ಮತ ಚಲಾವಣೆ ಗುರುತಿಗೆ ‘ಅಳಿಸಲಾಗದ ಶಾಯಿ’

ಮೈಸೂರು: ಮತದಾನ ಮಾಡುವ ಮೊದಲು ಎಡಗೈನ ತೋರುಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುತ್ತದೆ. ಇದು ಕನಿಷ್ಠ ಒಂದು ತಿಂಗಳವರೆಗೆ ಇರುತ್ತದೆ.
ಇಂಥ ಶಾಯಿ ಉತ್ಪಾದನೆ ಇಲ್ಲಿಯ ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಕಾರ್ಖಾನೆಯಲ್ಲಿ ಸಿದ್ಧಗೊಂಡು ದೇಶದಾದ್ಯಂತ ಸರಬರಾಜು ಆಗುತ್ತಿದೆ.
ದೇಶದಾದ್ಯಂತ 16ನೇ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಲಿರುವ ಮತದಾರರ ಬೆರಳಿಗೆ ಗುರುತು ಹಾಕಲು ಒಟ್ಟು 22 ಲಕ್ಷ ಬಾಟಲಿಗಳನ್ನು ಸರಬರಾಜು ಮಾಡಬೇಕಿದೆ. ಈಗಾಗಲೇ ಶೇ 60ರಷ್ಟು ಶಾಯಿ ಬಾಟಲಿಗಳನ್ನು ಕಳುಹಿಸಲಾಗಿದೆ. ಉಳಿದ ಶೇ 40ರಷ್ಟು ಶಾಯಿ ಬಾಟಲಿಗಳ ಉತ್ಪಾದನೆ ನಡೆಯುತ್ತಿದೆ. ನಿತ್ಯ 45 ಸಾವಿರ ಬಾಟಲಿಗಳಿಗೆ ಶಾಯಿ ತುಂಬುವ ಪ್ರಕ್ರಿಯೆ ನಡೆಯುತ್ತಿದೆ. ಇದು ಜನವರಿ 23ರಿಂದ ಶುರುವಾಗಿದ್ದು, ಮಾರ್ಚ್ 23ರವರೆಗೆ ಮುಂದುವರಿಯಲಿದೆ.
ದೇಶದಾದ್ಯಂತ ಸ್ಥಳೀಯ ಸಂಸ್ಥೆಗಳಿಂದ ಹಿಡಿದು ಲೋಕಸಭೆ ಚುನಾವಣೆಯವರೆಗೆ ಶಾಯಿ ಸರಬರಾಜುಗೊಳಿಸುವ ಹೆಗ್ಗಳಿಕೆ ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಕಾರ್ಖಾನೆಯದು. ಪ್ರತಿ ಬಾಟಲಿನಲ್ಲಿರುವ 10 ಮಿಲಿ ಶಾಯಿಯನ್ನು 500ರಿಂದ 700 ಜನರ ಬೆರಳಿಗೆ ಬಳಸಬಹುದು. ಆದರೆ, ಇದನ್ನು ಹೇಗೆ ಉತ್ಪಾದಿಸಲಾಗುತ್ತದೆ ಎಂಬ ರಹಸ್ಯವನ್ನು ಮಾತ್ರ ಅಲ್ಲಿಯ ಸಿಬ್ಬಂದಿ ಬಿಟ್ಟುಕೊಡುವುದಿಲ್ಲ.
ನಾಲ್ವಡಿ ಸಂಸ್ಥಾಪಕರು: 1937ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ಕಾರ್ಖಾನೆಯನ್ನು ಮೈಸೂರಿನಲ್ಲಿ ಆರಂಭಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬರುವವರೆಗೂ ಇದು ಅರಸು ಮನೆತನದ ಒಡೆತನದಲ್ಲಿತ್ತು. ನಂತರ ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟಿತು.
ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಪ್ರಾಂತ್ಯದಲ್ಲಿ ಅರಣ್ಯ ಸಂಪತ್ತು ಹೇರಳವಾಗಿತ್ತು. ಹೀಗಾಗಿ, ಮರದ ಅಂಟು ಹೆಚ್ಚು ಸಿಗುತ್ತಿತ್ತು. ಅದನ್ನು ತಂದು ಸೀಲಿಂಗ್ ವ್ಯಾಕ್ಸ್ ಉತ್ಪಾದಿಸಲಾಯಿತು. ಇದನ್ನು ಮಹಾರಾಜರ ದಾಖಲೆಪತ್ರಗಳನ್ನು ಮೊಹರು ಮಾಡಿ ಇಡುವ ಸಲುವಾಗಿ ಬಳಸಲಾಗುತ್ತಿತ್ತು. ನಿಧಾನವಾಗಿ ಅರಣ್ಯ ಕಡಿಮೆಯಾದ ಮೇಲೆ ಅಂಟು ಸಿಗುವುದು ಕೂಡಾ ಕಡಿಮೆಯಾಯಿತು.
‘ಹೀಗಾಗಿ ಸೀಲಿಂಗ್ ವ್ಯಾಕ್ಸ್ ಬದಲು ಅರಣ್ಯ ಉತ್ಪನ್ನಗಳಿಂದ ಪೇಂಟ್ (ಬಣ್ಣ) ತಯಾರಿಕೆ ಶುರುವಾಯಿತು. ಪೇಂಟ್ ಅಂದರೆ ರಾಸಾಯನಿಕ ಬಳಸಿದ್ದಲ್ಲ. ತಂತ್ರಜ್ಞಾನ ಹೆಚ್ಚಿದಂತೆ ಬೇರೆ ಬೇರೆ ಪೇಂಟ್ಗಳನ್ನು ತಯಾರಿಸಲಾಯಿತು. ಹಾಗೆ ನೋಡಿದರೆ ನಮ್ಮ ಕಾರ್ಖಾನೆಯ ಮುಖ್ಯ ಉತ್ಪನ್ನ ಕೈಗಾರಿಕೆಗಳಿಗೆ ಒದಗಿಸುವ ಪೇಂಟ್. ಜತೆಗೆ ಶಾಯಿ ತಯಾರಿಕೆಯೂ ಆಗುತ್ತದೆ’ ಎಂದು ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಸಿ. ಹರಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ದೇಶಕ್ಕೆ ಇದು 16ನೇ ಲೋಕಸಭೆ ಚುನಾವಣೆಯಾದರೆ ನಮ್ಮ ಕಾರ್ಖಾನೆಗೆ 14ನೆಯದು. 1962ರಲ್ಲಿ ನಕಲಿ ಹಾಗೂ ಒಬ್ಬನೇ ವ್ಯಕ್ತಿ ಹೆಚ್ಚು ಮತದಾನ ಮಾಡುವುದನ್ನು ತಡೆಯಲು ಕೇಂದ್ರ ಸರ್ಕಾರದ ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿಯಲ್ಲಿ ಈ ವಿಶಿಷ್ಟ ಶಾಯಿ ತಂತ್ರಜ್ಞಾನ ಕಂಡು ಹಿಡಿಯಲಾಯಿತು. ಇದರ ತಯಾರಿಕೆಯನ್ನು ನಮ್ಮ ಕಾರ್ಖಾನೆಗೆ ವಹಿಸಲಾಯಿತು. ಹೀಗೆ 1962ರಿಂದ ನಿರಂತರವಾಗಿ ಲೋಕಸಭೆ ಚುನಾವಣೆಗೆ ಶಾಯಿ ಸರಬರಾಜು ಮಾಡುತ್ತಿದ್ದೇವೆ’ ಎಂದು ಹೆಮ್ಮೆಯಿಂದ ಹೇಳಿದರು.
ವಿದೇಶಕ್ಕೂ ರಫ್ತು: ವಿದೇಶಕ್ಕೂ ಶಾಯಿಯನ್ನು ರಫ್ತು ಮಾಡಿದ ಹೆಮ್ಮೆ ಕಾರ್ಖಾನೆಯದು. ಎಂಬತ್ತರ ದಶಕದಿಂದ ಆರಂಭಿಸಿ ಇದುವರೆಗೆ 25 ದೇಶಗಳಿಗೆ ಶಾಯಿ ಕಳುಹಿಸಲಾಗಿದೆ. ‘ಒಂದು ಬಾಟಲಿಗೆ ರೂ. 142 ಬೆಲೆ. ಜತೆಗೆ ತೆರಿಗೆ ಪ್ರತ್ಯೇಕ. 22 ಲಕ್ಷ ಶಾಯಿ ಬಾಟಲಿಗೆ ರೂ. 31 ಕೋಟಿ ವೆಚ್ಚವಾಗಲಿದೆ.
ಇದರಿಂದ ನಮ್ಮ ಕಾರ್ಖಾನೆಗೆ ಶೇ 10ರಷ್ಟು ಲಾಭವಾಗಲಿದೆ. ಲಾಭಕ್ಕಿಂತ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯುವುದರ ಜತೆಗೆ ಪ್ರಜಾಪ್ರಭುತ್ವವನ್ನು ಬಲಪಡಿಸುವ ಸಲುವಾಗಿ ನಮ್ಮ ಕಾರ್ಖಾನೆ ಗುರುತರವಾದ ಕಾಣಿಕೆ ನೀಡುತ್ತಿದೆ. ಇದನ್ನು ಸೇವೆಯೆಂದು ಪರಿಗಣಿಸುತ್ತೇವೆ’ ಎಂದು ಹರಕುಮಾರ್ ವಿವರಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.