ಸೋಮವಾರ, ಜನವರಿ 27, 2020
26 °C

ಮರಳು ಅಕ್ರಮಕ್ಕೆ ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುವವರು ಮತ್ತು ಸಾಗಿಸುವವರಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ₨ 25 ಸಾವಿರದವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಿ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ.ಮರಳು ಗಣಿಗಾರಿಕೆ, ಸಾಗಣೆ ಹಾಗೂ ಸಂಗ್ರಹಣೆ ನಿಯಂತ್ರಣಕ್ಕೆ ಪೂರಕವಾಗಿ ತಂದ ಈ ತಿದ್ದುಪಡಿ­ಯನ್ನು ಮಂಗಳ­ವಾರದಿಂದಲೇ ಜಾರಿ­ಗೊಳಿಸಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಧಿಸೂಚನೆ ಹೊರಡಿಸಿದೆ.ಹೊಸ ನಿಯಮದಿಂದಾಗಿ, ರಾಜ್ಯ­ದಾ­­ದ್ಯಂತ ‘ಫಿಲ್ಟರ್ ಮರಳು’ ಉತ್ಪಾದನೆ, ಸಂಗ್ರಹಣೆ, ಸಾಗಣೆ ಮತ್ತು ಬಳಕೆ ನಿಷೇಧವಾಗಿದೆ.ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಗಣಿ ಮತ್ತು ಖನಿಜ ಕಾಯ್ದೆಯ ಕಲಂ 4(1), 1(ಎ), 21 ಮತ್ತು 22ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಿ, ಕ್ರಮ ಜರುಗಿಸಲು ಅವಕಾಶ ದೊರಕಿದೆ. ತಾಲ್ಲೂಕು ಉಸ್ತುವಾರಿ ಸಮಿತಿ, ಜಿಲ್ಲಾ ಉಸ್ತುವಾರಿ ಸಮಿತಿಯ ಎಲ್ಲ ಸದಸ್ಯರು ಮತ್ತು ಜಿಲ್ಲಾ ಸಮಿತಿಯ ವ್ಯಾಪ್ತಿಗೆ ಬರುವ ಇಲಾಖೆಯ ಯಾವುದೇ ಅಧಿ­ಕಾರಿಯೂ ಈ ಕಲಮುಗಳ ಅಡಿಯಲ್ಲಿ ದೂರು ದಾಖಲಿಸುವುದಕ್ಕೆ ಅವಕಾಶ ನೀಡಲಾಗಿದೆ.ಈ ಕಲಮುಗಳ ಪ್ರಕಾರ, ಅನುಮತಿ ಪಡೆಯದೇ ಗಣಿಗಾರಿಕೆ ನಡೆಸುವುದು, ಖನಿಜ ಅಥವಾ ಉಪ ಖನಿಜಗಳನ್ನು ಸಂಗ್ರಹಿಸುವುದು ಹಾಗೂ ಸಾಗಿಸುವುದು ಶಿಕ್ಷಾರ್ಹ ಅಪರಾಧ.ಮರಳು ಗಣಿಗಾರಿಕೆ ಮತ್ತು ಸಾಗಣೆಯಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕಲು 2011ರಲ್ಲಿ ರಾಜ್ಯ ಸರ್ಕಾರ ಮರಳು ನೀತಿ ಜಾರಿಗೊಳಿಸಿತ್ತು. ಆದರೆ, ಅದರಲ್ಲಿ ಕಾನೂನು ಕ್ರಮ ಜರುಗಿಸುವ ಅವಕಾಶಗಳು ಇರಲಿಲ್ಲ. ಇದರಿಂದಾಗಿ ಅಕ್ರಮಗಳ ನಿಯಂತ್ರಣ ನಿರೀಕ್ಷಿತ ಮಟ್ಟದಲ್ಲಿ ಆಗಿರಲಿಲ್ಲ. ಈ ಕಾರಣಕ್ಕಾಗಿಯೇ ಉಪ ಖನಿಜ ರಿಯಾಯಿತಿ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ.ಮೂರು ಹಂತಗಳಲ್ಲಿ ಸಮಿತಿ: ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಮತ್ತು ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯ ತಾಲ್ಲೂಕು ಮರಳು ಉಸ್ತುವಾರಿ ಸಮಿತಿಗಳು ಮರಳು ನಿಕ್ಷೇಪಗಳನ್ನು ಗುರುತಿಸುವುದು, ಗಣಿಗಾರಿಕೆ ಯೋಜನೆ ರೂಪಿಸುವುದು, ನಿಕ್ಷೇಪಗಳ ಹರಾಜು, ಗಣಿಗಾರಿಕೆ ಮೇಲೆ ನಿಗಾ ಇರಿಸುವುದು ಮತ್ತು ಅಕ್ರಮ ನಡೆಸುವವರ ವಿರುದ್ಧ ಕ್ರಮ ಜರುಗಿಸುವ ಕೆಲಸ ನಡೆಸಲಿವೆ. ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯ ವಿಭಾಗೀಯ ಮೇಲುಸ್ತುವಾರಿ ಸಮಿತಿಯು ಈ ಪ್ರಕ್ರಿಯೆಯ ಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದೆ.ತಾಲ್ಲೂಕು ಉಸ್ತುವಾರಿ ಸಮಿತಿಯು ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿನ ಮರಳು ನಿಕ್ಷೇಪಗಳ ಕುರಿತು ಸ್ಥಳ ತಪಾಸಣೆ ಮಾಡಬೇಕು. ಕಂದಾಯ, ಲೋಕೋಪಯೋಗಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ನೆರವಿನೊಂದಿಗೆ ಕನಿಷ್ಠ ಹತ್ತು ಎಕರೆ ವಿಸ್ತೀರ್ಣದ ನಿಕ್ಷೇಪಗಳನ್ನು ಗುರುತಿಸಬೇಕು.ತಾಲ್ಲೂಕು ಉಸ್ತುವಾರಿ ಸಮಿತಿ ಗುರುತಿಸುವ ಎಲ್ಲ ನಿಕ್ಷೇಪಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಗಣಿ ಯೋಜನೆ ರೂಪಿಸಬೇಕಾಗುತ್ತದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಗಣಿ ಎಂಜಿನಿಯರಿಂಗ್‌ ಅಥವಾ ಭೂಗೋಳ ವಿಜ್ಞಾನ ಪದವಿ ಪಡೆದಿರುವವರ ನೆರವಿನಲ್ಲಿ ಗಣಿ ಯೋಜನೆ ರೂಪಿಸಬೇಕು. ಬಳಿಕ ಜಿಲ್ಲಾ ಉಸ್ತುವಾರಿ ಸಮಿತಿಯು ಮರಳು ನಿಕ್ಷೇಪಗಳ ಲಭ್ಯತೆ ಮತ್ತು ಅವುಗಳಿಗೆ ಸಂಬಂಧಿಸಿದ ಗಣಿ ಯೋಜನೆಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಬೇಕು ಎಂಬ ಅಂಶವನ್ನು ತಿದ್ದುಪಡಿಯಲ್ಲಿ ಸೇರಿಸಲಾಗಿದೆ.ಮರಳಿನ ಬಾಬ್ತು ರಾಜಧನ ಮತ್ತು ತೆರಿಗೆ ಮತ್ತು ಸಂಸ್ಕರಣಾ ಶುಲ್ಕದ ದರವನ್ನು ಜಿಲ್ಲಾ ಉಸ್ತುವಾರಿ ಸಮಿತಿ ನಿರ್ಧರಿಸುತ್ತದೆ. ನಿಕ್ಷೇಪಗಳಿಂದ ಸಾಗಿಸುವ ಮರಳಿನ ಪ್ರಮಾಣಕ್ಕೆ ಅನುಗುಣವಾಗಿ ರಾಜಧನ ಪಡೆದು, ಕಂಪ್ಯೂಟರೀಕೃತ ಸಾಗಣೆ ಪರವಾನಗಿ ವಿತರಿಸಲಾಗುತ್ತದೆ. ಲೋಕೋಪಯೋಗಿ ಇಲಾಖೆಯೇ ಶುಲ್ಕ ಪಡೆದು ಸಾಗಣೆ ಪರವಾನಗಿಗಳನ್ನು ವಿತರಿಸುವ ಕೆಲಸ ನಿರ್ವಹಿಸುತ್ತದೆ. ರಾಜಧನದಲ್ಲಿ ಶೇಕಡ 75ರಷ್ಟನ್ನು ರಾಜ್ಯ ಸಂಚಿತ ನಿಧಿಗೆ ವರ್ಗಾವಣೆ ಮಾಡಬೇಕು. ಶೇ 25ರಷ್ಟು ಮೊತ್ತವನ್ನು ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ವರ್ಗಾವಣೆ ಮಾಡಲಾಗುತ್ತದೆ.ಸೇತುವೆಗಳ ಇಕ್ಕೆಲಗಳಲ್ಲಿ 500 ಮೀಟರ್‌ವರೆಗೆ ಮರಳು ಗಣಿಗಾರಿಕೆ ಅನುಮತಿ ನೀಡುವಂತಿಲ್ಲ. ಸೂಕ್ತ ಪರಿಶೀಲನೆ ನಡೆಸಿದ ಬಳಿಕ ನೀರಿನ ಸರಾಗ ಹರಿವು ಮತ್ತು ಹೂಳು ತುಂಬಿಕೊಳ್ಳುವುದನ್ನು ತಡೆಯುವ ಅಗತ್ಯ ಕಂಡುಬಂದಲ್ಲಿ ಅಲ್ಲಿಯೂ ಅನುಮತಿ ನೀಡಬಹುದು ಎಂಬ ಅಂಶವನ್ನು ಸೇರಿಸಲಾಗಿದೆ.

ಯಂತ್ರ ಬಳಕೆ ನಿಷಿದ್ಧ: ಇನ್ನು ರಾಜ್ಯದ ಯಾವುದೇ ಭಾಗದಲ್ಲೂ ಮರಳು ಗಣಿಗಾರಿಕೆಗೆ ವಾಹನ ಬಳಸುವಂತಿಲ್ಲ. ಹೊಸ ನಿಯಮಗಳಲ್ಲಿ ಯಂತ್ರೋಪಕರಣ ಬಳಕೆಯನ್ನು ನಿಷೇಧಿಸಲಾಗಿದೆ.ಮರಳು ಗಣಿಗಾರಿಕೆಗೆ ಜೆಸಿಬಿ, ಡ್ರೆಡ್ಜರ್‌, ಯಾಂತ್ರೀಕೃತ ದೋಣಿ ಮತ್ತಿತರ ಯಂತ್ರಗಳನ್ನು ಬಳಸುವಂತಿಲ್ಲ. ಆದರೆ, ಸಾಗಣೆ ವಾಹನಗಳಿಗೆ ಮರಳು ತುಂಬಿಸಲು (ಲೋಡ್‌ ಮಾಡಲು) ಡಂಪರುಗಳು ಮತ್ತು ಟ್ರಾಕ್ಟರ್‌ ಮೌಂಟೆಡ್‌ ಲೋಡರ್‌ಗಳನ್ನು ಬಳಸಬಹುದು.

ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಮರಳು ಗಣಿಗಾರಿಕೆ ನಡೆಸಬಹುದು. ಮರಳು ತೆಗೆಯುವ ಗುತ್ತಿಗೆಯು ಎರಡು ವರ್ಷಗಳ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ.ಸಮಿತಿಯಲ್ಲಿ ಪೊಲೀಸರು

ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಸಂಬಂಧಿಸಿದ ಕೆಲಸದಲ್ಲಿ ಈವರೆಗೂ ಪೊಲೀಸ್‌ ಇಲಾಖೆಗೆ ನೇರವಾದ ಪಾತ್ರ ಇರಲಿಲ್ಲ. ಹೊಸ ನಿಯಮಗಳ ಪ್ರಕಾರ ಅಸ್ತಿತ್ವಕ್ಕೆ ಬರುವ ಉಸ್ತುವಾರಿ ಸಮಿತಿಗಳಲ್ಲಿ ಪೊಲೀಸ್‌ ಅಧಿಕಾರಿಗಳೂ ಸದಸ್ಯರಾಗಿರುತ್ತಾರೆ.ಕೈಗೆಟಕುವ ದರದಲ್ಲಿ...

ನಿಯಮಗಳಿಗೆ ತಿದ್ದುಪಡಿ ಮಾಡಿ­ರುವ ಕಾರಣ ಬೆಂಗಳೂರು ನಗರ­ದಲ್ಲಿ ₨7–8 ಸಾವಿರಕ್ಕೆ ಹಾಗೂ ಇತರ ಕಡೆ ₨ 5 ಸಾವಿರಕ್ಕೆ ಒಂದು ಲಾರಿ ಮರಳು ದೊರೆ­ಯಲಿದೆ ಎಂದು ಲೋಕೋಪ­ಯೋಗಿ ಸಚಿವ ಎಚ್‌.ಸಿ.­ಮಹ­­ದೇವಪ್ಪ ತಿಳಿಸಿದರು.ಸಂಗ್ರಹ, ಮಾರಾಟ

ಜಿಲ್ಲಾ ಉಸ್ತುವಾರಿ ಸಮಿತಿ ಸಿದ್ಧಪಡಿಸುವ ಪಟ್ಟಿಯಲ್ಲಿನ ಮರಳು ನಿಕ್ಷೇಪ­ಗಳಲ್ಲಿ ಮರಳು ತೆಗೆಯುವ ಕೆಲಸವನ್ನು ಮಾತ್ರ ಗುತ್ತಿಗೆ ನೀಡಲಾಗುತ್ತದೆ. ಗುತ್ತಿಗೆ­ಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ನೀಡ­ಲಾಗು­ತ್ತದೆ. ಗುತ್ತಿಗೆ­­ದಾರರು ತೆಗೆದ ಮರಳನ್ನು ಲೋಕೋಪ­ಯೋಗಿ ಇಲಾಖೆಯ ಸಂಗ್ರಹಾ­ಗಾರಕ್ಕೆ ಸ್ಥಳಾಂತರಿಸಲಾಗುತ್ತದೆ. ಅಲ್ಲಿಂದ ಬಳಕೆದಾರರಿಗೆ ಮಾರಾಟ ಮಾಡಲಾಗುತ್ತದೆ.

ಪ್ರತಿಕ್ರಿಯಿಸಿ (+)