ಮಂಗಳವಾರ, ಮೇ 17, 2022
25 °C

ಮಳೆ ನೀರು ಸಂಗ್ರಹ: ಇಂದು ಥೀಮ್‌ಪಾರ್ಕ್‌ಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಜಲಮಂಡಳಿ ನಗರದಲ್ಲಿ ನಿರ್ಮಿಸಿರುವ ಮಳೆ ನೀರು ಸಂಗ್ರಹಣೆ ಥೀಮ್‌ಪಾರ್ಕ್ ಸೋಮವಾರ ಅಸ್ತಿತ್ವಕ್ಕೆ ಬರಲಿದೆ. ವಿಶ್ವ ಜಲದಿನಾಚರಣೆಗೆ ಮುನ್ನಾದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಯಾನವನ್ನು ಉದ್ಘಾಟಿಸಲಿದ್ದಾರೆ. ಜಯನಗರದ ಐದನೇ ಹಂತದಲ್ಲಿರು ಥೀಮ್‌ಪಾರ್ಕ್‌ಗೆ ಸರ್ ಎಂ.ವಿಶ್ವೇಶ್ವರಯ್ಯ ಮಳೆ ನೀರು ಸುಗ್ಗಿ ಕೇಂದ್ರ ಎಂಬ ಹೆಸರಿಡಲಾಗಿದೆ. ಒಟ್ಟು ರೂ 3 ಕೋಟಿ ವೆಚ್ಚದಲ್ಲಿ ಉದ್ಯಾನ ನಿರ್ಮಾಣವಾಗಿದ್ದು 20ಕ್ಕೂ ಹೆಚ್ಚು ಮಳೆ ನೀರು ಸಂಗ್ರಹ ಮಾದರಿಗಳನ್ನು ಇಲ್ಲಿ ಪ್ರದರ್ಶಿಸಲಾಗುವುದು ಎಂದು ಜಲಮಂಡಳಿಯ ಮೂಲಗಳು ತಿಳಿಸಿವೆ.ತ್ಯಾಜ್ಯ ನೀರು ಸಂಸ್ಕರಣೆ, ತೊರೆಕಾಡನಹಳ್ಳಿಯಲ್ಲಿ ಕಾವೇರಿ ನೀರು ಸಂಸ್ಕರಿಸುವ ವಿಧಾನ ಕುರಿತಂತೆಯೂ ಮಾದರಿ ಸಿದ್ಧವಾಗಿದೆ. 70 ಆಸನಗಳ ವ್ಯವಸ್ಥೆ ಹೊಂದಿರುವ ಮಲ್ಟಿಮೀಡಿಯಾ ಚಿತ್ರಮಂದಿರವನ್ನು ಕೂಡ ಉದ್ಯಾನ ಹೊಂದಿದೆ. ನೀರಿಗೆ ಸಂಬಂಧಿಸಿದ ಚಲನಚಿತ್ರಗಳು ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಿ ಜನರಲ್ಲಿ ಅರಿವು ಮೂಡಿಸುವುದು ಮಂಡಳಿಯ ಉದ್ದೇಶವಾಗಿದೆ.ಮಕ್ಕಳಿಗಾಗಿ 12 ಬಗೆಯ ಆಟಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಜಲ ಸಂಗ್ರಹಕ್ಕೆ ಅಗತ್ಯವಾದ ಪರಿಕರಗಳನ್ನು ಕೂಡ ಪ್ರದರ್ಶಿಸಲಾಗುವುದು. ಮಳೆ ನೀರು ಸಂಗ್ರಹಕ್ಕಾಗಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ತೆರೆದಿರುವ ಸಹಾಯ ಕೇಂದ್ರವನ್ನು ಉದ್ಯಾನಕ್ಕೆ ಸ್ಥಳಾಂತರಿಸಲು ಮಂಡಳಿ ಚಿಂತಿಸಿದೆ. ಇನಷ್ಟು ಮರಗಿಡಗಳನ್ನು ಬೆಳೆಸಲಾಗುವುದು. ಮಳೆ ನೀರು ಸಂಗ್ರಹ ತರಬೇತಿ ಪಡೆದ ಪ್ಲಂಬರ್‌ಗಳ ಪಟ್ಟಿಯನ್ನು ಇಲ್ಲಿನ ಮಾಹಿತಿ ಕೇಂದ್ರದಲ್ಲಿ ಪ್ರಕಟಿಸಲಾಗುವುದು ಎಂದು ಮಂಡಳಿಯ ಅಧಿಕಾರಿಗಳು ತಿಳಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.