ಬುಧವಾರ, ಮೇ 18, 2022
24 °C

ಮಳೆಗೆ ಮಲೆನಾಡು ತತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಮಲೆನಾಡಿನಲ್ಲಿ ಮಳೆ ಮುಂದುವರಿದಿದೆ. ಜಿಲ್ಲೆಯಾದ್ಯಂತ ಮಳೆ ಬಿರುಸುಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ. ಇದರಿಂದ ಜಿಲ್ಲೆಯ ಮೂರೂ ಪ್ರಮುಖ ಜಲಾಶಯಗಳ ಒಳಹರಿವು ಉತ್ತಮವಾಗಿದೆ. ಕೆಲ ನದಿಗಳು ಪ್ರವಾಹದ ಭೀತಿ ಸೃಷ್ಟಿಸಿವೆ.ಬಿಟ್ಟು ಬಿಡದೆ ಮಳೆಯಾಗುತ್ತಿರುವುದರಿಂದ ಜಿಲ್ಲೆಯಲ್ಲಿ ದೈನಂದಿನ ಜನಜೀವನ ಮೇಲೆ ಪರಿಣಾಮ ಬೀರಿದೆ. ಶಾಲಾ ಕಾಲೇಜುಗಳು, ಕಚೇರಿಗಳಿಗೆ ವಾರಾಂತ್ಯದ ರಜೆ ಇದ್ದರೂ ನಿರಂತರ ಸುರಿದ ಮಳೆಯಿಂದಾಗಿ ಬಹುತೇಕ ಜನರು ಮನೆಯಲ್ಲೆ ದಿನ ಕಳೆದರು. ಮಳೆ ಬಿಡುವು ನೀಡದೆ ಬರುತ್ತಿರುವ ಕಾರಣ ಮೆಕ್ಕೆಜೋಳ, ಅಡಿಕೆ ತೋಟಗಳಿಗೆ ತಂಡಿ ಹಿಡಿದಂತಾಗಿದ್ದು, ಶುಂಠಿ ಬೆಳೆಗೆ ಕೊಳೆ ರೋಗ ಬಾಧಿಸುವ ಭೀತಿ ರೈತರಲ್ಲಿ ಮೂಡಿದೆ.ಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಕಳೆದ 24 ಘಂಟೆಗಳಲ್ಲಿ ಜಲಾಶಯಕ್ಕೆ ಮೂರು ಅಡಿ ನೀರು ಬಂದಿದ್ದು, ನೀರಿನ ಮಟ್ಟ 170.05 (ಗರಿಷ್ಠ ಮಟ್ಟ: 186) ಅಡಿಯಿದ್ದು, ಭರ್ತಿಗೆ ಕೇವಲ 16 ಅಡಿ ಬಾಕಿ ಇದೆ. 34,625 ಕ್ಯೂಸೆಕ್ ಒಳಹರಿವಿದ್ದು, 2,175 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.ಲಿಂಗನಮಕ್ಕಿ ಜಲಾಶಯದ ಒಳಹರಿವು 41,674 ಕ್ಯೂಸೆಕ್ ಇದ್ದು, ಹೊರ ಹರಿವನ್ನು ಸ್ಥಗಿತಗೊಳಿಸಲಾಗಿದೆ. ಮಳೆಯ ನೀರನ್ನೇ ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತಿದೆ. 1,797.55 (ಗರಿಷ್ಠ ಮಟ್ಟ: 1,819) ಅಡಿ ನೀರು ಸಂಗ್ರಹವಾಗಿದೆ.ತುಂಗಾ ನದಿ ಪ್ರವಾಹ ತುಸು ಕಡಿಮೆ ಆಗಿದ್ದು, ಮಂಡಗದ್ದೆಯಲ್ಲಿ ರಸ್ತೆ ಮೇಲೆ ನೀರಿ ನಿಂತ ಕಾರಣ ಶನಿವಾರ ಸ್ಥಗಿತಗೊಂಡಿದ್ದ ಶಿವಮೊಗ್ಗ-ತೀರ್ಥಹಳ್ಳಿ ಮಾರ್ಗ ಭಾನುವಾರ ಆರಂಭಿಸಲಾಗಿದೆ.ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸನಗರದ ಯಡೂರು ಪ್ರದೇಶದಲ್ಲಿ ಅತ್ಯಧಿಕ 168 ಮಿಮೀ ಮಳೆಯಾಗಿದೆ. ಮಾಣಿ ಡ್ಯಾಂ ವ್ಯಾಪ್ತಿಯಲ್ಲಿ 160 ಮಿಮೀ ಹುಲಿಕಲ್ಲು ಘಾಟಿಯಲ್ಲಿ 140 ಮಿಮೀ ಮಾಸ್ತಿಕಟ್ಟೆಯಲ್ಲಿ 119 ಮಿಮೀ ಲಿಂಗನಮಕ್ಕಿ ಜಲಾನಯನ ವ್ಯಾಪ್ತಿಯಲ್ಲಿ 61 ಮಿಮೀ ಹಾಗೂ ತೀರ್ಥಹಳ್ಳಿಯ ಆಗುಂಬೆಯಲ್ಲಿ 95.02 ಮಿಮೀ ಮಳೆ ಸುರಿದಿದೆ.ಶಿವಮೊಗ್ಗ 23.40 ಮಿಮೀ ಭದ್ರಾವತಿ 33 ಮಿಮೀ ತೀರ್ಥಹಳ್ಳಿ 89 ಮಿಮೀ ಶಿಕಾರಿಪುರ 24.4 ಮಿಮೀ, ಸಾಗರ 26.08 ಮಿಮೀ ಸೊರಬ 37 ಮಿಮೀ ಹಾಗೂ ಹೊಸನಗರ 41.04 ಮಿಮೀ ಮಳೆಯಾಗಿದೆ.ಸಂಚಾರ ಸ್ಥಗಿತ

ಸೊರಬ: ತಾಲ್ಲೂಕಿನಲ್ಲಿ ಜುಲೈ ಮೊದಲ ವಾರ ಮತ್ತು ಕಳೆದ 2-3 ದಿನಗಳಿಂದ ಸುರಿದ ಭಾರೀ ಮಳೆಗೆ ತಾಲ್ಲೂಕಿನ ಜಡೆ ಹೋಬಳಿಯ ಕೋಟೆಕೊಪ್ಪ-ಹೊಸಳ್ಳಿ ನಡುವೆ ರಸ್ತೆ ಸಂಪರ್ಕ ಕಡಿದು ಬಿದ್ದ ಪರಿಣಾಮ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಕಳೆದ ಹದಿನೈದು ದಿನಗಳಿಂದ ವಿದ್ಯಾರ್ಥಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಯಾತನೆ ಪಡುವಂತಾಗಿದೆ.ಜಡೆ ಹೋಬಳಿಯ ಕೆರೆಹಳ್ಳಿ, ಕೋಟೆಕೊಪ್ಪ, ಹೊಸಳ್ಳಿ, ಕಾತುವಳ್ಳಿ, ಚಗಟೂರು, ತುಮರಿಕೊಪ್ಪ ಮುಂತಾದ ಗ್ರಾಮಗಳ ಗ್ರಾಮಸ್ಥರು ದೈನಂದಿನ ವ್ಯವಹಾರಕ್ಕಾಗಿ ಆನವಟ್ಟಿಗೆ ತೆರಳಬೇಕಾದರೆ ಇದೇ ಮಾರ್ಗವಾಗಿ ಸಂಚರಿಸಬೇಕಿದ್ದು, ಒಂದೇ ಒಂದು ಖಾಸಗಿ ವಾಹನ ಸಂಚರಿಸುತ್ತದೆ. ಆದರೆ, ಕಳೆದ ಎರಡು ವಾರದ ಹಿಂದೆ ತಾಲ್ಲೂಕಿನಲ್ಲಿ ಸುರಿದ ಭಾರೀ ಮಳೆಗೆ ಕೆರೆ ಕೋಡಿಯಿಂದ ನುಗ್ಗಿದ ನೀರು ಮೋರಿ ಹಾಗೂ ರಸ್ತೆಗೆ ಹರಿದ ಪರಿಣಾಮ ರಸ್ತೆ ಸಂಪರ್ಕ ಕಡಿದು ಹೋಗಿದ್ದು, ಈ ಕಾರಣದಿಂದ ಕಳೆದ 25 ದಿನಗಳಿಂದ ಸುಮಾರು 15 ಕಿ.ಮೀ, ಬಸ್ ಸಂಚಾರ ಸ್ಥಗಿತಗೊಂಡಿದೆ.ಜಡೆ ಹೋಬಳಿ ಸುತ್ತಮುತ್ತಲಿನ ಸುಮಾರು 90 ವಿದ್ಯಾರ್ಥಿಗಳು ಆನವಟ್ಟಿಯ ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ತೆರಳುತ್ತಿದ್ದು, ರಸ್ತೆ ಸಂಚಾರ ಕಡಿದುಕೊಂಡಿದ್ದರಿಂದ ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳಿಗೆ ತೆರಳು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಜಿಲ್ಲಾ ಪಂಚಾಯ್ತಿ ಸದಸ್ಯ ಹುಣವಳ್ಳಿ ಗಂಗಾಧರಪ್ಪ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸದಾನಂದಗೌಡ ಅವರು ಸಂಬಂಧಪಟ್ಟ ಜಿಲ್ಲಾ ಪಂಚಾಯ್ತಿ ಎಂಜನಿಯರ್ ಅವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.ಕಳೆದ 10 ದಿನಗಳ ಹಿಂದೆ ಜಡೆ ಗ್ರಾಮ ಪಂಚಾಯ್ತಿಯ ಜನಸಂಪರ್ಕ ಸಭೆಗೆ ಆಗಮಿಸಿದ್ದ ಶಾಸಕ ಮಧು ಬಂಗಾರಪ್ಪನವರ ಗಮನಕ್ಕೆ ತಂದಾಗ ತಕ್ಷಣ ತಾತ್ಕಾಲಿಕ ದುರಸ್ತಿ ಮಾಡಿಸಿ, ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರೂ ಅಧಿಕಾರಿಗಳು ಶಾಸಕರ ಮಾತಿಗೆ ಬೆಲೆ ಕೊಟ್ಟಿಲ್ಲ ಎಂದು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.

ಮುಂದಿನ ದಿನಗಳಲ್ಲಾದರೂ ಅಧಿಕಾರಿಗಳು ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗದಿದ್ದರೆ ಇಲಾಖಾ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.ಉರುಳಿದ ಮರ

ಕಳೆದ ರಾತ್ರಿ ಎಡಬಿಡದೇ ಸುರಿದ ಮಳೆ-ಗಾಳಿಯಿಂದಾಗಿ ತಾಲ್ಲೂಕಿನ ಯಕ್ಷಿ ಗ್ರಾಮದ ಸಿವಿನ್ ರಾಮಪ್ಪ ಎಂಬುವವರ ಮನೆಯ ಮೇಲೆ ಮರ ಬಿದ್ದ ಪರಿಣಾಮ 4 ಜನರಿಗೆ ಗಾಯವಾಗಿದ್ದು, ಸುಮಾರು ್ಙ 60 ಸಾವಿರ ಸಷ್ಟ ಸಂಭವಿಸಿದೆ.ಕುಪ್ಪಗಡ್ಡೆ ಹೋಬಳಿಯ ಯಕ್ಷಿ ಗ್ರಾಮದ ಸಿವಿನ್ ರಾಮಪ್ಪ ಅವರ ಮನೆಯ ಮೇಲೆ ಸುಮಾರು 60 ಅಡಿ ಎತ್ತರದ ಹೊನ್ನೆ ಮರ ಬುಡ ಸಮೇತ ಬಿದ್ದಿದ್ದು, ಮನೆ ಹಾಗೂ ಮನೆಯಲ್ಲಿರುವ ವಸ್ತುಗಳಿಗೆ ಹಾನಿಯಾಗಿ 60 ಸಾವಿರ ನಷ್ಟ ಸಂಭವಿಸಿದೆ. ಅಲ್ಲದೇ ರಾಮಪ್ಪ, ಅವರ ಪತ್ನಿ ನಾಗಮ್ಮ, ಗೀತಾ, ಶಶಿಧರ, ಶರತ್‌ಗೆ ತಲೆ, ಮೈ,ಕೈಗೆ ಪೆಟ್ಟಾಗಿದ್ದು, ಎಲ್ಲರನ್ನೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಘಟನಾ ಸ್ಥಳಕ್ಕೆ ತಹಶೀಲ್ದಾರ್ ತೇಜಸ್‌ಕುಮಾರ್, ರಾಜಸ್ವ ನಿರೀಕ್ಷಕ ಶಾಂತಕುಮಾರ್, ಗ್ರಾಮ ಲೆಕ್ಕಾಧಿಕಾರಿ ಚಂದ್ರಶೇಖರ್, ಜ್ಞಾನೇಶ್ ಭೇಟಿ ನೀಡಿ, ನಷ್ಟ ಸಂಭವಿಸಿದ ಬಗ್ಗೆ ಪಟ್ಟಿ ತಯಾರಿಸಿ, ಪರಿಹಾರಕ್ಕಾಗಿ ಸರ್ಕಾರಕ್ಕೆ ಕಳುಹಿಸುವುದಾಗಿ ತಿಳಿಸಿದ್ದಾರೆ.ನೆರೆ ವೀಕ್ಷಣೆ

ಪ್ರತಿ ವರ್ಷವೂ ಮಳೆಗಾಲದಲ್ಲಿ ನೆರೆ ಹಾವಳಿಯಿಂದಾಗಿ ರೈತರು ಬೆಳೆ ಹಾನಿಯಿಂದ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದು, ನೆರೆ ಹಾವಳಿ ತಪ್ಪಿಸುವುದಕ್ಕಾಗಿ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡುವುದಾಗಿ ಶಾಸಕ ಮಧು ಬಂಗಾರಪ್ಪ ತಿಳಿಸಿದರು.ತಾಲ್ಲೂಕಿನ ಕಡಸೂರು, ತಟ್ಟೆಗುಂಡಿ, ಬಂದಗಿ, ಹಾಗೂ ಸಾಗರ ತಾಲ್ಲೂಕಿನ ತಾಳಗುಪ್ಪ ಹೋಬಳಿಯ ಶುಂಠಿಕೊಪ್ಪ,  ಹಿರೇನೆಲ್ಲೂರು, ಯಲಕುಂದ್ಲಿ ಗ್ರಾಮಗಳಲ್ಲಿ ಭಾನುವಾರ ನೆರೆ ಹಾವಳಿಗೊಳಗಾದ ಸ್ಥಳಕ್ಕೆ ಭೇಟಿ ನೀಡಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಪ್ರವಾಹದಿಂದಾಗಿ ಪ್ರತಿ ವರ್ಷ ರೈತರು ನೆರೆ ಹಾವಳಿಗೆ ಬೆಳೆಯನ್ನು ಕಳೆದುಕೊಂಡು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಎಂಜನಿಯರ್ ಜತೆಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.ಮಳೆ ಕಡಿಮೆಯಾದ ನಂತರ ಅಧಿಕಾರಿಗಳು ಮತ್ತೊಮ್ಮೆ ನೆರೆ ಹಾವಳಿ ಸ್ಥಳಕ್ಕೆ ಭೆಟಿ ನೀಡಿ, ರೈತರೊಂದಿಗೆ ಚರ್ಚಿಸಿ, ಹಾನಿಗೊಳಗಾದ ನಷ್ಟದ ಬಗ್ಗೆ ಪಟ್ಟಿ ತಯಾರಿಸಿ ಪರಿಹಾರ ನೀಡುವ ಬಗ್ಗೆ ಸರ್ಕಾರಕ್ಕೆ ವರದಿಯನ್ನು ಕಳುಹಿಸಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಎಚ್.ಗಣಪತಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶ್ರೀಪಾದ್ ಹೆಗಡೆ, ರಾಜ್ಯ ಕಾರ್ಯದರ್ಶಿ ಎನ್. ಕುಮಾರ್, ಗಾಳಿಪುರ ಲೋಕೇಶ್, ಜಯಂತ್, ರಾಮಪ್ಪ, ಇಲಾಖಾ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.