ಗುರುವಾರ , ಜನವರಿ 23, 2020
23 °C
ಹಿರಿಯೂರು ಕೃಷಿ ಮಾರುಕಟ್ಟೆಯಲ್ಲಿ ಶೇಂಗಾ ರೈತರ ಆರೋಪ

ಮರು ಟೆಂಡರ್‌ನಲ್ಲೂ ಸಿಗಲಿಲ್ಲ ಸೂಕ್ತ ಬೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ಶನಿವಾರ ಶೇಂಗಾಕ್ಕೆ ದರ ಕಡಿಮೆಯಾಗಿದೆ ಎಂದು ಪ್ರತಿಭಟನೆ ನಡೆಸಿದ್ದ ರೈತರು, ಮರು ಟೆಂಡರ್‌ಗೆ ಆಗ್ರಹಿಸಿದ್ದರಿಂದ ಇಲ್ಲಿನ ಕೃಷಿ ಮಾರುಕಟ್ಟೆ ಸಮಿತಿ ಆವರಣದಲ್ಲಿ ಭಾನುವಾರ ನಡೆದ ಮರು ಟೆಂಡರ್ ಪ್ರಕ್ರಿಯೆಯಲ್ಲಿ ರೈತರು ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.ಶನಿವಾರ ಮಾರುಕಟ್ಟೆಗೆ ೪,೦೦೦ ಚೀಲ ಶೇಂಗಾ ಬಂದಿತ್ತು. ₨ ೩,೫೦೦ ಮಾದರಿ ದರವಿತ್ತು. ಆದರೆ ಭಾನುವಾರದ ಮರು ಟೆಂಡರ್‌ನಲ್ಲಿ ಮಾದರಿ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಬೆರಳೆಣಿಕೆಯಷ್ಟು ರೈತರಿಗೆ ಮಾತ್ರ ಶನಿವಾರದ ದರಕ್ಕಿಂತ ಹೆಚ್ಚಿನ ದರ ಸಿಕ್ಕಿದ್ದರೆ, ಗುಣಮಟ್ಟದ ಶೇಂಗಾ ತಂದಿದ್ದ ರೈತರು ತಲೆ ಮೇಲೆ ಕೈಹೊರುವಂತಹ ಸ್ಥಿತಿ ಉಂಟಾಗಿತ್ತು. ಕೆಲವು ರೈತರಂತೂ ನಿನ್ನೆಗಿಂತ ದರ ಕಡಿಮೆಯಾಗಿದ್ದರಿಂದ ತಮ್ಮ ಬೆಳೆಯನ್ನು ಕೊಡುವುದೋ ಬೇಡವೋ ಎಂದು ಗೊಂದಲದಲ್ಲಿದ್ದರು. ಬಹಳಷ್ಟು ರೈತರು ಪ್ರತಿಭಟನೆ ನಡೆಸಿ ಮರು ಟೆಂಡರ್‌ಗೆ ಆಗ್ರಹಿಸಿದವರನ್ನು ಶಪಿಸುತ್ತಿದ್ದರು.ಶನಿವಾರ ಹಿರಿಯೂರಿನ ಕೇವಲ ೧೨ ಖರೀದಿದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರಿಂದ ಹೊರಗಿನ ವರ್ತಕರು ಬರದಂತೆ ಸಂಚು ನಡೆಸಲಾಗಿದೆ ಎಂದು ರೈತರು ಆರೋಪಿಸಿದ್ದರು. ಭಾನುವಾರ ಹಿರಿಯೂರಿನ ಹದಿನಾರು, ಚಳ್ಳಕೆರೆಯ ಮೂವರು ಹಾಗೂ ಚಿತ್ರದುರ್ಗದ ಇಬ್ಬರು ವರ್ತಕರು ಟೆಂಡರ್ ಹಾಕಿದ್ದರು. ₨ 3,೦೧೧ ರಿಂದ ₨ ೪,೦೪೪ ವರೆಗೆ ಟೆಂಡರ್ ಹಾಕಿದ್ದರೂ, ಬಹಳಷ್ಟು ಬೆಳೆಗಾರರು ನಿನ್ನೆಯ ದರ ಸಿಗದೆ ಪರಿತಪಿಸುತ್ತಿದ್ದರು.ಸುದ್ದಿಗಾರರ ಜತೆ ಮಾತನಾಡಿದ ಭರಂಪುರ ಗ್ರಾಮದ ಮಾರಣ್ಣ, ಶನಿವಾರ ₨ ೪,೧೦೯ ದರ ಸಿಕ್ಕಿದ್ದ ತನಗೆ ಇಂದು ₨ ೪,೦೫೯ ದರ ಸಿಕ್ಕಿದೆ. ನಿನ್ನೆ ಕೊಡದೇ ಇದ್ದುದ್ದಕ್ಕೆ ಕ್ವಿಂಟಲ್‌ಗೆ ₨ ೫೦ ಕಳೆದುಕೊಂಡಿದ್ದೇನೆ ಎಂದರೆ, ಅದೇ ಗ್ರಾಮದ ಗಿರಿಯಪ್ಪ ಎನ್ನುವವರು, ಜೊಳ್ಳು ಶೇಂಗಾಕ್ಕೆ ನಿನ್ನೆಗಿಂತ ಇಂದು ₨ ೨೦೦ ವರೆಗೆ ಹೆಚ್ಚಿನ ದರ ಸಿಕ್ಕಿದೆ. ಗಟ್ಟಿ ಶೇಂಗಾ ತಂದ ನನ್ನಂಥವರಿಗೆ ವಿಪರೀತ ನಷ್ಟವಾಗಿದೆ ಎಂದು ಬೇಸರ ತೋಡಿಕೊಂಡರು.ಶಿರಾ ತಾಲ್ಲೂಕಿನ ಕೊಟ್ಟ ಗ್ರಾಮದ ಮಹೇಶ್ ತಂದಿದ್ದ ಶೇಂಗಾಕ್ಕೆ ಶನಿವಾರ ₨ ೩,೩೩೦ ಸಿಕ್ಕಿದ್ದರೆ, ಭಾನುವಾರ ₨ ೨,೮೫೨ ಸಿಕ್ಕಿದೆ. ಕ್ವಿಂಟಲ್‌ಗೆ ₨ ೫೦೦ ನಷ್ಟವಾಗಿದ್ದು, ಹೇಗೆ ಮಾರಲಿ. ಗೋದಾಮಿನಲ್ಲಿ ಶೇಂಗಾ ಹಾಕಿ ಊರಿಗೆ ಹೋಗುತ್ತೇನೆ ಎಂದರೆ, ವೇಣುಕಲ್ಲುಗುಡ್ಡದ ವೀರೇಂದ್ರ ಎಂಬ ರೈತ ಸಹ ನಿನ್ನೆಗಿಂತ ₨ ೪೫೦ ಕಡಿಮೆಯಾಗಿರುವ ಕಾರಣ ಮಾರಾಟ ಮಾಡುವುದಿಲ್ಲ ಎಂದರು.ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಮಂಡಳಿ ನಿರ್ದೇಶಕ ಹೇಮಂತ ಕುಮಾರ್ ಮಾತನಾಡಿ, ಮರುಟೆಂಡರ್‌ನಿಂದ ರೈತರಿಗೆ ಅನುಕೂಲವಾಗಿದೆ ಎಂದರೆ, ಸಮಿತಿ ಕಾರ್ಯದರ್ಶಿ ಹಾಲಪ್ಪ ಮಾತನಾಡಿ, ಇಂದಿನ ಟೆಂಡರ್ ದರದಿಂದ ರೈತರಿಗೆ ಸಮಾಧಾನ ವಾಗದಿದ್ದರೆ ತಮ್ಮ ಶೇಂಗಾವನ್ನು ಗೋದಾಮಿನಲ್ಲಿ ಸಂಗ್ರಹಿಸಿಡಲು ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ತಿಳಿಸಿದರು. ಬಹಳಷ್ಟು ರೈತರು ಸಿಕ್ಕಷ್ಟು ಸಿಗಲಿ, ಎಂದು ಶಪಿಸುತ್ತಾ ಶೇಂಗಾ ತೂಗಲು ಒಪ್ಪಿಗೆ ಸೂಚಿಸಿದರು.

ಪ್ರತಿಕ್ರಿಯಿಸಿ (+)