ಗುರುವಾರ , ಆಗಸ್ಟ್ 6, 2020
24 °C

ಮಳೆ-ಗಾಳಿ:ಯಾದಗಿರಿಯಲ್ಲಿ ಅಪಾರ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ನಗರದಲ್ಲಿ ಮೂರು ದಿನ ಸುರಿದ ಮಳೆ ತಂಪು ವಾತಾವರಣ ನಿರ್ಮಿಸಿದ್ದರೆ, ಇನ್ನೊಂದೆಡೆ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿತು. ಮಳೆ-ಗಾಳಿಗೆ ಸಂಭವಿಸಿದ ಹಾನಿಯಿಂದಾಗಿ ಬಹಳಷ್ಟು ಜನರು ನೆಮ್ಮದಿಯ ಜೀವನ ಕಳೆದುಕೊಂಡಂತಾಗಿದೆ.ಕಳೆದ ಮೂರ‌್ನಾಲ್ಕು ದಿನ ಸುರಿದ ಮಳೆ-ಗಾಳಿಯಿಂದಾಗಿ ನಗರದಲ್ಲಿ ಅಪಾರ ಹಾನಿ ಉಂಟಾಗಿದೆ. ರಸ್ತೆಗಳಲ್ಲಿ ಮರಗಳು ಉರುಳಿ ಬಿದ್ದಿದ್ದು, ವಿದ್ಯುತ್ ಕಂಬಗಳು ನೆಲಕಚ್ಚಿವೆ. ಇದರಿಂದಾಗಿ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಾಗಿತ್ತು.ನಗರದ ಬುಡ್ಗ ಜಂಗಮ ಜನಾಂಗದವರು ವಾಸಿಸುವ ಗುಡಿಸಲುಗಳು ಹಾರಿಹೋಗಿದ್ದು, ದುರ್ಗಾ ಕಾಲೋನಿಯ ಮೀನುಗಾರರ ಮನೆಗಳ ಛಾವಣಿಯೂ ಹಾರಿ ಹೋಗಿವೆ. ಸೋಮವಾರ ರಾತ್ರಿ ಬೀಸಿದ ಗಾಳಿಗೆ ಇಲ್ಲಿಯ ಹುಂಡೇಕಾರ ಓಣಿಯಲ್ಲಿರುವ ಜಾಮೀಯಾ ಆಯಿಷಾ ವಿಲ್ ಬನಾರ್ ಅರಬ್ಬಿ ಶಾಲೆ ಹಾಗೂ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿದ್ದು, ಶಾಲೆಯಲ್ಲಿದ್ದ ಸಾಮಗ್ರಿಗಳೆಲ್ಲವೂ ನೀರು ಪಾಲಾಗಿವೆ.ಶಾಲೆಯ ಒಟ್ಟು 6 ಕೊಠಡಿಗಳ ಮೇಲ್ಛಾವಣಿ ಹಾರಿ ಹೋಗಿವೆ. ಅರಬ್ಬಿ ಶಾಲೆಯ ಜೊತೆಗೆ 5 ನೇ ತರಗತಿಯವರೆಗೆ ಉರ್ದು ಪ್ರಾಥಮಿಕ ಶಾಲೆಯು ಈ ಕಟ್ಟಡದಲ್ಲಿ ನಡೆಯುತ್ತಿದ್ದು, ಸುಮಾರು 150 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ.ಶಾಲೆ ಪ್ರಾರಂಭವಾಗುತ್ತಿದ್ದಂತೆಯೇ ಮಳೆ-ಗಾಳಿಯಿಂದಾಗಿ ಮತ್ತೆ ಶಾಲೆಗೆ ರಜೆ ಘೋಷಿಸುವಂತಾಗಿದೆ. ಛಾವಣಿ ಹಾರಿಹೋಗಿರುವುದರಿಂದ ಶಾಲೆಗೆ ಮೂರು ದಿನ ರಜೆ ಘೋಷಿಸಲಾಗಿದೆ.ನೆಲಕ್ಕುರುಳಿದ ವಿದ್ಯುತ್ ಕಂಬ:
ನಗರದ ಹಲವೆಡೆ ಗಿಡಗಳು ಉರುಳಿ ಬಿದ್ದಿದ್ದು, ವಿದ್ಯುತ್ ತಂತಿಗಳು ಹರಿದು ಹೋಗಿವೆ. ಮುಖ್ಯ ಮಾರ್ಗದ ತಂತಿಗಳೇ ಹರಿದಿರುವುದರಿಂದ ವಿದ್ಯುತ್ ಪೂರೈಕೆಗೆ ತೀವ್ರ ತೊಂದರೆ ಉಂಟಾಗಿದೆ.ನಗರದಲ್ಲಿ ಕಳೆದ ಮೂರು ದಿನಗಳಲ್ಲಿ ಒಟ್ಟು 55-60 ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಹಲವೆಡೆ ಮನೆಗಳ ಮೇಲೆಯೇ ವಿದ್ಯುತ್ ತಂತಿಗಳು ಹರಿದು ಬಿದ್ದಿದ್ದರಿಂದ ಸಾರ್ವಜನಿಕರೇ ಜೆಸ್ಕಾಂಗೆ ಕರೆ ಮಾಡಿ ವಿದ್ಯುತ್ ಪೂರೈಕೆ ಮಾಡದಂತೆ ವಿನಂತಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು.ಮಳೆ-ಗಾಳಿಗೆ ಜೆಸ್ಕಾಂಗೆ ಅಪಾರ ಹಾನಿ ಸಂಭವಿಸಿದೆ. ಕೂಡಲೇ ಎ್ಲ್ಲಲೆಡೆ ಸಿಬ್ಬಂದಿಯನ್ನು ನಿಯೋಜಿಸಿ, ಆದಷ್ಟು ಶೀಘ್ರದಲ್ಲಿಯೇ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿಯೇ ಅತಿ ಹೆಚ್ಚಿನ ಹಾನಿ ಆಗಿದೆ ಎಂದು ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ `ಪ್ರಜಾವಾಣಿ~ಗೆ ತಿಳಿಸಿದರು.ಮಳೆಯ ಪ್ರಮಾಣ ಕಡಿಮೆ ಆಗಿದ್ದರೂ, ಮೂರೂ ದಿನ ಗಾಳಿಯ ರಭಸವೇ ಹೆಚ್ಚಾಗಿತ್ತು. ಹೀಗಾಗಿ ಮರಗಳು ಉರುಳುತ್ತಿದ್ದಂತೆಯೇ, ವಿದ್ಯುತ್ ಕಂಬಗಳು ನೆಲಕಚ್ಚಿವೆ ಎಂದು ಹೇಳಿದರು.ಸಾವಿರ ಪರಿಹಾರಕ್ಕೆ ಮನವಿ:
ನಗರದಲ್ಲಿ ಸುರಿದ ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿದ ಇಲ್ಲಿಯ ಹೊಸಳ್ಳಿ ರಸ್ತೆಯಲ್ಲಿರುವ ಬುಡ್ಗ ಜಂಗಮ ಜನಾಂಗದ ಕಾಲೋನಿಗೆ ಭೇಟಿ ನೀಡಿದ್ದ ಉಪವಿಭಾಗಾಧಿಕಾರಿ ಕವಿತಾ ಮನ್ನಿಕೇರಿ, ಪರಿಶೀಲನೆ ಮಾಡಿದರು.ಕಾಲೋನಿಯಲ್ಲಿ ದವಸಧಾನ್ಯಗಳು ನೀರು ಪಾಲಾಗಿದ್ದು, ಅಲ್ಲಿನ ಜನರಿಗೆ 2 ದಿನ ಊಟದ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ.ಹಾನಿಯಾಗಿರುವ ಕುಟುಂಬಗಳಿ ರೂ. ಒಂದು ಸಾವಿರ ಪರಿಹಾರ ಧನ ಕೊಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯುವುದಾಗಿ ಕವಿತಾ ಮನ್ನಿಕೇರಿ ತಿಳಿಸಿದ್ದಾರೆ.ಜಿಲ್ಲೆಯಲ್ಲಿ 235 ಮಿ.ಮೀ. ಮಳೆ


ಯಾದಗಿರಿ: ಜಿಲ್ಲೆಯಲ್ಲಿ ಸೋಮವಾರ ಒಟ್ಟು 235 ಮಿ.ಮೀ. ಮಳೆ ದಾಖಲಾಗಿದೆ. ಯಾದಗಿರಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಶಹಾಪುರ ತಾಲ್ಲೂಕಿನಲ್ಲಿ ಕಡಿಮೆ ಮಳೆಯಾಗಿದೆ. ಯಾದಗಿರಿ ತಾಲ್ಲೂಕಿನಲ್ಲಿ ಒಟ್ಟು 122.6 ಮಿ.ಮೀ. ಮಳೆಯಾಗಿದ್ದು, ಯಾದಗಿರಿ ನಗರದಲ್ಲಿ 58.2, ಸೈದಾಪುರದಲ್ಲಿ 5.6, ಗುರುಮಠಕಲ್‌ನಲ್ಲಿ 2.1, ಬಳಿಚಕ್ರದಲ್ಲಿ 13.4, ಕೊಂಕಲ್‌ನಲ್ಲಿ 6.7 ಮಿ.ಮೀ ಮಳೆಯಾಗಿದೆ.ಶಹಾಪುರ ತಾಲ್ಲೂಕಿನಲ್ಲಿ 47 ಮಿ.ಮೀ. ಮಳೆಯಾಗಿದ್ದು, ಗೋಗಿಯಲ್ಲಿ 15.2, ಭೀಮರಾಯನಗುಡಿಯಲ್ಲಿ 7.5, ಹಯ್ಯಾಳ ಬಿ.ನಲ್ಲಿ 9.3, ದೋರನಳ್ಳಿಯಲ್ಲಿ 4, ವಡಗೇರಾದಲ್ಲಿ 1, ಹತ್ತಿಗುಡೂರಿನಲ್ಲಿ 10 ಮಿ.ಮೀ. ಮಳೆಯಾಗಿದೆ. ಸುರಪುರ ತಾಲ್ಲೂಕಿನಲ್ಲಿ 65.4 ಮಿ.ಮೀ. ಮಳೆಯಾಗಿದ್ದು, ಸುರಪುರದಲ್ಲಿ 6, ಹುಣಸಗಿಯಲ್ಲಿ 1.4, ಕೊಡೇಕಲ್‌ನಲ್ಲಿ 18.4, ನಾರಾಯಣಪುರದಲ್ಲಿ 13.6, ಕೆಂಭಾವಿಯಲ್ಲಿ 26 ಮಿ.ಮೀ. ಮಳೆ ಸುರಿದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.