ಗುರುವಾರ , ಜನವರಿ 23, 2020
26 °C
ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಫಲಾನುಭವಿಗಳ ಶಾಪ

ಮನೆ ಕಟ್ಟಿದರೂ ಹಣ ನೀಡದ ಅಧಿಕಾರಿಗಳು

ಪ್ರಜಾವಾಣಿ ವಾರ್ತೆ / - ಡಿ.ಎಚ್.ಕಂಬಳಿ Updated:

ಅಕ್ಷರ ಗಾತ್ರ : | |

ಸಿಂಧನೂರು: ರಾಜೀವ್‌ಗಾಂಧಿ ವಸತಿ ನಿಗಮ ಮತ್ತು ಬಸವ ವಸತಿ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳು ಸ್ವಂತ ಹಣದಿಂದ ಮನೆಕಟ್ಟಿಕೊಂಡಿದ್ದು, ರಾಜೀವ್‌ಗಾಂಧಿ ವಸತಿ ನಿಗಮವು ಬಿಡುಗಡೆ ಮಾಡುವ 75,000 ರೂಪಾಯಿಗಳಿಗಾಗಿ ಐದು ತಿಂಗಳುಗಳಿಂದ ಅಲೆದಾಡುತ್ತಿದ್ದಾರೆ.ತಾಲ್ಲೂಕಿಗೆ ಕಳೆದ ವರ್ಷ ಸಿಂಧನೂರು ಶಾಸಕರಾಗಿದ್ದ ವೆಂಕಟರಾವ್ ನಾಡಗೌಡ ಮತ್ತು ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಅವರು ಕ್ರಮವಾಗಿ 6,000 ಮತ್ತು 3,000 ಮನೆಗಳನ್ನು ಮಂಜೂರು ಮಾಡಿಸಿದ್ದರು. ಅದರಲ್ಲಿ 4,500 ಮನೆಗಳ ಸಮರ್ಪಕ ವಿವರ ಕೊಡದ ಕಾರಣಕ್ಕಾಗಿ `ಮಂಜೂರಾತಿ ಸಾಧ್ಯವಿಲ್ಲ' ಎಂದು ಹಿಂಬದಿ ಬರಹ ಬರೆದು ರದ್ದುಪಡಿಸಲಾಗಿದೆ. 1,500 ಮಂದಿ ಮನೆಗಳನ್ನು ಕಟ್ಟಿಸಿಕೊಂಡಿದ್ದು, ಇವುಗಳಿಗೆ ಇಲ್ಲಿಯವರೆಗೆ ಹಣ ನೀಡಿಲ್ಲ ಎಂದು ಫಲಾನುಭವಿಗಳು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳ ಕಾರ್ಯಾಲಯಕ್ಕೆ ಅಲೆದಾಡಿ ಬೇಸತ್ತಿದ್ದಾರೆ.`ರಾಜ್ಯದಲ್ಲಿ 6 ಲಕ್ಷ ಮನೆಗಳನ್ನು ಮಂಜೂರು ಮಾಡುವಾಗ ರಾಜ್ಯ ಸರ್ಕಾರ ಹಣಕಾಸು ಇಲಾಖೆಯ ಅನುಮತಿ ಪಡೆಯದಿರುವುದೇ ಈ ಎಲ್ಲಾ ಗೊಂದಲಗಳಿಗೆ ಕಾರಣ ಎಂದು ಹೇಳಲಾಗುತ್ತಿದೆ. ನಿಗಮದಲ್ಲಿ ಹಣ ಇಲ್ಲದ ಕಾರಣಕ್ಕಾಗಿ ಒಂದಿಲ್ಲೊಂದು ನೆಪ ಹೇಳಿ ಮನೆ ಕಟ್ಟಿಕೊಂಡ ಬಡವರಿಗೆ ಹಣ ನೀಡದೇ ಆಕ್ಷೇಪ ಎನ್ನುವ ಕೆಲಸವನ್ನು ರಾಜೀವ್‌ಗಾಂಧಿ ವಸತಿ ನಿಗಮ ಮಾಡುತ್ತಿದೆ' ಎನ್ನುವುದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ  ನಾಗಪ್ಪ ಗೋಮರ್ಸಿ ಅವರ ಆರೋಪ.ಫಲಾನುಭವಿಗಳನ್ನು ಆಯ್ಕೆ ಮಾಡುವ ಸಮಯದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮನೆ  ಕಟ್ಟಿಕೊಳ್ಳುವ ಬಗ್ಗೆ ಯಾವುದೇ ಮಾರ್ಗಸೂಚಿಯನ್ನು ನೀಡಲಿಲ್ಲ. ಅಳತೆ, ವಿನ್ಯಾಸ ಮತ್ತಿತರ ನಿಯಮಗಳನ್ನು  ಫಲಾನುಭವಿಗಳಿಗೆ ತಿಳಿಸದ ಕಾರಣದಿಂದ ತಮಗೆ ಅನುಕೂಲ ಬಂದಂತೆ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಆದರೆ ಹಣ ಬಿಡುಗಡೆ ಮಾಡುವ ಸಮಯದಲ್ಲಿ ದೊಡ್ಡ ಮನೆಗಳನ್ನು ಕಟ್ಟಿಕೊಂಡಿರುವುದರಿಂದ ಹಣ ಬಿಡುಗಡೆ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಮತ್ತೆ ಕೆಲವರು 3 ಲಕ್ಷ ವೆಚ್ಚದಲ್ಲಿ ಮನೆ ಕಟ್ಟಿಕೊಂಡಿದ್ದಾರೆ ಹಾಗೂ ಗೋದಾಮು ಕಟ್ಟಿಕೊಂಡು ಮನೆ ಕಟ್ಟಿಕೊಂಡಿರುವುದಾಗಿ ಹೇಳುತ್ತಿರುವುದರಿಂದ ಅಂತವರಿಗೆ ಹಣ ಬಿಡುಗಡೆ ಮಾಡಬಾರದು ಎಂದು ರಾಜೀವ್‌ಗಾಂಧಿ ವಸತಿ ನಿಗಮದ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.ಬಾದರ್ಲಿ ಭರವಸೆ: `ರಾಜೀವ್‌ಗಾಂಧಿ ವಸತಿ ನಿಗಮದ ನಿಯಮಗಳನ್ವಯ ಮನೆಗಳನ್ನು ಕಟ್ಟಿಕೊಂಡಿದ್ದರೂ ತಮಗೆ ಹಣ ಬಿಡುಗಡೆ ಮಾಡಿಲ್ಲ' ಎಂದು ನೂರಾರು ಫಲಾನುಭವಿಗಳು ಶಾಸಕ ಹಂಪನಗೌಡ ಬಾದರ್ಲಿ ಅವರನ್ನು ಭೇಟಿಯಾಗಿ ತಮಗೆ ಆಗಿರುವ ತೊಂದರೆಯ ಬಗ್ಗೆ ಗಮನ ಸೆಳೆದಿದ್ದು ಈಚೆಗೆ ನಡೆದ ತಾಲ್ಲೂಕು ಪಂಚಾಯತಿ ಸಭೆಯಲ್ಲಿ ಹಣ ಬಿಡುಗಡೆಯಾಗದ ಫಲಾನುಭವಿಗಳ ಪಟ್ಟಿಯನ್ನು ಅವರು ಪಡೆದಿದ್ದಾರೆ.`ಸಾಲ ಮಾಡಿ ಸರ್ಕಾರದ ಹಣಕ್ಕಾಗಿ ಅಲೆದಾಡುತ್ತಿರುವ ಬಡ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಿಸಲು ಹಂಪನಗೌಡರು ಒತ್ತಡ ಹೇರುವ ಮೂಲಕ ನ್ಯಾಯ ಒದಗಿಸಬೇಕು ಎಂದು ಫಲಾನುಭವಿಗಳಾದ ನಿಂಗಪ್ಪ, ಶಂಕ್ರಪ್ಪ, ರುದ್ರಪ್ಪ, ಅಮರಮ್ಮ, ಮಾನಮ್ಮ ಮತ್ತಿತರರು ಮನವಿ ಮಾಡಿದ್ದಾರೆ.

 

ಪ್ರತಿಕ್ರಿಯಿಸಿ (+)