ಭಾನುವಾರ, ಏಪ್ರಿಲ್ 11, 2021
28 °C

ಮರದಲ್ಲೇ ಮಾಗಿದ ಮಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಮಾವಿನ ಸುಗ್ಗಿ ಮುಕ್ತಾಯದ ಹಂತ ತಲುಪಿದ್ದರೂ ಕೆಲವು ಬೆಳೆಗಾರರು ಒಳ್ಳೆ ಬೆಲೆಯ ನಿರೀಕ್ಷೆಯಲ್ಲಿ ಕೀಳದೆ ಬಿಟ್ಟಿರುವುದರಿಂದ ಕಾಯಿ ಮರದಲ್ಲೇ ಹಣ್ಣಾಗಿ ಉದುರುತ್ತಿದೆ.ಸುಗ್ಗಿಯ ಪ್ರಾರಂಭದ ದಿನಗಳಿಗೆ ಹೋಲಿಸಿದರೆ ಮಾವಿನ ಕಾಯಿ ಬೆಲೆ ಸುಧಾರಿಸಿದೆ. ಅರ್ಧಕ್ಕೆ ಅರ್ಧ ಹೆಚ್ಚಾಗಿದೆ. ಜ್ಯೂಸ್ ತಯಾರಿಕೆಯಲ್ಲಿ ಬಳಸುವ ತೋತಾಪುರಿ ಜಾತಿ ಮಾವು ಟನ್ನೊಂದಕ್ಕೆ ರೂ.11 ಸಾವಿರ ಮತ್ತು ತಿನ್ನಲು ಬಳಸುವ ನೀಲಂ ಜಾತಿ ಮಾವು ರೂ.12 ಸಾವಿರದಂತೆ ಮಾರಾಟವಾಗುತ್ತಿದೆ. ದಿನ ಕಳೆದಂತೆ ಮಾವಿನ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದೆ. ಇದು ರೈತರನ್ನು ಇನ್ನಷ್ಟು ಕಾಯುವಂತೆ ಮಾಡಿದೆ.ಆದರೂ ಬಹಳಷ್ಟು ಕಾಯಿ ಹಣ್ಣಾಗುತ್ತಿದ್ದು, ಉದುರಿ ನೆಲ ಕಚ್ಚುತ್ತಿದೆ. ಹಣ್ಣಾದ ತೋಟಗಳಿಗೆ ತಿನ್ನಲು ಹೋಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗೆ ಬಿಟ್ಟಿರುವವರು ಸಾಮಾನ್ಯ ರೈತರಲ್ಲ. ಒಂದಷ್ಟು ಕಾಯಿ ಹೋದರೂ ಒಳ್ಳೆ ಬೆಲೆ ಸಿಗಲಿ ಎಂದು ಸ್ಥಿತಿವಂತ ರೈತರು ಹೇಳುತ್ತಿದ್ದಾರೆ ಎನ್ನಲಾಗುತ್ತಿದೆ.ಈ ಬಾರಿ ವಿಶೇಷವೆಂದರೆ ತೋತಾಪುರಿ ಜಾತಿಯ ಮಾವು ಜ್ಯೂಸ್ ತಯಾರಿಕೆಗೆ ಮಾತ್ರವಲ್ಲದೆ, ಉಪ್ಪಿನ ಕಾಯಿ ತಯಾರಿಕೆಗೆ ಹೋಳು ಮಾಡಲು ಬಳಸುತ್ತಿರುವುದು. ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಬರುವ ಕಾಯಿಯನ್ನು ಗಮನಿಸಿದರೆ, ಉಪ್ಪಿನ ಕಾಯಿ ತಯಾರಿಕೆಗೆ ಹೋಗುವ ಕಾಯಿ ಕಡಿಮೆ ಎನಿಸಿದರೂ ಇದೊಂದು ಹೊಸ ಬೆಳವಣಿಗೆ. ಇದೂ ಬೆಲೆ ಏರಿಕೆಗೆ ಸ್ವಲ್ಪ ಮಟ್ಟಿಗೆ ಕಾರಣವಾಗಿದೆ.ಸುಗ್ಗಿ ಮುಕ್ತಾಯದ ಸಂದರ್ಭದಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಮಾವಿನ ಕಾಯಿಗೆ ಅಧಿಕ ಬೇಡಿಕೆ ಬರುತ್ತದೆ. ಹೊರ ರಾಜ್ಯದ ಲಾರಿಗಳು ಸಾಲುಗಟ್ಟಿ ನಿಲ್ಲುತ್ತವೆ. ಇಂಥ ಸಂದರ್ಭದಲ್ಲಿ ಸ್ಥಳೀಯ ಮಾವು ಪ್ರಿಯರಿಗೆ ತಿನ್ನಲು ಕಾಯಿ ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಧಿಕ ಬೆಲೆ ಇರುವುದರಿಂದ ಸಾಮಾನ್ಯ ಗ್ರಾಹಕ ಮಂಡಿಗಳ ಕಡೆ ಸುಳಿಯುವುದಿಲ್ಲ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.