ಗುರುವಾರ , ಮೇ 13, 2021
39 °C

ಮರಳು ದಂಧೆ ತಡೆಯಲು ಆಗ್ರಹಿಸಿ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ಜೆಸಿಬಿ ಯಂತ್ರ ಬಳಸಿ ಆಳುದ್ದದವರೆಗೆ ಗುಂಡಿ ತೋಡಿ ಲಾರಿ, ಟಿಪ್ಪರ್, ಟ್ರಾಕ್ಟರ್‌ಗಳಲ್ಲಿ ಅಕ್ರಮವಾಗಿ ಮರಳು ತುಂಬಿ ಸಾಗಿಸಲಾಗುತ್ತಿದ್ದು, ಹಲವು ಬಾರಿ ಮನವಿ, ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲ.ತಕ್ಷಣ ಈ ದಂಧೆಯನ್ನು ನಿಲ್ಲಿಸಬೇಕು ಎಂದು ಸೋಮವಾರ ತಾಲ್ಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ  ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರಿಗೆ ತಾಲ್ಲೂಕಿನ ಬುರುಡುಕುಂಟೆ ಗ್ರಾಮಸ್ಥರು ಒತ್ತಾಯಿಸಿದರು.ಬುರುಡುಕುಂಟೆಯಲ್ಲಿ 450 ಮನೆಗಳಿದ್ದು, ಬಹುತೇಕ ಎಲ್ಲರೂ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದು, ವ್ಯವಸಾಯವನ್ನೇ ಬದುಕಿಗೆ ಆಧಾರ ಮಾಡಿಕೊಂಡಿದ್ದೇವೆ. ವಿಶೇಷವೆಂದರೆ ಯಳವ ಜನಾಂಗಕ್ಕೆ ಸೇರಿದ 150 ಕುಟುಂಬಗಳಿದ್ದು, ಹಳ್ಳಿ ಹಳ್ಳಿ ತಿರುಗಿ ಭಿಕ್ಷೆ ಎತ್ತಿ ಜೀವನ ಸಾಗಿಸುವುದನ್ನು ಬಿಟ್ಟು, ನದಿಮೂಲದಿಂದ ನೀರು ಬಳಸಿಕೊಂಡು ವ್ಯವಸಾಯ ಮಾಡುತ್ತಾ, ಮಕ್ಕಳಿಗೆ ವಿದ್ಯೆ ಕೊಡಿಸಿ ಹೊಸ ಬದುಕು ನಡೆಸುತ್ತಿದ್ದಾರೆ.

 

ಇಲ್ಲಿನ ಮರಳನ್ನು ಚಿತ್ರದುರ್ಗ, ಚಳ್ಳಕೆರೆ, ಆಂಧ್ರಪ್ರದೇಶದ ಅಮರಾಪುರಕ್ಕೆ ಸಾಗಿಸಿ ಮಾರಲಾಗುತ್ತಿತ್ತು. ಆದರೆ, ಹಿಂದಿನ ಹತ್ತು ತಿಂಗಳಿಂದ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರದ ಕಡೆಗೆ ಮರಳು ಸಾಗಿಸಲಾಗುತ್ತಿದೆ. ನದಿದಂಡೆಯಲ್ಲಿ, ಹಿಡುವಳಿ ಜಮೀನುಗಳಲ್ಲಿ ಮರಳು ಸಂಗ್ರಹಿಸಲಾಗುತ್ತಿದೆ ರಾತ್ರಿ ವೇಳೆ ಮರಳು ಸಾಗಣೆ ನಡೆಯುತ್ತಿದ್ದು, ಇದಕ್ಕೆ ಕಂದಾಯ, ಪೊಲೀಸ್, ಲೋಕೋಪಯೋಗಿ ಮತ್ತು ಗಣಿ - ಭೂ ವಿಜ್ಞಾನ ಇಲಾಖೆ  ಅಧಿಕಾರಿಗಳ ಕುಮ್ಮಕ್ಕು ಇದೆ ಎಂದು ಆರೋಪಿಸಿದರು.ಸಕ್ರಮದಲ್ಲಿ ಅಕ್ರಮ: ಬುರುಡುಕುಂಟೆಯ ಹತ್ತಿರ 2 ಕೇಂದ್ರಗಳಿಗೆ ಮರಳು ತುಂಬಲು ಅನುಮತಿ ನೀಡಿದ್ದು, ಅದರಲ್ಲಿ ಒಂದು ಕೇಂದ್ರ 12 ಎಕರೆಯಲ್ಲಿ ಮರಳು ತುಂಬಿ ಮುಗಿಸಿದ್ದಾರೆ. ಕ್ಯೂಬಿಕ್ ಒಂದಕ್ಕೆ ರೂ450 ಸರ್ಕಾರ ನಿಗದಿಪಡಿಸಿದ್ದರೆ, ಇಲ್ಲಿ ರೂ550ಕ್ಕೆ ಮಾರಲಾಗುತ್ತಿದೆ.6 ಮತ್ತು 10 ಚಕ್ರದ ವಾಹನಗಳಿಗೆ ಇಂತಿಷ್ಟೇ ಮರಳು ತುಂಬಬೇಕು ಎಂದು ಷರತ್ತು ವಿಧಿಸಿದ್ದರೂ 3ರಿಂದ 4 ಕ್ಯೂಬಿಕ್ ಹೆಚ್ಚು ಮರಳು ತುಂಬಲಾಗುತ್ತಿದೆ. 3ರಿಂದ 4 ಅಡಿ ಮರಳು ತೆಗೆಯಲು ಆದೇಶವಿದ್ದರೂ 10ರಿಂದ 12 ಅಡಿವರೆಗೆ ಮರಳು ತುಂಬಲಾಗುತ್ತಿದೆ. ಸಕ್ರಮದ ಹೆಸರಿನಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದರು.ತಾಲ್ಲೂಕಿನಲ್ಲಿ ಹಿಂದಿನ ಎರಡು ವರ್ಷದಿಂದ ಮಳೆಯಾಗಿಲ್ಲ. ನದಿಯಲ್ಲಿನ ಮರಳನ್ನು ಆರೇಳು ಅಡಿ ತೆಗೆದರೆ ನದೀ ಪಾತ್ರದಲ್ಲಿ ಅಂತರ್ಜಲ ಕುಸಿಯುತ್ತಿದೆ. ಈಗಾಗಲೇ 500-600 ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಒಂದು ವೇಳೆ ನೀರು ಕಂಡು ಬಂದರೂ 15-20 ದಿನದಲ್ಲಿ ಬತ್ತಿ ಹೋಗುತ್ತದೆ.ನದಿಗಳಲ್ಲಿ ಸಿಮೆಂಟ್ ರಿಂಗ್ ಬಳಸಿ ಬಾವಿ ನಿರ್ಮಿಸಿಕೊಂಡು ಬೇಸಿಗೆ ಕಾಲದಲ್ಲಿ ಕುಡಿಯಲು ಮತ್ತು ತೋಟದ ಬೆಳೆಗಳಿಗೆ ನೀರು ಬಳಸುತ್ತಿದ್ದೆವು. ಈಗ ಅಂತಹ ಬಾವಿಗಳೆಲ್ಲ ಬತ್ತಿ ಹೋಗಿವೆ. ಮುಂಗಾರು ಸಕಾಲಕ್ಕೆ ಬರದಿದ್ದರೆ ಬಹುತೇಕ ಹಳ್ಳಿಗರು ಮತ್ತೆ ಭಿಕ್ಷೆ ಎತ್ತಲು ಹೋಗಬೇಕಾಗುತ್ತದೆ. ಹೀಗಾಗಿ ಮರಳು ದಂಧೆಗೆ ಕಡಿವಾಣ ಹಾಕಬೇಕು  ಎಂದು ಒತ್ತಾಯಿಸಿದರು.ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಮಾತನಾಡಿ, ಅಕ್ರಮ ಮರಳು ಸಾಗಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಮೂರು ಅಡಿಗಿಂತ ಹೆಚ್ಚಿನ ಆಳಕ್ಕೆ ಮರಳು ತುಂಬದಂತೆ ಸೂಚನೆ ನೀಡಲಾಗುವುದು ಎಂದು ನೀಡಿದ ಭರವಸೆಗೆ ಒಪ್ಪದ ಗ್ರಾಮಸ್ಥರು, ಒಟ್ಟಾರೆ ಮರಳು ಸಾಗಣೆ ನಿಷೇಧಿಸಬೇಕು ಎಂದು ಪಟ್ಟುಹಿಡಿದರು.ಇ. ತಿಮ್ಮಯ್ಯ, ಟಿ. ಆನಂದ್, ಎ.ಜಿ. ಶಿವಮ್ಮ, ರಂಗಮ್ಮ, ಆರ್. ಶೃಂಗಾ, ಎಂ. ಕೆಂಚಮ್ಮ, ಶಿವಮ್ಮ, ಬಸವರಾಜ, ಬದ್ರಪ್ಪ, ಓಬಳಪ್ಪ, ವೆಂಕಟಾಚಲ, ವೈ.ಟಿ. ಈಶ್ವರಪ್ಪ, ತಿಮ್ಮಣ್ಣ, ಶಶಿಕಲಾ, ಶಿವಣ್ಣ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.