ಮಂಗಳವಾರ, ಮೇ 18, 2021
23 °C

ಮನೆ ಮನೆ ದಸರಾ; ಮೈಸೂರು ಊಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕಳೆದ ವರ್ಷದಂತೆ ಈ ಬಾರಿಯೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಆರಂಭಕ್ಕೂ ಒಂದು ವಾರ ಮೊದಲೇ ದಸರಾ ಸಂಭ್ರಮ ಕಳೆ ಕಟ್ಟಲಿದೆ.ಸೆ.17 ರಿಂದ ಅಕ್ಟೋಬರ್ 6ರ ವರೆಗೆ ನಗರದ ಎಲ್ಲ 65 ವಾರ್ಡ್‌ಗಳಲ್ಲಿ `ಮನೆ ಮನೆ ದಸರಾ~ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ಸೆ. 28 ರಿಂದ ಅಕ್ಟೋಬರ್ 6ರ ವರೆಗೆ ನಡೆಯಲಿರುವ 401ನೇ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸುವ ಪ್ರವಾಸಿಗರಿಗೆ ರುಚಿ, ಶುಚಿಯಾದ ಮೈಸೂರು ಊಟವೂ ಲಭ್ಯವಾಗಲಿದೆ.ದೇಶೀಯ ತಿಂಡಿ, ತಿನಿಸಗಳೊಂದಿಗೆ ನಾಡಿನ ಸಂಸ್ಕೃತಿಯ ಪ್ರತೀಕವಾದ ಮೈಸೂರು ಮಲ್ಲಿಗೆ, ಮೈಸೂರು ಪಾಕ್, ಮೈಸೂರು ಪೇಟ, ವೀಳ್ಯದೆಲೆ, ಶ್ರೀಗಂಧ, ಸಿಲ್ಕ್, ಟಾಂಗಾ, ಪೇಂಟಿಂಗ್ಸ್ ಮುಂತಾದ ವಿಷಯಗಳ ಬಗ್ಗೆ ಸ್ವದೇಶಿ ಹಾಗೂ ವಿದೇಶಿ ಪ್ರವಾಸಿಗರಿಗೆ ಮಾಹಿತಿ ನೀಡಲಾಗುತ್ತಿದೆ.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮೇಯರ್ ಪುಷ್ಪಲತಾ ಟಿ.ಬಿ ಚಿಕ್ಕಣ್ಣ, `ಕಳೆದ ವರ್ಷದಿಂದ ಮನೆ ಮನೆ ದಸರಾ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಈ ವರ್ಷವೂ ಕಲೆ, ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಆದರೆ, ವಿಜೇತರಿಗೆ ಪ್ರಶಸ್ತಿ ಪತ್ರ ಮಾತ್ರ ವಿತರಿಸಲಾಗುತ್ತಿದ್ದು, ನಗದು ಬಹುಮಾನ ಇರುವುದಿಲ್ಲ.ಇದಕ್ಕಾಗಿ ಪ್ರತಿ ವಾರ್ಡ್‌ಗೆ 25 ಸಾವಿರ ರೂಪಾಯಿ ಮೀಸಲಾಗಿ ಇಡಲಾಗಿದೆ~ ಎಂದು ವಿವರಿಸಿದರು.

`ನವರಾತ್ರಿ ದಿನಗಳಲ್ಲಿ ಪ್ರತಿ ದಿನವೂ ಮನೆಯ ಮುಂಭಾಗದ ಆವರಣವನ್ನು ಸ್ವಚ್ಛಗೊಳಿಸಿ, ರಂಗೋಲಿ ಹಾಕಬೇಕು. ಮನೆ ಬಾಗಿಲಿಗೆ ಹಸಿರು ತೋರಣ ಕಟ್ಟಬೇಕು, ಗೂಡು ದೀಪವನ್ನು ತೂಗುಹಾಕಬೇಕು. ಪ್ರತಿ ದಿನ ರಾತ್ರಿ ಮನೆ ಮುಂದೆ ದೀಪಾವಳಿ ಹಬ್ಬದ ಮಾದರಿಯಲ್ಲಿ ದೀಪಗಳನ್ನು ಹಚ್ಚುವ ಮೂಲಕ ಎಲ್ಲ ಕುಟುಂಬಗಳೂ ದಸರಾ ಹಬ್ಬದಲ್ಲಿ ಪಾಲ್ಗೊಳ್ಳಬೇಕು~ ಎಂದು ಮನವಿ ಮಾಡಿದರು.ದಸರಾ ಗೊಂಬೆ ಪ್ರದರ್ಶನ: `ಸೆ. 28ರಿಂದ ಅ.6ರ ವರೆಗೆ ಪ್ರತಿ ವಾರ್ಡ್‌ಗಳಲ್ಲಿ ದಸರಾ ಗೊಂಬೆ ಪ್ರದರ್ಶನ ಏರ್ಪಡಿಸಲಾಗಿದೆ.ಅತ್ಯುತ್ತಮವಾಗಿ ದಸರಾ ಗೊಂಬೆ ಕೂರಿಸುವ ಹತ್ತು ಮನೆಗಳನ್ನು ಆಯ್ಕೆ ಮಾಡಿ ಹೊರದೇಶ ಹಾಗೂ ರಾಜ್ಯಗಳಿಂದ ಬರುವ ಪ್ರವಾಸಿಗರಿಗೆ ತೋರಿಸಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ನಗರದ ಹೋಟೆಲ್ ಮಾಲೀಕರ ಸಂಘದ ನೆರವು ಕೋರಲಾಗಿದ್ದು, ಪ್ಯಾಕೇಜ್ ಮಾದರಿಯಲ್ಲಿ ಮನೆಗಳ ಭೇಟಿಯನ್ನು ಏರ್ಪಡಿಸಲಾಗುವುದು~ ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.