ಬುಧವಾರ, ಮೇ 12, 2021
20 °C

ಮಳೆಗಾಲ ಬಹುತೇಕ ಮುಗಿದರೂ ತುಂಬದ ತಿಪ್ಪಗೊಂಡನಹಳ್ಳಿ ಜಲಾಶಯ...

ಪ್ರಜಾವಾಣಿ ವಾರ್ತೆ, ಡಿ.ಕೆ.ರಮೇಶ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಳೆಗಾಲ ಬಹುತೇಕ ಮುಗಿಯುತ್ತ ಬಂದರೂ ನಗರಕ್ಕೆ ನೀರುಣಿಸುವ ಮಾಗಡಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಜಲಾಶಯ ಕನಿಷ್ಠ ಅರ್ಧದಷ್ಟೂ ತುಂಬುವ ಲಕ್ಷಣಗಳು ಕಂಡು ಬರುತ್ತಿಲ್ಲ. ಕಳೆದ ವರ್ಷಕ್ಕಿಂತ ಈ ಬಾರಿ ಕೇವಲ 8 ಅಡಿಗಳಷ್ಟು ನೀರು ಅಧಿಕವಾಗಿ ಜಲಾಶಯಕ್ಕೆ ಹರಿದು ಬಂದಿದ್ದು ಈ ವರ್ಷವೂ ಜಲಾಶಯದಿಂದ ನೀರಿನ ಕೊಡುಗೆ ಶೇ 2ರಿಂದ 3ರಷ್ಟು ಮಾತ್ರ ಎನ್ನಲಾಗುತ್ತಿದೆ.

 

ಅಲ್ಲದೆ ಜಲಾಶಯಕ್ಕೆ ಹರಿದು ಬರುತ್ತಿರುವ ಅರ್ಕಾವತಿ ನದಿಯ ಅಲ್ಪಸ್ವಲ್ಪ ನೀರು ಕಲುಷಿತಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ನಗರದ ಮಹಾಲಕ್ಷ್ಮಿ ಬಡಾವಣೆ, ರಾಜಾಜಿನಗರ ಹಾಗೂ ಕಾಮಾಕ್ಷಿಪಾಳ್ಯ, ಮಲ್ಲೇಶ್ವರ ಹಾಗೂ ವಿಜಯನಗರದ ಕೆಲ ಭಾಗಗಳಿಗೆ ನೀರುಣಿಸುತ್ತಿರುವ ಜಲಾಶಯದ ಅಣೆಕಟ್ಟಿನ ಗರಿಷ್ಠ ಎತ್ತರ 74 ಅಡಿ. ಆದರೆ ಈ ವರ್ಷ ಇದುವರೆಗೆ ಸಂಗ್ರಹವಾಗಿರುವ ನೀರಿನ ಪ್ರಮಾಣ ಕೇವಲ 27 ಅಡಿ.`ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಪ್ರಮಾಣ ಕೊಂಚ ಏರಿಕೆಯಾಗಿದೆ. ಆದರೆ ಮಹಾನಗರದ ಬೇಡಿಕೆಗೆ ತಕ್ಕಂತೆ ನಿರಾತಂಕವಾಗಿ ನೀರುಣಿಸಲು ಕನಿಷ್ಠ 50 ಅಡಿಗಳಷ್ಟಾದರೂ ಭರ್ತಿಯಾಗಬೇಕಿದೆ. ಒಂದು ಕಾಲದಲ್ಲಿ ಜಲಾಶಯ 135 ದಶಲಕ್ಷ ಲೀಟರ್ ನೀರು ಪೂರೈಕೆ ಮಾಡಿದ ಇತಿಹಾಸ ಹೊಂದಿದೆ.ಆದರೆ ಈ ವರ್ಷ ಪ್ರತಿದಿನ ನಗರಕ್ಕೆ ಪೂರೈಕೆಯಾಗುತ್ತಿರುವ ನೀರಿನ ಪ್ರಮಾಣ ಸರಾಸರಿ 25 ದಶಲಕ್ಷ ಲೀಟರ್‌ನಷ್ಟು~ ಎಂದು ಬೆಂಗಳೂರು ಜಲಮಂಡಲಿಯ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಆರ್.ಮಂಜುನಾಥ್ ತಿಳಿಸಿದರು.`ಇದೇ ಪ್ರಮಾಣದಲ್ಲಿ ನೀರು ಪೂರೈಕೆ ಮುಂದುವರಿದರೆ ಕೆಲವೇ ತಿಂಗಳಲ್ಲಿ ಜಲಾಶಯ ಖಾಲಿಯಾಗುತ್ತದೆ. ಮಳೆ ಬಾರದೇ ಬೇರೆ ವಿಧಿಯೇ ಇಲ್ಲ. ರಾಜ್ಯದ ಬೇರೆಡೆ ಮಳೆಯಾಗುತ್ತಿದ್ದರೂ ಈ ಭಾಗದಲ್ಲಿ ುಳೆಯಾಗುತ್ತಿಲ್ಲ. ಅಕ್ಟೋಬರ್ ತಿಂಗಳಲ್ಲಾದರೂ ಮಳೆ ಬಂದು ಜಲಾಶಯ ತುಂಬಬಹುದು ಎಂದು ನಿರೀಕ್ಷಿಸಲಾಗುತ್ತಿದೆ~ ಎಂದರು.`ಜಲಚರಗಳು ಹಾಗೂ ಸುತ್ತಮುತ್ತಲಿನ ಜೀವಸಂಕುಲಗಳ ಹಿತದೃಷ್ಟಿಯಿಂದ ಜಲಾಶಯದಲ್ಲಿ ಕನಿಷ್ಠ 10ರಿಂದ 12 ಅಡಿ ನೀರು ಇರಲೇಬೇಕಿದೆ. ಹೀಗಾಗಿ ಇದಕ್ಕಿಂತ ಕೆಳಗಿನ ಮಟ್ಟದ ನೀರನ್ನು ಸರಬರಾಜು ಮಾಡುವಂತಿಲ್ಲ. ಒಂದು ವೇಳೆ ಹಾಗೆ ಮಾಡಿದರೂ ಹೂಳು, ಕಲ್ಮಶಗಳನ್ನು ಶುದ್ಧೀಕರಿಸುವುದು ಕಷ್ಟವಾಗುತ್ತದೆ~ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಎಂ.ಗಂಗಾಧರಮೂರ್ತಿ ತಿಳಿಸಿದರು.ಪ್ರಸ್ತುತ ಜಲಾಶಯದಿಂದ ಒಂದು ಪಂಪ್ ಮೂಲಕ ಮಾತ್ರ ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ಹಬ್ಬ ಮುಂತಾದ ವಿಶೇಷ ದಿನಗಳಂದು ಮಾತ್ರ ಎರಡೂ ಪಂಪ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ಕಾವೇರಿ ನದಿಯಿಂದ ನಗರಕ್ಕೆ ಪ್ರತಿದಿನ ಸುಮಾರು 900 ದಶಲಕ್ಷ ಲೀಟರ್ ನೀರು ಸರಬರಾಜಾಗುತ್ತಿದೆ. ಆದರೆ ಇದಕ್ಕೆ ಹೋಲಿಸಿದರೆ ಜಲಾಶಯದ ಕೊಡುಗೆ ಶೇ 2ರಿಂದ 3ರಷ್ಟು.ಶಿವಗಂಗೆ ಬೆಟ್ಟದ ಕಡೆಯಿಂದ ಹರಿದು ಬರುವ ಕುಮುದ್ವತಿ ನದಿ ಮತ್ತು ನಂದಿ ಬೆಟ್ಟದ ಕಡೆಯಿಂದ ಹರಿದು ಬರುವ ಅರ್ಕಾವತಿ ನದಿ ಜಲಾಶಯದ ನೀರಿನ ಮೂಲಗಳಾಗಿವೆ. ಈ ವರ್ಷ ಕುಮುದ್ವತಿ ನದಿ ಪಾತ್ರದಲ್ಲಿ ಮಳೆ ಪ್ರಮಾಣ ಕುಸಿದಿದ್ದು ಕುಮುದ್ವತಿಗೆ ಹೋಲಿಸಿದರೆ ಅರ್ಕಾವತಿಯಿಂದಲೇ ಹೆಚ್ಚು ಮಟ್ಟದ ನೀರು ಹರಿದು ಬಂದಿದೆ. ಆದರೆ ಅರ್ಕಾವತಿ ಕಲುಷಿತಗೊಂಡು ಹರಿದು ಬರುವುದು ಆತಂಕಕ್ಕೆ ಕಾರಣವಾಗಿದೆ.ಪರಿಸರ ತಜ್ಞ ಎ.ಎನ್.ಯಲ್ಲಪ್ಪ ರೆಡ್ಡಿ, `ದೊಡ್ಡಬಳ್ಳಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮನಬಂದಂತೆ ಕಾರ್ಖಾನೆಗಳ ಸ್ಥಾಪನೆಗೆ ಅನುಮತಿ ನೀಡಲಾಗಿದೆ. ತ್ಯಾಜ್ಯವನ್ನು ನದಿಗೆ ನೇರವಾಗಿ ಹರಿದು ಬಿಡುತ್ತಿರುವುದರಿಂದ ನದಿ ಕಲ್ಮಶವಾಗಿದೆ.ಮರಳು ಗಣಿಗಾರಿಕೆ, ಕ್ವಾರಿಗಳಿಂದಾಗಿ ನದಿಯ ನೀರಿನ ಸೆಲೆ ಬತ್ತುತ್ತಿದೆ. ಜತೆಗೆ ನಗರದ ತ್ಯಾಜ್ಯವನ್ನು ಕೂಡ ಹರಿದು ಬಿಡಲಾಗುತ್ತಿದೆ. ಅರ್ಕಾವತಿಗೆ ಹೋಲಿಸಿದರೆ ಕುಮುದ್ವತಿಯೇ ಉತ್ತಮ~ ಎಂದರು.

 

`ನದಿ ಪಾತ್ರದಲ್ಲಿ ನಿರ್ಮಾಣ ಕಾರ್ಯದಲ್ಲಿ ತೊಡಗದಂತೆ ಸಂಬಂಧಪಟ್ಟವರಿಗೆ ನೊಟೀಸ್ ನೀಡಲಾಗಿದೆ. ಆದರೆ ಬೆಳೆಯುತ್ತಿರುವ ಮಹಾನಗರವನ್ನು ನಿಯಂತ್ರಿಸುವುದಾದರೂ ಹೇಗೆ? ಪ್ರಸ್ತುತ ಜಲಾಶಯದಲ್ಲಿ ಮಾಲಿನ್ಯ ನಿಯಂತ್ರಣದಲ್ಲಿದೆ.

 

ಆದರೆ ಇದೇ ಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ಅರ್ಕಾವತಿ ವಿಷಯುಕ್ತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ~ ಎನ್ನುತ್ತಾರೆ ಜಲಮಂಡಲಿಯ ಉನ್ನತ ಅಧಿಕಾರಿಯೊಬ್ಬರು.ಅನೇಕ ವರ್ಷಗಳಿಂದ ಜಲಾಶಯದಲ್ಲಿ ನೀರಿಲ್ಲದೇ ಇರುವುದರಿಂದ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಸಂಖ್ಯೆಯೂ ಕಡಿಮೆಯಾಗಿದೆ.ಕಾರ್ಯಭಾರ ಕಡಿಮೆ ಇರುವುದರಿಂದ ಇಲ್ಲಿನ ನೌಕರರನ್ನು ಜಲಮಂಡಲಿ ಬೇರೆಡೆಗೆ ವರ್ಗಾಯಿಸಿದೆ. ಜಲಾಶಯದ ಸಮೀಪವೇ ಇರುವ ಸಿಬ್ಬಂದಿ ಕಾಲೋನಿ ಬಿಕೋ ಎನ್ನುತ್ತಿದ್ದು ಅನೇಕ ಮನೆಗಳು ಪಾಳು ಬಿದ್ದಿವೆ. ಕಾಲೋನಿಯ ಹಿಂದಿನ ದಿನಗಳನ್ನು ಸ್ಮರಿಸಿದ ಅರ್ಚಕ ಭಾಸ್ಕರ್ ಶರ್ಮ `ಮೊದಲು ಇಲ್ಲೆಲ್ಲಾ ಜನ ವಸತಿ ಚೆನ್ನಾಗಿತ್ತು. ಸರ್ ಎಂ.ವಿಶ್ವೇಶ್ವರಯ್ಯ ಅವರ ಕಾಲದಲ್ಲಿ ಅಣೆಕಟ್ಟು ನಿರ್ಮಾಣವಾದಾಗ ಇಲ್ಲಿ ನೌಕರರಿಗೆ ವಸತಿಗೃಹಗಳನ್ನು ಕಟ್ಟಿಕೊಡಲಾಯಿತು. ಆಸ್ಪತ್ರೆ, ಪೊಲೀಸ್ ಠಾಣೆ ಇತ್ಯಾದಿ ಸೌಕರ್ಯ ಒದಗಿಸಲಾಗಿತ್ತು.ಮೊದಲಿದ್ದಷ್ಟು ನೌಕರರು ಈಗಿಲ್ಲ. ಅನಾರೋಗ್ಯದಂತಹ ತುರ್ತು ಸಂದರ್ಭದಲ್ಲಿ ಜಲಮಂಡಲಿ ವಾಹನ ಸೌಕರ್ಯ ಒದಗಿಸುತ್ತದೆ. ಮಾಗಡಿ, ಬೆಂಗಳೂರು ಮುಂತಾದ ಕಡೆಗೆ ತೆರಳಿ ಚಿಕಿತ್ಸೆ ಪಡೆಯುತ್ತೇವೆ~ ಎಂದು ಹೇಳಿದರು.ಹರಿಯದ ಹೇಮಾವತಿ...

ತಿಪ್ಪಗೊಂಡನಹಳ್ಳಿಗೆ ಸುಮಾರು 30ರಿಂದ 40 ಕಿ.ಮೀ ದೂರದಲ್ಲಿರುವ ಕುಣಿಗಲ್‌ಗೆ ಹೇಮಾವತಿ ನದಿ ನೀರು ಹರಿದು ಬರುತ್ತಿದೆ. ಅದೇ ನೀರನ್ನು ಜಲಾಶಯಕ್ಕೂ ಹರಿಸಲು ಅನೇಕ ಬಾರಿ ಚರ್ಚೆಗಳು ನಡೆದರೂ ಅದು ಕಾರ್ಯ ರೂಪಕ್ಕೆ ಬಂದಿಲ್ಲ.`ಹೇಮಾವತಿ ನೀರನ್ನು ಕಾಲುವೆ ಮೂಲಕ ಜಲಾಶಯಕ್ಕೆ ಹರಿಸುವ ಪ್ರಸ್ತಾವನೆ ಇದ್ದರೂ ಸರ್ಕಾರದ ಮಟ್ಟದಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ. ಇದೊಂದು ದೊಡ್ಡ ಯೋಜನೆಯಾಗಿದ್ದು ಕಾವೇರಿ ಕಣಿವೆ ವ್ಯಾಪ್ತಿಗೆ ತಿಪ್ಪಗೊಂಡನಹಳ್ಳಿ ಒಳಪಡುವುದರಿಂದ ಕಾನೂನಿನ ತೊಡಕುಗಳನ್ನು ನಿವಾರಿಸಿಕೊಳ್ಳಬೇಕಿದೆ~ ಎಂದು ಜಲಮಂಡಲಿಯ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.ಸ್ಥಳೀಯರೇ ನೀರು ಬಳಸುವುದಿಲ್ಲ!

ತಿಪ್ಪಗೊಂಡನಹಳ್ಳಿ ಜಲಾಶಯದ ನೀರನ್ನು ಬಳಸಲು ಸ್ಥಳೀಯ ಜನರೇ ಬಳಸಲು ಹಿಂಜರಿಯುತ್ತಾರೆ. ಇದಕ್ಕೆ ಕಾರಣ ನೀರು ಕಲುಷಿತಗೊಂಡಿರುವುದು.ಗ್ರಾಮಸ್ಥ ಶ್ರೀನಿವಾಸ್, `ಮೊದಲು ಜಲಾಶಯದಲ್ಲಿ ನೀರು ಚೆನ್ನಾಗಿತ್ತು. ಆದರೆ ಅರ್ಕಾವತಿ ನದಿ ನೀರು ಕಲುಷಿತ ಆಗಿದೆ. ನಾವು ಕೊಳವೆ ಬಾವಿ ನೀರು ಉಪಯೋಗಿಸುತ್ತೇವೆ. ಬೆಂಗಳೂರು ಜನರಷ್ಟೇ ಆ ನೀರು ಉಪಯೋಗಿಸಬೇಕು!~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.