ಬುಧವಾರ, ಮೇ 18, 2022
23 °C

ಮಲದ ಗುಂಡಿಗೆ ಇಳಿದ ಮೂವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್: ನಗರದ ಅಶೋಕ ನಗರದ ಮನೆಯೊಂದರ ಮಲಗುಂಡಿ ಸ್ವಚ್ಛಗೊಳಿಸಲು ಇಳಿದ ಮೂವರು ವಿಷಾನಿಲ ಸೇವಿಸಿ ಸೋಮವಾರ ಮೃತಪಟ್ಟಿದ್ದಾರೆ.ನಾಗೇಂದ್ರಬಾಬು (26), ರವಿ (29) ಮತ್ತು ಕುಟ್ಟಿ ಪ್ರಸಾದ್(35) ಮೃತಪಟ್ಟವರು. ಕೆನಡಿಸ್ ಲೈನ್‌ನ ತೆಲುಗು ಲೈನಿನ ನಿವಾಸಿಗಳು ಎಂದು ಗುರುತಿಸಲಾಗಿದೆ.ಅಶೋಕ ನಗರ ನಿವಾಸಿ, ಬೆಮೆಲ್ ಕಾರ್ಮಿಕ ಆನಂದರಾಜ್ ಎಂಬುವವರ ಮನೆಗೆ ಏಳು ಜನರ ತಂಡ ಮಧ್ಯಾಹ್ನ 12ರ ವೇಳೆಗೆ ಬಂತು. 10 ಸಾವಿರ ರೂಗೆ ಮಲದ ಗುಂಡಿ ಸ್ವಚ್ಛಗೊಳಿಸುವ ಗುತ್ತಿಗೆ ಪಡೆದರು. ಸ್ಥಳದಲ್ಲೆ 1500 ರೂಪಾಯಿ ಮುಂಗಡವನ್ನು ಮನೆ ಮಾಲೀಕರು ನೀಡಿದರು. ನಂತರ ಗುಂಡಿಗೆ ಇಳಿದು ಸುಮಾರು ಮೂರು ಅಡಿಯಷ್ಟು ಸ್ವಚ್ಛಗೊಳಿಸಿದ ಬಳಿಕ ಹೊರಹೊಮ್ಮಿದ ವಿಷಾನಿಲ ಸೇವಿಸಿ ಮೂವರು ಮೃತಪಟ್ಟರು. ಸ್ಥಳದಲ್ಲಿದ್ದ ಉಳಿದ ನಾಲ್ವರು ಈ ಘಟನೆಯಿಂದ ಬೆದರಿ ಕೂಡಲೇ ಪರಾರಿಯಾದರು. ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಮೂವರ ಶವಗಳನ್ನು ಹೊರಕ್ಕೆ ತೆಗೆದರು.ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವಜ್ಯೋತಿ ರೇ, ಉಪವಿಭಾಗಾಧಿಕಾರಿ ಆರ್.ಎಸ್.ಪೆದ್ದಪ್ಪಯ್ಯ, ಬಂಗಾರಪೇಟೆ ತಹಶೀಲ್ದಾರ್ ಎಸ್. ಎಂ.ಮಂಗಳಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಬಳಿಕ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲು ನಿರ್ದೇಶಿಸಿದಾಗ ಇದನ್ನು ಮೃತರ ಕುಟುಂಬಗಳ ಸದಸ್ಯರು ತಡೆದರು. ಬೆಂಗಳೂರಿನಿಂದ ಪಿಯುಸಿಎಲ್ ಹಾಗೂ ಇನ್ನಿತರ ಸಂಘಟನೆಗಳ ಮುಖಂಡರು ಬರುವವರೆಗೂ ಶವ ಸಾಗಿಸಲು ಬಿಡುವುದಿಲ್ಲ ಎಂದು ಸಾಮಾಜಿಕ ಕಾರ್ಯಕರ್ತೆ ಪದ್ಮಾ ಪಟ್ಟುಹಿಡಿದಾಗ ಮೃತರ ಕುಟುಂಬಗಳ ಸದಸ್ಯರೂ ಅದಕ್ಕೆ ದನಿಗೂಡಿಸಿದರು.ನಂತರ ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ಸ್ಥಳಕ್ಕೆ ಬಂದು ಪರಿಹಾರ ಘೋಷಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟರು. ಅದಕ್ಕೆ ಪೂರಕವಾಗಿ ಕೆಲವು ಸಂಘಟನೆಗಳ ಸದಸ್ಯರೂ ಪ್ರತಿಭಟನೆ ಆರಂಭಿಸಿದರು. ರಾತ್ರಿ 7.30 ಹೊತ್ತಿಗೆ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದರೂ ಸನ್ನಿವೇಶ ತಿಳಿಯಾಗಲಿಲ್ಲ.

ಪ್ರತಿಭಟನಾ ನಿರತರು ಮಾತನಾಡಲು ಅವಕಾಶ ನೀಡದ ಪರಿಣಾಮವಾಗಿ ಜಿಲ್ಲಾಧಿಕಾರಿ ಮೌನ ಸಾಕ್ಷಿಯಂತೆ ನಿಂತಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.