ಶನಿವಾರ, ಮೇ 8, 2021
26 °C

ಮತ್ತೊಂದು ಆಭರಣ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳೆದ ತಿಂಗಳಷ್ಟೇ ಚಿನ್ನದ ಬಣ್ಣಗಳಲ್ಲಿ ಮಿಂದೆದ್ದ ಬೆಂಗಳೂರು ಮತ್ತೆ ಇನ್ನೊಂದು ಆಭರಣ ಮೇಳಕ್ಕೆ ಸಜ್ಜಾಗಿದೆ. ಈ ಸಲ ರವೀನಾ ಟಂಡನ್ ಪ್ರಚಾರ ರಾಯಭಾರಿಯಾಗಿದ್ದು, ಬೆಸ್ಟ್ ಆಫ್ ಇಂಡಿಯಾ ಜುವೆಲ್ಸ್ ಹೆಸರಿನಲ್ಲಿ ಈ ಮೇಳವನ್ನು ಆಯೋಜಿಸಲಾಗಿದೆ.ಚಿನ್ನ ಬೆಳ್ಳಿ ದರ ಗಗನ ಮೀರಿ ಏರುತ್ತಿರುವ ಈ ದಿನಗಳಲ್ಲಿಯೂ ಮೇಳಗಳು ಯಶಸ್ವಿಯಾಗುತ್ತವೆಯೇ ಎಂಬ ಪ್ರಶ್ನೆ ಸಹಜವಾಗಿದೆ. ಆದರೆ ಉತ್ತರವೂ ಅಷ್ಟೇ ಅಚ್ಚರಿದಾಯಕ.ಮಳಿಗೆಗೆ ಬರಲು ಹೆದರುವ ಸಾಮಾನ್ಯರು ಮೇಳಗಳಲ್ಲಿ ನಿರ್ಭಿಡೆಯಿಂದ ಪಾಲ್ಗೊಳ್ಳುತ್ತಾರೆ. ಅವರಿಗೂ ಎಟಕುವಂಥ ಬೆಲೆಯಲ್ಲಿ ಆಭರಣಗಳು ದೊರೆಯುತ್ತವೆ ಎಂಬುದನ್ನು ಈ ಮೇಳಗಳ ಮುಖಾಂತರ ಮನವರಿಕೆ ಮಾಡಿಕೊಡಬಹುದು ಎಂಬುದು ಮೇಳದ ಆಯೋಜಕರ ಭರವಸೆ.`ದಿ ಆರ್ಟ್ ಆಫ್ ಜ್ಯುವೆಲ್ಸ್~ ನಿಯತಕಾಲಿಕೆಯು ಚಿನ್ನದ ವ್ಯಾಪಾರಿಗಳೊಂದಿಗೆ ಜಂಟಿಯಾಗಿ ಈ ಮೇಳವನ್ನು ಆಯೋಜಿಸಿದೆ. 100 ರೀಟೇಲ್ ಉದ್ಯಮದಲ್ಲಿರುವವರು ಮತ್ತು ದೇಶದ ಇತರ ಭಾಗಗಳಿಂದ ಪಾಲ್ಗೊಳ್ಳುವವರು ಸೇರಿ 150 ಮಳಿಗೆಗಳು ಒಂದೇ ಸೂರಿನಡಿ ದೊರೆಯುತ್ತವೆ.ಅಕ್ಷಯ ತೃತೀಯ ಹಾಗೂ ಮದುವೆಗಾಗಿ ಗ್ರಾಹಕರು ಚಿನ್ನದ ಖರೀದಿಯ ಯೋಜನೆ ಇಟ್ಟುಕೊಂಡಿರುತ್ತಾರೆ. ಆದರೆ ಯಾರೂ ದೊಡ್ಡ ದೊಡ್ಡ ಮಳಿಗೆಗಳಿಗೆ ಕಾಲಿಡುವುದಿಲ್ಲ. ಉಳ್ಳವರು ಮಾತ್ರ ಅಲ್ಲಿಗೆ ಹೋಗುವಂಥದ್ದು ಎಂದುಕೊಂಡು ಮಳಿಗೆಯ ಮೆಟ್ಟಿಲನ್ನೇ ತುಳಿಯುವುದಿಲ್ಲ. ಇಂಥ ಜನ ಸಮುದಾಯಕ್ಕೆ ಒಂದೇ ಮೈದಾನದಲ್ಲಿ ಕರೆತರುವ ತಂತ್ರಗಾರಿಕೆ ಇದು ಎನ್ನುತ್ತಾರೆ ಮೇಳದ ಆಯೋಜಕ ಪಿ.ವಿ.ಮಹೇಶ್.ಇನ್ನೊಂದು ಸಮೂಹ ಸದಾ ಹೊಸತನಕ್ಕೆ ಹಾತೊರೆಯುವಂಥದ್ದು. ತಮ್ಮ ಖರೀದಿಗೆ ನ್ಯಾಯ ಒದಗಬೇಕು ಎಂದು ಬಯಸುವಂಥದ್ದು. ಟ್ರೆಂಡ್ ಬದಲಾದಂತೆ ತಾವೂ ತಮ್ಮ ಆಭರಣಗಳೂ ಬದಲಾಗಬೇಕು ಎಂದು ಬಯಸುವಂಥದ್ದು.

 

ಅಂಥವರಿಗಾಗಿ ಈ ಮೇಳ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಒಂದೇ ಕಡೆ ಹಲವಾರು ಮಳಿಗೆಗಳು ತಮ್ಮ ಸಂಗ್ರಹವನ್ನು ಪ್ರದರ್ಶಿಸುವುದರಿಂದ ಆಯ್ಕೆಗೆ ಸಾಕಷ್ಟು ಅವಕಾಶಗಳನ್ನು ತೆರೆದಿಟ್ಟಂತಾಗುತ್ತದೆ ಎನ್ನುತ್ತಾರೆ ಅವರು.ಅಕ್ಷಯ ತೃತೀಯ ಈ ಸಲ ಏ.24ರಂದು ಬಂದಿದೆ. ಬಹುತೇಕ ಜನರು ಹೊಸತನ್ನು ಮಂಗಳವಾರ ಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಚಿನ್ನ, ಬೆಳ್ಳಿ ಕೊಳ್ಳಲು ಇದು ಪ್ರಶಸ್ತ ದಿನ. ಮಂಗಳವಾರದ ನಂಬಿಕೆಯನ್ನು ಹೊತ್ತಿರುವವರು ಈಗಲೇ ತಮ್ಮ ಆಭರಣಕ್ಕೆ `ಬುಕ್ಕಿಂಗ್~ ಮಾಡಬಹುದು. ಆಗ ಮನೆಗೆ ಕೊಂಡೊಯ್ಯಬಹುದು. ಎರಡೂ ನಂಬಿಕೆಗಳನ್ನೂ ಉಳಿಸಿದಂತಾಗುತ್ತದೆ ಎಂಬ ಲೆಕ್ಕಾಚಾರವೂ ಈ ಮೇಳದ ಹಿಂದಿದೆ.ಮಾಸಾಂತ್ಯದಲ್ಲಿ ಬಂದಿರುವ ಅಕ್ಷಯ ತೃತೀಯಕ್ಕೆ ತಿಂಗಳ ಮೊದಲಿನಲ್ಲಿಯೇ ಯೋಜಿಸುವವರಿಗೆ ಒಂದಷ್ಟು `ಕೈ ಬಿಟ್ಟು~ ಖರೀದಿಸುವ ಸಾಮರ್ಥ್ಯ ಇರುತ್ತದೆ. ತಿಂಗಳ ಖರ್ಚನ್ನು ಸರಿದೂಗಿಸುತ್ತಲೇ ತಮ್ಮ ಹಣದ ಗಂಟಿನೊಂದಿಗೆ ಇನ್ನಷ್ಟು ಸೇರಿಸಿ ಏನನ್ನಾದರೂ ಖರೀದಿಸುವ ಗೃಹಿಣಿಯರಿಗೆ ಇದು ಸದವಕಾಶವನ್ನು ಒದಗಿಸಿಕೊಡುತ್ತದೆ.ಅರಮನೆ ಮೈದಾನದಂಥ ಪ್ರಶಸ್ತವಾದ ಸ್ಥಳದಲ್ಲಿ ವಿಶಾಲವಾಗಿಯೇ ಮಳಿಗೆಗಳನ್ನು ಸ್ಥಾಪಿಸಲಾಗಿರುತ್ತದೆ. ಗ್ರಾಹಕರ ಖರೀದಿಗೆ ಅನುಕೂಲವಾಗುವಂತೆ ಪ್ರತಿ ಮಳಿಗೆಯನ್ನೂ ವಿನ್ಯಾಸಗೊಳಿಸಲಾಗಿದೆ.ಇನ್ನು ಮೇಳದ ಖರೀದಿ ವಿಶ್ವಾಸಾರ್ಹವೇ ಎಂಬ ಪ್ರಶ್ನೆ... ಇದು ಮಳಿಗೆಗಳ ಮೇಳವೇ ಹೊರತು ಆಭರಣಗಳ ಮೇಳವಲ್ಲ. ಎಲ್ಲ ಮಳಿಗೆಗಳೂ ತಮ್ಮ ಪ್ರತಿಷ್ಠೆ ಹಾಗೂ ನಂಬಿಕೆಯನ್ನೇ ಬಂಡವಾಳವಾಗಿಸಿ ಈ ಮೈದಾನದಲ್ಲಿ ಪಾಲ್ಗೊಂಡಿರುತ್ತವೆ.  ಬ್ರ್ಯಾಂಡ್, ಗುಣಮಟ್ಟದ ಉತ್ಪನ್ನ ಎಲ್ಲರ ಹಕ್ಕು. ಅದಕ್ಕಾಗಿ ಸಾಮಾನ್ಯರು ಹಿಂಜರಿಯದೆ ಈ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ. ಎಲ್ಲ ವರ್ಗದ ಜನರ ಸಾಮರ್ಥ್ಯಕ್ಕೆ ತಕ್ಕ ಆಭರಣಗಳು ಈ ಮೇಳದಲ್ಲಿ ದೊರೆಯಲಿವೆ ಎಂಬುದು ಆಯೋಜಕರ ವಿಶ್ವಾಸ.

ಏ. 6ರಿಂದ 9ರವರೆಗೆ ನಾಲ್ಕು ದಿನಗಳ ಕಾಲ ಈ ಮೇಳವು ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜಿತವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.