ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರು ಸಂಗ್ರಹ: ತೋಂಟದ ಶ್ರೀ ಸಲಹೆ

Last Updated 14 ಜೂನ್ 2013, 7:21 IST
ಅಕ್ಷರ ಗಾತ್ರ

ಗದಗ: ಭೂಮಿಯ ಮೂರು ಪಟ್ಟು ನೀರಿದ್ದರೂ ಶೇ.1 ರಷ್ಟು ನೀರು ಮಾತ್ರ ಕುಡಿಯಲು ಯೋಗ್ಯವೆನಿಸಿದ್ದರಿಂದ ನೀರನ್ನು ಮಿತವಾಗಿ ಬಳಕೆ ಮಾಡಬೇಕು ಎಂದು ತೋಂಟದಾರ್ಯ    ಮಠದ ಡಾ.ಸಿದ್ದಲಿಂಗ ಸ್ವಾಮೀಜಿ ಸಲಹೆ ನೀಡಿದರು.

ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಡೆದ ಶಿವಾನುಭವದಲ್ಲಿ ಜಲಕ್ಷಾಮ ಜಾಗೃತಿ ಹಾಗೂ ನೀರಿನ ಮಿತವ್ಯಯದ ಬಳಕೆ  ಕುರಿತು ಮಾತನಾಡಿದ ಅವರು, ಮಿತ ಬಳಕೆ ಜೊತೆಗೆ ಭೂಮಿಯಲ್ಲಿನ ಅಂತರ್ಜಲ  ಪ್ರಮಾಣ ಹೆಚ್ಚಿಸಲು ಮಳೆ ನೀರು ಸಂಗ್ರಹ ಹಾಗೂ ಮನೆಯಲ್ಲಿ ಬಳಕೆಯಾದ ನೀರನ್ನು ಭೂಮಿಯಲ್ಲಿ ಇಂಗಿಸುವ ಕೆಲಸ ವ್ಯಾಪಕವಾಗಿ ನಡೆಯಬೇಕು.

ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ತಮ್ಮ ಗ್ರಾಮ ರಾಳೆಗಾಣಸಿದ್ದಿಯಲ್ಲಿ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರನ್ನು ನಿಲ್ಲುವಂತೆ ಮಾಡಿ ಬಾಂಧಾರ ಕಟ್ಟುವ ಮೂಲಕ ಜನತೆಗೆ ನೆರವಾದರು ಎಂದು ಹೇಳಿದರು.

ಅನ್ನವಿಲ್ಲದೆ ಕೆಲ ದಿನ ಬದುಕಬಹುದು, ಆದರೆ ನೀರಿಲ್ಲದೆ ಬದುಕಲಾಗದು.  ಮಾನವನ ಉಗಮ, ಬೆಳವಣಿಗೆ, ನಾಗರಿಕತೆಯೊಂದಿಗೆ ನೀರಿನ ಮಹತ್ವದ ಪಾತ್ರವು ಬೆಳೆದು ಬಂದಿದೆ. ನೀರು ಸಾಕಷ್ಟಿದೆ ಎಂದು  ಅನವಶ್ಯಕವಾಗಿ ಬಳಸುವುದು ಸಲ್ಲ. ರಾಜ್ಯ, ದೇಶದಾದ್ಯಂತ ಕಾಡುತ್ತಿರುವ ಕುಡಿಯುವ ನೀರಿನ ಜ್ವಲಂತ ಸಮಸ್ಯೆ ನೀಗಲು ಸಚಿವ ಎಚ್.ಕೆ.ಪಾಟೀಲ ಅವರು ಶುದ್ಧ ನೀರಿನ ಘಟಕ ಯೋಜನೆ ವ್ಯಾಪಕವಾಗಿ ಬಳಕೆಗೆ ತಂದು ದೇಶದ ಗಮನ ಸೆಳೆದಿದ್ದಾರೆ ಎಂದು ನುಡಿದರು.

ಭಾರತೀಯ ಸಂಸ್ಕೃತಿಯಲ್ಲಿ ನೀರನ್ನು ಗಂಗಾಮಾತೆ ಎಂದೆಲ್ಲ ಕರೆದು ಅದರ ಮಹತ್ವ ಸಾರಿದ್ದರೂ ನದಿಯ ನೀರನ್ನು ಕಲ್ಮಶವಾಗದಂತೆ ನೋಡಿಕೊಳ್ಳುವ ಪರಿಪಾಠವಿಲ್ಲ. ದಿನಬಳಕೆಯ ನೀರಿನ ಉಳಿಸುವಿಕೆ, ನೀರಿನ ಸರಿಯಾದ ಬಳಸುವಿಕೆ, ಅಂತರ್ಜಲ ಹೆಚ್ಚಳದ ಉಪಯೋಗ ಕುರಿತು ಜನಜಾಗೃತಿ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.

16 ನೇ ಶತಮಾನದಲ್ಲಿ ವಿಜಾಪುರದ ಆದಿಲಶಾಹಿ ನೀರಿನ ತೊರವಿಯಲ್ಲಿ ನೀರು ಹರಿದುಬರುವ ವ್ಯವಸ್ಥೆ ಮಾಡಿ ನೀರಿನ ಸಂಗ್ರಹಾಗಾರದಿಂದ 10 ಲಕ್ಷ ಜನತೆಗೆ ನೀರು ಕೊಡುತ್ತಿದ್ದ ಎಂಬುದು ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಇಸ್ರೆಲ್ ದೇಶದ ಹನಿ ನೀರಾವರಿ ಈಗಲೂ ಮಾದರಿ. ಉತ್ತರ ಕರ್ನಾಟಕದ ಪ್ರಗತಿಗೆ ಡಾ.ನಂಜುಂಡಪ್ಪ ವರದಿಯ ಶಿಫಾರಸುಗಳ ಪ್ರಾಮಾಣಿಕ ಹಾಗೂ ಯಥಾವತ್ ಅನುಷ್ಟಾನವೇ ಪರಿಹಾರ ಎಂದರು.

ಜಲಕ್ಷಾಮ ಭೀತಿ, ನೀರಿನ ಮಿತವ್ಯಯದ ಬಳಕೆ ಕುರಿತು ಉಪನ್ಯಾಸ ನೀಡಿದ ರೋಣ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೊ. ಎನ್.ಎಂ.ಪವಾಡಿಗೌಡರು ನೀರಿನ ಉಪಯುಕ್ತತೆ ಕುರಿತು ಎಲ್ಲ ಸಮುದಾಯದ ಜನತೆ ಅರಿವು ಹೊಂದಬೇಕೆಂದು ಕರೆ ನೀಡಿದರು.

ಪಂಡಿತ ಮೃತ್ಯುಂಜಯ ಹಿರೇಮಠರಿಂದ ಸುಶ್ರಾವ್ಯವಾದ ವಚನ ಸಂಗೀತ ನಡೆಯಿತು. ನೀಲಮ್ಮ ಬೇವಿನಮರದ, ಶಿವಗಂಗಮ್ಮ ಪಾಟೀಲ ಅವರಿಂದ ಧರ್ಮಗ್ರಂಥ ಪಠಣ ಹಾಗೂ ಧರ್ಮಚಿಂತನ ನಡೆಸಿದರು. ಬಸವರಾಜ ಶಿವಪ್ಪ ಅಂಗಡಿ ಹಾಗೂ ದಿ.ಮಡಿವಾಳಪ್ಪ ಅವರ ಸ್ಮರಣಾರ್ಥ ಭಕ್ತಿ ಸೇವೆ ವಹಿಸಿದ್ದ ಮಹಾಂತೇಶ ವಿಣೇಕರ ಕುಟುಂಬ ಪರಿವಾರ ಸ್ವಾಮೀಜಿ ಆಶೀರ್ವಾದ ಪಡೆದರು.

ಸಂಘದ ಕಾರ್ಯದರ್ಶಿ ವೀರಣ್ಣ ಹೊನಗಣ್ಣವರ ಸ್ವಾಗತಿಸಿದರು. ಸಮಿತಿ ಅಧ್ಯಕ್ಷ ಪ್ರೊ. ಎಸ್.ಎನ್.ಆದಿ  ಪ್ರಾಸ್ತಾವಿಕ ಮಾತನಾಡಿ ದರು. ಮಂಜುಳಾ ಹಾಸಿಲಕರ ನಿರೂಪಿಸಿದರು. ಅಧ್ಯಕ್ಷ ಪ್ರಕಾಶ ಎಸ್.ಕರಿಸೋಮನಗೌಡ್ರ, ಉಪಾಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಶಿವಲೀಲಾ ಕುರಡಗಿ, ಸಹಕಾರ್ಯದರ್ಶಿ ಗುರುಬಸವ ಲಿಂಗ, ತಡಸದ, ಕೋಶಾಧ್ಯಕ್ಷ ಪ್ರಭಯ್ಯ ಎಸ್.ಹಿರೇಮಠ  ಭಾಗವಹಿಸಿದ್ದರು.

ಎಸ್ಸೆಸ್ಸೆಲ್ಸಿ: ವಿಶೇಷ ತರಗತಿ
ಗದಗ: ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ  ಇದೇ 18 ರಿಂದ 28 ರ ವರೆಗೆ  ವಿಶೇಷ ತರಬೇತಿ  ನೀಡಲಾಗುವುದು.

ಆಸಕ್ತರು ಎಕ್ಸ್‌ಲೇಂಟ್ ಸಿಇಟಿ ಕೋಚಿಂಗ್ ಸೆಂಟರ್‌ನ ನಿರ್ದೇಶಕ ಕೆ.ಟಿ.ವಡ್ಡಿನ- 9164592908, 9738303264 ಸಂಪರ್ಕಿಸಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT