ಗುರುವಾರ , ಜುಲೈ 29, 2021
21 °C

ಮಲಕನಮರಡಿ: ಶಾಲೆಯಲ್ಲಿ ಬಿಸಿಯೂಟ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: ತಾಲ್ಲೂಕಿನ ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲಕನಮರಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಹಲವು ದಿನಗಳಿಂದ ಬಿಸಿಯೂಟ ಸ್ಥಗಿತಗೊಂಡಿದೆ. ಅಡುಗೆ ಸಿಬ್ಬಂದಿ ಮಧ್ಯ ಹೊಂದಾಣಿಕೆ ಕೊರತೆಯೆ ಬಿಸಿಯೂಟ ಸ್ಥಗಿತಕ್ಕೆ ಕಾರಣ ಎಂದು ಜನ ದೂರಿದ್ದಾರೆ.ಒಂದರಿಂದ ಏಳನೇ ತರಗತಿವರೆಗೆ ಒಟ್ಟು 250ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿರುವ ಈ  ಶಾಲೆಯಲ್ಲಿ ಬಿಸಿಯೂಟಕ್ಕೆ ಒಬ್ಬರು ಮುಖ್ಯಅಡಿಗೆದಾರ, ಇಬ್ಬರು ಸಹಾಯಕರು ಸೇರಿ ಒಟ್ಟು ಮೂರು ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದೆ. ಆದರೆ ಕಳೆದ ಕೆಲ ದಿನಗಳಿಂದ ಎರಡನೇ ಅಡುಗೆ ಸಹಾಯಕಿ ಅಯ್ಯಮ್ಮ ಎಂಬುವವರು ಕೆಲಸವರಸಿ ದುಡಿಯಲು ಬೆಂಗಳೂರಿಗೆ ಹೋಗಿದ್ದಾರೆ. ತಮ್ಮ ಬದಲಿಗೆ ತಮ್ಮ ಮಗಳನ್ನು ಕಳುಹಿಸುತ್ತಿದ್ದಾರೆ ಎನ್ನಲಾಗಿದೆ. ಇದು ಇತರ ಅಡುಗೆ ಸಿಬ್ಬಂದಿ ಮಧ್ಯೆ ಮುನಿಸಿಗೆ ಕಾರಣವಾಗಿದೆ.`ಸಲ್ಲದ ನೆಪವೊಡ್ಡಿ ವಾರದಲ್ಲಿ ಎರಡರಿಂದ ಮೂರು ದಿನ ಅಡುಗೆ ಸಿಬ್ಬಂದಿ ಬಿಸಿಯೂಟ ಮಾಡದ್ದರಿಂದ ಶಾಲೆಯ ನೂರಾರು ಮಕ್ಕಳು ಮಧ್ಯಾಹ್ನದ ಊಟಕ್ಕೆ ಶಾಲೆ-ಮನೆಗೆ ಪರದಾಡುವಂತಾಗಿದೆ' ಎಂದು ಗ್ರಾಮದ ಯುವಕ ಸುರೇಶ ದೂರಿದ್ದಾರೆ. ನೀರಿನ ಕೊರತೆ: ಈ ಬಗ್ಗೆ ಎರಡನೇ ಅಡುಗೆ ಸಹಾಯಕಿ ಯಂಕಮ್ಮ ಪ್ರತಿಕ್ರಿಯಿಸಿ, ಶಾಲೆಯಲ್ಲಿದ್ದ ಬೋರ್‌ವೆಲ್ ಕಳೆದ ಹಲವು ದಿನಗಳಿಂದ ಕೈಕೊಟ್ಟಿದೆ. ಅಡುಗೆ ಬೇಯಿಸಲು ಒಂದು-ಒಂದುವರೆ ಕಿಲೋ ಮೀಟರ್ ದೂರಕ್ಕೆ ಹೋಗಿ ನೀರು ತರಬೇಕಾಗುತ್ತಿದೆ.ಆರೋಗ್ಯ ಸರಿಯಿಲ್ಲದ ಕಾರಣ ನೀರು ತರಲಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಗ್ರಾಮದಲ್ಲಿ 30-50 ಅಡಿ ಅಂತರದಲ್ಲಿ ಎರಡು ಬೋರ್‌ವೆಲ್ ಇವೆ. ಅಡುಗೆ ಸಿಬ್ಬಂದಿ ಕುಂಟು ನೆಪ ಹೇಳುತ್ತಿದೆ ಎಂದು ಬಸವರಾಜ, ಚಿದಂಬರ ದೂರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಲೆಯ ಮುಖ್ಯಗುರು ಗುಂಡಪ್ಪ, ನೀರಿನ ಸಮಸ್ಯೆಯಿಂದ ಸೋಮವಾರ ಮಾತ್ರ ಬಿಸಿಯೂಟ ಸ್ಥಗಿತವಾಗಿದೆ. ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗುವುದು. ಆದರೆ ಯುವಕರು ಆರೋಪಿಸಿದಂತೆ ಹಲವು ದಿನಗಳಿಂದ ಸ್ಥಗಿತವಾಗಿಲ್ಲ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.