ಮಂಗಳವಾರ, ಜನವರಿ 28, 2020
23 °C
ಕೆಪಿಎಸ್‌ಸಿ ಸಿಐಡಿ ತನಿಖಾ ವರದಿ

ಮರು ಸಂದರ್ಶನ ಖಚಿತ: ಸಿದ್ದರಾಮಯ್ಯ

ರವೀಂದ್ರ ಭಟ್ಟ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ‘2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಪ್ರಕ್ರಿಯೆಯಲ್ಲಿ ಸಾಕಷ್ಟು ಅಕ್ರಮಗಳಾಗಿರುವುದರಿಂದ ಮುಖ್ಯ ಪರೀಕ್ಷೆ ಮರು ಮೌಲ್ಯಮಾಪನ ಮತ್ತು ಮರು ಸಂದರ್ಶನ ನಡೆಯುತ್ತದೆ’. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಖಚಿತ ನಿರ್ಧಾರ ಇದು.ಕೆಪಿಎಸ್‌ಸಿ ಅಕ್ರಮಗಳ ಬಗ್ಗೆ ಸಿಐಡಿ ಪೊಲೀಸರು ನಡೆಸಿದ ತನಿಖೆಯ ವರದಿ­ಯನ್ನು ಕಳೆದ 12 ದಿನಗಳಿಂದ

ಪ್ರಕ­ಟಿಸಿ­ದ ‘ಪ್ರಜಾವಾಣಿ’, ಈ ಬಗ್ಗೆ  ಮುಖ್ಯಮಂತ್ರಿಗಳನ್ನು ಸಂದರ್ಶಿಸಿದಾಗ ಅವರು ತಮ್ಮ ತೀರ್ಮಾನವನ್ನು ಪುನರುಚ್ಚರಿಸಿದರು.‘ಮರು ಮೌಲ್ಯಮಾಪನ ಮತ್ತು  ಮರು ಸಂದರ್ಶನ ಸಾಧ್ಯವಿಲ್ಲ. ಕೆಪಿಎಸ್‌ಸಿ ಶಾಸನಬದ್ಧ ಸಂಸ್ಥೆ­ಯಾಗಿದ್ದು ಅದರ ಕಾರ್ಯದಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುವಂತಿಲ್ಲ’ ಎಂದು ಆಯೋಗ ಸರ್ಕಾರಕ್ಕೆ ಪತ್ರ ಬರೆದಿರುವ ವಿಷಯವನ್ನು ಅವರ ಗಮನ­ಕ್ಕೆ ತಂದಾಗ, ‘ಅಂತಹ ಯಾವುದೇ ಪತ್ರ ಸರ್ಕಾರಕ್ಕೆ ಬಂದಿಲ್ಲ. ಶಾಸನಬದ್ಧ ಸಂಸ್ಥೆ ಎಂಬ ಕಾರಣಕ್ಕೆ ಅವರು ಎಷ್ಟಾದರೂ ಅಕ್ರಮಗಳನ್ನು ನಡೆಸಬಹುದು ಎಂದು ಅಲ್ಲ.ಅಲ್ಲದೇ ಅವರು ಅಕ್ರಮಗಳನ್ನು ನಡೆಸಿದಾಗ ರಾಜ್ಯ ಸರ್ಕಾರ ಅದನ್ನು ಸುಮ್ಮನೆ ನೋಡಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ’ ಎಂದು  ಹೇಳಿದರು.‘ಈಗ ರಾಜ್ಯ ಸರ್ಕಾರ ಏನು ಮಾಡುತ್ತದೆ’ ಎಂಬ ಪ್ರಶ್ನೆಗೆ, ‘ಮರು ಮೌಲ್ಯಮಾಪನ ಮತ್ತು ಮರು ಸಂದ­ರ್ಶನ ನಡೆಸಬೇಕು ಎಂದು ಸಚಿವ ಸಂಪುಟ­ದಲ್ಲಿ ತೀರ್ಮಾನಿಸಲಾಗಿದೆ. ಅದರಂತೆಯೇ ಸಿಐಡಿ ವರದಿಯ ಪ್ರಕಾರ ಅಕ್ರಮದಲ್ಲಿ ಭಾಗಿಯಾದವ­ರನ್ನು ಹೊರಗಿಟ್ಟು ಮರು ಮೌಲ್ಯ­ಮಾಪನ ಮತ್ತು ಮರು ಸಂದರ್ಶನ ನಡೆಸುತ್ತೇವೆ. ಈ ಬಗ್ಗೆ ಅನುಮಾನ ಬೇಡ’ ಎಂದರು.‘ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಸಿಐಡಿ ಉಲ್ಲೇಖಿಸಿದ ಅಭ್ಯರ್ಥಿ­ಗಳ ಹೆಸರನ್ನು ಬಿಟ್ಟು ಉಳಿದ ಅಭ್ಯರ್ಥಿ­ಗಳ ನೇಮಕಾತಿ ಪಟ್ಟಿಯನ್ನು ಪ್ರಕಟ ಮಾಡುವಂತೆ ಕೆಲವರು ಹೋರಾಟ ನಡೆಸುತ್ತಿರುವುದು ನಿಮ್ಮ ಗಮನಕ್ಕೆ ಬಂದಿದೆಯೇ’ ಎಂದು ಕೇಳಿದಾಗ, ‘ಹೌದು ಬಂದಿದೆ. ಆದರೆ ಅವರು ಹೇಳಿದಂತೆ ಮಾಡುವುದು ಸಾಧ್ಯವಿಲ್ಲ. ಅಕ್ರಮ ನಡೆದಿದೆ ಎನ್ನುವುದು ಗೊತ್ತಾದ ನಂತರ ನೇಮಕಾತಿ ಪಟ್ಟಿಯನ್ನು ಪ್ರಕಟ ಮಾಡಲು ಸಾಧ್ಯವೇ ಇಲ್ಲ’ ಎಂದು ಅವರು ಖಡಾಖಂಡಿತವಾಗಿ ಉತ್ತರಿಸಿದರು.ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ಕೆಪಿಎಸ್‌ಸಿ ಅಕ್ರಮ, ಸಿಐಡಿ ವರದಿ, ಕೆಪಿಎಸ್‌ಸಿ ವಾದ ಮತ್ತು ಅಭ್ಯರ್ಥಿಗಳ ವಾದ ಈ ಎಲ್ಲ ವಿಷಯಗಳನ್ನು ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.ಕೆಪಿಎಸ್‌ಸಿ ಹೇಳುವಂತೆ, ಮರು ಸಂದರ್ಶನ ಮತ್ತು ಮರು ಮೌಲ್ಯಮಾಪನ ಸಾಧ್ಯವಾಗದೇ ಇದ್ದರೆ ಬೇರೆ ಮಾರ್ಗ ಏನಿದೆ ಎನ್ನುವುದನ್ನು ಸರ್ಕಾರ ಹುಡುಕುತ್ತದೆ. 2011ರ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿ ಪಟ್ಟಿಯನ್ನು ಆಯೋಗ ಪ್ರಕಟಿಸಿದರೆ ಅದನ್ನು ತಿರಸ್ಕರಿಸುವ ಹಕ್ಕು ರಾಜ್ಯ ಸರ್ಕಾರಕ್ಕೆ ಇದೆ ಎಂದು ಅವರು ಹೇಳಿದರು.ನೇಮಕಾತಿ ಪಟ್ಟಿ ಪ್ರಕಟವಾದ ನಂತರ ಅದನ್ನು ತಿರಸ್ಕರಿಸಿದರೆ ಯಾರಾ­ದರೂ ನ್ಯಾಯಾಲಯ ಮೆಟ್ಟಿಲು ಹತ್ತಬಹುದಲ್ಲವೇ ಎಂದು ಕೇಳಿದ್ದಕ್ಕೆ, ‘ಆ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ಈ ಬಗ್ಗೆ ಕಾನೂನು ತಜ್ಞರೊಂದಿಗೆ ಸಮಾಲೋಚಿಸಲಾಗುವುದು. ನೇಮ­ಕಾತಿ ಪಟ್ಟಿ ಪ್ರಕಟವಾದ ನಂತರ  ಕೆಲವು ಅಭ್ಯರ್ಥಿಗಳು ನ್ಯಾಯಾಲಯ­ದಲ್ಲಿ ಪ್ರಶ್ನೆ ಮಾಡುವ ಸಾಧ್ಯತೆ ಇದೆ ಎಂದಾದರೆ 362 ಅಧಿಕಾರಿಗಳನ್ನು ನೇಮಕಾತಿ ಮಾಡಿಕೊಡಲು ಕೆಪಿಎಸ್‌ಸಿಗೆ ನೀಡಿದ ಆದೇಶವನ್ನೇ ವಾಪಸು ಪಡೆದು ಹೊಸದಾಗಿ ಪ್ರಕ್ರಿಯೆ ಪ್ರಾರಂಭಿಸುವುದರ ಕುರಿತೂ ಸರ್ಕಾರ ಪರಿಶೀಲನೆ ನಡೆಸಲಿದೆ’ ಎಂದರು.1998, 1999, 2004 ನೇಮಕಾತಿ ಅಕ್ರಮದ ವಿಷಯ ನ್ಯಾಯಾಲಯದಲ್ಲಿದೆ. ಆದರೆ ಈ ಮೂರೂ ಸಂದರ್ಭಗಳಲ್ಲಿ ಅಭ್ಯರ್ಥಿ­ಗಳು ಆಯ್ಕೆಯಾಗಿ ಈಗಾಗಲೇ ಕರ್ತವ್ಯದಲ್ಲಿದ್ದಾರೆ. ಆದರೆ ಈ ಬಾರಿ ಪರಿಸ್ಥಿತಿ ಭಿನ್ನ. ಇನ್ನೂ ಆಯ್ಕೆ ಪಟ್ಟಿ ಪ್ರಕಟವೇ ಆಗಿಲ್ಲ. ಈ ಹಂತದಲ್ಲಿ ಪ್ರಕರಣ ನ್ಯಾಯಾಲಯದ ಮೆಟ್ಟಿ­ಲೇರಿದರೆ ತಕ್ಷಣಕ್ಕೆ ನೇಮಕಾತಿ ಪ್ರಕ್ರಿಯೆ ಕೂಡ ಸಾಧ್ಯವಾಗುವುದಿಲ್ಲ. ಇದ­ರಿಂದಾಗಿ ನೇಮಕಾತಿಗೆ ಪರ್ಯಾಯ ಮಾರ್ಗಗಳನ್ನೂ ಸರ್ಕಾರ ಹುಡುಕಲಿದೆ ಎಂದು ಅವರು ಹೇಳಿದರು.ತಹಶೀಲ್ದಾರ್‌ ಸೇರಿದಂತೆ ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಅವುಗಳಿಗೆ ತಕ್ಷಣ ನೇಮಕಾತಿ ಮಾಡಿಕೊಳ್ಳದೇ ಇದ್ದರೆ ತುಂಬಾ ಕಷ್ಟವಾಗುತ್ತದೆ ಎಂದು ಅವರು ಹೇಳಿದರು.

(ಮುಗಿಯಿತು)

ಪ್ರತಿಕ್ರಿಯಿಸಿ (+)