನೆ ತಾಣ ಹಾಗೂ ಚರಂಡಿಗಳ ಬಳಿ ಠಳಾಯಿಸುವ ನಾಯಿಗಳ ಹಿಂಡು ಪಾದಚಾರಿಗಳು, ದ್ವಿಚಕ್ರ ವಾಹನಗಳ ಸವಾರರು, ಮಕ್ಕಳ ಮೇಲೆ ದಾಳಿ ನಡೆಸುವುದು ಸಾಮಾನ್ಯ ಎನಿಸಿದೆ.ಬಹುತೇಕ ಗುಂಪುಗಳಾಗಿ ಇದ್ದಾಗ ಹಾವಳಿ ಇಡುವ ನಾಯಿಗಳು, ಒಂದರ ಹಿಂದೆ ಬೆನ್ನತ್ತಿ ಬಂದು ಮುತ್ತಿಗೆ ಹಾಕುವುದರಿಂದ ಪಾದಚಾರಿಗಳು ಓಡುವ ಭರದಲ್ಲಿ ಕಚ್ಚಿಸಿಕೊಳ್ಳುವ ಪ್ರಕರಣಗಳು ಹೆಚ್ಚಾದರೆ, ಸವಾರರು ಬೈಕಿನ ವೇಗ ಹೆಚ್ಚಿಸಿ ನಿಯಂತ್ರಣ ತಪ್ಪಿ ಅಪಘಾತ ಮಾಡಿಕೊಳ್ಳುವುದು ಕಾಣಬಹುದಾಗಿದೆ.ನಗರದ ಆದರ್ಶ ನಗರ, ಗದಗ ರಸ್ತೆ ಪ್ರಕಾಶ ಕಾಲೊನಿ, ನ್ಯೂ ಕನ್ಯಾನಗರ, ಹಳೇಹುಬ್ಬಳ್ಳಿ, ಚೇತನಾ ಕಾಲೊನಿ, ಕಲ್ಯಾಣ ನಗರ, ವಿದ್ಯಾನಗರ, ಬನಶಂಕರಿ ಬಡಾವಣೆ, ಹೆಗ್ಗೇರಿ ಕಾಲೊನಿ, ಗೋಲ್ಡನ್ ಪಾರ್ಕ್‌ನ ದೂಳೇಶ್ವರ ದೇವಸ್ಥಾನದ ಬಳಿ, ವಿಜಯನಗರ, ಅಶೋಕ ನಗರ, ಲೋಕಪ್ಪನ ಹಕ್ಕಲು, ರಾಜನಗರ, ನ್ಯೂ ಆನಂದ ನಗರ ಹಾಗೂ ಕಾರವಾರ ರಸ್ತೆಯ ನಿವಾಸಿಗಳು ನಾಯಿ ಹಾವಳಿಯ ಬಗ್ಗೆ ಕಳೆದೊಂದು ವಾರದಿಂದ ಮಹಾನಗರ ಪಾಲಿಕೆ ನಿಯಂತ್ರಣ ಕೊಠಡಿಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ವಿದ್ಯಾನಗರದ ಲಕ್ಷ್ಮೀಗುಡಿಯ ಎದುರು ಸಂಜೆಯಾಗುತ್ತಿದ್ದಂತೆಯೇ ಗುಂಪುಗೂಡುವ ನಾಯಿಗಳು ರಾತ್ರಿಯಿಡೀ ವಾಹನ ಸವಾರರಿಗೆ ಸಮಸ್ಯೆಯುಂಟು ಮಾಡುತ್ತವೆ. ವಾಹನಗಳ ದೀಪದ ಬೆಳಕು ಕಾಣುತ್ತಲೇ ಉದ್ರೇಕಗೊಂಡು ಬೆನ್ನತ್ತುತ್ತವೆ.ಸಂತಾನಶಕ್ತಿ ಹರಣ ಚಿಕಿತ್ಸೆ ಸ್ಥಗಿತ: ಎರಡು ವರ್ಷಗಳ ಹಿಂದೆ ಶ್ವಾನಗಳ ಹಾವಳಿ ಹೆಚ್ಚಾದಾಗ ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ಬೀದಿ ನಾಯಿಗಳಿಗೆ ಕಡಿವಾಣ ಹಾಕಲು ಮಹಾನಗರ ಪಾಲಿಕೆ ಮುಂದಾಗಿತ್ತು. ಸಂತಾನಶಕ್ತಿ ಹರಣ ಚಿಕಿತ್ಸೆ (ವ್ಯಾಸೆಕ್ಟಮಿ) ಮಾಡಿ ಅವುಗಳ ಸಂಖ್ಯೆ ಕಡಿಮೆ ಮಾಡುವ ಕೆಲಸವನ್ನು ಹೈದರಾಬಾದ್ ಮೂಲದ `ವೆಟ್ ಸೊಸೈಟಿ' ಎಂಬ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಕಾರ್ಯಾಚರಣೆಯ ಮೇಲ್ವಿಚಾರಣೆ ಮಹಾನಗರ ಪಾಲಿಕೆ ಆರೋಗ್ಯ ವಿಭಾಗಕ್ಕೆ ವಹಿಸಲಾಗಿತ್ತು. ಆದರೆ ಕಳೆದ ಆರು ತಿಂಗಳಿನಿಂದ ಈ ಪ್ರಕ್ರಿಯೆ ಸ್ಥಗಿತಗೊಂಡಿದೆ.ಆಕ್ರಮಣಕಾರಿ ಧೋರಣೆ: ಆಹಾರದ ಕೊರತೆ ಕಾರಣಕ್ಕೆ, ಲೈಂಗಿಕ ಆಸಕ್ತಿಯ ಹೆಚ್ಚಳದಿಂದಾಗಿ ಸದಾ ಉದ್ರೇಕ ಸ್ಥಿತಿಯಲ್ಲಿರುವ ನಾಯಿಗಳು ಸಹಜವಾಗಿಯೇ ಆಕ್ರಮಣಕಾರಿ ಧೋರಣೆ ಹೊಂದಿರುತ್ತವೆ. ಮಕ್ಕಳು ಸುಲಭವಾಗಿ ಅವುಗಳ ದಾಳಿಗೆ ಒಳಗಾಗುತ್ತಾರೆ ಎನ್ನುತ್ತಾರೆ' ಪಾಲಿಕೆ ಮಾಜಿ ಮೇಯರ್ ಡಾ.ಪಾಂಡುರಂಗ ಪಾಟೀಲ.`ಬೀದಿ ನಾಯಿಗಳ ನಿಯಂತ್ರಣಕ್ಕೆ ಗುಂಡು ಹೊಡೆದು, ವಿಷವಿಟ್ಟು ಪ್ರಾಣಿದಯಾ ಸಂಘದ ಟೀಕೆಗೆ ಗುರಿಯಾಗುವುದು ಬೇಡ. ಕನಿಷ್ಟ ಆರು ತಿಂಗಳು ಮನೆ ಹಾಗೂ ಹೋಟೆಲ್‌ಗಳ ಆಹಾರ ತ್ಯಾಜ್ಯವನ್ನು ಬೀದಿಗೆ ಚೆಲ್ಲದೆ ವ್ಯವಸ್ಥಿತವಾಗಿ ನಗರದಿಂದ ಹೊರಗೆ ಸಾಗಿಸಿ. ಆಗ ಹಸಿವಿನಿಂದ ನಾಯಿಗಳು ಸಾಯುತ್ತವೆ. ಸುಲಭವಾಗಿ ಸಂಖ್ಯೆ ಕಡಿಮೆಯಾಗುತ್ತದೆ. ವ್ಯವಸ್ಥಿತ ತ್ಯಾಜ್ಯ ವಿಲೇವಾರಿಗೆ ಸಾರ್ವಜನಿಕರು ಸಹಕರಿಸಬೇಕು' ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.