ಗುರುವಾರ , ಮೇ 6, 2021
23 °C

ಮನ್ಸೂರ್ ಸಂಗೀತೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀಯ ಸಂಗೀತದ ದಿಗ್ಗಜ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಭೌತಿಕವಾಗಿ ನಮ್ಮಂದಿಗಿಲ್ಲ. ಆದರೆ ರಾಗರೂಪಿಯಾಗಿ ನಾದರೂಪಿಯಾಗಿ ನಮ್ಮಂದಿಗೆ ಇದ್ದಾರೆ.ಪೀಳಿಗೆಯಿಂದ ಪೀಳಿಗೆ ಅವರನ್ನು ಗಾಯನದ ಮೂಲಕವೇ ಅನುಭವಿಸುತ್ತ ಹೋಗುತ್ತದೆ. ಮನ್ಸೂರರು ಬದುಕಿದ್ದರೆ ಈಗ ಅವರಿಗೆ ನೂರು ತುಂಬಿರುತ್ತಿತ್ತು. ಹಾಗೆಂದೇ ಈಗ ಅವರ ಹೆಸರಿನಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳೂ ಶತಾಬ್ದಿಯ ಪ್ರಭಾವಳಿಯನ್ನು ಹೊಂದಿರುತ್ತವೆ. ಬೆಂಗಳೂರು ಕಿಡ್ನಿ ಫೌಂಡೇಷನ್ (ಬಿಕೆಎಫ್) ಜೊತೆ ಬದುಕಿನ ಕೊನೆಯ ದಿನಗಳಲ್ಲಿ ನಿಕಟರಾದವರು ಮನ್ಸೂರ್. ಮೂತ್ರ ಪಿಂಡ ಸಮಸ್ಯೆ ಚಿಕಿತ್ಸೆಗಾಗಿ ಬಿಕೆಎಫ್‌ಗೆ ಬಂದ ಅವರು ಗುಣಮುಖರಾದರು. ಆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ತಮ್ಮ ಸಂಗೀತ ಕಛೇರಿ ನಡೆಸಿದ ಅವರು ಅದರಿಂದ ಬಂದ ಹಣವನ್ನೆಲ್ಲವನ್ನೂ ಬಿಕೆಎಫ್‌ಗೆ ಅದರ ಜನ ಸೇವಾ ಕೈಂಕರ್ಯಕ್ಕೆ ಧಾರೆ ಎರೆದರು. ಮನ್ಸೂರ್ ಕಾಲಾನಂತರದಲ್ಲಿ ಅವರದೇ ಸ್ಮರಣೆಯಲ್ಲಿ ಅಖಿಲ ಭಾರತ ಮಟ್ಟದ ಸಂಗೀತೋತ್ಸವ ನಡೆಸಲು ಅದೊಂದು ಪ್ರೇರಣೆಯಾಯಿತು. ಖ್ಯಾತ ಹಿಂದೂಸ್ತಾನಿ ಕಲಾವಿದರಿಗೆ 50 ಸಾವಿರ ನಗದು, ಮನ್ಸೂರರ ಕಂಚಿನ ಪುತ್ಥಳಿ ನೀಡಿ ಗೌರವಿಸುವ ಮನ್ಸೂರ್ ಪುರಸ್ಕಾರದ ಪರಂಪರೆಗೂ ನಾಂದಿಯಾಯಿತು. ಕಳೆದ ಏಳು ವರ್ಷಗಳಲ್ಲಿ ಈ ಪ್ರಶಸ್ತಿಯನ್ನು ಪ್ರಸಿದ್ಧ ಕಲಾವಿದರಾದ ಡಿ.ಕೆ. ದಾತಾರ್, ವಸುಂಧರಾ ಕೋಂಕಾಳಿಮಠ್, ರಾಜಶೇಖರ ಮನ್ಸೂರ್, ಧೋಂಡೂತಾಯಿ ಕುಲಕರ್ಣಿ (ಗಾಯನ), ಬಿಶ್ವಜಿತ್ ರಾಯ್ ಚೌಧರಿ (ಸರೋದ್), ಸದಾಶಿವ ಗರುಡ್ (ತಬಲಾ) ಹಾಗೂ ಹಾರ್ಮೋನಿಯಂ ಪಟು ಆರ್.ಕೆ. ಬಿಜಾಪುರೆ ಅವರಿಗೆ ನೀಡಿ ಗೌರವಿಸಲಾಗಿದೆ. ಎಂಟನೇ ವರ್ಷದ ಪ್ರಶಸ್ತಿಗೆ ಹಿರಿಯ ಗಾಯಕ, ಕೋಲ್ಕೋತ್ತಾದ ಐಟಿಸಿ ಸಂಗೀತ ಸಂಶೋಧನಾ ಅಕಾಡೆಮಿಯ ಹಿರಿಯ ಸಂಗೀತ ಗುರು ಪಂಡಿತ್ ಉಲ್ಲಾಸ್ ಕಶಲ್ಕರ್ ಅವರನ್ನು ಆಯ್ಕೆ ಮಾಡಲಾಗಿದೆ.ಇದೇ ಶನಿವಾರ, ಭಾನುವಾರ ಸಂಗೀತೋತ್ಸವ ನಡೆಯಲಿದ್ದು, ಮೊದಲ ದಿನ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹಿರಿಯ ಸಂಗೀತ ಕಲಾವಿದೆ ಲಲಿತ್ ಜೆ. ರಾವ್ ಮತ್ತು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ಜೈರಾಜ್ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಒಂದು ಅಧಿವೇಶನದಲ್ಲಿ ಇಬ್ಬರು ಕಲಾವಿದರ ಕಛೇರಿ ಇರುತ್ತದೆ. ತಲಾ ಅಧಿವೇಶನಕ್ಕೆ ಕೇವಲ ರೂ. 49 ಮಾತ್ರವೇ ಪ್ರವೇಶ ದರ. ನಾಲ್ಕು ಕಲಾವಿದರ ಸುಶ್ರಾವ್ಯ ಗಾಯನಕ್ಕೆ ಶ್ರೋತೃಗಳು ನೀಡಬೇಕಾದ ಕೊಡುಗೆ ರೂ.98 ಮಾತ್ರ. ಇದನ್ನು ಕೊಡುಗೆ ಎನ್ನಲು ಕಾರಣವಿದೆ.ಸಂಗೀತೋತ್ಸವದಿಂದ ಬರುವ ಮೊತ್ತವನ್ನೆಲ್ಲ ಬಿಕೆಎಫ್ ಬಡ ಅರ್ಹ ರೋಗಿಗಳ ಉಚಿತ ಡಯಾಲಿಸಿಸ್‌ಗೆ ವಿನಿಯೋಗಿಸುತ್ತದೆ.  ಟಿಕೆಟ್ ಸಿಗುವ ಸ್ಥಳ: ಕೆ.ಸಿ. ದಾಸ್ (ಎಂ.ಜಿ. ರಸ್ತೆ: 2558 7003); ಕ್ಯಾಲಿಪ್ಸೊ (ಜಯನಗರ 3ನೇ ಬ್ಲಾಕ್: 2245 2368); ಚಾನೆಲ್-9 (ಜಯನಗರ 7ನೇ ಬ್ಲಾಕ್); ಲ್ಯಾಂಡ್ ಮಾರ್ಕ್, ಫೋರಂ (ಕೋರಮಂಗಲ:4240 4240) ಹಾಗೂ ಬಿಕೆಎಫ್ ಆಡಳಿತ ಕಚೇರಿ (2666 4900). ವಿವರಗಳಿಗೆ 98454 24053.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.