ಬುಧವಾರ, ಮೇ 12, 2021
20 °C

ಮತ್ತೇ ಬರ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಡಿಯುವ ನೀರಿಗೆ ಹಾಹಾಕಾರ. ಮಳೆಯ ಸುಳಿವು ಕಾಣದೆ, ಕೃಷಿ ಕೆಲಸಗಳಿಲ್ಲದೆ ದುಡಿಯುವ ಗ್ರಾಮೀಣ ಮಂದಿ ನಗರಗಳತ್ತ ಮುಖ ಮಾಡಿದ್ದಾರೆ. ಆದರೆ, ಬರಗಾಲ ಹೊಸತೇನೂ ಅಲ್ಲ. ಬದಲಾಗಿರುವುದು ಬರಗಾಲದ ಚಿತ್ರಗಳಷ್ಟೇ.ಅರವತ್ತರ ದಶಕದ ಬರದ ಒಂದು ನೆನಪು ಇಲ್ಲಿದೆ. ಈ ಹೊತ್ತಿನ ಬರಗಾಲದ ಚಿತ್ರಣ ಪಕ್ಕದಲ್ಲಿದೆ. ಈ ಎರಡು ಚಿತ್ರಗಳು ಬರದ ದಾರುಣತೆಯ ಜೊತೆಗೆ ಬದಲಾಗಿರುವ ಸಾಮಾಜಿಕ ಸಂದರ್ಭವನ್ನೂ ಚಿತ್ರಿಸುವಂತಿವೆ.1962 ಮಾರ್ಚ್ ತಿಂಗಳ ಒಂದು ದಿನ. ಮುನಿಯಮ್ಮ ಬೆಳಗಿನ ಜಾವ ನಾಲ್ಕು ಗಂಟೆಗೇ ಕದ ತಟ್ಟಿದಳು. `ಅಮ್ಮಣ್ಣಿ ಬೆಳಗಾಗುತ್ತದೆ ಬೇಗ ಕಳುಹಿಸಿ~ ಎಂದು ಕೂಗಿದಳು. ಅವಳು ಕೂಗಿದ್ದು ಒಳಗಿದ್ದ ಎಲ್ಲರಿಗೂ ಕೇಳಿಸುತ್ತಿತ್ತು. ಹಸಿವಿನ ಎಷ್ಟೋ ಹಗಲು ರಾತ್ರಿಗಳು ಒಮ್ಮೆಲೇ ಮೇಲೆ ಬಿದ್ದಂತೆ ಎಲ್ಲರ ಕಣ್ಣುಗಳಲ್ಲಿ ಮಂಪರು ಆವರಿಸಿತ್ತು.ಅಮ್ಮ ಎದ್ದು ಕೂತಳು. `ಏಳೋ ಬೇಗ. ಎದ್ದು ಮುನಿಯಮ್ಮನ ಜೊತೆಯಲ್ಲಿ ಹೋಗು~ ಎಂದಳು. ಅಕ್ಕ ಕೂಡಾ ಎದ್ದಳು. ಬಾಗಿಲ ಅಗುಳಿ ತೆಗೆದು ಹೊರಕ್ಕೆ ಕಾಲಿಡುತ್ತಿರುವಂತೆ ತಣ್ಣನೆ ಗಾಳಿ ಮುಖಕ್ಕೆ ರಾಚಿತು. ಅಕ್ಕ ಹಳೆಯ ಗೋಣಿ ಚೀಲ ಮತ್ತು ಬ್ಯಾಗು ತಂದಳು. ಮುನಿಯಮ್ಮನ ಜೊತೆ ಹೊರಬಿದ್ದಾಗ ಇನ್ನೂ ಕತ್ತಲೆ.ಮುನಿಯಮ್ಮ ಬೇಗ ಬೇಗ ಹೆಜ್ಜೆ ಹಾಕುತ್ತಿದ್ದಳು. ತೋಪು ದಾಟಿ ದೊಡ್ಡ ದೊಂಗರದ ಬಳಿ ಬಂದಾಗ ನಮ್ಮ ಮುಂದೆ ಯಾರೋ ಮಾತನಾಡುತ್ತಿದ್ದಂತೆ ಕೇಳಿಸಿತು. ಮುತ್ತಪ್ಪನ ಹೊಲದ ಬದು ಹಿಡಿದು ಮಬ್ಬುಗತ್ತಲಲ್ಲಿ ಕಣ್ಣು ಹಾಯಿಸಿದೆ. ಐದು ಹತ್ತು ಇಪ್ಪತ್ತು.. ಉದ್ದಕ್ಕೂ ಕಣ್ಣು ಕಾಣುವವರೆಗೆ ಜನರು ಹೋಗುತ್ತಿದ್ದರು.ಹೆಜ್ಜೆ ಸವೆಯುತ್ತಿದ್ದಂತೆ ನಾವು ಹಳ್ಳಿಯಿಂದ ಬಹಳ ದೂರ ಬಂದಿದ್ದೆವು. ಬೂದಿಗೆರೆ ದಾಟಿ ಕೆಸರು ಒಣಗಿದ ಕಾಲುದಾರಿಯಲ್ಲಿ ಮುನಿಯಮ್ಮ ನಡೆದಳು. ನಾವೂ ಹಿಂಬಾಲಿಸಿದೆವು. ಮಬ್ಬುಗತ್ತಲು ತಿಳಿಯಾಗುತ್ತಿತ್ತು. ಆಗ ಸುಮಾರು ಐದು ಗಂಟೆ ಇರಬಹುದು. ಕೆಸರು ಸಿಪ್ಪೆ ಸುಲಿದಂತಾಗಿ ಪಾದಗಳನ್ನು ಒತ್ತುತ್ತಿತ್ತು.ಒಂದು ಕಾಲದಲ್ಲಿ ಅಲ್ಲಿ ದಕ್ಷಿಣ ಪಿನಾಕಿನಿ ನದಿ ಹರಿಯುತ್ತಿತ್ತು. ನಂದಿಬೆಟ್ಟದ ತುದಿಯಿಂದ ಬೆಂಗಳೂರಿನವರೆಗೆ ಹಬ್ಬಿದ ದಟ್ಟಕಾಡು ಮರೆಯಾದಂತೆ ನದಿಯೂ ಮರೆಯಾಗಿತ್ತು. ಮಳೆಗಾಲದಲ್ಲಿ ಹೊಳೆ ಬರುವುದುಂಟು. ಕಳೆದ ನಾಲ್ಕೈದು ವರ್ಷಗಳಿಂದ ಸರಿಯಾಗಿ ಮಳೆ ಬೀಳದೆ ನದಿಯ ಎದೆಯೆಲ್ಲಾ ಒಣಗಿತ್ತು.ನಾವು ನದಿಯ ನಡುಭಾಗಕ್ಕೆ ಕಾಲಿಡುವ ವೇಳೆಗೆ ಜನರ ಜಾತ್ರೆಯೂ ಸೇರಿತ್ತು. ಎಲ್ಲರ ಕೈಯಲ್ಲಿ ಗುದ್ದಲಿ, ಸನಕೆಗಳಿದ್ದವು. ಅಗೆದು ಏನನ್ನೋ ಆಯುತ್ತಿದ್ದರು. ಮುನಿಯಮ್ಮ ಇತ್ತ ಬನ್ನಿ ಎಂದು ಒಂದು ಬದಿಗೆ ಕರೆದುಕೊಂಡು ಹೋದಳು. ಸಣ್ಣ ಗುದ್ದಲಿ ಹಿಡಿದು ನೆಲ ಅಗೆಯಲಾರಂಭಿಸಿದಳು. ಸಣ್ಣಪುಟ್ಟ ಗಡ್ಡೆಗಳನ್ನು ಹೆಕ್ಕಿ ತೆಗೆದು ನೋಡಿ ಸ್ವಾಮಿ ನೀವೂ ಇಂಥದೇ ಗಡ್ಡೆಗಳನ್ನು ಅಗೆದು ತೆಗೆಯಬೇಕೆಂದಳು.

 

ನಾನು, ಅಕ್ಕ ಅಗೆಯಲಾರಂಭಿಸಿದೆವು. ನಮಗೂ ಗಡ್ಡೆಗಳು ಸಿಕ್ಕವು. ಅವನ್ನೆಲ್ಲಾ ಬ್ಯಾಗಿಗೆ ತುಂಬಿಕೊಂಡೆವು. ಅಲ್ಲಿಂದ ಸ್ವಲ್ಪ ದೂರದಲ್ಲಿ ಕಾಡು ಗಿಡಗಳು ಇದ್ದವು. ಅವುಗಳಲ್ಲಿ ಎಲೆಗಳನ್ನೂ ಜನರು ಕಿತ್ತುಕೊಂಡು ತುಂಬಿಕೊಳ್ಳುತ್ತಿದ್ದರು. ನಾವೂ ಒಂದು ಚೀಲ ಆಗುವಷ್ಟು ಕಿತ್ತು ತುಂಬಿಕೊಂಡೆವು.ಬೆಳಕು ಹರಿಯುವ ವೇಳೆಗೆ ಇಬ್ಬರೂ ಸೇರಿ ಒಂದು ಬ್ಯಾಗು ಗಡ್ಡೆಗಳನ್ನು ಅಗೆದು ತೆಗೆದಿದ್ದೆವು. ಅವಕ್ಕೆ ಗೋಟಿ ಗಡ್ಡೆ ಎನ್ನುತ್ತಾರಂತೆ. ಅವು ಎಲ್ಲ ಕಾಲದಲ್ಲಿ ನೆಲದಲ್ಲಿ ಇರುತ್ತವಂತೆ. ಒಂದು ರೀತಿಯ ಹುಲ್ಲಿನ ಗಡ್ಡೆಗಳು. ನೀರು ಹರಿಯುವ ಜಾಗದಲ್ಲಿ ಹುಟ್ಟಿ ಎಷ್ಟು ವರ್ಷ ನೀರು ಇಲ್ಲದಿದ್ದರೂ ನೆಲದಲ್ಲಿ ಇರುತ್ತವಂತೆ.ಬರಗಾಲ ಬಂದಾಗ ಪ್ರಾಣಿ, ಪಕ್ಷಿಗಳು ಈ ಗಡ್ಡೆ ತಿಂದು ಬದುಕಿಕೊಳ್ಳುತ್ತವಂತೆ. ಹಿಂದೆ ಎಷ್ಟೋ ಬರಗಾಲಗಳು ಬಂದಿವೆ. ಬರಗಾಲ ಬಂದಾಗಲೆಲ್ಲಾ ನಾವು ಬದುಕಿರುವುದು ಈ ಗೋಟಿ ಗಡ್ಡೆ ಮತ್ತು ಬದಿಯಲ್ಲೇ ಇರುವ ಹಸಿರು ಎಲೆಗಳಿಂದಲೇ ಎಂದು ಮುನಿಯಮ್ಮ ಹೇಳಿದಳು. ಹೇಗಿರುತ್ತದೋ ಎಂದು ಒಂದು ಗಡ್ಡೆ ಕಚ್ಚಿ ತಿಂದೆ.ವಾಂತಿ ಬರುವಂತಾಯಿತು. ಮುನಿಯಮ್ಮ ಇವತ್ತು ಸಾಕು ಹೋಗೋಣ ಎಂದಳು. ಬೆಳಗಾಗುವ ವೇಳೆಗೆ ಊರು ಸೇರಿಕೊಳ್ಳಬೇಕಿತ್ತು. ಬಂದ ದಾರಿಯಲ್ಲಿಯೇ  ಬೇಗ ಬೇಗ ನಡೆದು ಮನೆ ಸೇರಿದೆವು. ಅಮ್ಮ ನಮಗಾಗಿ ಕಾಯುತ್ತಿದ್ದಳು. `ಊರಿನಲ್ಲಿ ಯಾರೂ ನೋಡಲಿಲ್ಲ ತಾನೆ~ ಎಂದು ಕೇಳಿದಳು. ನಮಗೆ ಇಂಥ ಗತಿ ಬಂದಿದೆ ಎಂಬುದು ಯಾರಿಗೂ ಗೊತ್ತಾಗಬಾರದು ಎಂಬುದು ಅಮ್ಮನ ಬಯಕೆಯಾಗಿತ್ತು.ಅಪ್ಪ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರು. ಆದರೆ ತಿಂಗಳು ತಿಂಗಳು ಸರಿಯಾಗಿ ವೇತನ ಬರುತ್ತಿರಲಿಲ್ಲ. ಬರಗಾಲ ಬೇರೆ ಕಳೆದ ಮೂರು ವರ್ಷಗಳಿಂದ ಕಾಡುತ್ತಿತ್ತು. ಆಹಾರ ಅಭಾವ ಎಲ್ಲ ಕಡೆ. ಮನೆ ತುಂಬಾ ಮಕ್ಕಳು. ನಾವು ಮನೆ ಬಾಗಿಲು ತಟ್ಟಿದೆವು. ಬ್ಯಾಗು ತುಂಬಾ ಗೋಟಿಗಡ್ಡೆ ಮತ್ತು ಒಂದು ಚೀಲ ಎಲೆ ಇದ್ದದ್ದು ನೋಡಿ ಅಮ್ಮನ ಕಣ್ಣಲ್ಲಿ ನೀರು ಒತ್ತರಿಸಿ ಬಂದವು.ಅಪ್ಪ ಆಗ್ಗಾಗಲೇ ಮನೆಯಿಂದ ಹೊರಗೆ ಹೋಗಿದ್ದರು. ಎರಡು ಮೈಲಿ ದೂರದಲ್ಲಿರುವ ಬನ್ನಿಮಂಗಲದ ಬಂಡೆಯ ಮೇಲಿರುವ ಕಲ್ಯಾಣಿಯಲ್ಲಿ ಇನ್ನು ಸ್ವಲ್ಪ ನೀರಿದೆ ಎಂಬ ಸುದ್ದಿ ಹಿಂದಿನ ದಿನವೇ ಊರಲ್ಲಿ ಹಬ್ಬಿತ್ತು. ಹಿಂದಿನ ರಾತ್ರಿಯೇ ಕೆಲವರು ಅಲ್ಲಿಂದ ನೀರು ತಂದರೆಂದೂ ಆ ನೀರು ಕುಡಿಯಬಹುದೆಂದೂ ಗುಟ್ಟಾಗಿ ಜನರು ಮಾತನಾಡಿಕೊಳ್ಳುತ್ತಿದ್ದುದು ಅಪ್ಪನ ಕಿವಿಗೂ ಬಿದ್ದಿತ್ತು.

 

ಅಪ್ಪ ಬಿಂದಿಗೆಗಳನ್ನು ಹಿಡಿದು ಬೆಳಗಿನ ಜಾವವೇ ಅಲ್ಲಿಗೆ ಹೋಗಿದ್ದರು. ಅವರು ಬರುವ ವೇಳೆಗೆ ದನಗಳನ್ನು ಚಲಮಕುಂಟೆ ಕಡೆಗೆ ಹೊಡೆದುಕೊಂಡು ಹೋಗಿ ಮೇಯಿಸಿಕೊಂಡು ಬರಬೇಕೆಂದು ಹೇಳಿ ಹೋಗಿದ್ದರು. ನಮ್ಮ ಮನೆಯಲ್ಲಿ ಮೂರು ದನಗಳಿದ್ದವು. ಅಪ್ಪ ಹೇಳಿದಂತೆ ದನಗಳನ್ನು ಚಲಮಕುಂಟೆ ಕಾಡಿನ ಕಡೆಗೆ ಹೋಗಿ ಮೇಯಿಸಿಕೊಂಡು ಬರುವ ವೇಳೆಗೆ ಶಾಲೆಗೆ ಹೊತ್ತಾಗಿತ್ತು. ಊರಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಮಾತ್ರ ಇತ್ತು.ಐದನೆ ತರಗತಿಗೆ ಹೋಗಬೇಕೆಂದರೆ ನಾಲ್ಕು ಮೈಲಿ ದೂರದಲ್ಲಿರುವ ಬೂದಿಗೆರೆ ಗ್ರಾಮದ ಮಾಧ್ಯಮಿಕ ಶಾಲೆಗೆ ಹೋಗಬೇಕಿತ್ತು. ನಾಲ್ಕು ಮೈಲಿ ನಡೆದು ಹೋಗಬೇಕಾಗುತ್ತದೆಂದು ಎಷ್ಟೋ ಜನರು ತಮ್ಮ ಮಕ್ಕಳನ್ನು ಮಾಧ್ಯಮಿಕ ಶಾಲೆಗೆ ಕಳುಹಿಸುತ್ತಿರಲಿಲ್ಲ.ಓದಿಸಲೇಬೇಕೆಂದು ಅಪ್ಪ ನನ್ನನ್ನು ಬೂದಿಗೆರೆಯಲ್ಲಿರುವ ಮಾಧ್ಯಮಿಕ ಶಾಲೆಗೆ ಕಳುಹಿಸುತ್ತಿದ್ದರು. ಬೆಳಿಗ್ಗೆಯೇ ಉರಿಬಿಸಿಲು. ದನ ಮೇಯಿಸಿ ವಾಪಸ್ ಬರುವ ವೇಳೆಗೆ ಅಪ್ಪ ಬಂದಿದ್ದರು. ಬನ್ನಿಮಂಗಲದ ಬಂಡೆಯ ಮೇಲೆ ನೀರು ಸಿಗಲಿಲ್ಲ ಎಂದು ಹೇಳಿದರು. ಮನೆಯಲ್ಲಿ ಒಂದು ತೊಟ್ಟು ನೀರೂ ಇರಲಿಲ್ಲ. ಊರಿನ ಬಾವಿ ಬತ್ತಿ ಹೋಗಿತ್ತು. ಒಂದೆರಡು ದಿನ ಬಿಟ್ಟರೆ ಅಂತರ್‌ಜಲ ಜಿನುಗಿ ನೀರು ಸಂಗ್ರಹವಾಗುತ್ತಿತ್ತು.

 

ಆ ನೀರನ್ನು ತುಂಬಿಕೊಳ್ಳಲು ಊರಿನ ಜನರು ಹಗ್ಗಗಳಿಗೆ ಸಣ್ಣ ಬಿಂದಿಗೆಗಳನ್ನು ಇಳಿಯಬಿಟ್ಟು ಕಾಯುತ್ತಿದ್ದರು. ಕೆಲವು ಯುವಕರು ಬಾವಿಯಲ್ಲೇ ಇದ್ದು ನೀರು ತುಂಬಿಕೊಡುತ್ತಿದ್ದರು. ಎಲ್ಲರಿಗೆ ಸಾಕಾಗುವಷ್ಟು ನೀರು ಸಿಗುತ್ತಿರಲಿಲ್ಲ. ಕೊನೆಕೊನೆಗೆ ವಂಡು ನೀರು ಸಿಗುತ್ತಿತ್ತು. ಅದನ್ನೇ ಸೋಸಿ ಜನರು ಕುಡಿಯುತ್ತಿದ್ದರು.ಎಲ್ಲರೂ ಕೊನೆಯಲ್ಲಿ ಹೋಗುವುದು ಮಣ್ಣಿಗೇ ಅಲ್ಲವೇ ಎಂದುಕೊಂಡು ಅವರು ಅದನ್ನೇ ಕುಡಿಯುತ್ತಿದ್ದರು. ಬೆಳಗ್ಗೆ ಮನೆಯಲ್ಲಿ ಸಡಗರ. ಅಮ್ಮ ಒಳಗಿನಿಂದ ಬಾಗಿಲು ಮುಚ್ಚಿದರು. ಮಕ್ಕಳನ್ನು ಕರೆದು ತಟ್ಟೆಗೆ ಬೇಯಿಸಿದ ಗೋಟಿಗಡ್ಡೆಗಳನ್ನು ಹಾಕಿಕೊಟ್ಟರು. ಜೊತೆಗೆ ಸೊಪ್ಪಿನ ಪಲ್ಯ ಕೊಟ್ಟರು. ಎಲ್ಲರ ಮುಖದಲ್ಲಿ ಸದ್ಯ ಏನಾದರೂ ಸಿಕ್ಕಿತಲ್ಲ ಎಂಬ ಸಮಾಧಾನ ಇತ್ತು. ಗೋಟಿಗಡ್ಡೆ ವಿಪರೀತ ಕಹಿಯಾಗಿತ್ತು.

 

ನನ್ನಿಂದ ತಿನ್ನಲು ಸಾಧ್ಯವಾಗಲಿಲ್ಲ. ತಿನ್ನಲು ಇಂದು ಇನ್ನೇನೂ ಇಲ್ಲ, ತಿಂದರೆ ತಿನ್ನಿ ಇಲ್ಲದಿದ್ದರೆ ಬಿಡಿ ಎಂದಳು ಅಮ್ಮ. ನಾವೆಲ್ಲಾ ಕಣ್ಣು ಮುಚ್ಚಿಕೊಂಡು ತಿಂದೆವು. ಇದು ಒಂದೆರಡು ದಿನದ ಕಥೆಯಲ್ಲ. ಹಲವು ತಿಂಗಳುಗಳ ಕಾಲ ಇದೇ ಸ್ಥಿತಿ. ಜನರು ಹೊಟ್ಟೆಗಾಗಿ ಪರದಾಡಿದರು. ದನ, ಕರು, ಮೇಕೆ, ಕುರಿ ತಿನ್ನುವ ಗಿಡಗಂಟೆಗಳನ್ನೆಲ್ಲಾ ತಿನ್ನುವುದು ಅನಿವಾರ್ಯವಾಗಿತ್ತು.ಒಂದು ಸಂಜೆ ಶಾಲೆ ಬಿಟ್ಟಮೇಲೆ ದಡದಡನೆ ಊರಿನತ್ತ ಹೊರಟೆವು. ಹಸಿವು ಕಿತ್ತು ತಿನ್ನುತ್ತಿತ್ತು. ನಮ್ಮ ಊರಿಗೂ ನಾವು ಕಲಿಯಲೆಂದು ಹೋಗುತ್ತಿದ್ದ ಊರಿಗೂ ಮಧ್ಯೆ ಕುರುಚಲು ಕಾಡು ಇತ್ತು. ನಾವು ಕಾಡೊಳಕ್ಕೆ ನುಗ್ಗಿದೆವು. ಕುರುಚಲು ಮುಳ್ಳುಗಳು ಕೈಮೈಗೆ ತಗುಲಿ ರಕ್ತ ಬರುತ್ತಿತ್ತು.

 

ಆದರೂ ಕುಲ್ಡೆ, ಮಿಲ್ಡೆ, ಕಾಶಿಹಣ್ಣುಗಳು ಸಿಗುವವರೆಗೆ ನಾವು ಹೋದೆವು. ಸಾಕಷ್ಟು ಹಣ್ಣಿನ ಗಿಡಗಳು ಸಿಕ್ಕವು. ಹೊಟ್ಟೆ ತುಂಬ ತಿಂದು ಊರಿನ ಕಡೆಗೆ ಹೊರಟೆವು. ಮನೆ ತಲುಪಿದ ತತ್‌ಕ್ಷಣ ಹೊಲಕ್ಕೆ ಹೋಗಿ ದನಗಳನ್ನು ಹೊಡೆದುಕೊಂಡು ಬರಬೇಕೆಂದು ಅಮ್ಮ ಹೇಳಿದಳು. ಹೊಲಕ್ಕೆ ಹೋಗಿ ದನಗಳನ್ನು ಹೊಡೆದು ತಂದು ಮನೆಯಲ್ಲಿ ಕಟ್ಟಿದೆ.

 

ಮನೆಯಲ್ಲಿ ಎಲ್ಲರೂ ಅಳುವ ಕಣ್ಣುಗಳಿಂದ ಕುಳಿತಿದ್ದರು. ಅಮ್ಮ, ಅಕ್ಕ ಒಲೆಯ ಮುಂದೆ ಮೌನವಾಗಿ ಕುಳಿತಿದ್ದರು. ಅಪ್ಪ ಮನೆಯೊಳಗೆ ಬಂದರು. ಮನೆಯಲ್ಲಿ ಮಿಂಚಿನ ಸಂಚಾರವಾದಂತಾಯಿತು. ಬಾ ಇಲ್ಲಿ ಎಂದು ನನ್ನನ್ನು ಕರೆದರು. ಬೂದಿಗೆರೆಗೆ ಹೋಗಿ ಒಂದು ರೂಪಾಯಿಗೆ ಗೋಧಿ ಹಿಟ್ಟು ತಾ ಎಂದರು. ಆಗ್ಗಾಗಲೇ ಸೂರ್ಯ ಮುಳುಗಿದ್ದ.ಅಪ್ಪನ ಬಳಿ ಹಣ ಇರಲಿಲ್ಲ. ಯಾರೋ ಒಬ್ಬರು ಒಂದು ರೂಪಾಯಿ ಸಾಲ ಕೊಟ್ಟರಂತೆ. ಆಗಿನ ಕಾಲದಲ್ಲಿ ಒಂದು ರೂಪಾಯಿಗೆ ಒಂದು ಪಾವು ಗೋಧಿ ಹಿಟ್ಟು ಬರುತ್ತಿತ್ತು. ಒಂದು ಪಾವು ಗೋಧಿ ಹಿಟ್ಟು ಎಂಟು ಜನಕ್ಕೆ ಸಾಕೇ? ನಾನು ಓಡಿ ಓಡಿ ಬೂದಿಗೆರೆಗೆ ಹೋದೆ. ನಾಲ್ಕು ಮೈಲಿ ಹೋಗಿ ಬರುವುದರೊಳಗೆ ರಾತ್ರಿ ತಡವಾಗಿತ್ತು.ಅಮ್ಮ ಒಲೆಯ ಮೇಲೆ ಹೆಂಚು ಇಟ್ಟಳು. ಗೋಧಿ ಹಿಟ್ಟು ನೀರಿನಲ್ಲಿ ಕಲಸಿ ಎಲ್ಲರಿಗೂ ಒಂದೊಂದು ಪುಟ್ಟ ದೋಸೆ ಹಾಕಿಕೊಟ್ಟಳು. ತಮ್ಮನೊಬ್ಬ ಒಂದು ದೋಸೆ ಸಾಲದೆಂದು ಹೊಟ್ಟೆ ವಿಪರೀತ ಹಸಿಯುತ್ತಿದೆ ಎಂದು ಅಳಲಾರಂಭಿಸಿದ. ಕೊನೆಯ ದೋಸೆಯಲ್ಲಿ ಅರ್ಧಭಾಗ ಅವನಿಗೆ ಕೊಟ್ಟು ಉಳಿದದ್ದು ತಾನು ತಿಂದು ನೀರು ಕುಡಿದು ಮಲಗಿದ್ದಾಗಿ ಅಮ್ಮ ಆ ಘಟನೆಯನ್ನು ನೆನಪಿಸಿಕೊಳ್ಳುತ್ತಿದ್ದಳು. ಅದೊಂದು ದಿನ ಸೂರ್ಯನ ಬಿಸಿಲು ಮನೆಯ ಮುಂದೆ ಬರುತ್ತಿದ್ದಂತೆಯೇ ಅಮ್ಮ ನನ್ನನ್ನು ಎಬ್ಬಿಸಿದಳು. ಹೊರಗೆ ಭಜನೆಮನೆಯ ಹತ್ತಿರ ಜನ ಸೇರಿದ್ದರು. ದೇವೀರಮ್ಮನ ಒಂದು ವರ್ಷದ ಮಗು ಸತ್ತ ಸುದ್ದಿ ಊರಿಗೆ ಊರನ್ನೇ ನಡುಗಿಸಿತ್ತು. ಮುಂದೇನು ಮಾಡಬೇಕೆಂದು ತೋಚದೆ ಜನರು ದೇವರ ಮುಂದೆ ಸೇರಿದ್ದರು. ಕುಡಿಯಲು ನೀರಿಲ್ಲ, ಊಟಕ್ಕೆ ಆಹಾರವಿಲ್ಲ. ದನಗಳಿಗೂ ಮೇವಿಲ್ಲ.ಊರಿಗೆ ಏನೋ ಆಗಿದೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದರು. ಊರ ದೇವರ ಮೆರವಣಿಗೆ ನಡೆಸಬೇಕೆಂದು ಕೆಲವರು ಸಲಹೆ ಮಾಡುತ್ತಿದ್ದರು. ದಿನ ಕಳೆದಂತೆ ಕೆಲವರು ಕೆಲಸ ಹುಡುಕಿಕೊಂಡು ನಗರಕ್ಕೆ ಹೋದರು. ಇದ್ದವರು ಗಡ್ಡೆ, ಗೆಣಸು, ಸೊಪ್ಪು ಸೊದೆ ತಿಂದರು. ನಿರೀಕ್ಷಿಸಿದಂತೆ ಊರಿನಲ್ಲಿ ವಾಂತಿ ಭೇದಿ ಆರಂಭವಾಯಿತು.ಹಲವು ಮಕ್ಕಳು ತೀರಿಕೊಂಡವು. ಕೊನೆಗೂ ಹತ್ತು ಮೈಲಿ ದೂರದಲ್ಲಿದ್ದ ದೇವನಹಳ್ಳಿಯ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ವಿಷಯ ಗೊತ್ತಾಯಿತು. ಆದರೆ ಊರಿಗೆ ಬಂದು ಚಿಕಿತ್ಸೆ ನೀಡಲು ಸಾಧ್ಯವಿಲ್ಲವೆಂದೂ ತಾವಿದ್ದಲ್ಲಿಗೇ ಕಾಯಿಲೆ ಇರುವವರನ್ನು ಕರೆದುತಂದರೆ ಔಷಧಿ ಕೊಡುವುದಾಗಿಯೂ ಹೇಳಿ ಕಳುಹಿಸಿದರು.ಆ ಕಾಲದಲ್ಲಿ ದೇವನಹಳ್ಳಿಗೆ ಬಸ್ ವ್ಯವಸ್ಥೆ ಇರಲಿಲ್ಲ. ನಡೆದುಕೊಂಡು ಹೋಗಬೇಕು ಇಲ್ಲವೇ ಎತ್ತಿನ ಗಾಡಿಗಳಲ್ಲಿ ಹೋಗಬೇಕು. ಜನರು ಗಾಡಿಕಟ್ಟಿಕೊಂಡು ಅಲ್ಲಿಗೆ ಹೋಗಿ ಔಷಧಿ ತಂದರು. ಆ ವೈದ್ಯರು ಜನರ ಕಷ್ಟ ನೋಡಲಾರದೆ ಎಂಎಲ್‌ಎಗೆ ವಿಷಯ ತಿಳಿಸಿದರು. ಆದರೆ ಮುಂದೆ ಏನೂ ಆಗಲಿಲ್ಲ.ಇದರ ಪರಿಣಾಮವಾಗಿ ನಾಟಿ ಮತ್ತು ಹಸಿರು ಔಷಧಿಗಳು ಚಲಾವಣೆಗೆ ಬಂದವು. ಜನರಿಗೆ ಯಾವುದು ಸರಿ ಯಾವುದು ಸರಿಯಲ್ಲ ಎನ್ನುವುದನ್ನು ತಿಳಿಯುವ ವ್ಯವಧಾನ ಇರಲಿಲ್ಲ. ಸತ್ತವರೇ ಅದೃಷ್ಟವಂತರು ಎನ್ನುವಂತಾಯಿತು. ಸಾವಿನ ಸಂಖ್ಯೆ ಹೆಚ್ಚಿದ ನಂತರ ವೈದ್ಯರ ತಂಡ ಊರಿಗೇ ಬಂದು ಚಿಕಿತ್ಸೆ ನೀಡಿತು. ವಾಂತಿ ಭೇದಿ ಕ್ರಮೇಣ ತಗ್ಗಿತು.ಬರಗಾಲ ನಿವಾರಣೆ ಕಾರ್ಯಕ್ರಮದ ಅನ್ವಯ ಕೆರೆ ಹೂಳೆತ್ತುವ ಕಾಮಗಾರಿ ಹಮ್ಮಿಕೊಳ್ಳಲಾಯಿತು. ಯಾರೋ ಕಂಟ್ರಾಕ್ಟರು ಊರಿಗೆ ಬಂದು ಮೊದಲ ದಿನ ಮನೆಗೊಂದು, ಎರಡು ಆಳಂತೆ ದೇವರ ಕೆಲಸ ಮಾಡಬೇಕೆಂದು ಹೇಳಿದರು. ನಾನು, ಅಕ್ಕ ಬೆಳಿಗ್ಗೆಯೇ ಮಂಕರಿ ಗುದ್ದಲಿ ಹಿಡಿದುಕೊಂಡು ಕೆರೆಯ ಬಳಿಗೆ ಹೋದೆವು. ಊರಿನ ಇತರರೂ ಸಾಕಷ್ಟು ಮಂದಿ ಅಲ್ಲಿ ಸೇರಿದ್ದರು. ಅಂದು ಹೂಳೆತ್ತುವ ಕೆಲಸದ ಕಾರ್ಯಕ್ರಮ ಆರಂಭವಾಯಿತು. ನಾವು ಮಾಡಿದ್ದು ದೇವರ ಕಾರ್ಯವಾದ್ದರಿಂದ ಅಂದು ಕೂಲಿ ಸಿಗಲಿಲ್ಲ. ದೇವರ ಹೆಸರಿನಲ್ಲಿ ಕೆಲಸ ಮಾಡಿಸಿ ಕಂಟ್ರಾಕ್ಟರ್ ಹಣ ಹೊಡೆದಿರುವುದು ಎಲ್ಲರಿಗೂ ಗೊತ್ತಿತ್ತು. ಆದರೆ ಮಾರನೆಯ ದಿನದಿಂದ ಕೂಲಿ ಸಿಗುವುದೆಂಬ ಕಾರಣಕ್ಕೆ ಯಾರೂ ಅದರ ವಿಚಾರ ಎತ್ತಲಿಲ್ಲ.ಮಾರನೆಯ ದಿನದಿಂದ ಸುಮಾರು ಎರಡು ವಾರಗಳ ಕಾಲ ಕೂಲಿ ಸಿಗುತ್ತಿತ್ತು. ಅಲ್ಪ ಸ್ವಲ್ಪ ಹಣವೂ ಸಿಗುತ್ತಿತ್ತು. ಈ ಕೂಲಿ ಕೆಲಸದಿಂದಾಗಿ ಊರಿನಲ್ಲಿ ಪರಿಸ್ಥಿತಿ ಸುಧಾರಿಸಿತು. ಒಪ್ಪೊತ್ತಾದರೂ ಜನರು ಊಟಮಾಡುವಂತಾಯಿತು. ತಿಂಗಳುಗಳು ಕಳೆದರೂ ಮಳೆ ಬರಲಿಲ್ಲ. ಮನೆಯಲ್ಲಿ ದನಗಳನ್ನು ನಿಭಾಯಿಸುವುದು ಕಷ್ಟ ಎನಿಸಿತು. ಮೂರು ದನಗಳ ಪೈಕಿ ಎರಡನ್ನು ಮಾರುವುದೆಂದು ಅಮ್ಮ ಅಪ್ಪ ನಿರ್ಧರಿಸಿದರು. ಕೆಲವೇ ದಿನಗಳಲ್ಲಿ ಹೊಸಕೋಟೆ ದನಗಳ ಜಾತ್ರೆ ಆರಂಭವಾಗುವುದಿತ್ತು. ನಾನು ಮತ್ತು ಅಪ್ಪ ಒಂದು ಬೆಳಗಿನ ಜಾವ ದನ ಹೊಡೆದುಕೊಂಡು ಹೊಸಕೋಟೆ ಜಾತ್ರೆಯತ್ತ ಹೊರಟೆವು.ಬರಗಾಲವಾದ್ದರಿಂದ ಜಾತ್ರೆಗೆ ಸಾವಿರಾರು ದನಗಳು ಬಂದಿದ್ದವು. ದನಗಳನ್ನು ಸಾಕಲಾಗದೆ ಜನರು ತಮ್ಮ ಎತ್ತು, ಹಸು ಕರುಗಳನ್ನು ಮಾರಾಟಕ್ಕಿಟ್ಟಿದ್ದರು. ಕೊಳ್ಳುವವರು ಮಾತ್ರ ಅಲ್ಲೊಬ್ಬರು ಇಲ್ಲೊಬ್ಬರು ಕಂಡುಬರುತ್ತಿದ್ದರು. ದನಗಳನ್ನು ಕಸಾಯಿಖಾನೆಗಳಿಗೆ ಸಾಗಿಸಲು ಕೊಳ್ಳುವವರೇ ಬಹಳ ಮಂದಿ ಇದ್ದರು.

 

ದನಗಳನ್ನು ಮಾರುವಾಗ ಅನೇಕ ರೈತರ ಕಣ್ಣುಗಳು ಒದ್ದೆಯಾಗುತ್ತಿದ್ದವು. ನಾವು ಒಂದು ಹಸು ಮತ್ತು ಒಂದು ಗಂಡುಕರುವನ್ನು ಮಾರಲು ಹೋಗಿದ್ದೆವು. ಎರಡೂ ಸೇರಿ ದಳ್ಳಾಳಿಗಳು ಕೇಳಿದ ರೇಟು ಮೂವತ್ತೈದು ರೂಪಾಯಿ. ನಾವು ಕೊಡಲು ಒಪ್ಪಲಿಲ್ಲ. ರಾತ್ರಿಯೆಲ್ಲಾ ರಸ್ತೆಯಲ್ಲಿ ದನಗಳ ಜೊತೆ ಮಲಗಿದೆವು. ಕಡಲೆಪುರಿಯೇ ನಮ್ಮ ಆಹಾರ.

 

ಹೀಗೆ ಐದು ದಿನಗಳಾಯಿತು. ದನಗಳು ವ್ಯಾಪಾರವಾಗಲಿಲ್ಲ. ದನಗಳನ್ನು ಮಾರಿದ ಹಣದಲ್ಲಿ ಕೆಲವು ದಿನಗಳಾದರೂ ನೂಕಬಹುದು ಎಂದು ಅಮ್ಮ ಅಪ್ಪ ಅಂದಾಜು ಮಾಡಿದ್ದರು. ವಾಪಸ್ ಹೊಡೆದುಕೊಂಡು ಹೋದರೆ ಅವುಗಳಿಗೆ ಹುಲ್ಲು ಹೊಂಚುವುದು ಹೇಗೆ, ನಮಗೇ ಊಟ ಇಲ್ಲದಿರುವಾಗ ಆ ಮೂಕಪ್ರಾಣಿಗಳ ಗತಿಯೇನು ಎಂದು ಅಪ್ಪ ಮರುಗಿದರು. ಜಾತ್ರೆ ಕೊನೆಗೊಂಡಿತು.ಬಹುಪಾಲು ರೈತರದು ಅದೇ ಪಾಡಾಗಿತ್ತು. ಕೆಲವರು ಮೂರು, ಆರು ಕಾಸಿಗೆ ದನಗಳನ್ನು ಮಾರಿದರು. ಕೆಲವರು ವಿಧಿಯಿಲ್ಲದೆ ತಮ್ಮ ಊರುಗಳಿಗೆ ವಾಪಸಾದರು. ಬೆಳಗಿನ ಜಾವ ಹೊರಟರೆ ರಾತ್ರಿಯಾಗುವ ವೇಳೆಗೆ ಊರು ತಲುಪಬಹುದೆಂಬುದು ನಮ್ಮ ಲೆಕ್ಕಾಚಾರ. ಸೂರ್ಯ ಸುಡುತ್ತಿದ್ದ. ಮಧ್ಯಾಹ್ನದ ವೇಳೆಗೆ ದನಗಳು ಸುಸ್ತಾದವು.ಅಪ್ಪ ನಾಟಕದ ಹಾಡುಗಳನ್ನು ಹೇಳುತ್ತಿದ್ದರು. ಊರೊಂದರ ಬಳಿಯ ಮರದ ಕೆಳಗೆ ದಣಿವಾರಿಸಿಕೊಂಡು ಮುಂದೆ ಹೆಜ್ಜೆ ಇಟ್ಟೆವು. ಊರು ದಾರಿ ಹತ್ತಿರ ಬರುತ್ತಿರುವಂತೆ ಅಪ್ಪ ಮೌನಿಯಾದರು. ಹಠಾತ್ತನೆ ದನಗಳಿಗೆ ಕಟ್ಟಿದ್ದ ಹಗ್ಗ ಬಿಟ್ಟರು. ದೂರ ದೂರ ಕಾಣುವವರೆಗೆ ಅವುಗಳನ್ನು ಓಡಿಸಿದರು. ಅಪ್ಪನ ಕಣ್ಣಲ್ಲಿ ನೀರಿತ್ತು. ಹೇಗಾದರೂ ಬದುಕಿಕೊಳ್ಳಲಿ ಬಿಡು ಎಂದಷ್ಟೇ ಹೇಳಿ ಮುಂದೆ ಊರ ಕಡೆಗೆ ನಡೆದರು.ಮನೆಗೆ ಕಾಲಿಡುತ್ತಿರುವಂತೆ ದನ ಎಷ್ಟಕ್ಕೆ ಮಾರಾಟವಾದುವೆಂದು ಅಮ್ಮ ಕೇಳಿದಳು. ಅಪ್ಪ ಉತ್ತರ ಹೇಳುವ ಸ್ಥಿತಿಯಲ್ಲಿರಲಿಲ್ಲ. ನಡೆದದ್ದನ್ನು ಹೇಳಿದಾಗ ಅಮ್ಮ ಗೊಳೋ ಎಂದು ಅಳಲಾರಂಭಿಸಿದಳು. ಮನೆಯವರೆಲ್ಲಾ ಸೇರಿ ನಮ್ಮನ್ನು ಬಯ್ಯಲಾರಂಭಿಸಿದರು. ಹಣವೂ ಇಲ್ಲ ದನಗಳೂ ಇಲ್ಲ! ಅಪ್ಪನಿಗೆ ಹೆಚ್ಚಿಗೆ ಹೇಳಲು ಏನೂ ತೋಚಲಿಲ್ಲ.ಮುಂದಿನ ಕೆಲವು ತಿಂಗಳು ಅಂಥದೇ ಸ್ಥಿತಿ ಇತ್ತು. ಕೊನೆಗೊಂದು ದಿನ ಮಳೆ ಬಂತು. ಜೋರಾಗಿಯೇ ಬಿತ್ತು. ಸಾಲವೋ ಸೋಲವೋ ಮಾಡಿ ಹೊಲ ಮಾಡಿದೆವು. ಬೆಳೆದ ಕಾಳುಕಡ್ಡಿಯಿಂದ ನಾವೂ ಹೊಟ್ಟೆ ಹೊರೆದುಕೊಂಡೆವು.ನಮ್ಮ ತಂದೆಯವರ ವೇತನ ಬಾಕಿಯೂ ಬಂತು. ಬರಗಾಲ ಅಂತ್ಯವಾಯಿತು. ಆದರೆ ಆಗ ನಾವು ಪಟ್ಟಪಾಡು ಯಾರಿಗೂ ಬೇಡ. ನಮ್ಮ ತಂದೆ ಕೆಲಸದಲ್ಲಿದ್ದರು. ಆದರೂ ಇಷ್ಟು ಕಷ್ಟ ಆಯಿತೆಂದರೆ ಇತರರ ಪಾಡು ಊಹಿಸಲೂ ಅಸಾಧ್ಯವಾದದು.ದಲಿತ ಸಮುದಾಯಕ್ಕೆ ಸೇರಿದ ಮುನಿಯಮ್ಮ ಇಂದಿಗೂ ಬದುಕಿದ್ದಾಳೆ. ಅವಳ ಬದುಕೇನೂ ಬದಲಾಗಿಲ್ಲ. ನಾನು ಊರಿಗೆ ಹೋದಾಗಲೆಲ್ಲಾ `ಸ್ವಾಮಿ ಸ್ವಲ್ಪ ವೀಳೇದೆಲೆ ಕೊಡಿ, ನೀವೇನ್ ಪೇಟೆ ಸೇರ‌್ಕೊಂಡುಬಿಟ್ರಿ.

 

ನಮ್ಮನ್ನು ಯಾರು ಕೇಳ್ತಾರ್ ಸ್ವಾಮಿ~ ಎಂದು ನಿಟ್ಟುಸಿರು ಬಿಡುತ್ತಾಳೆ. ದೇಶ ಸಾಕಷ್ಟು ಅಭಿವೃದ್ಧಿ ಹೊಂದಿದೆ ಎಂದು ನಮ್ಮ ರಾಜಕಾರಣಿಗಳು ಹೇಳುತ್ತಲೇ ಇದ್ದಾರೆ. ನಾವು ಪತ್ರಿಕೆಗಳವರು ಅದನ್ನೇ ಬರೆಯುತ್ತಿದ್ದೇವೆ. ಆದರೆ ಮುನಿಯಮ್ಮನ ಸ್ಥಿತಿಯಲ್ಲಿ ಏನೂ ಬದಲಾವಣೆಯಾಗಿಲ್ಲ. ಹಾಗೆಂದರೆ ಯಾರು ಅಭಿವೃದ್ಧಿಯಾಗಿದ್ದಾರೆ? ನಾನು ಹುಬ್ಬಳ್ಳಿಯಲ್ಲಿ ವರದಿಗಾರನಾಗಿದ್ದ ಕಾಲ. (1985) ಒಮ್ಮೆ ಹೀಗೇ ಆಯಿತು. ಅಲ್ಲಿನ ದನದ ಪರಿಷೆಗೆ ವಿಪರೀತ ದನಗಳು ಬಂದಿವೆ, ಆ ರಸ್ತೆಯಲ್ಲಿ ಓಡಾಡುವುದೂ ಕಷ್ಟವಾಗಿದೆ ಎಂದು ಸ್ನೇಹಿತರೊಬ್ಬರು ಹೇಳಿದರು. ತತ್‌ಕ್ಷಣವೇ ದನದ ಪರಿಷೆಯತ್ತ ಓಡಿದೆ. ಅಲ್ಲಿ ಸೇರಿದ್ದ ದನಗಳನ್ನು ನೋಡಿ ಭಯವೇ ಆಯಿತು.ರೈತರನ್ನು ಮಾತನಾಡಿಸುತ್ತ ಹೋದಂತೆ ನನ್ನ ಊಹೆ ನಿಜವಾಯಿತು. ಉತ್ತರ ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಿಂದ ಮಳೆ ಬಿದ್ದಿರಲಿಲ್ಲ. ಕುಡಿಯುವ ನೀರಿಗೆ ಸಮಸ್ಯೆ ತಲೆದೋರಿತ್ತು. ಉತ್ತರ ಕರ್ನಾಟಕದಲ್ಲಿ ಬರ ಬೀಳುವ ಸಾಧ್ಯತೆ ಇದೆ ಎಂದು ನಮ್ಮ ಪತ್ರಿಕೆಗಳಲ್ಲಿ ಬರೆದಿದ್ದೆವು.ಆದರೆ ವಾಸ್ತವವಾಗಿ ಆಗ್ಗಾಗಲೇ ಬರ ಉತ್ತರ ಕರ್ನಾಟಕದ ಗ್ರಾಮೀಣ ಜನರ ಬದುಕನ್ನು ಹಾಳುಗೆಡವಿತ್ತು. ಜನರು ಮನೆ ಮಠ ತ್ಯಜಿಸಿ ಉದ್ಯೋಗ ಅರಸಿ ನಗರಗಳತ್ತ ವಲಸೆ ಹೋಗಿದ್ದರು. ಎಷ್ಟೋ ಜನರು ದನಗಳ ಕತ್ತಿಗೆ ಕಟ್ಟಿದ್ದ ಹಗ್ಗಳನ್ನು ಬಿಚ್ಚಿ ಸ್ವತಂತ್ರಗೊಳಿಸಿದ್ದರು. 60ರ ದಶಕದಲ್ಲಿ ನಾನು ಅನುಭವಿಸಿದ್ದಕ್ಕಿಂತಾ ಹೆಚ್ಚು ಭೀಕರವಾಗಿತ್ತು ಬರಗಾಲ.ಹುಬ್ಬಳ್ಳಿಯ ವರದಿಗಾರರೆಲ್ಲಾ ಒಂದಾಗಿ ಪ್ರತಿನಿತ್ಯ ಬರದ ವಿವಿಧ ಪರಿಣಾಮಗಳ ಬಗ್ಗೆ ಬರೆಯಲಾರಂಭಿಸಿದೆವು. ಕೊನೆಗೂ ಸರ್ಕಾರ ಕಣ್ಣು ತೆರೆದು ಬರಗಾಲ ಕಾಮಗಾರಿಗಳನ್ನು ಆರಂಭಿಸಿತು. ಜನಪರವಾಗಿ ಕೆಲಸಮಾಡಬೇಕೆಂಬ ಆಸೆಯಿದ್ದ ಐಎಎಸ್ ಅಧಿಕಾರಿಯೊಬ್ಬರು ಪತ್ರಕರ್ತರ ಜೊತೆ ಜಿಲ್ಲೆಯ ಮೂಲೆ ಮೂಲೆಗೆ ಹೋಗಿ ಬಡವರಿಗೆ ಸ್ಪಂದಿಸಿ ಕೆಲಸ, ಕುಡಿಯುವ ನೀರು, ಆಹಾರ ಧಾನ್ಯ ಸಿಗುವಂತಾಗಲು ಹಗಲು ರಾತ್ರಿ ದುಡಿದರು. `ಬರಗಾಲ ಬರಲಿ~ ಎಂದು ರಾಜಕಾರಣಿಗಳು ಮತ್ತು ಅಧಿಕಾರಿಗಳು ಸದಾ ಬಯಸುತ್ತಾರೆ.

 

ಹಣ ಮಾಡುವುದೇ ಅವರ ಆಸೆಗೆ ಕಾರಣ. ಪತ್ರಕರ್ತರು ಮತ್ತು ಆಡಳಿತ ವರ್ಗ ಒಟ್ಟಾಗಿ ಬದ್ಧತೆಯಿಂದ ಕೆಲಸ ಮಾಡಿದ್ದರಿಂದ ಹಣ ಮಾಡುವ ಕೆಲವರ ಆಸೆ ಈಡೇರಲಿಲ್ಲ. ದೆಹಲಿಯಿಂದ ಹುಬ್ಬಳ್ಳಿಗೆ ವರದಿಗಾರನಾಗಿ ಬರುವ ವೇಳೆಗೆ ಪತ್ರಿಕೋದ್ಯಮದಿಂದ ಬದಲಾವಣೆ ಸಾಧ್ಯ ಎಂಬ ನನ್ನ ನಂಬಿಕೆ ಕುಸಿದಿತ್ತು. ಆದರೆ ಹುಬ್ಬಳ್ಳಿಯ ಈ ಅನುಭವ ಮತ್ತೆ ಆ ಆಸೆ ಚಿಗುರುವಂತೆ ಮಾಡಿತು. ಪತ್ರಕರ್ತರಿಗೆ ಬದ್ಧತೆ ಇದ್ದರೆ ನಿಜವಾಗಿಯೂ ಬದಲಾವಣೆ ಸಾಧ್ಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.