ಗುರುವಾರ , ಮೇ 13, 2021
24 °C

ಮನೆ ಬಾಗಿಲಲ್ಲೇ ಉದ್ಯೋಗ

ಗಾಣಧಾಳು ಶ್ರೀಕಂಠ Updated:

ಅಕ್ಷರ ಗಾತ್ರ : | |

`ಮುಕ್ಕಾಲು ಅಡಿ ದಂಡೆ ಹೂವಿಗೆ ರೂ10-15. ಸೀಸನ್‌ನಲ್ಲಿ ಮಾರಾಟ ಬೆಲೆ ರೂ 75 - 100. ಬೆಳೆಯೋದು ಒಂದೂವರೆ ಎಕರೆಗಿಂತ ಕಡಿಮೆ, ಅರ್ಧ ಎಕರೆಗಿಂತ ಹೆಚ್ಚು.ಬೆಳೆಗಾರರೆಲ್ಲ ಗುತ್ತಿಗೆ ರೈತರು. ವರ್ಷಕ್ಕೆ ಕನಿಷ್ಠ ಮೂರು ಹಂತಗಳಲ್ಲಿ ಈ ಹೂವಿನ ವ್ಯಾಪಾರ ಮಾಡುತ್ತಾರೆ. ಅಲ್ಪ ಕಾಲದಲ್ಲಿ ಒಂದಷ್ಟು ಹಣ ಗಳಿಸುತ್ತಾರೆ. ಇಡೀ ಕುಟುಂಬ ಸದಸ್ಯರೇ ಈ ಹೂವಿನ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾರೆ~ಇದು ರುದ್ರಾಕ್ಷಿ ಹೂವಿನ ವ್ಯಾಪಾರದ ಕಥೆ. ಗಾತ್ರದಲ್ಲಿ ಚಿಕ್ಕದಾಗಿದ್ದು, ನೇರಳೆ ಮತ್ತು ಬಿಳಿ ಬಣ್ಣಗಳಲ್ಲಿ ಅರಳುವ ರುದ್ರಾಕ್ಷಿ ಹೂವು ಅಂದವಾಗಿದ್ದು, ಅಲಂಕಾರಕ್ಕೆ ಮೆರುಗು ನೀಡುತ್ತದೆ. ಬಾಳಿಕೆಯಲ್ಲಿ ಗ್ರಾಹಕ ಸ್ನೇಹಿ. ಹಾಗಾಗಿಯೇ ಈ ಹೂವಿಗೆ ಹಬ್ಬ-ಹರಿದಿನಗಳಲ್ಲಿ ಭಾರಿ ಬೇಡಿಕೆ. `ರುದ್ರಾಕ್ಷಿ~ ಆಕಾರವಿರುವುದರಿಂದ ಹೂವಿಗೆ ಆ ಹೆಸರು. ರಾಜ್ಯದ ವಿವಿಧೆಡೆ ಅನಂತ ಗೊಂಡೆ, ಗೊಂಡೆ, ಬೇಲಿ ಹೂವು.. ಎಂದು ಕರೆಯುತ್ತಾರೆ. ಕನಕಪುರ ತಾಲ್ಲೂಕಿನಲ್ಲಿ ಈ ಹೂವನ್ನು ವಾಣಿಜ್ಯ ಉದ್ದೇಶದಿಂದ ಬೆಳೆಯುತ್ತಾರೆ.ಹಬ್ಬದಲ್ಲಿ ಭಾರಿ ಬೇಡಿಕೆ

ವರಮಹಾಲಕ್ಷ್ಮಿ, ಗೌರಿ - ಗಣೇಶ ಹಬ್ಬದ ಸಮಯದಲ್ಲಿ ಹೂವಿನ ವಹಿವಾಟು ಜೋರು. ವಾರವಿಟ್ಟರೂ ಬಾಡದ ಈ ಹೂವನ್ನು ಮದುವೆ, ಮುಂಜಿಯಂತಹ ಶುಭ ಸಮಾರಂಭಗಳಲ್ಲಿ ವೇದಿಕೆ ಅಲಂಕಾರಕ್ಕೆ, ನಾಮಫಲಕಗಳ ಅಕ್ಷರ ಬಿಡಿಸಲು  ಬಳಸುತ್ತಾರೆ. ಅಂಥ ದಿನಗಳಲ್ಲಿ ಬೆಳೆಗಾರರಿಗೆ ಪುರುಸೊತ್ತಿಲ್ಲದಷ್ಟು ಕೆಲಸ !ಕನಕಪುರ ತಾಲ್ಲೂಕಿನ ಹಾರೋಹಳ್ಳಿ - ಬಿಡದಿ ರಸ್ತೆಯಲ್ಲಿ ಆಸು-ಪಾಸಿನ ಹಳ್ಳಿಗಳಾದ ಕೋಡಹಳ್ಳಿ, ಸಿದ್ದಾಪುರ, ಕೆಂಚಪ್ಪನ ದೊಡ್ಡಿ, ಬೈರಮಂಗಲ ಹಾಗೂ ಕೆಲವು ಹಳ್ಳಿಗಳಲ್ಲಿ ರುದ್ರಾಕ್ಷಿ ಹೂವನ್ನು ಹೆಚ್ಚಾಗಿ ಬೆಳೆಯುತ್ತಾರೆ. `ಸಿದ್ದಾಪುರ, ಗಾಣಾಳುದೊಡ್ಡಿ ವ್ಯಾಪ್ತಿಯಲ್ಲಿ 50 ಎಕರೆ ಪ್ರದೇಶದಲ್ಲಿ ರುದ್ರಾಕ್ಷಿ ಹೂವು ಬೆಳೆಯಿರಿ~ ಎನ್ನುವುದು ಪುಷ್ಪ ಕೃಷಿಕ  ಕೃಷ್ಣಮೂರ್ತಿ ಅವರ ಅಭಿಪ್ರಾಯ. ಈ ಭಾಗದಲ್ಲಿ ಸುವರ್ಣಮುಖಿ ನದಿಯ ಚಾನೆಲ್ ನೀರು ಇರುವುದರಿಂದ ರುದ್ರಾಕ್ಷಿ ಹೂವಿನ ಕೃಷಿ ಹೆಚ್ಚಾಘಿದೆ.ಭೂರಹಿತರಿಗೆ ಉದ್ಯೋಗ

ಆರು ವರ್ಷಗಳ ಹಿಂದೆ  ಬೆಂಗಳೂರಿನ ಹೂವಿನ ವ್ಯಾಪಾರಿಯೊಬ್ಬರು ಇಲ್ಲಿ ಜಮೀನು ಗುತ್ತಿಗೆ ಪಡೆದು ರುದ್ರಾಕ್ಷಿ ಹೂವಿನ ಕೃಷಿ ಆರಂಭಿಸಿದರು. ನಂತರ ಇವರನ್ನು ನೋಡುತ್ತಾ, ಊರಿನವರು ಒಬ್ಬೊಬ್ಬರೇ ರುದ್ರಾಕ್ಷಿ ಹೂವು ಬೆಳೆಯೋದಕ್ಕೆ ಆರಂಭಿಸಿದರು.ಹೂವು ಬಿಡಿಸುವುದು, ಕಳೆ ಕೀಳುವುದಕ್ಕೆ ಕೂಲಿ ಆಳುಗಳ ಕೊರತೆಯಿಂದಾಗಿ ಬೆಂಗಳೂರಿನ ಬೆಳೆಗಾರ ಹೂವು ಬೆಳೆಯುವುದನ್ನೇ ಬಿಟ್ಟರು. ಆದರೆ, ರುದ್ರಾಕ್ಷಿ ಹೂವಿನ ಮಾರಾಟದ ರುಚಿ ಹತ್ತಿಸಿಕೊಂಡಿದ್ದ ಸಿದ್ದಾಪುರ, ಗಾಣದೊಡ್ಡಿಯ ಬೆಳೆಗಾರರು ಹೂವಿನ ಕೃಷಿ ಮುಂದುವರಿಸಿದರು.ವಿಚಿತ್ರ ಎಂದರೆ, ರುದ್ರಾಕ್ಷಿ ಹೂವು ಬೆಳೆಯುವ ರೈತರಲ್ಲಿ ಬಹುತೇಕರು ಭೂ ರಹಿತರು. ಅವರೆಲ್ಲ ಈ ಹೂವಿನ ಕೃಷಿಗಾಗಿಯೇ ಜಮೀನನ್ನು ಗುತ್ತಿಗೆ ಪಡೆಯುತ್ತಾರೆ.ಕೂಲಿಕಾರರ ಸಮಸ್ಯೆಯಿಂದಾಗಿ ಒಂದೂವರೆ ಎಕರೆಗಿಂತ ಹೆಚ್ಚು ಪ್ರದೇಶದಲ್ಲಿ ಹೂವು ಬೆಳೆಯುವುದಿಲ್ಲ. ಒಂದು ಪಕ್ಷ ದೊಡ್ಡ ಪ್ರಮಾಣದಲ್ಲಿ ಬೆಳೆದರೆ ಸಕಾಲದಲ್ಲಿ ಹೂ ಕಿತ್ತು ಮಾರಾಟ ಮಾಡುವುದು ಕಷ್ಟ ಎನ್ನುವುದು ಅವರ ಅಭಿಪ್ರಾಯ. ಇನ್ನೊಂದು ವಿಶೇಷ ಅಂದ್ರೆ ಯಾರೂ ಬಿಡಿ ಹೂ ಮಾರುವುದಿಲ್ಲ. ಆ ಹೂವನ್ನು ಬಿಡಿಸಿದ ದಿನವೇ ಅಂದೇ ಹಾರ (ದಿಂಡು) ಕಟ್ಟಿ, ಮರುದಿನ ಬೆಳಗ್ಗೆ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಗೋ ಅಥವಾ ಬನಶಂಕರಿ ಮಾರುಕಟ್ಟೆಗೋ ಒಯ್ದು ಬೆಳೆಗಾರರೇ ನಿಂತು ಮಾರಾಟ ಮಾಡುತ್ತಾರೆ.ಮನೆ ಮಂದಿಗೆ ಉದ್ಯೋಗ

`ಒಂದು ದಿನವಿಡೀ ಒಬ್ಬ ವ್ಯಕ್ತಿ ಹೂವು ಕಟ್ಟುವ ಕೆಲಸಕ್ಕೇ ತೊಡಗಿಸಿಕೊಂಡರೆ ಗರಿಷ್ಠ 100 ದಿಂಡು ಕಟ್ಟಬಹುದು~ ಎನ್ನುವುದು ಸಿದ್ದಾಪುರದ ಕಾಳಯ್ಯನವರ ಅಭಿಪ್ರಾಯ. ಗ್ರಾಮದ ಹತ್ತಿರ ಟೀ ಅಂಗಡಿ ಇಟ್ಟುಕೊಂಡಿರುವ ಕಾಳಯ್ಯ, ಹೂವಿನ ಕೃಷಿಗಾಗಿ ಸಮೀಪದಲ್ಲೇ ಜಮೀನನ್ನು ಗುತ್ತಿಗೆ ಪಡೆದಿದ್ದಾರೆ. ಅಲ್ಲಿ ರುದ್ರಾಕ್ಷಿ ಹೂವು ಬೆಳೆಯುತ್ತಾರೆ.ವರಮಹಾಲಕ್ಷ್ಮಿಯಿಂದ ದೀಪಾವಳಿ ಹಬ್ಬದವರೆಗೆ ಹೂವು ಕೊಯ್ಲಿಗೆ ಬರುವ ಹಾಗೆ ಬಿತ್ತನೆ ಮಾಡುತ್ತಾರೆ. ಜಮೀನಿನ ಬಳಿಯೇ ಅಂಗಡಿ ಇರುವುದರಿಂದ ಕೊಯ್ದು ಹೂವನ್ನು ಟೀ ಅಂಗಡಿಯ ಅಂಗಳದಲ್ಲೇ ರಾಶಿ ಹಾಕಿಕೊಂಡು ಕುಟುಂಬ ಸದಸ್ಯರೆಲ್ಲ ಸೇರಿ ಹೂವು ಕಟ್ಟುತ್ತಾರೆ.`ಅತ್ತ ಅಂಗಡಿ ಉಸ್ತುವಾರಿಯೂ ಆಯ್ತು. ಇತ್ತ ಹೂವಿನ ಕೆಲಸವೂ ಮುಗಿಯಿತು. ಹೀಗೆ ವರ್ಷದಲ್ಲಿ ಮೂರ‌್ನಾಲ್ಕು ತಿಂಗಳು ಉತ್ತಮ ವ್ಯಾಪಾರ~ ಎನ್ನುತ್ತಾರೆ ಕಾಳಯ್ಯ.`ಒಂದು ಬೆಳೆಯಿಂದ ಮೂರರಿಂದ ನಾಲ್ಕು ಕೊಯ್ಲು ಮಾಡಬಹುದು~ ಸಿದ್ದಾಪುರದ ಮತ್ತೊಬ್ಬ ಕೃಷಿಕ ಕೃಷ್ಣಮೂರ್ತಿ ವಿವರಿಸುತ್ತಾರೆ. ಈ ಹೂವಿನ ಕೃಷಿಗೆ ಬೀಜ, ಗೊಬ್ಬರ, ಔಷಧ, ಆಳಿನ ಕೂಲಿಗಾಗಿ ಮೊದಲು ಬಂಡವಾಳ ತೊಡಗಿಸಬೇಕು.

 

ಕಳೆ ಕೀಳುವುದು, ಕೀಟನಾಶಕ ಸಿಂಪಡಣೆಯಂತಹ ವಿಪರೀತ ಕೆಲಸ. ಕನಿಷ್ಠ ಅರ್ಧ ಎಕರೆಗೆ ಕೊಯ್ಲು ಮಾಡಲು ಐವರು ಆಳುಗಳು ಬೇಕು. ಐದಾರು ದಿನ ಹಿಡಿಯುತ್ತದೆ. ಒಂದು ಆಳು ಬೆಳಗ್ಗೆ 7- 12 ಗಂಟೆವರೆಗೆ, 50 ದಿಂಡಿಗಾಗುವಷ್ಟು ಹೂ ಕಿತ್ತು, ಸಂಜೆ ನಾಲ್ಕು ಗಂಟೆಗೆ 50 ದಿಂಡು ಕಟ್ಟಿ ಹೋಗಬಹುದು. ಕೂಲಿ 150 ರೂ  (ಹೂ ಕಿತ್ತದ್ದಕ್ಕೆ ರೂ 100 + ಒಂದು ದಿಂಡು ಕಟ್ಟಲು ರೂ 1   ಹಾಗೆ ರೂ 50 ) ಕೊಡ್ತಾರೆ.ಒಂದು ದಿಂಡು ಹೂವಿಗೆ ರೂ 8 - 15. ಇದು ಹೊಲ ಅಥವಾ ಮನೆಯಿಂದಲೇ ಖರೀದಿಸುವರಿಗೆ ವಿಧಿಸುವ ದರ. ಮಾರುಕಟ್ಟೆಗೆ ಕೊಂಡೊಯ್ದರೆ ರೂ ಕನಿಷ್ಠ 25. ಇದು ಸಾಮಾನ್ಯ ದಿನದ ದರ. ವರಮಹಾಲಕ್ಷ್ಮಿ, ಆಯುಧಪೂಜೆ, ಶ್ರಾವಣ ಮಾಸ, ಗೌರಿ-ಗಣೇಶ ಹಬ್ಬದ ದಿನಗಳಲ್ಲಿ  ರೂ 50 ರಿಂದ ರೂ100 ವರೆಗೂ ದರ ನಿಗದಿಪಡಿಸಲಾಗುತ್ತದೆ.ಬೆಂಗಳೂರಿನಲ್ಲಿ ಮಾರುಕಟ್ಟೆ ಉತ್ತಮವಾಗಿರುವುದರಿಂದ ಬಹುತೇಕ ಬೆಳೆಗಾರರೇ ಖುದ್ದಾಗಿ ಮಾರಾಟ ಮಾಡುತ್ತಾರೆ. `ಈ ಲೆಕ್ಕಾಚಾರದ ಪ್ರಕಾರ ರುದ್ರಾಕ್ಷಿ ಹೂವಿನಿಂದ ಒಂದೊಂದು ಕುಟುಂಬಕ್ಕೆ ವರ್ಷಕ್ಕೆ ಕನಿಷ್ಠ ರೂ10 ರಿಂದ ರೂ 15,000  ಆದಾಯಗಳಿಸಬಹುದು~ ಎನ್ನುತ್ತಾರೆ ಕೃಷ್ಣಮೂರ್ತಿ.`ಸಮಸ್ಯೆ~ಗಳ ನೆಪಗಳೊಂದಿಗೆ ಹಳ್ಳಿ ಬಿಟ್ಟು ಜನರೆಲ್ಲ ಉದ್ಯೋಗವನ್ನರಿಸಿ ಪಟ್ಟಣ ಸೇರುತ್ತಿರುವ ಈ ದಿನಗಳಲ್ಲಿ ರುದ್ರಾಕ್ಷಿ ಹೂವಿನಂತಹ ಪುಷ್ಪ ಕೃಷಿ ಅಳವಡಿಸಿಕೊಂಡು ಕನಕಪುರ ತಾಲ್ಲೂಕಿನ ಕೆಲವು ಭೂ ರಹಿತರು ಹಳ್ಳಿಗಳಲ್ಲೇ ಉಳಿದಿದ್ದಾರೆ. ಈ ಹೂವು ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿದೆ.`ಕೃಷಿ ಉತ್ಪನ್ನಗಳು ಸ್ಥಳದಲ್ಲೇ ಮೌಲ್ಯವರ್ಧಿತವಾಗಬೇಕು. ಮಾರುಕಟ್ಟೆ(ಗ್ರಾಹಕರು) ರೈತರ ಮನೆ ಬಾಗಿಲಿಗೆ ಬರಬೇಕು~ ಎಂಬ ಸಿದ್ಧಾಂತ ಕೂಡ ಈ ಪುಷ್ಪ ಕೃಷಿ ವಿಧಾನದಲ್ಲಿ ಸಾಕಾರಗೊಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.