ಸೋಮವಾರ, ಏಪ್ರಿಲ್ 12, 2021
24 °C

ಮದ್ದಾಗಬಲ್ಲದು ಮಾತು!

ಡಾ. ಅ.ಶ್ರೀಧರ Updated:

ಅಕ್ಷರ ಗಾತ್ರ : | |

ಮನಸ್ಸಿಗೆ ಮದ್ದು ಹಿತವೋ ಮಾತು ಹಿತವೋ ಎನ್ನುವ ಪ್ರಶ್ನೆ ಎದುರಾದಾಗ ಮಾತು ಎನ್ನುವುದಕ್ಕೆ ಹೆಚ್ಚು ನಿದರ್ಶನಗಳು ಸಿಗುತ್ತವೆ. 35 ವರ್ಷದ ಶೀಲಾ ಸುಸಜ್ಜಿತ ಆಸ್ಪತ್ರೆಯೊಂದರಲ್ಲಿ ವೈದ್ಯರನ್ನು ಕಾಣಲು ಬಂದಿದ್ದಳು. ಬ್ಯಾಂಕ್ ನೌಕರಿಯಲ್ಲಿದ್ದ ಆಕೆಗೆ ಕೆಲವು ದಿನಗಳಿಂದ ಭಯ, ಅತಿಯಾದ ನಿರಾಶೆ ಮತ್ತು ತಲೆನೋವು ಕಾಡುತ್ತಿತ್ತು. ಇದರ ಪರಿಣಾಮವಾಗಿ ಒಡನಾಡಿಗಳೊಂದಿಗೆ ನಿತ್ಯದ ಹೊಂದಾಣಿಕೆ ಹದಗೆಟ್ಟಿತ್ತು. ಯಾವಾಗಲೂ ಲವಲವಿಕೆಯಿಂದಲೇ ಇದ್ದವಳಿಗೆ ಇದೊಂದು ಆತಂಕದ ವಿಚಾರವೇ.ಬಹಳ ಸೌಮ್ಯ ಸ್ವಭಾವದ ವೈದ್ಯರು ಶೀಲಾಳ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡರು. ನಂತರ ಪಕ್ಕದ ಕೋಣೆಯಲ್ಲೇ ಇದ್ದ ಮನೋವೈದ್ಯರತ್ತ ಕಳುಹಿಸಿದರು. ಮನೋವೈದ್ಯರು ಒಂದೈದಾರು ನಿಮಿಷ ಶೀಲಾಳ ಸಮಸ್ಯೆಯನ್ನು ಆಲಿಸಿ ಸಾವಧಾನದಿಂದ ಒಂದಷ್ಟು ಪ್ರಶ್ನೆಗಳನ್ನು ಕೇಳಿದರು. ಇವೆಲ್ಲವೂ ಆಕೆಯ ತಕ್ಷಣದ ಮನಃಸ್ಥಿತಿಯ ಬಗ್ಗೆಯೇ ಆಗಿತ್ತು. ಯಾವುದೇ ತರಹದ ವಿಭ್ರಮೆ, ಭ್ರಾಂತಿ ಅಥವಾ ವಿಚಿತ್ರ ವರ್ತನೆಗಳಿರದ ಕಾರಣ ಖಿನ್ನತೆ, ಆತಂಕ ಇರುವಂತಹ ವ್ಯಾಧಿಯೆಂದು ಗುರುತಿಸಿ, ಶಮನಕ್ಕಾಗಿ ಹಲವು ಮಾತ್ರೆಗಳನ್ನು ಬರೆದುಕೊಟ್ಟರು. ತಪ್ಪದೇ ತೆಗೆದುಕೊಳ್ಳುವಂತೆ ಹೇಳಿ ಮರುವಾರ ಮತ್ತೆ ಬಂದು ಕಾಣಲು ತಿಳಿಸಿದರು.ಹೊರಬಂದ ಶೀಲಾಗೆ ಹತ್ತಿರದಲ್ಲಿದ್ದ ಔಷಧಿ ಅಂಗಡಿ ಕಾಣಿಸಿತು. ಅಂದು ಮಂಗಳವಾರ ಆಗಿದ್ದರಿಂದ ಔಷಧಿ ಕೊಳ್ಳುವುದು ಬೇಡವೆನಿಸಿ ಮನೆಗೆ ತೆರಳಿದಳು. ಮರುದಿನ ಕಛೇರಿಯಿಂದ ವಾಪಸಾಗುವಾಗ ಔಷಧಿ ತರುವಂತೆ ಹೇಳಿ ಗಂಡನಿಗೆ ಚೀಟಿ ಕೊಟ್ಟಳು. ಅಂದು ಅಮಾವಾಸ್ಯೆ, ಔಷಧಿ ಆರಂಭ ಮಾಡುವುದು ಬೇಡವೆಂದರು ಮಾವ. ಹೀಗಾಗಿ ಆ ದಿನವೂ ಮಾತ್ರೆ ಸೇವಿಸಲಿಲ್ಲ. ಹೀಗೇ ಒಂದಲ್ಲ ಒಂದು ಕಾರಣದಿಂದ ದಿನಗಳು, ತಿಂಗಳುಗಳು, ವರ್ಷಗಳೇ ಉರುಳಿದವು. ಸಮಸ್ಯೆ ಹೆಚ್ಚಾದಾಗ ಮಾತ್ರೆ ತೆಗೆದುಕೊಂಡರಾಯಿತು ಎಂದಾಕೆ ಸಮಾಧಾನ ಮಾಡಿಕೊಂಡಳು.ಭಯ ಆತಂಕದ ಸೂಚನೆ

ಇದಾದ ಐದಾರು ವರ್ಷಗಳ ನಂತರ ಒಮ್ಮೆ ಶೀಲಾ ದೂರವಾಣಿಯಲ್ಲಿ ಆಪ್ತರೊಬ್ಬರೊಂದಿಗೆ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಏನೋ ಮುಜುಗರವೆನಿಸಿತು. ತಾಳಲಾರದಷ್ಟು ಆತಂಕ, ಭಯ, ನಿರಾಶೆ ಕ್ಷಣಮಾತ್ರದಲ್ಲಿ ಕಾಣಿಸಿಕೊಂಡು, ಕೈಕಾಲು ನಡುಕ ಬಂದು ನಿತ್ರಾಣದಿಂದ ಇದ್ದಲ್ಲೇ ಕುಸಿದಳು. ತಕ್ಷಣ ಕುಟುಂಬದ ವೈದ್ಯರಿಗೆ ನಡೆದಿದ್ದೆಲ್ಲವನ್ನು ವಿವರಿಸಿದಾಗ, ಅವರು ಮನೋಚಿಕಿತ್ಸಕಿಯೊಬ್ಬರನ್ನು ಭೇಟಿ ಮಾಡುವಂತೆ ತಿಳಿಸಿದರು. ಮಾರನೇ ದಿನವೇ ಅಲ್ಲಿಗೆ ತೆರಳಿದ ಶೀಲಾಗೆ, ನಲವತ್ತರ ಹರೆಯದಲ್ಲಿದ್ದ ಆ ಮನೋತಜ್ಞೆಯಲ್ಲಿ ಮೊದಲು ಕಂಡದ್ದು ಮಂದಹಾಸ. ಗೆಲುವಿನ ಮಾತುಗಳಿಂದ ಅವರು ವಿಶ್ವಾಸ ಹುಟ್ಟಿಸುವಂತಹ ಸ್ವಭಾವದವರು ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿತ್ತು.ಶೀಲಾ ಬಗ್ಗೆ ವೈಯಕ್ತಿಕ ಮಾಹಿತಿಗಳನ್ನು ಪಡೆದುಕೊಂಡ ಚಿಕಿತ್ಸಕಿ, ವೃತ್ತಿ, ಸದ್ಯದ ಹೊಂದಾಣಿಕೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳಿ ಅವಳ ಬಾಲ್ಯದ ಬಗ್ಗೆ ಮಾತನಾಡುವಂತೆ ಹುರಿದುಂಬಿಸಿದರು. ಮುಜುಗರದಿಂದಲೇ ಮಾತು ಆರಂಭಿಸಿದ ಶೀಲಾ ನಂತರ ಮನಸ್ಸು ಬಿಚ್ಚಿ ಮಾತನಾಡಿದಳು. ಹೇಗೆ ಅಜ್ಜಿ ಹೊಗಳಿದರು, ಅಮ್ಮ ಮುದ್ದಾಡಿದರು, ಅಪ್ಪನ ಸಿಗರೇಟು ವಾಸನೆ, ಶಾಲೆಯಲ್ಲಿ ಶಿಕ್ಷಕಿಯಿಂದ ಹಿಂಸೆ, ಹೀಗೆ ಅದೆಷ್ಟೋ ವಿಷಯಗಳನ್ನು ತಡವರಿಸದೇ ಹೇಳುತ್ತಿದ್ದುದನ್ನು ಸಮಾಧಾನದಿಂದ ಚಿಕಿತ್ಸಕಿ ಕೇಳಿಸಿಕೊಂಡರು. ಎಲ್ಲೂ ಯಾವ ಕಾರಣಕ್ಕೂ ತಪ್ಪು, ಸರಿ, ಅಯ್ಯೋ ಪಾಪ ಎನ್ನುವಂತಹ ಮಾತುಗಳು ಅವರಿಂದ ಬರಲಿಲ್ಲ. ಬದಲಿಗೆ ಇನ್ನಷ್ಟು ನೆನಪಿಸಿಕೊಂಡು ಮಾತಾಡು ಎನ್ನುವಂತಿತ್ತು ಅವರ ಮುಖ ಭಾವ.ನಂತರದಲ್ಲಿ ಹದಿಹರೆಯದ ಗೊಂದಲಗಳು, ಪೀಕಲಾಟ, ಮನೆಯ ಕಟ್ಟುಪಾಡುಗಳು, ತಿಂಗಳಿಗೆ ಮೂರು ದಿನ ಆತಂಕದ ಸಮಯ, ತಲೆ ಕೂದಲು ಕತ್ತರಿಸಬಾರದೆಂಬ ಆಜ್ಞೆ, ಮುಂತಾದ ಸಂಗತಿಗಳು ತನ್ನಷ್ಟಕ್ಕೆ ತಾನೇ ಹೊರಬಂದವು. ಬದುಕಿನ ಹತ್ತಾರು ಘಟನೆಗಳನ್ನು ಹೇಳಿಕೊಳ್ಳುವುದಕ್ಕೆ ಇದೊಂದು ಒಳ್ಳೆಯ ಅವಕಾಶ ಎಂದುಕೊಂಡ ಶೀಲಾ ಅರ್ಧ ಗಂಟೆಗೂ ಮೀರಿ ಮಾತನಾಡಿದ್ದಳು. ಸಂದರ್ಶನದ ಉದ್ದಕ್ಕೂ ಚಿಕಿತ್ಸಕಿ ಶೀಲಾಳ ಹಾವಭಾವ, ದನಿಯ ಏರುಪೇರುಗಳನ್ನು ಗಮನಿಸಿ ಗುರುತಿಸಿಕೊಳ್ಳುತ್ತಿದ್ದರು. ಸುಮಾರು ಒಂದು ಗಂಟೆ ಮಾತನಾಡಲು ಅವಕಾಶ ಕೊಟ್ಟು, ಸಂದರ್ಶನವನ್ನು ಮರುದಿನಕ್ಕೆ ಮುಂದೂಡಿದರು.ಮನದಾಳದ ಮಾತು

ಮಾರನೇ ದಿನ ಕುಟುಂಬ ಮತ್ತು ವೃತ್ತಿ ಜೀವನದ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಚಿಕಿತ್ಸಕಿ ಶೀಲಾಗೆ ಸೂಚಿಸಿದರು. ಶೀಲಾಳ ಗಂಡ ಒಂದು ವರ್ಷದ ಹಿಂದಷ್ಟೇ ಡೆಂಗೆ ಜ್ವರದಿಂದ ತೀರಿಕೊಂಡಿದ್ದ. ಆತನಿಗೆ ಉಬ್ಬಸದ ತೊಂದರೆ ಇತ್ತು. ಜೊತೆಗೆ ಸಿಗರೇಟು ಸೇದುವ ಅಭ್ಯಾಸ.ಎಚ್ಚರಿಕೆ ವಹಿಸುವಂತೆ ಪದೇಪದೇ ವೈದ್ಯರು, ಹಿತೈಷಿಗಳು ಹೇಳುತ್ತಿದ್ದರೂ ಆತ ನಿಗಾ ಕೊಟ್ಟಿರಲಿಲ್ಲ. ಈ ಮಾತನ್ನು ಮೇಲಿಂದಮೇಲೆ ಹೇಳುವುದಕ್ಕೆ ಶೀಲಾಗೂ ಬೇಸರವಾಗುತ್ತಿತ್ತು. ಇದೆಲ್ಲದರ ಜೊತೆಗೆ ಅವರಿಗಿದ್ದ ಒಬ್ಬಳೇ ಮಗಳು ಗೆಳೆತನದ ಗಾಢ ಸಂಬಂಧದಲ್ಲಿ ಸಿಕ್ಕಿಕೊಂಡು ವಿದ್ಯಾಭ್ಯಾಸದಲ್ಲಿ ಹಿಂದೆ ಬಿದ್ದಿದ್ದಳು. ಇಂತಹ ಸಂಗತಿಗಳು ಎಲ್ಲರ ಮನೆಯಲ್ಲೂ ಇರುವುದು ಸಹಜ. ಆದರೆ ಸಮಸ್ಯೆಯ ತೀವ್ರತೆ ಎಲ್ಲರಲ್ಲೂ ಒಂದೇ ಮಟ್ಟದಲ್ಲಿ ಇರದಿರಬಹುದು. ಮನಸ್ಸಿನಲ್ಲಿ ಇದ್ದದ್ದೆಲ್ಲವನ್ನೂ ಎಷ್ಟು ಸ್ಪಷ್ಟವಾಗಿ ಹೇಳಲು ಸಾಧ್ಯವೋ ಅಷ್ಟು ಸ್ಪಷ್ಟವಾಗಿ ಶೀಲಾ ಹೇಳಿದ್ದಳು.ಈ ರೀತಿ ಮಾತನಾಡುತ್ತಿದ್ದುದರಿಂದಲೋ ಏನೋ ಆಕೆಗೆ ಮನಸ್ಸು ಹಗುರವಾಗಿದೆ ಎನಿಸತೊಡಗಿತ್ತು. ಈ ವಿಷಯವನ್ನು ಚಿಕಿತ್ಸಕಿಗೆ ತಿಳಿಸಿ ಮದ್ದಿನ ಅಗತ್ಯವಿಲ್ಲದೇ ಮನಸ್ಸಿಗೆ ಆರಾಮ ಸಿಗುವುದಕ್ಕೆ ಏನು ಕಾರಣವೆಂದು ಅಚ್ಚರಿಯಿಂದಲೇ ಕೇಳಿದ್ದಳು. ಇಷ್ಟಾಗಿಯೂ ಚಿಕಿತ್ಸಕಿ ವಿಶೇಷವಾಗಿ ಸಲಹೆಯನ್ನೇನೂ ನೀಡಿರಲಿಲ್ಲ. ಆದರೆ ಕ್ರಮಬದ್ಧವಾಗಿ ಆಲೋಚಿಸುವುದು ಮತ್ತು ಗೊಂದಲಗಳ ಬಗ್ಗೆ ವಿಚಾರ ಮಾಡುವ ರೀತಿಯನ್ನು ಸೂಚಿಸಿದ್ದರು. ಮನಸ್ಸಿನ ವಿಚಾರಗಳತ್ತ ಗಮನವಿದ್ದಷ್ಟೂ ಒಳ್ಳೆಯದೇ.

 

ಒಮ್ಮಮ್ಮೆ ಅನೇಕ ವಿಷಯಗಳು ಒಟ್ಟಿಗೆ ಮನಸ್ಸಿಗೆ ನುಗ್ಗಿ ಬಂದು ಸಮಸ್ಯೆಗಳ ಕಲಸುಮೇಲೋಗರವಾಗಿ ಬಿಡುತ್ತವೆ. ಸಮಸ್ಯೆಗಳು, ಗೊಂದಲಗಳೆಲ್ಲವೂ ಸೇರಿಕೊಂಡಾಗ ಯಾವುದಕ್ಕೆ ಪ್ರಾಶಸ್ತ್ಯ ಕೊಡಬೇಕು, ಯಾವುದರತ್ತ ನಿಗಾ ಇಡಬೇಕು ಎನ್ನುವುದೇ ತಿಳಿಯುವುದಿಲ್ಲ. ಆಗ ಸ್ವಸಾಮರ್ಥ್ಯದ ಬಗ್ಗೆಯೇ ಅಪನಂಬಿಕೆ ಹುಟ್ಟಿಕೊಳ್ಳುತ್ತದೆ. ಹೀಗೆ ಮನಸ್ಸಿನ ಹತೋಟಿ ತಪ್ಪಿದಾಗ ತಲ್ಲಣ, ತಾಪಗಳು ಸಹಜವಾಗಿಯೇ ಕಾಣಿಸಿಕೊಳ್ಳುತ್ತವೆ.ಪುನರವಲೋಕನ

ಶೀಲಾಳ ಪ್ರಕರಣದಲ್ಲಿಯೂ ಹೀಗೇ ಆದದ್ದು. ಗಂಡನ ಆರೋಗ್ಯ ಹದಗೆಡುತ್ತಿದೆ, ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಿಲ್ಲ ಎನ್ನುವ ಭಾವನೆಯೇ ಅವಳ ಮನಃಸ್ಥಿತಿಯನ್ನು ಕೆಡಿಸಿ ಗೊಂದಲವನ್ನು ಉಂಟುಮಾಡಿತ್ತು. ದೇಹ ಮತ್ತು ಮನಸ್ಸಿನ ಕಾರ್ಯಕ್ಷಮತೆ ಇಳಿಯುತ್ತಿದೆ ಎನ್ನುವ ಮೊದಲ ಸೂಚನೆಯೂ ಬಂದಿತ್ತು. ಆಗಲೇ ವೈದ್ಯರ ಸಲಹೆ ಪಡೆದಿದ್ದರೂ ಅನುಸರಿಸಲಿಲ್ಲ.

 

ನಂತರ ಜರುಗಿದ ಘಟನೆಗಳು ನಿತ್ರಾಣದ ಸ್ಥಿತಿಯಲ್ಲಿದ್ದ ಮನಸ್ಸಿಗೆ ಮತ್ತಷ್ಟು ಘಾಸಿ ಮಾಡಿದ್ದವು.

ಇಂತಹ ಸಮಯದಲ್ಲಿ ಮನಸ್ಸಿನ ಇತಿಹಾಸದ ಪುಟಗಳನ್ನು ಮತ್ತೊಮ್ಮೆ ಸಾವಧಾನದಿಂದ ನೆನಪಿಗೆ ತಂದುಕೊಂಡ ಕ್ರಮ ಹಿತ ಉಂಟುಮಾಡಿತ್ತಲ್ಲದೆ ವಿಶ್ವಾಸ ಚಿಗುರುವಂತೆಯೂ ಮಾಡಿತ್ತು. ಮನೋಚಿಕಿತ್ಸೆಯ ಹತ್ತು ಹಲವಾರು ವಿಧಗಳಲ್ಲಿರುವ ಸೂಕ್ಷ್ಮ ಶಕ್ತಿಯೇ ಇದು ಎನ್ನಬಹುದು. ಇದನ್ನು `ಮೈಂಡ್ ರೀಸೈಕ್ಲಿಂಗ್~ ಎಂದರೂ ತಪ್ಪಾಗಲಾರದು. ವ್ಯವಧಾನದಿಂದ ಹಳೆಯದೆಲ್ಲವನ್ನೂ ಹೊರತಂದಾಗ ಜನಿಸುವ ಹೊಸ ಶಕ್ತಿ ಇದು. ಮನೋಚಿಕಿತ್ಸೆಗಳಲ್ಲಿರುವ ರಹಸ್ಯವೂ ಹೌದು.ಇಂತಹ ಸಮಾಧಾನಕರ ಚಿಕಿತ್ಸೆ, ಆಪ್ತಸಲಹೆ ಅಥವಾ ಮನೋತಜ್ಞರು ಸೂಚಿಸುವ ಸಲಹಾ ಕ್ರಮಗಳನ್ನು ಅನುಸರಿಸುವ ಮೂಲಕ ಬಹುಪಾಲು ಮಾನಸಿಕ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬಹುದು ಮತ್ತು ನಿಭಾಯಿಸಲೂ ಬಹುದು. ಆದರೆ ಇಲ್ಲಿ ನುರಿತ ಚಿಕಿತ್ಸಕನ ನೆರವು ಬಹಳ ಮುಖ್ಯ. ಮನಸ್ಸಿನ ಬಗ್ಗೆ ಇರುವ ಸಾಧಾರಣ ತಿಳಿವಳಿಕೆಯೇ ಬೇರೆ, ಅಧ್ಯಯನ ಮತ್ತು ಅನುಭವದ ಮೂಲಕ ಪಡೆದ ಜ್ಞಾನವೇ ಬೇರೆ ಎನ್ನುವುದನ್ನು ಎಲ್ಲರೂ ತಿಳಿದಿರುವುದು ಒಳ್ಳೆಯದು.            

                                    

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.