ಶನಿವಾರ, ಫೆಬ್ರವರಿ 27, 2021
31 °C

ಮರಕ್ಕೆ ಆಪತ್ತು

ಮಾಲತಿ ಭಟ್ Updated:

ಅಕ್ಷರ ಗಾತ್ರ : | |

ಮರಕ್ಕೆ ಆಪತ್ತು

1996-97ರ ಸಮಯ ಬೆಂಗಳೂರಿನ ಜನರಿಗೆ ಫ್ಲೈಓವರ್, ಅಂಡರ್‌ಪಾಸ್‌ಗಳ ಕಲ್ಪನೆಯೇ ಇರಲಿಲ್ಲ. ಹೆಚ್ಚುತ್ತಿರುವ ವಾಹನಗಳ ಒತ್ತಡದಿಂದ ಮೈಸೂರು ರಸ್ತೆಯಲ್ಲಿ ಪುರಭವನ- ಸಿರ್ಸಿ ಸರ್ಕಲ್ ಮಧ್ಯೆ ಫ್ಲೈಓವರ್ ನಿರ್ಮಿಸಲು ಸರ್ಕಾರ ನಿರ್ಧರಿಸಿತು.ಅದು ಬೆಂಗಳೂರಿನ ಮೊದಲ ಮೇಲ್ಸೇತುವೆ. ಇಂದಿಗೂ ಅದೇ ನಗರದೊಳಗಿರುವ ಅತಿ ಉದ್ದದ ಫ್ಲೈಓವರ್. ಅದಕ್ಕಾಗಿ ಹಲವು ಮರಗಳನ್ನು ಕಡಿಯಲಾಯಿತು.

ನಂತರ ಹತ್ತಾರು ಫ್ಲೈಓವರ್, ಅಂಡರ್‌ಪಾಸ್‌ಗಳನ್ನು ನಗರದ ವಿವಿಧ ದಿಕ್ಕಿನಲ್ಲಿ ನಿರ್ಮಿಸಲಾಯಿತು.ಅದಕ್ಕೆಲ್ಲ ಸರ್ಕಾರ, ಬಿಡಿಎ, ಬಿಬಿಎಂಪಿ ಕೊಟ್ಟ ಕಾರಣ `ವಾಹನಗಳ ಒತ್ತಡ, ಸಂಚಾರ ದಟ್ಟಣೆ~. ಆನಂದ್ ರಾವ್ ವೃತ್ತದ ಫ್ಲೈಓವರ್‌ಗಾಗಿ ಶೇಷಾದ್ರಿ ರಸ್ತೆಯ ಸಾಲು ಮರಗಳು ಕೊಡಲಿಗೆ ಆಹುತಿಯಾದವು. ಇತ್ತೀಚೆಗೆ ಮೆಟ್ರೊ ಕಾಮಗಾರಿಗಾಗಿ ಸಾಕಷ್ಟು ಮರಗಳು ಬಲಿಯಾಗಿವೆ.ಕೆಲ ಪ್ರದೇಶಗಳಲ್ಲಿ, `ನಮಗೆ ಫ್ಲೈಓವರ್ ಬೇಡ. ಇವು ನಮ್ಮ ರಸ್ತೆಯ, ಬಡಾವಣೆಯ ಸೌಂದರ್ಯ ಹಾಳುಗೆಡವುತ್ತವೆ, ಮೂಲ ಸ್ವರೂಪ ಬದಲಿಸುತ್ತವೆ. ನಿತ್ಯದ ವ್ಯವಹಾರಕ್ಕೆ ಅಡಚಣೆ ಮಾಡುತ್ತವೆ~ ಎಂದು ನಾಗರಿಕರು, ವ್ಯಾಪಾರಿಗಳು, ಸಂಘ, ಸಂಸ್ಥೆಗಳು ಪ್ರತಿಭಟನೆ ಮಾಡಿದರೂ ಸರ್ಕಾರ ಕಿವಿಗೊಡಲಿಲ್ಲ.ಮರಗಳನ್ನು ಕಡಿಯಬೇಡಿ ಎಂಬ ಪರಿಸರವಾದಿಗಳ ಮನವಿಗೂ ಸೊಪ್ಪು ಹಾಕಲಿಲ್ಲ. ಮಲ್ಲೇಶ್ವರ ವೃತ್ತದ ಅಂಡರ್‌ಪಾಸ್, ಬಸವನಗುಡಿ ನ್ಯಾಷನಲ್ ಕಾಲೇಜು ಮುಂದಿನ ಫ್ಲೈಓವರ್ ಇದಕ್ಕೆ ಉತ್ತಮ ಉದಾಹರಣೆ. ಜನರು ಜೋರಾಗಿ ಪ್ರತಿಭಟನೆ ಮಾಡಿದಾಗ ಕೆಲ ಕಾಲ ಸುಮ್ಮನಿದ್ದ ಪೌರಾಡಳಿತ ಸಂಸ್ಥೆಗಳು ಐದಾರು ತಿಂಗಳ ನಂತರ ಕಾಮಗಾರಿ ಆರಂಭಿಸಿದವು. ತಮ್ಮ ಇಚ್ಛೆಯಂತೆ ಕೆಲಸ ನಡೆಸಿದವು.ಬಸವನಗುಡಿ ಕೆ.ಆರ್. ರಸ್ತೆಯ ಅಂಚೆ ಕಚೇರಿ ಬಳಿ ನಿರ್ಮಿಸುತ್ತಿರುವ ಅಂಡರ್‌ಪಾಸ್ ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ತಾಜಾ ಉದಾಹರಣೆ. `ಇಲ್ಲಿ ಅಷ್ಟೊಂದು ವಾಹನಗಳ ಒತ್ತಡವಿಲ್ಲ. ಬಸವನಗುಡಿಯ ಸೌಂದರ್ಯ ಹಾಳುಮಾಡುವ ಈ ಅಂಡರ್‌ಪಾಸ್ ಬೇಡ.ಮರಗಳನ್ನು ಕಡಿಯುವುದು ಬೇಡ~ ಎಂದು ಜನರ ನಡೆಸಿದ ಪ್ರತಿಭಟನೆ ಭೋರ್ಗಲ್ಲ ಮೇಲೆ ಮಳೆ ಸುರಿದಂತೆ ಆಯಿತು. ಯಾರಿಗೂ ಬೇಡದ ಈ ಅಂಡರ್‌ಪಾಸ್‌ಗಾಗಿ ನೆಟ್ಟಕಲ್ಲಪ್ಪ ವೃತ್ತದಿಂದ ಗಾಂಧಿ ಬಜಾರಿನವರೆಗೆ ಇದ್ದ ಸಾಲು ಮರಗಳು ಈಗ ಕೊಡಲಿಗೆ ಬಲಿಯಾಗಿವೆ.ಮಧ್ಯಾಹ್ನ 12 ಗಂಟೆಯಲ್ಲೂ ದಟ್ಟ ನೆರಳಿನ ಹೊದಿಕೆ ನೀಡುತ್ತಿದ್ದ ನಂದಿದುರ್ಗ ರಸ್ತೆಯ ಸಾಲು ಮರಗಳನ್ನು ಕಡಿಯಲು ಬಿಬಿಎಂಪಿ ಇತ್ತೀಚೆಗೆ ಯೋಜಿಸಿತ್ತು. ಅದಕ್ಕೆ ಕೊಟ್ಟ ಕಾರಣ ರಸ್ತೆ ವಿಸ್ತರಣೆ. ನಾಗರಿಕರಿಂದ ಪ್ರತಿಭಟನೆ ಬಂದ ಮೇಲೆ ಆ ಯೋಜನೆ ಕೈಬಿಟ್ಟಂತಿದೆ.ಪ್ರತಿಭಟನೆ

ಇದೀಗ ಸ್ಯಾಂಕಿ ರಸ್ತೆ ವಿಸ್ತರಣೆಗಾಗಿ ಬಿಬಿಎಂಪಿ ಮರಗಳನ್ನು ಕಡಿಯಲು ಹೊರಟಿದೆ. ಅದಕ್ಕಾಗಿ ನಾಗರಿಕರಿಂದ ಭಾರಿ ಪ್ರತಿಭಟನೆ ವ್ಯಕ್ತವಾಗಿದೆ. ಸ್ಯಾಂಕಿ ರಸ್ತೆಯ ಕಾವೇರಿ ಚಿತ್ರಮಂದಿರ ಜಂಕ್ಷನ್‌ನಿಂದ ಯಶವಂತಪುರ ವೃತ್ತದವರೆಗೆ 3.33 ಕಿ.ಮೀ. ಉದ್ದದ ರಸ್ತೆಯನ್ನು ಅಗಲಗೊಳಿಸುವುದು ಬಿಬಿಎಂಪಿ ಉದ್ದೇಶ.

 

ಇದು ಯಶವಂತಪುರ ವೃತ್ತದಿಂದ ಬಳ್ಳಾರಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದರಿಂದ ವಾಹನ ದಟ್ಟಣೆ ಅಧಿಕವಾಗಿದೆ. ಸಮೀಕ್ಷೆ ಪ್ರಕಾರ ಈ ರಸ್ತೆಯಲ್ಲಿ ಗಂಟೆಗೆ 3637 ವಾಹನಗಳು ಚಲಿಸುತ್ತವೆ. ಹೀಗಾಗಿ ರಸ್ತೆ ವಿಸ್ತರಣೆ ಅನಿವಾರ್ಯ ಎಂದು ಬಿಬಿಎಂಪಿ ಹೇಳುತ್ತಿದೆ.ಆದರೆ, ನಾಗರಿಕ ಸಂಘಟನೆಗಳು ಇದನ್ನು ಅಲ್ಲಗಳೆಯುತ್ತಿವೆ. ಮಾರ್ಚ್‌ನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಈ ರಸ್ತೆಯಲ್ಲಿ ಗಂಟೆಗೆ 1,286 ವಾಹನಗಳು ಮಾತ್ರ ಚಲಿಸುತ್ತವೆ. ಬಿಬಿಎಂಪಿ ತೋರಿಸುವ ಅಂಕಿ, ಅಂಶ ತೆಗೆದುಕೊಂಡರೂ ರಸ್ತೆ ಅಗಲ ಮಾಡುವಷ್ಟು ವಾಹನ ಒತ್ತಡ ಇಲ್ಲಿಲ್ಲ.ಅಂಡರ್‌ಪಾಸ್ ನಿರ್ಮಾಣಕ್ಕಾಗಿ ಮಾರಮ್ಮ ವೃತ್ತದಿಂದ ಸಿಎನ್‌ಆರ್ ರಾವ್ ವೃತ್ತದವರೆಗಿನ ರಸ್ತೆಯನ್ನು ಮುಚ್ಚಿರುವ ಕಾರಣದಿಂದ ಈಗ ಈ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ. ಅಂಡರ್‌ಪಾಸ್ ಪೂರ್ಣಗೊಂಡು ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ ಮೇಲೆ ಈ ಸಮಸ್ಯೆ ಇರುವುದಿಲ್ಲ ಎಂಬುದು ಪರಿಸರವಾದಿಗಳ ಪ್ರತಿಪಾದನೆ.ಮಲ್ಲೇಶ್ವರಂ ನಾಗರಿಕ ಸಂಘಟನೆಗಳ ಪ್ರಕಾರ ಈ ಯೋಜನೆಯಲ್ಲಿ ಪಾರದರ್ಶಕತ್ವ ಇಲ್ಲ. ಬಿಬಿಎಂಪಿ ವಿಸ್ತ್ರತ ಯೋಜನಾ ವರದಿ ಸಿದ್ಧಪಡಿಸಿಲ್ಲ. ರಸ್ತೆ ವಿಸ್ತರಣೆಯಿಂದ ತಮ್ಮ ಕಟ್ಟಡ, ಜಾಗ ಕಳೆದುಕೊಳ್ಳುವವರಿಗೆ ನೋಟಿಸ್ ನೀಡಿಲ್ಲ. ವಾಹನ ಒತ್ತಡ ತಡೆದುಕೊಳ್ಳಲು ನಾಗರಿಕರು ಸಿದ್ಧ ಇರುವಾಗ ಮರಗಳನ್ನು ಉರುಳಿಸುವುದು ಏಕೆ ಎಂಬುದು ಅವರ ಪ್ರಶ್ನೆ.ಉಪ ಮೇಯರ್ ಎಸ್.  ಹರೀಶ್ ಮಾತ್ರ ನಾಗರಿಕ ಸಂಘಟನೆಗಳ ಈ ವಾದ ಅಲ್ಲಗಳೆಯುತ್ತಾರೆ. `ಅಂಡರ್‌ಪಾಸ್ ಕಾಮಗಾರಿ ನಡೆಯುತ್ತಿರುವಾಗಲೇ ಇಷ್ಟು ಒತ್ತಡವಿದೆ. ಒಮ್ಮೆ ಕಾಮಗಾರಿ ಪೂರ್ಣಗೊಂಡ ಮೇಲೆ ಯಶವಂತಪುರ ಕಡೆಯಿಂದ ಬರುವ ವಾಹನಗಳ ಭರಾಟೆ ಮತ್ತಷ್ಟು ಹೆಚ್ಚುತ್ತದೆ.ಅಷ್ಟಕ್ಕೂ ಯಾರ ಖಾಸಗಿ ಜಾಗವನ್ನೂ ಬಿಬಿಎಂಪಿ ಆಕ್ರಮಿಸುತ್ತಿಲ್ಲ. ಬಿಬಿಎಂಪಿ ಜಾಗವನ್ನೇ ಎಲ್ಲರೂ ಆಕ್ರಮಿಸಿಕೊಂಡಿದ್ದಾರೆ. ವರ್ಷಗಳ ಹಿಂದೆ ಮರದ ಕೆಳಗೆ ಕೂರುತ್ತಿದ್ದ ಜ್ಯೋತಿಷಿಯೊಬ್ಬರು ಸರ್ಕಾರಿ ಜಾಗ ಆಕ್ರಮಿಸಿ ದೇವಸ್ಥಾನ ಕಟ್ಟಿಕೊಂಡಿದ್ದಾರೆ.ಇವನ್ನೆಲ್ಲ ತೆಗೆಯುತ್ತೇವೆ. ಅಂಡರ್‌ಪಾಸ್ ಸಂಚಾರಕ್ಕೆ ಮುಕ್ತವಾದ ನಂತರವೂ ಟ್ರಾಫಿಕ್ ಜಾಮ್ ಆದಲ್ಲಿ ಜನಸಾಮಾನ್ಯರು ನಮಗೇ ಶಾಪ ಹಾಕುತ್ತಾರೆ~ ಎನ್ನುತ್ತಾರೆ ಅವರು.ಆದರೂ, ಸಂಚಾರ ಸುಗಮಗೊಳಿಸಲು ರಸ್ತೆ ವಿಸ್ತರಣೆ ಮಾಡುವುದು ವೈಜ್ಞಾನಿಕವಲ್ಲ. ಅದಕ್ಕಾಗಿ ಮರ  ಕಡಿಯುವುದು ಸಾಧುವಲ್ಲ ಎಂಬುದು ಕೆಲ ತಜ್ಞರ ಅಭಿಪ್ರಾಯ. ನಗರ ಬೆಳೆದಂತೆ ಮತ್ತಷ್ಟು ವಾಹನ ದಟ್ಟಣೆ ಉಂಟಾಗುತ್ತದೆ.ಮತ್ತೆ ಮತ್ತೆ ರಸ್ತೆ ವಿಸ್ತರಣೆ ಮಾಡುತ್ತಲೇ ಹೋದರೆ ಕೊನೆಯೆಲ್ಲಿ? ರಸ್ತೆ ವಿಸ್ತರಣೆಗೆ ಬದಲಿ ಮಾರ್ಗಗಳನ್ನು ಹುಡುಕಬೇಕು. ಬೆಳೆಯುತ್ತಿರುವ ನಗರಕ್ಕೆ ಸಮರ್ಪಕ ಅಭಿವೃದ್ಧಿ ಮಾದರಿ ಬೇಕು ಎನ್ನುತ್ತಾರೆ ಬೆಂಗಳೂರಿನ ಪರಿಸರವಾದಿಗಳು. 

ಅನಿವಾರ್ಯ

ಬಿಬಿಎಂಪಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಂತೆ, ಸ್ಯಾಂಕಿ ರಸ್ತೆ ವಿಸ್ತರಣೆ ಸಂಬಂಧ ನಗರ ಭೂಸಾರಿಗೆ ನಿರ್ದೇಶನಾಲಯ ಅಧ್ಯಯನ ನಡೆಸಿದೆ. ಈ ರಸ್ತೆಯನ್ನು ಐದು ಭಾಗಗಳಾಗಿ ವಿಂಗಡಿಸಿ ವರದಿ ನೀಡಿದೆ.*  ಕಾವೇರಿ ವೃತ್ತದಿಂದ ಭ್ಯಾಷಂ ವೃತ್ತದವರೆಗೆ ರಸ್ತೆ ಅಗಲ 27 ಮೀ. ಇರುವುದರಿಂದ ಅಲ್ಲಿ ವಿಸ್ತರಣೆ ಅವಶ್ಯಕತೆ ಇಲ್ಲ.*  ಭ್ಯಾಷಂ ವೃತ್ತದಿಂದ ಸ್ಯಾಂಕಿ ಪಾರ್ಕ್ ಅಥವಾ ಮಲ್ಲೇಶ್ವರಂ 18ನೇ ಅಡ್ಡರಸ್ತೆ ವರೆಗೆ ರಸ್ತೆಯ ಅಗಲ ಕೇವಲ 11 ಮೀಟರ್. ಈ ರಸ್ತೆ ಸ್ಯಾಂಕಿ ಕೆರೆಯ ಏರಿಯ  ಮೇಲೆ ಹಾದು ಹೋಗಿದೆ.ಕೆರೆ ಏರಿಯ ಕೆಳಭಾಗದಲ್ಲಿ ಸರ್ಕಾರಿ ಜಾಗವಿದ್ದು ವಿಸ್ತರಿಸಲು ಯಾವುದೇ ತೊಂದರೆ ಇಲ್ಲ. ರಸ್ತೆಯ ಅಗಲವನ್ನು 30 ಮೀ. ಬದಲಾಗಿ 27 ಮೀ.ಗೆ ಇಳಿಸಿ ಕೆಲವು ಕಟ್ಟಡ, ಮರ ಮತ್ತು ದೇವಸ್ಥಾನ ಉಳಿಸಲು ನಿರ್ಧರಿಸಲಾಗಿದೆ.

 

ರಸ್ತೆಯ ಪಕ್ಕವೇ ಇರುವ ಸ್ಟೆಲ್ಲಾ ಮೇರಿಸ್ ಶಾಲೆಯ ಮುಖ್ಯ ಕಟ್ಟಡಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಈ ಭಾಗದಲ್ಲಿ ತೆರವುಗೊಳಿಸ ಬೇಕಾಗಿರುವ ಒಟ್ಟು ಮರಗಳು 19 ಮಾತ್ರ.*  ಸ್ಯಾಂಕಿ ಪಾರ್ಕ್‌ನಿಂದ ಮಾರಮ್ಮ ವೃತ್ತದವರೆಗಿನ ರಸ್ತೆಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷಾ ಮಂಡಳಿ, ಅರಣ್ಯ ಭವನ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳು ಇವೆ. ಪಾರ್ಕ್ ಮಾಡಿದ ವಾಹನಗಳೇ ರಸ್ತೆಯ ಅರ್ಧ ಭಾಗ ಆಕ್ರಮಿಸಿಕೊಂಡಿರುತ್ತವೆ.ಇಲ್ಲಿ ರಸ್ತೆ ಕೇವಲ 15 ಮೀ ಅಗಲವಿದೆ. ಇಲ್ಲಿ ರಸ್ತೆ ವಿಸ್ತರಿಸಿದರೆ ಸ್ಯಾಂಕಿ ಪಾರ್ಕ್‌ನ 13 ಮರಗಳು ಮತ್ತು ಅರಣ್ಯ ಇಲಾಖೆ ಆವರಣದಲ್ಲಿರುವ 49 ಮರಗಳು ಸೇರಿ ಒಟ್ಟು 62 ಮರಗಳನ್ನು ಕಡಿಯಬೇಕಾಗುತ್ತದೆ.*  ಮಾರಮ್ಮ ವೃತ್ತದಿಂದ ಸಿಎನ್‌ಆರ್ ರಾವ್ ವೃತ್ತದವರೆಗೆ ಅಂಡರ್‌ಪಾಸ್ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಕೆಲ ಮರಗಳನ್ನು ಕಡಿಯಲಾಗಿದೆ.*  ಸಿಎನ್‌ಆರ್ ವೃತ್ತದಿಂದ ಯಶವಂತಪುರ ವೃತ್ತದವರೆಗಿನ ರಸ್ತೆ 23 ರಿಂದ 25 ಮೀ. ಅಗಲವಿದೆ. ಇಲ್ಲಿ ವಾಹನ ದಟ್ಟಣೆ ಅಧಿಕವಾಗಿರುವುದರಿಂದ ಈ ಭಾಗದ ರಸ್ತೆಯನ್ನು 45 ಮೀ ಅಗಲಗೊಳಿಸುವ ಪ್ರಸ್ತಾಪ ಇದೆ. ಇದೇ ವರದಿ ಪ್ರಕಾರ ಈಗ ಬಿಬಿಎಂಪಿ ಕಡಿಯಲು ಹೊರಟಿರುವುದು 81 ಮರಗಳನ್ನು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.