ಶನಿವಾರ, ಜನವರಿ 18, 2020
19 °C

ಮನಸೂರೆಗೊಂಡ ಡಾ.ಸಿದ್ಧಲಿಂಗಯ್ಯ ಅವರ 'ಕವಿಸಮಯ'

'ಪ್ರಜಾವಾಣಿ ವಾರ್ತೆ/ Updated:

ಅಕ್ಷರ ಗಾತ್ರ : | |

ಮೂಡುಬಿದಿರೆ: 

'ಕೊಲೆಯ ಹಿಂದಿನ ರಾತ್ರಿ ಸೂರ್ಯ ಚಂದ್ರರ ಹಿಡಿದು

ಹಣದ ಪೆಟ್ಟಿಗೆಯಲ್ಲಿ ಕೂಡಿಟ್ಟರು

ಭಾರತದ ಬಾವುಟವ ಸುತ್ತಿ ಬಾಯಿಗೆ ತುರುಕಿ

ಕಿತ್ತುಕೊಂಡರು ಅವಳ ಮಾತುಗಳನು...'

ಡಾ.ಸಿದ್ದಲಿಂಗಯ್ಯ ಅವರು ಶನಿವಾರ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013ರ ಅಂಗವಾಗಿ ಇಲ್ಲಿನ ರತ್ನಾಕರವರ್ಣ ವೇದಿಕೆಯಲ್ಲಿ ನಡೆದ 'ಕವಿಸಮಯ ಕವಿನಮನ' ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಕವನ ಓದುತ್ತಿದ್ದರೆ ಸಭಾಂಗಣದಲ್ಲಿದ್ದ ಪ್ರೇಕ್ಷಕರು ತನ್ಮಯತೆಯಿಂದ ಆಲಿಸಿದರು.

ಸಂಘಟನಾ ಚತುರತೆ, ಸಮಯಪಾಲನೆಯನ್ನು ಡಾ.ಮೋಹನ್ ಆಳ್ವ ಅವರಿಂದ ಸಮಸ್ತ ಕನ್ನಡಿಗರು ಕಲಿಯಬೇಕು. ವಿವೇಕ್ ರೈ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆರಿಸಿದ್ದೂ ಸರಿಯಾಗಿದೆ ಎಂದು ಡಾ.ಸಿದ್ದಲಿಂಗಯ್ಯ ತಿಳಿಸಿದರು.

'ಇಕ್ಕಿರ್ಲ, ಒದಿರ್ಲ ...' ಎಂದು ಬರೆದಿದ್ದು ಯಾವುದೋ ಒಂದು ಸಮುದಾಯದ ವಿರುದ್ಧದ ದ್ವೇಷದಿಂದ ಅಲ್ಲ. ಅದು ಶೋಷಣೆಯ ವಿರುದ್ಧ ಬರೆದದ್ದು. ಎಲ್ಲಾ ಜಾತಿಯಲ್ಲೂ ಇರುವ ಬಡವರೇ ದಲಿತರು. ಇಂತಹವರು ಎಲ್ಲಾ ಜಾತಿ ಹಾಗೂ ಧರ್ಮದಲ್ಲೂ ಇದ್ದಾರೆ. ದನಿ ಇಲ್ಲದವರೇ ದಲಿತರು' ಎಂದು ಅವರು ಹೇಳಿದರು.

ನಂತರ, ಈ ಕವನಕ್ಕೆ ಸ್ವರಸಂಯೋಜಿಸಿ ಹಾಡಿದ ಹಾಡು, ಅದೇ ಹೊತ್ತಿಗೆ ವಿದುಷಿ ಶಾರದಮಣಿ ಶೇಖರ್ ಅವರ ನಿರ್ದೇಶನದಲ್ಲಿ ಸನಾತನ ನಾಟ್ಯಾಲಯ ತಂಡದವರು ಪ್ರಸ್ತುತಪಡಿಸಿದ ನೃತ್ಯ ಹಾಗೂ ವಿಲಾಸ್ ನಾಯಕ್ ಅವರು ಬರೆದ ಚಿತ್ರ... ಇವೆಲ್ಲವೂ ಏಕಕಾಲಕ್ಕೆ ಘಟಿಸಿ, ಇಡೀ ಪ್ರೇಕ್ಷಕ ವೃಂದಕ್ಕೆ ವಿನೂತನವಾದ ಅನುಭವನ್ನು ನೀಡಿತು.

'ಕತ್ತಲೆಯ ರಾಕ್ಷಸರು ಪಣಕಟ್ಟಿ ಆಡಿದರು

ಕಣ್ಣಿನುಂಡೆಗಳ ಗೋಲಿಯಾಟ...'ಪದ್ಯದಲ್ಲಿ ಬರುವ ಈ ಸಾಲುಗಳಿಗೆ ಅನುಗುಣವಾಗಿ ಪೊತ್ತೆ ಮೀಸೆಯನ್ನು ಹಾಗೂ ಉದ್ದ ಕೂದಲನ್ನು ಬಿಟ್ಟು, ನಾಲಿಗೆ ಹೊರಚಾಚಿ ಕುಣಿದ ರಾಕ್ಷಸರ ಪಾತ್ರಧಾರಿಗಳು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದರು. ಅದೇ ರೀತಿ ಉಳಿದ ನೃತ್ಯಗಾರ್ತಿಯರು ತಮ್ಮ ಆಕ್ರೋಶ, ಕೋಪಗಳನ್ನು ಮುಖಭಾವದಲ್ಲಿ ಸಮರ್ಥವಾಗಿ ಪ್ರತಿಬಿಂಬಿಸಿದರು. ಶೋಷಣೆಗೆ ಒಳಗಾದ ಯುವತಿಯ ಪಾತ್ರಧಾರಿಯ ಕುಣಿತವೂ ಮಹಿಳಾ ದೌರ್ಜನ್ಯವನ್ನು ಸಭಿಕರಿಗೆ ಮನವರಿಕೆ ಮಾಡುವಲ್ಲಿ ಯಶ ಕಂಡಿತು. ಕಳೆದ ವರ್ಷ ನವದೆಹಲಿಯಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಘಟನೆಯನ್ನು ನೆನಪಿಗೆ ತಂದಿತು.

 

ಪ್ರತಿಕ್ರಿಯಿಸಿ (+)