ಸೋಮವಾರ, ಜನವರಿ 20, 2020
29 °C

ಮದ್ದೂರಿನ ಉಗ್ರ ನರಸಿಂಹ

ಮಾನಸ Updated:

ಅಕ್ಷರ ಗಾತ್ರ : | |

ಮಂಡ್ಯ ಜಿಲ್ಲೆ ಮದ್ದೂರಿನಲ್ಲಿರುವ ಉಗ್ರ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ. ಇದು ಹೊಯ್ಸಳ ಶೈಲಿಯಲ್ಲಿದ್ದು, ಅನೇಕ ವಿಶೇಷಗಳಿಂದ ಕೂಡಿದೆ. ದ್ವಾಪರ ಯುಗದ ಅಂತ್ಯದಲ್ಲಿ ಶ್ರೀಕೃಷ್ಣನನ್ನು ಉಗ್ರ ನರಸಿಂಹ ಅವತಾರದಲ್ಲಿ ನೋಡಬೇಕೆಂದು ಅರ್ಜುನ ಅಪೇಕ್ಷೆ ಪಡುತ್ತಾನೆ. ಆದರೆ ಶ್ರೀಕೃಷ್ಣ ಅದನ್ನು ನಿರಾಕರಿಸುತ್ತಾನೆ. ಕೊನೆಗೆ ದೇವಾನುದೇವತೆಗಳೆಲ್ಲ ಅಲ್ಲಿ ಬಂದು ಬ್ರಹ್ಮದೇವನ ಮೂಲಕ ನರಸಿಂಹನ ಉಗ್ರ ಅವತಾರವನ್ನು ಅಲ್ಲಿ ಪ್ರತಿಷ್ಠಾಪಿಸುತ್ತಾರೆ. ಹೀಗಾಗಿ ಈ ಊರಿಗೆ ಅರ್ಜುನಪುರಿ ಎಂಬ ಇನ್ನೊಂದು ಹೆಸರಿದೆ.ಇಲ್ಲಿರುವ ನರಸಿಂಹ ಸ್ವಾಮಿಗೆ ಒಟ್ಟು 8 ಕೈಗಳು, ಮೂರು ಕಣ್ಣುಗಳು. ಎರಡು ಕೈಗಳಿಂದ ತೊಡೆಯ ಮೇಲೆ ಮಲಗಿಸಿಕೊಂಡಿರುವ ರಾಕ್ಷಸ ಹಿರಣ್ಯಕಶಿಪುವಿನ ಕರುಳನ್ನು ಬಗೆಯುತ್ತಿದ್ದರೆ, ಮತ್ತೆರಡು ಕೈಗಳಲ್ಲಿ ಕರುಳನ್ನು ಮಾಲೆಯಾಗಿ ಹಾಕಿಕೊಳ್ಳುತ್ತಾದ್ದಾನೆ, ಇನ್ನೆರಡು ಕೈಗಳಲ್ಲಿ ಪಾಶಾಂಕುಶ ಹಿಡಿದಿದ್ದು, ಉಳಿದೆರಡು ಕೈಗಳಲ್ಲಿ ಶಂಖ ಚಕ್ರಧಾರಿಯಾಗಿದ್ದಾನೆ. ದೇವರ ಎಡ ಭಾಗದಲ್ಲಿ  ಗರುಡ, ಬಲಭಾಗದಲ್ಲಿ ಭಕ್ತ ಪ್ರಹ್ಲಾದ ಮೂರ್ತಿ ವಿನಮ್ರವಾಗಿ ನಿಂತಿರುವ ಕೆತ್ತನೆ ಇದೆ. ದೇವರ ಮೂರನೇ ಕಣ್ಣು ಹಿರಣ್ಯಕಶಿಪುವಿನ ಸಂಹಾರ ಕಾಲದಲ್ಲಿ ಉದ್ಭವವಾಯಿತೆಂಬ ನಂಬಿಕೆ ಇದೆ.ಒಳಾಂಗಣ ನೋಟ

ದೇವಸ್ಥಾನದ ಒಳಾಂಗಣದಲ್ಲಿ ಶ್ರೀನಿವಾಸ ದೇವರು ಹಾಗೂ ಶ್ರೀ ಕೃಷ್ಣನಿಗೆ ಹಾಲುಣಿಸುತ್ತಿರುವ ಯಶೋಧೆಯ ಮೂರ್ತಿಗಳು ಬಹುಸುಂದರವಾಗಿವೆ. ಒಳಪ್ರಾಕಾರದಲ್ಲಿ ದೇವರ ಪತ್ನಿಯರಾದ ಸೌಮ್ಯನಾಯಕಿ ಮತ್ತು ನರಸಿಂಹ ನಾಯಕಿ ಅಮ್ಮನ ಸುಂದರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ.

 

ಸೀತಾ ರಾಮ ಲಕ್ಷ್ಮಣ ಮತ್ತು ಆಂಜನೇಯ ವಿಗ್ರಹಗಳೂ ಇವೆ. ಇದರಲ್ಲಿ ಆಂಜನೇಯ ವಿಗ್ರಹ ವಿಶೇಷತೆ ಹೊಂದಿದೆ. ಬೇರೆ ಕಡೆಗಳಲ್ಲಿ ಎಡ ಭಾಗದಲ್ಲಿ ಕುಳಿತಿರುವ ಭಂಗಿಯಲ್ಲಿ ಇದ್ದರೆ ಇಲ್ಲಿ ಬಲಭಾಗದಲ್ಲಿ ನಿಂತುಕೊಂಡು ಬಾಯಿಯ ಮೇಲೆ ಕೈ ಇಟ್ಟುಕೊಂಡಿರುವ ಈ ವಿಗ್ರಹ ತುಂಬಾ ಆಕರ್ಷಕವಾಗಿ ಇದೆ.ದೇವಸ್ಥಾನದ ಎಡಭಾಗದಲ್ಲಿ ವರದರಾಜ ಸ್ವಾಮಿ ಮತ್ತು ಶ್ರೀರಾಮದೇವರ ದೇವಸ್ಥಾನಗಳಿವೆ. ಹೊಯ್ಸಳರ ದೊರೆ ವಿಷ್ಣುವರ್ಧನನ ತಾಯಿಗೆ ದೃಷ್ಟಿ ದೋಷವಿತ್ತು. ಅದಕ್ಕಾಗಿ ಕಂಚಿಗೆ ಹೋಗಿ ವರದರಾಜ ಸ್ವಾಮಿಯವರ ದರ್ಶನ ಮಾಡಿ ದೋಷ ನಿವಾರಿಸಿಕೊಳ್ಳವಂತೆ ರಾಮಾನುಜಾಚಾರ್ಯರಿಂದ ಕನಸಿನಲ್ಲಿ ಪ್ರೇರಣೆಯಾಯಿತು.

 

ಆದರೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲದ ಕಾರಣ ಕಂಚಿಯಿಂದ ಕೆಲ ಶಿಲ್ಪಿಗಳನ್ನು ಕರೆಯಿಸಿ ಕಂಚಿಯಲ್ಲಿ ಇರುವಂತೆಯೇ 48 ದಿನಗಳ ವರೆಗೆ ಪೂಜಿಸಿ ಪ್ರತಿಷ್ಠಾಪಿಸಿದಾಗ ತಾಯಿಗೆ ಕಣ್ಣಿನ ದೃಷ್ಟಿ ಬಂತು ಎನ್ನುವ ಐತಿಹ್ಯ. ಅದಕ್ಕಾಗಿಯೇ ಇಲ್ಲಿನ ವರದರಾಜ ಸ್ವಾಮಿಗೆ ಕಣ್ವರದರಾಜ ಸ್ವಾಮಿ ಎಂದೂ ಕರೆಯಲಾಗುತ್ತದೆ. 16 ಅಡಿ ಎತ್ತರ, ಶಂಖ ಚಕ್ರಚಕ್ರ ಗದಾಪದ್ಮ ಹೊಂದಿರುವ ದೇವರ ವಕ್ಷಸ್ಥಳದಲ್ಲಿ ಮಹಾಲಕ್ಷ್ಮಿ ಅಮ್ಮನವರು ನೆಲೆಸಿದ್ದಾರೆ.ಸೇವಾ ವಿವರ

ನರಸಿಂಹ ಸ್ವಾಮಿಯವರ ಬ್ರಹ್ಮರಥೋತ್ಸವ ಚೈತ್ರ ಬಹುಳ ಷಷ್ಠಿ ಪೂರ್ವಾಷಾಢ ನಕ್ಷತ್ರ ಹಾಗೂ ಅಧಿಕ ವರ್ಷದಲ್ಲಿ ವೈಶಾಖ ಷಷ್ಠಿ ಪೂರ್ವಾಷಾಢ ನಕ್ಷತ್ರದಂದು ನಡೆಯುತ್ತದೆ.ಅವಿವಾಹಿತ ಅಥವ ಮದುವೆ ತಡವಾದ ಹೆಣ್ಣುಮಕ್ಕಳಿಗೆ ಕಂಕಣ ಭಾಗ್ಯಕ್ಕಾಗಿ ಇಲ್ಲಿ ಹರಕೆಯ ಮಂಗಳ ಸ್ನಾನ ಮಾಡಿಸಲಾಗುತ್ತದೆ. ಇದರೊಂದಿಗೆ ಮೊಸರನ್ನ ಸೇವೆ, ಅರಿಶಿನದ ಸೇವೆ ಕೂಡ ಇದೆ.ವಸತಿ ಸೌಕರ್ಯ

ಮದ್ದೂರಿನಲ್ಲಿ ವಸತಿ ಸೌಕರ್ಯ ಇದೆ . ಆದರೆ ಹನ್ನೆರಡು ಕಿ.ಮೀ. ದೂರದ ಮಂಡ್ಯದಲ್ಲಿ  ಸಾಕಷ್ಟು ಖಾಸಗಿ ಲಾಡ್ಜ್ ಮತ್ತು ಹೊಟೇಲ್‌ಗಳು ಇವೆ.ಮಾರ್ಗ

ಬೆಂಗಳೂರಿನಿಂದ 100 ಕಿಮೀ ದೂರ ಬೆಂಗಳೂರು- ಮೈಸೂರು ರಾಜ್ಯ ಹೆದ್ದಾರಿಯಲ್ಲಿದೆ. ಮಾಹಿತಿಗೆ: ತಿರುಮಲಾಚಾರ್-9449184459

ಪ್ರತಿಕ್ರಿಯಿಸಿ (+)