ಸೋಮವಾರ, ಏಪ್ರಿಲ್ 19, 2021
32 °C

ಮಸ್ಕಿ: ತಜ್ಞರಿಂದ ಮಾನವ ಅಸ್ಥಿಪಂಜರ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಸ್ಕಿ: ತಜ್ಞರಿಂದ ಮಾನವ ಅಸ್ಥಿಪಂಜರ ಪರಿಶೀಲನೆ

ಮಸ್ಕಿ: ಅಶೋಕ ಶಿಲಾಶಾಸನದ ಹಿಂಭಾಗದಲ್ಲಿನ ಗುಡ್ಡದಲ್ಲಿ ಶುಕ್ರವಾರ ಪತ್ತೆಯಾದ ಮಾನವನ ಅಸ್ಥಿಪಂಜರಗಳಿರುವ ಸ್ಥಳಕ್ಕೆ ಧಾರವಾಡದ ಪ್ರಾಚ್ಯವಸ್ತು ಇಲಾಖೆಯ ನಿವೃತ್ತ ಅಧಿಕಾರಿ ಹಾಗೂ ಸಂಶೋಧಕ ಡಾ. ಆರ್.ಎಂ. ಷಡಕ್ಷರಯ್ಯ  ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬಿಣದ ಬೃಹತ್ ಶಿಲಾ ಸಂಸ್ಕೃತಿ ಯುಗದ ಮಾನವರು ಮೃತರಾದ ನಂತರ ದ್ವಿತೀಯ ಹಂತದಲ್ಲಿ ಶವಸಂಸ್ಕಾರ ಮಾಡಿರುವ ಅಸ್ಥಿಪಂಜರಗಳು ಇಲ್ಲಿವೆ. ಇವು ಸುಮಾರು ಮೂರು ಸಾವಿರ ವರ್ಷಗಳಷ್ಟು ಪುರಾತನವಾಗಿವೆ ಎಂದರು.ಸುಮಾರು 20ಕ್ಕೂ ಹೆಚ್ಚು ಶವಗಳನ್ನು ಮಡಿಕೆಯಲ್ಲಿ ಹೂತಿರುವ ಲಕ್ಷಣಗಳಿವೆ. ಮಸ್ಕಿ ಐತಿಹಾಸಿಕ ಸ್ಥಳವಾಗಿದ್ದು 6 ದಶಕಗಳ ಹಿಂದೆ ಪ್ರಾಚ್ಯವಸ್ತು ಇಲಾಖೆಯ ನಾಲ್ವರು ಸಂಶೋಧಕರು ಇಲ್ಲಿಯ ಗುಡ್ಡಗಳನ್ನು ಸುತ್ತಾಡಿ ಉತ್ಖನನ ಮಾಡಿ ಆನೇಕ ಪುರಾತನ ಕುರುಹುಗಳನ್ನು ಪತ್ತೆ ಹಚ್ಚಿದ್ದಾರೆ ಎಂದರು.ಕಬ್ಬಿಣದ ಬೃಹತ್ ಶಿಲಾ ಸಂಸ್ಕೃತಿ ಯುಗ, ನೂತನ ತಾಮ್ರ ಶಿಲಾಯುಗ, ಇತಿಹಾಸಿದ ಆರಂಭಿಕ ಯುಗ ಹಾಗೂ ಮಧ್ಯಯುಗ ಎಂದು ನಾಲ್ಕು ಯುಗಗಳಲ್ಲೂ ಮಸ್ಕಿಯ ಈ ಗುಡ್ಡದಲ್ಲಿ ಜನ ವಾಸಿಸುತ್ತಿದ್ದರು ಎಂಬುದಕ್ಕೆ ದಾಖಲೆಗಳಿವೆ ಎಂದರು.ಇಲ್ಲಿ ಮೂರು ರೀತಿಯಲ್ಲಿ ಶವಸಂಸ್ಕಾರ ಮಾಡಲಾಗಿದೆ. ಮಡಿಕೆಯಲ್ಲಿ ಶವಸಂಸ್ಕಾರ, ವೃತ್ತಾಕಾರಾದಲ್ಲಿ ತಗ್ಗು ತೋಡಿ ಮೂರು, ನಾಲ್ಕು ಶವಗಳನ್ನು ಇಡುವುದು ಹಾಗೂ ನಿಲ್ಸಗಲ್ಲು ಶವಸಂಸ್ಕಾರ ಮಾಡಿರುವುದು ಸಂಶೋಧನೆಗಳಿಂದ ಕಂಡು ಬಂದಿದೆ. ಈ ಗುಡ್ಡದಲ್ಲಿ ಇನ್ನೂ  ಸಂಶೋಧನೆ ನಡೆಯಬೇಕಾಗಿದೆ ಎಂದರು.ಜನ ಸಾಗರ: ಶುಕ್ರವಾರ ಇಲ್ಲಿಯ ಗುಡ್ಡದಲ್ಲಿ ಪತ್ತೆಯಾದ ಆದಿಮಾನವರ ಅಸ್ಥಿಪಂಜರ ನೋಡಲು ಶನಿವಾರ ಜನಸಾಗರವೇ ಸೇರಿತ್ತು. ಮಸ್ಕಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸುತ್ತಿರುವ ಜನರು ಕೂತುಹಲದಿಂದ ಸ್ಥಳ ವೀಕ್ಷಿಸಿದರು.ಅನೇಕ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು ತಂಡಗಳಲ್ಲಿ ಆಗಮಿಸಿ ಅಸ್ಥಿಪಂಜರ ಹಾಗೂ ಅದರ ಸುತ್ತಲಿನ ಸ್ಥಳ ವೀಕ್ಷಿಸುತ್ತಿದ್ದರ. ಇತಿಹಾಸ ತಜ್ಞರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತಿತರರು ಗುಡ್ಡ ಹತ್ತಿ ಅಸ್ಥಿಪಂಜರದ ಸ್ಥಳವನ್ನು ವೀಕ್ಷಿಸಿದರು. ಸ್ಥಳದಲ್ಲಿ ಪೊಲೀಸ್ ಕಾವಲು ಹಾಕಲಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.