ಗುರುವಾರ , ಮೇ 19, 2022
25 °C

ಮಬ್ಬು ಕತ್ತಲಿನಲ್ಲಿ ಮೂಡಿದ ಬೆಳಕು...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆ ಊರಲ್ಲಿ ನಾನೂರಕ್ಕೂ ಹೆಚ್ಚು ವಿಧವೆಯರಿದ್ದಾರೆ. ಬಹುತೇಕ ವಿಧವೆಯರು ಇನ್ನೂ ಬದುಕಿನ ಅರ್ಧದಾರಿಯಲ್ಲಿದ್ದವರು. ಕಣ್ಣು ತುಂಬಾ ಕನಸುಗಳನ್ನು ಹೊತ್ತವರು. ಬಾಳಿನ ಬೆಳಿಗ್ಗೆಯನ್ನೇ ಇನ್ನೂ ಮುಗಿಸದವರು. ಆದರೆ ಅವರ ಗಂಡಂದಿರ ಅಚಾತುರ್ಯದಿಂದ ಅನಿವಾರ್ಯವಾಗಿ ಬಾಳಿನ ಮುಸ್ಸಂಜೆಗೆ ಬಂದು ನಿಂತವರು. ಅವರ ಬಾಳಿನಲ್ಲಿ  ಕನಸುಗಳು ಬಿಚ್ಚಿಕೊಳ್ಳುವುದಕ್ಕೆ ಮೊದಲೇ ಬದುಕು ದಡದ ಅಂಚಿಗೆ ಬಂದು ನಿಂತು ಬಿಟ್ಟಿದೆ. ಕೈಯಲ್ಲಿ, ಕಂಕುಳಲ್ಲಿ  ಹಸುಗೂಸನ್ನು ಇಟ್ಟುಕೊಂಡು ದಿಕ್ಕೆಟ್ಟು ನಿಂತಿದ್ದಾರೆ. ಬದುಕಿನ ಅರ್ಧದಾರಿಯ ಪಯಣ ಅವರನ್ನು ಬೆಚ್ಚಿ ಬೀಳಿಸಿದೆ. ಮುಂದಿನ ದಾರಿ ಕಾಣದೆ ಕತ್ತಲು ಆವರಿಸಿದೆ.ಹೀಗೆ ಅವರ ಬದುಕು ಅಯೋಮಯವಾಗುವುದಕ್ಕೆ ಅವರ ಗಂಡಂದಿರ ಕುಡಿತದ ಚಟವೇ ಕಾರಣ. ದುಡಿದ ಹಣವನ್ನೆಲ್ಲಾ ಕುಡಿತದ ಮಡಿಲಿಗೆ ಹಾಕಿ ಸಂಸಾರವನ್ನು ಕುರುಕ್ಷೇತ್ರ ಮಾಡಿಕೊಂಡಿದ್ದ ಗಂಡಂದಿರು ಬಾಳಪಯಣದ ಅರ್ಧದಾರಿಯಲ್ಲಿಯೇ ಹೆಂಡತಿ ಮಕ್ಕಳನ್ನು ಬಿಟ್ಟು ಕಾಣದ ಊರಿಗೆ ತೆರಳಿದ್ದಾರೆ. ಇದು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ವಿಧವೆಯರ ಕತೆ. ಸುಮಾರು 10  ಸಾವಿರ ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮದಲ್ಲಿ ಶೇ 90ಕ್ಕೂ ಹೆಚ್ಚು ಮಂದಿ ಪರಿಶಿಷ್ಟರೇ ಇದ್ದಾರೆ. ಕುಡಿತ ಎಂಬ ಮಾರಿ ಬಹುತೇಕ ಮನೆಯನ್ನು ಒಳಹೊಕ್ಕು ಕುಣಿದಾಡುತ್ತಿದೆ. ಆರೋಗ್ಯ, ಹಣ, ನೆಮ್ಮದಿ ಎಲ್ಲವನ್ನೂ ಕಸಿದುಕೊಂಡು ಸಂಸಾರವನ್ನು ಬೀದಿಯಲ್ಲಿ ನಿಲ್ಲಿಸಿದೆ. ಕುಡಿತದ ಚಟಕ್ಕೆ ಇಲ್ಲಿನ ಜನರು ಎಷ್ಟು ದಾಸರಾಗಿದಾರೆ ಎಂದರೆ ಇಲ್ಲಿ ರುವ ಏಕೈಕ ಮದ್ಯದಂಗಡಿಯಲ್ಲಿ ಪ್ರತಿ ನಿತ್ಯ ಕನಿಷ್ಠ 80 ಸಾವಿರ ರೂಪಾಯಿ ವ್ಯಾಪಾರವಾಗುತ್ತದೆ.ಇಂತಿರ್ಪ ಕಟ್ಟೆಮಳಲವಾಡಿ ಎಂಬ ಗ್ರಾಮದಲ್ಲಿ ಈಗ ಬೆಳಕು ಮೂಡತೊಡಗಿದೆ. ಒಂದು ಕಾಲದಲ್ಲಿ ಕುಡಿತಕ್ಕೆ  ದಾಸನಾಗಿ ಆರೋಗ್ಯ, ಹಣ, ಗೌರವ ಘನತೆಯನ್ನು ಕಳೆದುಕೊಂಡಿದ್ದ ವ್ಯಕ್ತಿಯೇ ಈಗ ಜ್ಞಾನೋದಯವಾಗಿ ಕುಡಿತವನ್ನು ಬಿಟ್ಟು ಇನ್ನುಳಿದ ಯುವಕರ ಕುಡಿತವನ್ನು ಬಿಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇದಕ್ಕಾಗಿಯೇ ಅವರು ‘ಬೆಳಕು’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಈ ಸಂಸ್ಥೆಯ ಪ್ರಯತ್ನದ ಫಲವಾಗಿ ಈಗ ಒಂದಿಷ್ಟು ಮಂದಿ ಕುಡಿತವನ್ನು ಬಿಟ್ಟಿದ್ದಾರೆ. ಅವರ ಮನೆಗಳಲ್ಲಿ ಈಗ ಹೊಸ ಬೆಳಕು ಮೂಡತೊಡಗಿದೆ. ಆ ಮೂಲಕ ಇನ್ನಷ್ಟು ಯುವತಿಯರು ವಿಧವೆಯರಾಗುವುದನ್ನು ತಪ್ಪಿಸುವ ಕಾರ್ಯ ನಡೆಯುತ್ತಿದೆ.ಇಂತಹ ಪ್ರಯತ್ನಕ್ಕೆ ಈಗ ಮಹಿಳೆಯರಿಂದಲೂ ಉತ್ತಮ  ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತನ್ನ ಗಂಡ ಕುಡಿತದ ಚಟ ಬಿಟ್ಟಿದ್ದನ್ನು ದೇವಮ್ಮ ರಸವತ್ತಾಗಿ ವರ್ಣಿಸುತ್ತಾಳೆ. ಗಂಡನ ಕುಡಿತದ ಕಾಲದ ಕಷ್ಟವನ್ನು ನೆನಸಿಕೊಂಡು ನಡುಗಿದರೂ ಈಗಲಾದರೂ ಅದನ್ನು ಬಿಟ್ಟನಲ್ಲ ಎಂಬ ಸಮಾಧಾನ ಅವಳದ್ದು.  ಇವರಿಗೆ 2 ಗಂಡು ಮಕ್ಕಳು ಮತ್ತು ಒಬ್ಬಳು ಪುತ್ರಿ ಇದ್ದಾರೆ. ಮಗಳ ಮದುವೆಯ ಸಂದರ್ಭದಲ್ಲಿ ಆದ ಅವಮಾನವೇ ಗಂಡ ಕುಡಿತ ಬಿಡಲು ಕಾರಣ ಎಂದು ಆಕೆ ಹೇಳುತ್ತಾಳೆ. ‘ಕುಡುಕನ ಮಗನಿಗೆ ಹೆಣ್ಣು ಯಾರು ಕೊಡ್ತಾರೆ ಸಾಮಿ’ ಎಂದು ಪ್ರಶ್ನೆ ಮಾಡುವ ಆಕೆ ಈಗ ತನ್ನ ಗಂಡ ಪ್ರಾಣ ಹೋಗತ್ತೆ ಅಂದರೂ ಕುಡಿಯಲ್ಲ ಸಾಮಿ ಎಂದು  ಹೆಮ್ಮೆಯಿಂದಲೇ ಹೇಳುತ್ತಾಳೆ. ಕುಡಿತ ಬಿಟ್ಟ ನಂತರವೇ ನಾವು ನೆಮ್ಮದಿಯ ಬದುಕು ಕಾಣುತ್ತಿದ್ದೇವೆ ಎಂದು ಹೇಳುವ ದೇವಮ್ಮನಿಗೆ ಇನ್ನಷ್ಟು ಮಂದಿಯ ಕುಡಿತ ಬಿಡಿಸುವ ತುಡಿತವೂ ಇದೆ.2 ವರ್ಷದ ಅವಧಿಯಲ್ಲಿ ಕುಡಿತವನ್ನು ಬಿಟ್ಟ ಸಿದ್ದರಾಜುಗೆ ಐದು  ಹೆಣ್ಣು ಮಕ್ಕಳು. ಕೊನೆಯವಳು ಮಾತ್ರ ಕೊಂಚ ವಿದ್ಯಾಭ್ಯಾಸ ಮಾಡಿ ಈಗ ಎರಡನೇ ಪಿಯುಸಿಗೆ ಬಂದಿದ್ದಾಳೆ. ಉಳಿದ ಮಕ್ಕಳ ವಿದ್ಯಾಭ್ಯಾಸ ಅರ್ಧಕ್ಕೇ ನಿಂತಿದೆ. ‘ನಮ್ಮ ಅಪ್ಪ ಬೆಳಿಗ್ಗೆ ಬೆಳಿಗ್ಗೆಯೇ ಕುಡಿಯುತ್ತಿದ್ದ. ದುಡಿದ ಹಣವನ್ನೆಲ್ಲಾ ಕುಡಿತಕ್ಕೆ ಕೊಟ್ಟು ಮನೆಗೆ ಬಂದು ಗಲಾಟೆ ಮಾಡುತ್ತಿದ್ದ. ಹೆಂಡತಿ ಮಕ್ಕಳ ಮೇಲೆ ಹಲ್ಲೆ ಮಾಡುತ್ತಿದ್ದ. ಬೆಳಿಗ್ಗೆ 5 ಗಂಟೆಗೆ ಎದ್ದರೂ ಕುಡಿತ. 6 ಗಂಟೆಗೆ ಎದ್ದರೂ ಕುಡಿತ. ಈಗ ಅಪ್ಪ ಕುಡಿತವನ್ನು ಬಿಟ್ಟ  ಮೇಲೆ ಆತ ದುಡಿಯುವ ಹಣವೆಲ್ಲಾ ಮನೆಗೇ ಬರುತ್ತಿದೆ. ಗುಡಿಸಿಲಿನ ಜಾಗದಲ್ಲಿ ಹೆಂಚಿನ ಮನೆ ಬಂದಿದೆ. ಅಪ್ಪ ಅಮ್ಮನ ಮೇಲೆ ಕೈಮಾಡುವುದನ್ನು ಬಿಟ್ಟಿದ್ದಾನೆ. ಹೆಣ್ಣು ಮಕ್ಕಳ ಮದುವೆ ಮಾಡುವುದಕ್ಕೆ ಯತ್ನ ನಡೆಸಿದ್ದಾನೆ. ವಿದ್ಯಾಭ್ಯಾಸ ಮಾಡಿಸುವುದರ ಬಗ್ಗೆಯೂ ಆತನಿಗೆ ಒಲವು ಮೂಡಿದೆ’ ಎಂದು ಸಂತೋಷ ಹಂಚಿಕೊಳ್ಳುತ್ತಾರೆ. ಅವರ ಮುಖದಲ್ಲಿಯೂ ಗೆಲುವು ಕಾಣತೊಡಗಿದೆ. ಗಾರೆ ಕೆಲಸ ಮಾಡುವ ಸೋಮಶೇಖರನ ಪತ್ನಿ ಕೂಡ ತನ್ನ ಗಂಡ ಕುಡಿತ ಬಿಟ್ಟಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಾಳೆ. ರಾಚೋ, ದಾಸಯ್ಯ, ನಾಗೇಂದ್ರ ಮುಂತಾದವರ ಮನೆಯ ಮಹಿಳೆಯರೂ ನೆಮ್ಮದಿಯ  ದಿನಗಳನ್ನು ಈಗ ಕಾಣುತ್ತಿದ್ದಾರೆ.ಗ್ರಾಮದಲ್ಲಿ ಕುಡಿತದ ವಿರುದ್ಧ ಆಂದೋಲನ ಆರಂಭಿಸಿರುವ ‘ಬೆಳಕು’ ಸಂಸ್ಥೆ ಸಂಸ್ಥಾಪಕ ನಿಂಗರಾಜ ಮಲ್ಲಾಡಿ ಈ ಕುಡಿತ ಬಿಟ್ಟ ಗಂಡಸರನ್ನು ಹಾಗೂ ಗಂಡಂದಿರು ಕುಡಿತ ಬಿಟ್ಟಿದ್ದರಿಂದ ಸಂತೋಷಗೊಂಡ ಮಹಿಳೆಯರನ್ನೂ ತಮ್ಮ ಆಂದೋಲನಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅಲ್ಲದೆ ಅನಾಥ ಹೆಣ್ಣು ಮಕ್ಕಳ ಆಶ್ರಯ ಧಾಮವನ್ನೂಆರಂಭಿಸಿದ್ದಾರೆ.   ನಿಂಗರಾಜ ಮಲ್ಲಾಡಿ ಅವರ ಯತ್ನಕ್ಕೆ ಹುಣಸೂರು ಶಾಸಕ ಎಚ್.ಪಿ.ಮಂಜುನಾಥ ಕೂಡ ಕೈಜೋಡಿಸಿದ್ದಾರೆ.ಕುಡಿತದ ಮಾರಿಯಿಂದ ಗಂಡನನ್ನು ಕಳೆದುಕೊಂಡವರಿಗೆ ವಿಧವಾ ವೇತನ ನೀಡುವುದರ ಜೊತೆಗೆ ಯಾವುದಾದರೂ ಒಂದು ವೃತ್ತಿಯಲ್ಲಿ ಕೌಶಲ್ಯವನ್ನು ಹೇಳಿಕೊಟ್ಟು ಅವರ ಮುಂದಿನ ಬದುಕು ನೆಮ್ಮದಿಯಿಂದ ಕೂಡಿರಲು ಯತ್ನಿಸಲಾಗುತ್ತಿದೆ. ಮಕ್ಕಳಿಗೆ ಬಸ್ ಪಾಸ್, ನೋಟ್‌ಬುಕ್‌ಗಳನ್ನೂ ಶಾಸಕರು ವಿತರಿಸುತ್ತಿದ್ದಾರೆ. ಅಲ್ಲದೆ ಕುಡಿತ ಬಿಟ್ಟವರಿಗೆ ಉದ್ಯೋಗ ಕಲ್ಪಿಸುವುದರ ಬಗ್ಗೆಯೂ ಯೋಜನೆ ರೂಪಿಸಿದ್ದಾರೆ. ಪ್ರತಿ ವರ್ಷ ಗಾಂಧಿ ಜಯಂತಿಯ ದಿನ ಕುಡಿತ ಬಿಟ್ಟವರನ್ನು ಸನ್ಮಾನಿಸಲಾಗುತ್ತದೆ.‘ಈಗ ನಾವು ಮಾಡಿರುವ ಕಾರ್ಯ ಬಹಳ ದೊಡ್ಡದೇನಲ್ಲ. ಕಳೆದ ಒಂದು ವರ್ಷದ ಅವಧಿಯಲ್ಲಿ 28 ಮಂದಿ ಮಾತ್ರ ಕುಡಿತವನ್ನು ಬಿಟ್ಟಿದ್ದಾರೆ. ಅವರಿಗೆ ಪುನರ್ ವಸತಿಯನ್ನು ಕಲ್ಪಿಸಲು ಶಾಸಕರ ನೆರವಿನಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಆದರೆ ಕಟ್ಟೆಮಳಲವಾಡಿ ಗ್ರಾಮದಲ್ಲಿ ಎಲ್ಲ ಜಾತಿಯ ಮನೆಗಳಲ್ಲಿಯೂ ಕುಡಿತದ ಮಾರಿ ಹೊಕ್ಕಿದ್ದಾಳೆ. ಸಂಸಾರಗಳ ನೆಮ್ಮದಿ ಕೆಡಿಸಿದ್ದಾಳೆ. ಮನೆಗಳನ್ನು ಸಾವಿನ ಮನೆಗಳನ್ನಾಗಿ ಮಾಡಿದ್ದಾಳೆ.ಇಂತಹ ಕುಡಿತದ ಮಾರಿಯನ್ನು ಮನೆಗಳಿಂದ, ಜನರ ಮನಗಳಿಂದ ತೊಲಗಿಸುವುದು ನಮ್ಮ ಗುರಿ. ಅದಕ್ಕೆ ಗ್ರಾಮದ ಮಹಿಳೆಯರ, ತಾಯಂದಿರ ಸಹಕಾರ ಬೇಕು’ ಎನ್ನುತ್ತಾರೆ ನಿಂಗರಾಜ ಮಲ್ಲಾಡಿ. ಅವರನ್ನು 9845286436 ಮೂಲಕ ಸಂಪರ್ಕಿಸಬಹುದು.

 ಕಟ್ಟೆಮಳಲವಾಡಿಯಲ್ಲಿ ಈಗ ಕತ್ತಲೆ ಕಳೆದು ಬೆಳಕು ಮೂಡತೊಡಗಿದೆ. ವಿಧವೆಯರ ಬಾಳಲ್ಲಿಯೂ ನೆಮ್ಮದಿ ಕಾಣಿಸತೊಡಗಿದೆ.  ಕುಡುಕರ ಪತ್ನಿಯರ ಮೊಗದಲ್ಲಿ ಈಗ ಸಂತಸದ ನಗೆ ಮೂಡತೊಡಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.