ಶುಕ್ರವಾರ, ಮೇ 14, 2021
21 °C

ಮರೆಯಾಗುವ ಭೀತಿಯಲ್ಲಿ ಅರಸಿಬೀದಿ ಸಾಮ್ರೋಜ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಪರಂಪರೆಯ ಪ್ರತೀಕವಾಗಿರುವ ಪಟ್ಟದಕಲ್ಲು, ಐಹೊಳೆ, ಬಾದಾಮಿ ಶಿಲ್ಪಕಲೆಯ ತವರೂರುಗಳಿಂದ ಕೇವಲ ಹದಿನೈದೋ.. ಇಪ್ಪತ್ತೋ ಕಿ.ಮೀ ದೂರದಲ್ಲಿರುವ ಅರಸಿಬೀದಿ ಸಾಮಾಜ್ಯ ಪುನಶ್ಚೇತನಕ್ಕಾಗಿ ಕಾಯ್ದು ಕುಳಿತಿದೆ.ಐತಿಹಾಸಿಕ ಸ್ಮರಕಗಳನ್ನು ರಕ್ಷಣೆ ಮಾಡಲೆಂದು ಇರುವ ಪ್ರಾಚ್ಯವಸ್ತು ಇಲಾಖೆಯ ಗಮನಕ್ಕೆ ಅರಸಿಬೀದಿ ಸಾಮ್ರೋಜ್ಯದ ಅಳಿವಿನ ಕಥೆ ಚೆನ್ನಾಗಿ ಗೊತ್ತಿದ್ದರೂ, ಮೌನ ವಹಿಸಿದ್ದು ಏಕೆ? ಎಂಬ ಯಕ್ಷ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ನಿಧಿಗಾಗಿ ಇಲ್ಲಿ ನಿತ್ಯ ಭೂಮಿ ಅಗೆಯುವ ಕಾರ್ಯ ನಡೆದಿದೆ.ಅರಸಿಬೀದಿ ಹಿಂದಿನ ಕತೆ: 10ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಅಪ್ರತಿಮ ರಾಣಿ ಅಕ್ಕಾದೇವಿಯ ರಾಜಧಾನಿಯಾಗಿ ಮೆರೆದ ಅರಸಿಬೀದಿ ಸಾಮ್ರೋಜ್ಯ ಕಾರಣಾಂತರಗಳಿಂದ ಕಾಲಗರ್ಭದಲ್ಲಿ ಲೀನವಾಗಿದೆ. ಹುನಗುಂದ ತಾಲ್ಲೂಕಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ಗುಡೂರದಿಂದ ಕೊಪ್ಪಳ ಜಿಲ್ಲೆಗೆ ಹೋಗುವ ಹಾದಿಯಲ್ಲಿ ಹೊರಟರೆ ನಿರ್ಜನವಾದ ಗುಡ್ಡ ಕಾಣುತ್ತದೆ. ಅಲ್ಲಿ ಅಳಿದುಳಿದ ಜಿನಾಲಯಗಳು, ಅವಶೇಷಗಳು, ಶಾಸನಗಳು, ಮೌನವಾಗಿ ತಮ್ಮ ವೈಭವದ ಕತೆ ಹೇಳುವ  ಅರಸಿಬೀದಿ ಅಕ್ಷರಶಃ ಅನಾಥ ಸಾಮ್ರೋಜ್ಯ! ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇರುವ ಕಾಲುದಾರಿ ರಸ್ತೆಯಲ್ಲಿನ ಕಲ್ಲು, ಮುಳ್ಳು ದಾಟಿ ಬಂದರೆ ಅಪರೂಪದ ಕಲಾನೈಪುಣ್ಯತೆಯ ಶಿಥಿಲಾವಸ್ಥೆ ಯಲ್ಲಿರುವ ಗುಣದ ಬೆಡಂಗಿ ಅಥವಾ ಸುಳಿಗುಡಿ ಮತ್ತು ತ್ರಿಕೂಟ ಜಿನಾಲಯ ಎಂಬ ಎರಡು ಜಿನಾಲಯಗಳು ನಮ್ಮನ್ನು ಸ್ವಾಗತಿಸಿದರೆ, ಅನಾಥವಾಗಿ ಬಿದ್ದಿರುವ ಶಾಸನಗಳು ತಮ್ಮ ಅಳಲನ್ನು ತೋಡಿಕೊಳ್ಳುತ್ತವೆ.ಗುಡ್ಡವನ್ನು ಸುತ್ತಾಡಿದರೆ ಹತ್ತಾರು ಮಾಹಿತಿ ಲಭ್ಯವಾಗುತ್ತವೆ. ಅಲ್ಲಲ್ಲಿ ಕಾಣಸಿಗುವ ಪುರಾತನ ಕಟ್ಟಡದ ಕುರುಹುಗಳು, ಮುರಿದುಬಿದ್ದ ಕಲ್ಲಿನ ಕಂಬಗಳು, ಈಶ್ವರ-ಬಸವ, ಸೂರ್ಯ- ಚಂದ್ರರ ಚಿತ್ರಗಳನ್ನೊಳಗೊಂಡ ಶಾಸನ, ನಿಧಿ ಶೋಧಕ್ಕಾಗಿ ಅಗೆದ ತಗ್ಗುಗಳಲ್ಲದೇ, ನಿರ್ವಹಣೆ ಕೊರತೆಯಿಂದ ಹಾಳಾಗಿರುವ ಐತಿಹಾಸಿಕ ಪುರಾತನ ಅರಸಿಬಿದಿ ಕೆರೆ ಕಣ್ಣಿಗೆ ಗೋಚರಿಸುತ್ತವೆ.10-12ನೇ ಶತಮಾನ ಕಲ್ಯಾಣ ಚಾಲುಕ್ಯರು ಉಚ್ಛ್ರಾಯ ಸ್ಥಿತಿಯಲ್ಲಿರುವ ಕಾಲ ಅದು. ಆ ಕಾಲದ ಮಹಿಳಾ ಅರಸಿಯರಲ್ಲಿ ರಾಣಿ ಅಕ್ಕಾದೇವಿ ರಾಜಧಾನಿಯನ್ನಾಗಿ ಮಾಡಿಕೊಂಡ ಸ್ಥಳವನ್ನೇ ವಿಕ್ರಮಪುರ ಅಥವಾ ಅರಸಿಬೀದಿ  ಕರೆಯುತ್ತಿದ್ದರು. ಕಲ್ಯಾಣ ಚಾಲುಕ್ಯರ ಪತನಾನಂತರ ಅನಾದರಕ್ಕೊಳಗಾಗಿ ಇತ್ತೀಚಿನ 250-300 ವರ್ಷಗಳ ಹಿಂದಿನವರೆಗೂ ಅಸ್ತಿತ್ವದಲ್ಲಿದ್ದ ಇಲ್ಲಿನ ಜನ ಒಮ್ಮೆಲೆ ಸ್ಥಳಾಂತರವಾದದ್ದರ ಬಗ್ಗೆ ಸ್ಥಳೀಯರಲ್ಲಿ ಹತ್ತಾರು ಊಹಾಪೋಹಗಳಿವೆ. ಸುಮಾರು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಬೀಡು ಬಿಟ್ಟ ದೆವ್ವಗಳು ಬೆಳಗಿನವರೆಗೆ ನಾಟಕವಾಡುವುದು, ಚೇಷ್ಟೆ ಮಾಡುವುದಕ್ಕೆ ಬೇಸತ್ತೋ, ಇಲ್ಲವೆ ಅಂಜಿಕೆಯಿಂದಲೋ ಊರು ಬಿಟ್ಟು ಹೋದರೆಂದು ಕೆಲವರು ಹೇಳಿದರೆ, ಮತ್ತೆ ಕೆಲವರು ನಿಯಂತ್ರಣಕ್ಕೆ ಬಾರದ ಮಾರಕ ರೋಗಗಳ ಹಾವಳಿಯಿಂದ ಸಮೀಪದ ಊರುಗಳಿಗೆ ಹೋಗಿ ನೆಲೆಸಿದರೆಂದು ಹಿರಿಯರು ಹೇಳುತ್ತಾರೆಂದು ಶಶಿ ಅಡವಿಹಾಳ ಮಾಹಿತಿ ನೀಡುತ್ತಾರೆ.

ಅಳಿದುಳಿದಿರುವ ಅರಸಿಬೀದಿ ಸಾಮ್ರೋಜ್ಯದ ಸುತ್ತಮುತ್ತ ಇಂದಿಗೂ ನೆಲ ಅಗೆಯುವ ಕಾರ್ಯ ನಿರಂತರವಾಗಿ ನಡೆದಿದೆ. ಅರಸಿಬೀದಿ ಸಾಮ್ರೋಜ್ಯದ ಕತೆ ಹೇಳುವದಕ್ಕೆಂದು ಇರುವ ಸುಂದರ ಶಿಲ್ಪಕಲೆ ದೇವಾಲಯಗಳಲ್ಲಿಯೂ ಕೂಡಾ ನಿಧಿಗಾಗಿ ಅಗೆಯಲಾಗಿದೆ. ಮುಂದೊಂದು ದಿನ ದೇವಾಲಯ ಕುಸಿದು ಬಿದ್ದರೂ ಆಶ್ಚರ್ಯ ಪಡಬೇಕಿಲ್ಲ. ಇತಿಹಾಸದ ಮೇಲೆ ಬೆಳಕು ಚೆಲ್ಲುವ ಸಂಶೋಧನೆಯನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ, ಇದನ್ನು ಪುನಶ್ಚೇತನಗೊಳಿಸಿದರೆ ರಾಣಿ ಅಬ್ಬಕ್ಕನ ರಾಜಧಾನಿ `ಅರಸಿಬೀದಿ ಸಾಮ್ರಾಜ್ಯ~ ಮುಂದಿನ ಪೀಳಿಗೆಗೆ ಕಾಣಸಿಗಲು ಸಾಧ್ಯವಾಗಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.