ಸೋಮವಾರ, ಮೇ 23, 2022
21 °C

ಮಹಾಂತೇಶ್ ಹತ್ಯೆ: ನಾಲ್ವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪನಿರ್ದೇಶಕ ಎಸ್.ಪಿ.ಮಹಾಂತೇಶ್ ಕೊಲೆ ಪ್ರಕರಣದ ಆರೋಪಿಗಳನ್ನು ನಗರದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

`ಸಂಜೀವನಗರದ ಕಿರಣ್ ಕುಮಾರ್ (23), ವೈಯಾಲಿಕಾವಲ್‌ನ ಅಯ್ಯಪ್ಪ (24), ಮಲ್ಲೇಶ್ವರದ ಮುರಳಿ (29) ಮತ್ತು ಸಂಪಂಗಿರಾಮನಗರದ ಶಿವಕುಮಾರ್ (28) ಬಂಧಿತರು. ಪ್ರಕರಣದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಸಹಕಾರನಗರ ಪತ್ತಿನ ಸಹಕಾರ ಸಂಘದಲ್ಲಿ ಕ್ಯಾಷಿಯರ್ ಆಗಿದ್ದ ಕಿರಣ್ ಸಂಘದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದ. ಆ ಸಂಘದ ಲೆಕ್ಕ ಪರಿಶೀಲನೆ ಮಾಡುವುದಾಗಿ ಲೆಕ್ಕ ಪರಿಶೋಧನಾ ಇಲಾಖೆಯಿಂದ ಇತ್ತೀಚೆಗೆ ನೋಟಿಸ್ ಬಂದಿತ್ತು. ಅಲ್ಲದೇ, ಮಹಾಂತೇಶ್ ಅವರು ಮೇ 9ರಂದು ಸಂಘಕ್ಕೆ ಭೇಟಿ ಕೊಟ್ಟು ಕೆಲ ಕಡತಗಳನ್ನು ಪರಿಶೀಲಿಸಿ ಪುನಃ ಮೇ 15ರಂದು ಪರಿಶೀಲನೆಗೆ ಬರುವುದಾಗಿ ಹೇಳಿ ಹೋಗಿದ್ದರು. ಲೆಕ್ಕ ಪರಿಶೋಧನೆ ನಡೆದರೆ ತನ್ನ ಅವ್ಯವಹಾರ ಬೆಳಕಿಗೆ ಬರಬಹುದೆಂದು ವಿಚಲಿತನಾದ ಕಿರಣ್, ಇತರೆ ಆರೋಪಿಗಳ ಮೂಲಕ ಮಹಾಂತೇಶ್ ಮೇಲೆ ಹಲ್ಲೆ ಮಾಡಿಸಿದ್ದ~ ಎಂದು ಹೇಳಿದರು.

ಲೆಕ್ಕ ಪರಿಶೋಧನೆ ಪ್ರಕ್ರಿಯೆಗೆ ತಡೆಯೊಡ್ಡುವ ಕಾರಣಕ್ಕಾಗಿ ಮಹಾಂತೇಶ್ ಮೇಲೆ ಹಲ್ಲೆ ನಡೆಸುವಂತೆ ಕಿರಣ್ ಇತರೆ ಆರೋಪಿಗಳಿಗೆ ಹೇಳಿ ಕಳುಹಿಸಿದ್ದ. ಆದರೆ, ಆರೋಪಿಗಳು ಅವರನ್ನು ಮನಬಂದಂತೆ ಥಳಿಸಿದ್ದರು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಹಾಂತೇಶ್ ಮೇ 20ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಕಿರಣ್ ಮತ್ತು ಆರೋಪಿಗಳಿಗೆ, ಮಹಾಂತೇಶ್ ಅವರನ್ನು ಕೊಲೆ ಮಾಡುವ ಉದ್ದೇಶವಿರಲಿಲ್ಲ. ಆದರೆ, ಲೆಕ್ಕ ಪರಿಶೋಧನೆ ಪ್ರಕ್ರಿಯೆ ನಡೆಯದಂತೆ ನೋಡಿಕೊಳ್ಳುವುದು ಅವರ ಉದ್ದೇಶವಾಗಿತ್ತು ಎಂದು ಮಿರ್ಜಿ ಮಾಹಿತಿ ನೀಡಿದರು. ಈ ಪ್ರಕರಣ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿತ್ತು. ಕೌಟುಂಬಿಕ ಹಿನ್ನೆಲೆ, ವೃತ್ತಿ ವೈಷಮ್ಯ, ವೈಯಕ್ತಿಕ ಕಾರಣ ಹೀಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಿದ್ದೇವೆ. ಆರೋಪಿಗಳನ್ನು ಬಂಧಿಸುವಲ್ಲಿ ನಗರದ 200 ಮಂದಿ ಸಿಬ್ಬಂದಿ ಹಗಲಿರುಳು ಶ್ರಮಿಸಿದ್ದಾರೆ. ಮಹತ್ವದ ಸುಳಿವು ಸಿಗದಿದ್ದರೂ ಸಿಬ್ಬಂದಿ ಬುದ್ಧಿಮತ್ತೆ ಹಾಗೂ ತಂತ್ರಜ್ಞಾನ ನೆರವಿನಿಂದ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಪ್ರಕರಣವನ್ನು ಭೇದಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.