ಮಂಗಳವಾರ, ಮೇ 26, 2020
27 °C

ಮಧುಮೇಹ ಕೇಂದ್ರಕ್ಕೆ ರಾಷ್ಟ್ರೀಯ ಮನ್ನಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಪ್ರತಿಷ್ಠಿತ ಮಧುಮೇಹ ಕೇಂದ್ರವನ್ನು ದೇಶದ ನೀತಿ ನಿರೂಪಣೆಗಾಗಿ ನಡೆಸುವ ಮಧುಮೇಹ ಕುರಿತು ರಾಷ್ಟ್ರಮಟ್ಟದ ಸಂಶೋಧನಾ ಕೇಂದ್ರವನ್ನಾಗಿ ಅಂತರರಾಷ್ಟ್ರೀಯ ಸಂಸ್ಥೆಗಳು ಆಯ್ಕೆ ಮಾಡಿವೆ. ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳ ಸಹಯೋಗದಲ್ಲಿ ಈ ಸಂಶೋಧನೆ ನಡೆಯಲಿದೆ ಎಂದು ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಮಧುಮೇಹ ಕೇಂದ್ರದ ಮುಖ್ಯಸ್ಥ ಹಾಗೂ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ ತಿಳಿಸಿದ್ದಾರೆ.ಜಿನಿವಾದ ವಿಶ್ವ ಆರೋಗ್ಯ ಸಂಸ್ಥೆ, ಡೆನ್ಮಾರ್ಕ್‌ನ ವಿಶ್ವ ಮಧುಮೇಹ ಪ್ರತಿಷ್ಠಾನ, ಪ್ಯಾರಿಸ್‌ನ ಅಂತರರಾಷ್ಟ್ರೀಯ ಕ್ಷಯರೋಗ ತಡೆ ಒಕ್ಕೂಟ, ಕೇಂದ್ರ ಸರ್ಕಾರದ ಆರೋಗ್ಯ ನಿರ್ದೇಶನಾಲಯದ ಸಹಭಾಗಿತ್ವದಲ್ಲಿ ಮಧುಮೇಹ ಮತ್ತು ಕ್ಷಯ (ಟಿಬಿ) ರೋಗಗಳ ಕುರಿತು ದ್ವಿಮುಖ ರೂಪದಲ್ಲಿ ಸಂಶೋಧನೆಗಳು ನಡೆಯಲಿವೆ.ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳು ನಮ್ಮ ಆಸ್ಪತ್ರೆಯ ಮಧುಮೇಹ ಕೇಂದ್ರವನ್ನು ಆಯ್ಕೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಅವರು ವಿವರಿಸಿದ್ದಾರೆ.ಭಾರತೀಯ ವೈದ್ಯಕೀಯ ಮಂಡಳಿ ಸಮೀಕ್ಷೆ ಪ್ರಕಾರ ಜಗತ್ತಿನಲ್ಲಿಯೇ 2011ರ ಅಂಕಿ ಅಂಶಗಳ ಪ್ರಕಾರ ಅತಿ ಹೆಚ್ಚು (62.4 ದಶಲಕ್ಷ) ಮಧುಮೇಹಿಗಳನ್ನು ಹೊಂದಿರುವ ದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಭಾರತ, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಮಧುಮೇಹಿಗಳನ್ನು ಹೊಂದಲಿದೆ ಎಂದು ಅಂದಾಜಿಸಲಾಗಿದೆ.ಇದರ ಜತೆಗೆ ಕ್ಷಯ ರೋಗಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಇತ್ತೀಚಿನ ಸಮೀಕ್ಷೆ ಪ್ರಕಾರ ಕ್ಷಯ ರೋಗಕ್ಕೆ ತುತ್ತಾಗುತ್ತಿರುವವರಲ್ಲಿ ಮಧುಮೇಹ ರೋಗದಿಂದ ಬಳಲುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷಯ ರೋಗ ಮತ್ತು ಮಧುಮೇಹ ರೋಗದಿಂದ ಬಳಲುತ್ತಿರುವ ರೋಗಿಗಳ ಆರೋಗ್ಯ ಸಮಸ್ಯೆಗಳ ಕುರಿತು ಎಂಟು ಕೇಂದ್ರಗಳಲ್ಲಿ ಪ್ರಥಮ ಹಂತದ ಸಂಶೋಧನೆ ನಡೆಯಲಿದೆ. ಮಧುಮೇಹ ಮತ್ತು ಕ್ಷಯ (ಟಿಬಿ) ರೋಗಗಳ ಮಧ್ಯೆ ಪರಸ್ಪರ ಇರುವ ಸಂಬಂಧ ಹಾಗೂ ಚಿಕಿತ್ಸೆ, ಪ್ರತಿಬಂಧಕಗಳನ್ನು ರೂಪಿಸುವುದು ಈ ಸಂಶೋಧನೆಯ ಮುಖ್ಯ ಉದ್ದೇಶ ಎಂದು ಡಾ. ಜಾಲಿ ತಿಳಿಸಿದ್ದಾರೆ.ನವ ದೆಹಲಿಯಲ್ಲಿ ಡಿಸೆಂಬರ್ 13ರಿಂದ 15ರವರೆಗೆ ನಡೆಯಲಿರುವ ಸಮಾಲೋಚನಾ ಸಭೆಯಲ್ಲಿ ನಾಲ್ಕು ದೇಶಗಳ ಪ್ರತಿನಿಧಿಗಳು ಹಾಗೂ ಸಂಶೋಧನಾ ಕೇಂದ್ರಗಳೆಂದು ಗುರುತಿಸಲಾಗಿರುವ ದೇಶದ ಎಂಟು ಸಂಶೋಧನಾ ಕೇಂದ್ರಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಸಭೆಯಲ್ಲಿ ಕೆಎಲ್‌ಇ ಆಸ್ಪತ್ರೆಯ ಮಧುಮೇಹ ಕೇಂದ್ರದ ಪ್ರತಿನಿಧಿಗಳಾಗಿ ಡಾ. ಮುರುಗೇಂದ್ರ ಹಿರೇಮಠ ಹಾಗೂ ಡಾ. ವಿನಾಯಕ ಮೈಸಾಳೆ ಪಾಲ್ಗೊಳ್ಳುತ್ತಿದ್ದಾರೆ.ಅಭಿನಂದನೆ: ದೇಶದ ನೀತಿ ನಿರೂಪಣೆಗಾಗಿ ನಡೆಸುವ ಮಧುಮೇಹ ಕುರಿತು ರಾಷ್ಟ್ರಮಟ್ಟದ ಸಂಶೋಧನಾ ಕೇಂದ್ರವನ್ನಾಗಿ ಕೆಎಲ್‌ಇ ಆಸ್ಪತ್ರೆಯ ಮಧುಮೇಹ ಕೇಂದ್ರವನ್ನು ಆಯ್ಕೆ ಮಾಡಿರುವುದಕ್ಕೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹಾಗೂ ಕೆಎಲ್‌ಇ ವಿಶ್ವವಿದ್ಯಾಲಯದ ಕುಲಪತಿ ಡಾ. ಚಂದ್ರಕಾಂತ ಕೋಕಾಟೆ ಅವರು ಆಸ್ಪತ್ರೆಯ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.