ಮಂಗಳವಾರ, ಮಾರ್ಚ್ 2, 2021
29 °C
ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ವಿಶ್ರಾಂತ ಕುಲಪತಿ ಪ್ರೊ.ವಿವೇಕ ರೈ ಹೇಳಿಕೆ

ಮಹಾಕಾವ್ಯಗಳ ಬಹುಶಿಸ್ತೀಯ ಅಧ್ಯಯನ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾಕಾವ್ಯಗಳ ಬಹುಶಿಸ್ತೀಯ ಅಧ್ಯಯನ ಅಗತ್ಯ

ಶಿರ್ವ: ಜನಪದ ಮಹಾಕಾವ್ಯಗಳನ್ನು ಬಿಳಿಯ ಹಾಳೆಯಲ್ಲಿ ಅಚ್ಚಾಗಿರುವ ಕಪ್ಪು ಅಕ್ಷರಗಳ ಮೂಲಕ ಮಾತ್ರ ಅರಿತು ಕೊಳ್ಳಲು ಸಾಧ್ಯವಿಲ್ಲ. ಅದು ರೂಪು ಗೊಂಡ ಚಾರಿತ್ರಿಕ, ಸಾಂಸ್ಕೃತಿಕ ಸಂದ ರ್ಭವನ್ನು ಅರಿತು ಅಧ್ಯಯನ ನಡೆಸು ವುದು ಹೆಚ್ಚು ಸಮರ್ಪಕ. ಜನಪದ ಮಹಾಕಾವ್ಯಗಳ ಬಹುಶಿಸ್ತೀಯ ಅಧ್ಯಯನ ಅಗತ್ಯ ಎಂದು ಹಿರಿಯ ಜನಪದ ವಿದ್ವಾಂಸ ಹಾಗೂ ಹಂಪಿ ವಿವಿಯ ವಿಶ್ರಾಂತ ಕುಲಪತಿ ಪ್ರೊ.ವಿವೇಕ ರೈ ತಿಳಿಸಿದರು.ಶಿರ್ವದ  ಮುಲ್ಕಿ ಸುಂದರರಾಮ ಶೆಟ್ಟಿ ಕಾಲೇಜಿನಲ್ಲಿ ‘ಜಾನಪದ ಮಹಾಕಾವ್ಯಗಳು’ ಸಾಂಸ್ಕೃತಿಕ ಮುಖಾ ಮುಖಿ ಎಂಬ ಪರಿಕಲ್ಪನೆಯ ಹಿನ್ನೆಲೆ ಯಲ್ಲಿ ಬುಧವಾರ ನಡೆದ ಯುಜಿಸಿ ಪ್ರಾಯೋಜಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.  ಕನ್ನಡದ ಸಂದರ್ಭದಲ್ಲಿ ಈವರೆಗೆ ಸುಮಾರು 50ಕ್ಕೂ ಹೆಚ್ಚು ಚಿಕ್ಕ ಹಾಗೂ ದೊಡ್ಡ ಮಹಾಕಾವ್ಯಗಳು ಪ್ರಕಟಗೊಂಡಿದ್ದು, ಇವು ಆಯಾ ಪ್ರದೇಶದ ನೆಲದ ಬದುಕನ್ನು ಪ್ರತಿಬಿಂಬಿಸಿವೆ. ಕನ್ನಡದ ಸಂದರ್ಭದಲ್ಲಿ ಜನಪದ ಅಧ್ಯಯನ ಮತ್ತು ಸಂಶೋಧನೆಯ ಕೆಲಸಗಳನ್ನು ಶೈಕ್ಷಣಿಕವಾಗಿ ಆರಂಭಿಸಿದ ಕೀರ್ತಿ ಹಿರಿಯ ಜನಪದ ವಿದ್ವಾಂಸ ಜಿ. ಶಂ. ಪರಮಶಿವಯ್ಯ ಅವರಿಗೆ ಸಲ್ಲುತ್ತದೆ. ಮುಂದೆ ಅನೇಕ ಮಂದಿ ವಿದ್ವಾಂಸರು ಜನಪದ ಸಂಗ್ರಹ, ಸಂಪಾದನೆ, ಅಧ್ಯ ಯನ ಮತ್ತು ಸಂಶೋಧನೆಯ ಕೆಲಸ ಗಳಲ್ಲಿ  ನಿರಂತರವಾಗಿ ತೊಡಗಿಕೊಳ್ಳು ವುದರೊಂದಿಗೆ ಹೊಸ ಮಾದರಿಯ ಅಧ್ಯಯನ ವಿಧಾನಗಳನ್ನು ಪರಿಚಯಿಸಿ ದ್ದಾರೆ ಎಂದರು.ಜನಪದ ಮಹಾ ಕಾವ್ಯಗಳ ಕುರಿತಂತೆ ಸಂಶೋಧನೆಯ ಕೆಲಸಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಅದರ ಹಲವು ಪಠ್ಯಗಳನ್ನು ಪರಸ್ಪರ ಅವಲೋ ಕಿಸುವುದು ಹೆಚ್ಚು ಉಪಯಿಕ್ತವಾದುದು. ಕನ್ನಡದ ಜಾನಪದ ಮಹಾಕಾವ್ಯಗಳು ಭಾರತದ ಇತರ ಭಾಷೆಗಳಿಗೆ ರೂಪಾಂತರಗೊಳ್ಳ ಬೇಕಾಗಿದೆ.ಈ ಮಹಾಕಾವ್ಯಗಳ ಕುರಿತು ಕರ್ನಾಟಕದ ಭೌಗೋಳಿಕ ಆವರಣದ ಆಚೆಗೆ ನಡೆಯುವ ಚರ್ಚೆಗಳು ಬೇರೆಯೇ ಆದ ಹೊಳಹುಗಳನ್ನು ನೀಡುತ್ತದೆ. ಜನಪದ ಮಹಾಭಾರತ ಮತ್ತು ರಾಮಾಯಣ ಮಹಾಕಾವ್ಯಗಳು ಶಿಷ್ಟ ಪರಂಪರೆಯ ರಾಮಾಯಣ ಮತ್ತು ಮಹಾಭಾರತ ಗಳಿಗಿಂತ ಹಲವು ನೆಲೆಗಳಲ್ಲಿ ಭಿನ್ನ ವಾಗಿವೆ. ಬಹುತೇಕ ಮಹಾ ಕಾವ್ಯಗಳು ಅಂಚಿನ ಸಮುದಾಯಗಳ ಮೂಲಕ ಹೊರಹೊಮ್ಮಿವೆ. ಆದ್ದರಿಂದ ಆ ಸಮುದಾಯಗಳ ಬದುಕಿನ ಬಹುರೂಪಿ ನೆಲೆಗಳ ಕುರಿತಂತೆ ಈ ಕಾವ್ಯಗಳು ಅನೇಕ ಒಳನೋಟಗಳನ್ನು ಒದಗಿಸು ತ್ತವೆ ಎಂದು ಹೇಳಿದರು.ಮಹಿಳೆಯರನ್ನು ಕೇಂದ್ರೀಕರಿಸಿದ ಅನೇಕ ಜನಪದ ಮಹಾಕಾವ್ಯಗಳು ಅತ್ಯಂತ ಸಂಕೀರ್ಣವಾದ ಭಾವನಾತ್ಮಕ ಅಭಿವ್ಯಕ್ತಿಯನ್ನು ಹೊಂದಿವೆ. ಹಾಗೆಯೇ ಅಲ್ಲಿನ ಪಾತ್ರಗಳು ಮೇಲ್ವರ್ಗದ ಹಿತಾಸಕ್ತಿಗಳನ್ನು ಪ್ರಶ್ನಿಸುತ್ತವೆ. ಕತೆಯನ್ನು ಕೇಳುವ ಮತ್ತು ಗಮನಿಸುವ ಉದ್ದೇಶ ದಿಂದ ಜನಪದ ಮಹಾಕಾವ್ಯಗಳನ್ನು ಓದುವುದು ಸೂಕ್ತವಲ್ಲ. ಬದಲಾಗಿ ಅಲ್ಲಿನ ಸೂಕ್ಷ್ಮ ಅಂಶಗಳನ್ನು ಗಮನಿಸಿ ಕೊಂಡು ಆಸ್ವಾದಿಸುವುದು ಹೆಚ್ಚು ಪರಿಣಾಮಕಾರಿ. ಕನ್ನಡದ ಜನಪದ ಮಹಾಕಾವ್ಯಗಳು ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಪಠ್ಯಗಳಾಗಿ ಹೆಚ್ಚು ಪರಿಣಮಿಸಬೇಕಾಗಿದೆ. ಆ ಮೂಲಕ ಯುವ ತಲೆಮಾರು ಇವುಗಳ ಕಡೆಗೆ ವಿಶೇಷವಾಗಿ ಆಕರ್ಷಿತಗೊಳ್ಳಲು ಸಾಧ್ಯ ಎಂದರು.ಕಾಲೇಜು ಆಡಳಿತ ಮಂಡಳಿಯ ಸದಸ್ಯ ಜಗದೀಶ್ ಅರಸ್ ಅಧ್ಯಕ್ಷತೆ ವಹಿ ಸಿದ್ದರು. ಕರ್ನಾಟಕ ಜನಪದ ಅಕಾಡೆ ಮಿಯ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ಜಾನಪದ ಮಹಾಕಾವ್ಯಗಳ ತುಣುಕು ಹಾಡಿದರು. ಶ್ಯಾಮ್ ಶೆಟ್ಟಿ  ಸಿರಿ ಪಾಡ್ದನ ಹಾಡಿದರು. ಸಂಯೋಜಕ ಯು. ರಘುರಾಮ ಶೆಟ್ಟಿ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ವಿನೋಬ್‌ ನಾಥ್ ಪ್ರಾಸ್ತಾವಣೆ ಮಾಡಿದರು. ಮಂಗ ಳೂರು ವಿಶ್ವವಿದ್ಯಾಲಯ ಕಾಲೇಜುಗಳ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ನಾಗಪ್ಪಗೌಡ ವಂದಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಲಕ್ಷ್ಮೀದೇವಿ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.