ಗುರುವಾರ , ಮಾರ್ಚ್ 4, 2021
18 °C

ಮಯೂಖಾ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಯೂಖಾ ದಾಖಲೆ

ಬೆಂಗಳೂರು: ಭರವಸೆ ಹುಡುಗಿ ಕೇರಳದ ಮಯೂಖಾ ಜಾನಿ ಅವರು ಶನಿವಾರ ಇಲ್ಲಿ ಆರಂಭವಾದ 51ನೇ ರಾಷ್ಟ್ರೀಯ ಸೀನಿಯರ್ ಅಂತರ ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಲಾಂಗ್ ಜಂಪ್‌ನಲ್ಲಿ ಕೂಟ ದಾಖಲೆ ನಿರ್ಮಿಸಿದರು.ಆದರೆ ಕೊಂಚದರಲ್ಲಿ ವಿಶ್ವ ಅಥ್ಲೆಟಿಕ್  ಚಾಂಪಿಯನ್‌ಷಿಷ್‌ಗೆ ಅರ್ಹತೆ ಪಡೆಯುವುದರಲ್ಲಿ ಅವರು ವಿಫಲರಾದರು. ಕಂಠೀರವ ಕ್ರೀಡಾಂಗಣದಲ್ಲಿ ಸಂಜೆ ನಡೆದ ಮಹಿಳೆಯರ ವಿಭಾಗದ ಈ ಸ್ಪರ್ಧೆಯಲ್ಲಿ ಮಯೂಖಾ 6.63 ಮೀಟರ್ ದೂರ ಜಿಗಿದರು. ತಮ್ಮ ಆಪ್ತ ಸ್ನೇಹಿತೆ ಹಾಗೂ ಅಂಗಳದಲ್ಲಿ ಎದುರಾಳಿ ಎಂ.ಎ.ಪ್ರಜುಷಾ ಅವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದರು.ಮಯೂಖಾ ಕೇವಲ ಎರಡು ಸೆ.ಮೀ.ನಿಂದ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯುವ ಅವಕಾಶ ಕಳೆದುಕೊಂಡರು. ಅರ್ಹತೆ ಗಿಟ್ಟಿಸಲು 6.65 ಮೀ. ದೂರ ಜಿಗಿಯಬೇಕಿತ್ತು. ಲಾಂಗ್ ಜಂಪ್‌ನಲ್ಲಿ ಅವರ ವೈಯಕ್ತಿಕ ಸಾಧನೆ 6.64 ಮೀಟರ್.ಆದರೆ 2006ರಲ್ಲಿ ಅಂಜು ಬಿ. ಜಾರ್ಜ್ (6.53) ನಿರ್ಮಿಸಿದ್ದ ಕೂಟ ದಾಖಲೆಯನ್ನು ಮಯೂಖಾ ಅಳಿಸಿ ಹಾಕಿದರು. ಈ ವಿಭಾಗದ ರಾಷ್ಟ್ರೀಯ ದಾಖಲೆ 6.83. ಇದು ಕೂಡ ಅಂಜು ಹೆಸರಿನಲ್ಲಿದೆ. 10000 ಮೀ. ದೂರದ ಓಟದಲ್ಲಿ ಕೇರಳದ ಪ್ರೀಜಾ ಶ್ರೀಧರನ್ ಮೊದಲ ಸ್ಥಾನ ಪಡೆದರು. ಅಶ್ವಿನಿ ಅಕ್ಕುಂಜೆ 400 ಮೀ. ಓಟದಲ್ಲಿ ಫೈನಲ್‌ಗೆ ಅರ್ಹತೆ ಪಡೆದರು. ಚಾಂಪಿಯನ್‌ಷಿಪ್‌ಗೆ ಶನಿವಾರ ಮಧ್ಯಾಹ್ನ ಗೃಹ ಸಚಿವ ಆರ್.ಅಶೋಕ್ ಚಾಲನೆ ನೀಡಿದರು. ಕರ್ನಾಟಕ ಅಥ್ಲೆಟಿಕ್ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ ಹಾಗೂ ಕೆಎಎ ಕಾರ್ಯದರ್ಶಿ ಸತ್ಯನಾರಾಯಣ ಉಪಸ್ಥಿತರಿದ್ದರು.ಫಲಿತಾಂಶ ಇಂತಿವೆ: ಮಹಿಳೆಯರ ವಿಭಾಗ: ಲಾಂಗ್ ಜಂಪ್: ಮಯೂಖಾ ಜಾನಿ (ಕೇರಳ; 6.63 ಮೀ.)-1, ಎಂ.ಎ.ಪ್ರಜೂಷಾ (ಕೇರಳ; 6.47 ಮೀ.)-2; ಶಾಲೂ ಚೌಧರಿ (ನವದೆಹಲಿ; 6.24 ಮೀ.)-3. ಹ್ಯಾಮರ್ ಥ್ರೋ: ಮಂಜುಬಾಲಾ (ರಾಜಸ್ತಾನ; 55.94 ಮೀ.)-1, ಅನಿತಾ ಅಬ್ರಹಾಂ (ಕೇರಳ; 54.88 ಮೀ.)-2, ಸರಿತಾ (ಗುಜರಾತ್; 52.66 ಮೀ.)-3. 10000 ಮೀ.: ಪ್ರೀಜಾ ಶ್ರೀಧರನ್ (ಕೇರಳ; 34:30.48)-1,ಕವಿತಾ ರಾವತ್ (ಮಹಾರಾಷ್ಟ್ರ; 34:33.64)-2, ಎಲ್.ಸೂರ್ಯಾ (ತಮಿಳುನಾಡು; 35:27.18)-3. ಜಾವೆಲಿನ್ ಥ್ರೋ: ಸರಸ್ವತಿ (ತಮಿಳುನಾಡು; 52.00 ಮೀ.)-1, ಸುಮನ್ ದೇವಿ (ಉತ್ತರಪ್ರದೇಶ; 46.95)-2, ರೂಪಿಂದರ್ ಕೌರ್ (ಪಂಜಾಬ್; 46.11 ಮೀ.)-3.ಪುರುಷರ ವಿಭಾಗ: ಡಿಸ್ಕಸ್ ಥ್ರೋ: ಅರ್ಜುನ್ (ನವದೆಹಲಿ; 53.56 ಮೀ.)-1, ಸುನಿಲ್ ಕುಮಾರ್ (ಜಾರ್ಖಂಡ್; 51.23 ಮೀ.)-2, ವಿಕಾಸ್ ಪುಣಿಯಾ (ರಾಜಸ್ತಾನ; 49.17 ಮೀ.)-3. 10000 ಮೀ.: ಖೇತಾ ರಾಮ್ (ರಾಜಸ್ತಾನ; 29:20.35)-1, ಸುರೇಶ್ ಪಟೇಲ್ (ಉತ್ತರಪ್ರದೇಶ; 29:25.42)-2, ವಿ.ಎಲ್.ದೆಂಗೆ (ಮಹಾರಾಷ್ಟ್ರ; 30:10.45)-3.ಮಹಾರಾಷ್ಟ್ರ ಕೋಚ್ ಆಕ್ರೋಶ

ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಶ್ರದ್ಧಾ ಘುಲೆ ನಾಲ್ಕನೇ ಯತ್ನದಲ್ಲಿ 6.03 ಮೀ. ದೂರ ಜಿಗಿದರು. ಆದರೆ ಅಧಿಕಾರಿಗಳು 5.03 ಮೀ. ಎಂದು ಪ್ರಕಟಿಸಿದರು. ಇದರಿಂದ ಕುಪಿತರಾದ ಮಹಾರಾಷ್ಟ್ರ ಅಥ್ಲೆಟಿಕ್ ತಂಡದ ಕೋಚ್, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆದರೆ ಇದಕ್ಕೆ ಅಧಿಕಾರಿಗಳು ಕಿವಿಕೊಡಲಿಲ್ಲ.ಶ್ರದ್ಧಾ ಮತ್ತೊಂದು ಯತ್ನದಲ್ಲಿ 6.18 ಮೀ. ದೂರ ಜಿಗಿದರು. ಪ್ರೇಕ್ಷಕರು ಚಪ್ಪಾಳೆ ತಟ್ಟಿ ಅವರನ್ನು ಬೆಂಬಲಿಸಿದರು. ಲಾಂಗ್ ಜಂಪ್‌ನಲ್ಲಿ ಅವರ ವೈಯಕ್ತಿಕ ಸಾಧನೆ 6.30. ಶ್ರದ್ಧಾ ಟ್ರಿಪಲ್ ಜಂಪ್‌ನಲ್ಲಿ ಕಾಮನ್‌ವೆಲ್ತ್ ಯೂತ್ ಚಾಂಪಿಯನ್ ಕೂಡ. `ನೀವೇ ನೋಡಿದ್ದೀರಿ. ಈ ಬಗ್ಗೆ ನಾನೇನು ಹೇಳಲು ಸಾಧ್ಯ~ ಎಂದು ಶ್ರದ್ಧಾ ಸಿಟ್ಟಿನಿಂದ ಪ್ರತಿಕ್ರಿಯಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.