ಮನೆಯ ಹಿತ್ತಿಲಿನಲ್ಲೇ ಶವಸಂಸ್ಕಾರ

ಬೇಲೂರು: ತಾಯಿ ಸತ್ತ ದುಃಖ ಒಂದೆಡೆಯಾದರೆ, ಆ ಶವವನ್ನು ಹೂಳಲು ಗ್ರಾಮದಲ್ಲಿ ಸ್ಮಶಾನ ಇಲ್ಲ. ಇರುವ ಸ್ಮಶಾನದ ಜಾಗವನ್ನು ಬಲಾಢ್ಯರು ಒತ್ತುವರಿ ಮಾಡಿದ್ದಾರೆ. ಶವವನ್ನು ಸಂಸ್ಕಾರ ಮಾಡುವುದು ಎಲ್ಲಿ ಎಂಬ ಚಿಂತೆ ಪುತ್ರನದು. ಕೆರೆಯ ದಡದಲ್ಲಿ ಶವ ಹೂಳುತ್ತೇವೆ ಎಂದರೆ ಅದಕ್ಕೆ ಕೆಲವರ ಅಡ್ಡಿ. ಹೀಗೆ ವಿಧಿಯಿಲ್ಲದೆ ಮನೆಯ ಹಿತ್ತಿಲಲ್ಲೇ ತಾಯಿಯ ಶವವನ್ನು ಹೂತು ಸಂಸ್ಕಾರ ಮಾಡಿದ ಘಟನೆ ತಾಲ್ಲೂಕಿನ ದಬ್ಬೆ ಗ್ರಾಮದಲ್ಲಿ ಈಚೆಗೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ದಬ್ಬೆ ಗ್ರಾಮದ ಕೃಷ್ಣಾಚಾರ್ ಅವರ ಪತ್ನಿ ನಿಂಗಮ್ಮ (80) ಏಪ್ರಿಲ್ 21ರಂದು ನಿಧನರಾದರು. ನಿಂಗಮ್ಮ ಅವರ ಪುತ್ರ ಅಚ್ಯುತಾಚಾರ್, ಸೊಸೆ ಪದ್ಮಾವತಿ ಮತ್ತು ಬಂಧುಗಳಿಗೆ ಸಾವಿನ ದುಃಖ ಒಂದೆಡೆಯಾದರೆ, ಶವವನ್ನು ಹೂಳಲು ಜಾಗವಿಲ್ಲ ಎಂಬ ಕೊರಗು ಮತ್ತೊಂದೆಡೆ. ನಿಂಗಮ್ಮ ಅವರ ಪತಿ ಕೃಷ್ಣಾಚಾರ್ ಮೃತಪಟ್ಟಾಗ ಗ್ರಾಮದ ಕೆರೆಯ ದಡದಲ್ಲಿ ಶವ ಹೂಳಲಾಗಿತ್ತು. ಆದರೆ, ನಿಂಗಮ್ಮ ಅವರ ಶವವನ್ನು ಕೆರೆಯ ದಡದಲ್ಲಿಯೇ ಹೂಳುತ್ತೇವೆ ಎಂದಾಗ ಗ್ರಾಮದ ಕೆಲವರು ಹೂಳಬೇಡಿ ಎಂದು ತಾಕೀತು ಮಾಡಿದರು.
‘ಗ್ರಾಮದಲ್ಲಿ ಸ್ಮಶಾನ ಇಲ್ಲ, ಶವ ಹೂಳುವುದು ಎಲ್ಲಿ ಎಂದು ಅವರನ್ನೇ ಪ್ರಶ್ನಿಸಿದರೆ ನಿಮ್ಮ ಮನೆಯ ಪಕ್ಕದಲ್ಲಿಯೇ ಹೂಳಿರಿ’ ಎಂಬ ಉತ್ತರ ಅವರಿಂದ ಬಂತು. ಬೇರೆಡೆ ಜಾಗ ದೊರೆಯದ ಕಾರಣ ಕುಟುಂಬ ವರ್ಗದವರು ವಿಧಿಯಿಲ್ಲದೆ ನಿಂಗಮ್ಮ ಅವರ ಅಂತ್ಯಸಂಸ್ಕಾರವನ್ನು ಮನೆಯ ಹಿತ್ತಲಿನಲ್ಲಿಯೇ ನೆರವೇರಿಸಿದರು. ಮನೆಯ ಹಿತ್ತಲಿನಲ್ಲಿ ಶವ ಹೂಳಲು ಅಕ್ಕಪಕ್ಕದ ಮನೆಯವರು ಆಕ್ಷೇಪ ವ್ಯಕ್ತಪಡಿಸಿದರಾದರೂ ಪರಿಸ್ಥಿತಿಯನ್ನು ಅರಿತು ಒಪ್ಪಿಗೆ ನೀಡಿದ್ದಾರೆ.
ಬೇಲೂರು ತಾಲ್ಲೂಕಿನ ಮಲೆನಾಡು ಭಾಗದಲ್ಲಿರುವ ದಬ್ಬೆ, ಸುಮಾರು 80 ಮನೆ ಮತ್ತು 600 ಜನಸಂಖ್ಯೆಯುಳ್ಳ ಪುಟ್ಟ ಗ್ರಾಮ. ಈ ಗ್ರಾಮದಲ್ಲಿ ಸ್ಥಿತಿವಂತರು ಸಾಕಷ್ಟು ಸಂಖ್ಯೆಯಲ್ಲಿದ್ದರೂ ಅಷ್ಟೇ ಪ್ರಮಾಣದಲ್ಲಿ ಕೂಲಿ ಕಾರ್ಮಿಕರಿದ್ದಾರೆ. ಜನರು ಸಾವನ್ನಪ್ಪಿದಾಗ ಸ್ಥಿತಿವಂತರು ತಮ್ಮ ಜಮೀನು ಮತ್ತು ಕಾಫಿ ತೋಟಗಳಲ್ಲಿ ಅಂತ್ಯಸಂಸ್ಕಾರ ನೆರವೇರಿಸುತ್ತಾರೆ. ಗ್ರಾಮದಲ್ಲಿ ಹಾದು ಹೋಗಿರುವ ಯಗಚಿ ನದಿಯ ದಡದಲ್ಲಿ ಸ್ಮಶಾನವಿದೆಯಾದರೂ ಅದು ಪಾಳು ಬಿದ್ದು ಅಲ್ಲಿಗೆ ತೆರಳಲು ಸಾಧ್ಯವಾಗುತ್ತಿಲ್ಲ.
ಕರ್ಕಿಹಳ್ಳಿ ಮತ್ತು ದಬ್ಬೆ ಗ್ರಾಮದ ತಿರುವಿನಲ್ಲಿ ಹಿಂದುಳಿದ ವರ್ಗದ ಜನರಿಗೆಂದು ಸುಮಾರು 1.5 ಎಕರೆ ಸ್ಮಶಾನದ ಜಾಗವಿದೆ. ಈ ಹಿಂದೆ ಅಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತಿತ್ತು. ಬಲಾಢ್ಯ ವ್ಯಕ್ತಿಯೊಬ್ಬರು ಆ ಜಾಗವನ್ನು ಒತ್ತುವರಿ ಮಾಡಿ ಬೇಲಿ ಹಾಕಿಕೊಂಡು ಕಾಫಿ ತೋಟ ನಿರ್ಮಿಸಿಕೊಂಡಿದ್ದಾರೆ. ಇದರಿಂದಾಗಿ ಸುಮಾರು ಹಿಂದುಳಿದ ವರ್ಗಕ್ಕೆ ಸೇರಿದ 25 ಕುಟುಂಬಗಳಿಗೆ ಶವ ಹೂಳಲು ಜಾಗವಿಲ್ಲದಂತಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಒತ್ತುವರಿಯಾದ ಸ್ಮಶಾನದ ಜಾಗವನ್ನು ಬಿಡಿಸಿಕೊಡಲು ಮುಂದಾಗಿಲ್ಲ.
ನಿಂಗಮ್ಮ ಅವರ ಪುತ್ರ ಅಚ್ಯುತಾಚಾರ್ ಹಲವು ದಿನಗಳಿಂದ ಅನಾರೋಗ್ಯಕ್ಕೊಳಗಾಗಿದ್ದಾರೆ. ತಾಯಿ ಸತ್ತ ನಂತರ ಹಾಸಿಗೆ ಹಿಡಿದಿದ್ದಾರೆ. ತಾಯಿಯ ಅಂತ್ಯಕ್ರಿಯೆಗೆ ಸೂಕ್ತ ಸ್ಥಳ ದೊರಕಲಿಲ್ಲವಲ್ಲ ಎಂಬ ಕೊರಗು ಅವರನ್ನು ಕಾಡುತ್ತಿದೆ. ಅನಾರೋಗ್ಯದಿಂದ ಬಳಲುತ್ತಿದ್ದು ಸಾವನ್ನಪ್ಪಿದರೆ, ಅಂತ್ಯಸಂಸ್ಕಾರಕ್ಕೆ ಆರಡಿ–ಮೂರಡಿ ಜಾಗವಿಲ್ಲವಲ್ಲ. ಪತ್ನಿ ಮತ್ತು ಬಂಧುಗಳು ಜಾಗಕ್ಕಾಗಿ ಎಲ್ಲಿ ಪರದಾಡುತ್ತಾರೆ ಎಂಬ ಚಿಂತೆ ಅವರನ್ನು ಕಾಡುತ್ತಿದೆ ಎಂದು ಅವರ ಪತ್ನಿ ಪದ್ಮಾವತಿ ‘ಪ್ರಜಾವಾಣಿ’ ಬಳಿ ತಮ್ಮ ಅಳಲನ್ನು ತೋಡಿಕೊಂಡರು.
ಘಟನೆ ನಡೆದು 10 ದಿನ ಕಳೆದಿದೆಯಾದರೂ, ಶುಕ್ರವಾರ ಮೃತ ನಿಂಗಮ್ಮ ಅವರ ವೈಕುಂಠ ಸಮಾರಾಧನೆ ಇದ್ದ ಕಾರಣ ಘಟನೆ ಬೆಳಕಿಗೆ ಬಂದಿದೆ.
ತೆರವುಗೊಳಿಸಲಿ
ಬೇಲೂರು: ದಬ್ಬೆ ಗ್ರಾಮದಲ್ಲಿನ ಸ್ಮಶಾನಕ್ಕೆ ಮೀಸಲಿಟ್ಟಿದ್ದ ಜಾಗ 1.5 ಎಕರೆಯಷ್ಟು ಜಮೀನು ಒತ್ತುವರಿಯಾಗಿದೆ. ಪಹಣಿಯಲ್ಲಿ ಈಗಲೂ ಸ್ಮಶಾನದ ಜಾಗ ಎಂದು ನಮೂದಾಗುತ್ತಿದೆ. ಜಾಗ ಒತ್ತುವರಿಯಾಗಿರುವುದರಿಂದ ಸುಮಾರು 25ರಿಂದ 30 ಕುಟುಂಬಗಳಿಗೆ ಶವ ಸಂಸ್ಕಾರಕ್ಕೆ ಜಾಗವಿಲ್ಲದಂತಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಮಶಾನದ ಜಾಗವನ್ನು ಬಿಡಿಸಿಕೊಟ್ಟು ಅಂತ್ಯ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡಬೇಕು.
– ಲಕ್ಷ್ಮಣ್, ದಬ್ಬೆ ಗ್ರಾಮಸ್ಥ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.