ಶನಿವಾರ, ಮೇ 28, 2022
26 °C

ಮಹಾತ್ಮ ಗಾಂಧಿ ರಸ್ತೆಯಲ್ಲಿ ಬೈಕ್ ರ‌್ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾತ್ಮ ಗಾಂಧಿ ರಸ್ತೆಯಲ್ಲಿ ಬೈಕ್ ರ‌್ಯಾಲಿ

ಬೆಂಗಳೂರು: ನಗರದ ಎಂ.ಜಿ.ರಸ್ತೆಯ ಕ್ವೀನ್ಸ್ ಪ್ರತಿಮೆ ವೃತ್ತ ಮತ್ತು ಅನಿಲ್ ಕುಂಬ್ಳೆ ವೃತ್ತ ಸೇರಿದಂತೆ ಪ್ರಮುಖ 12 ಸ್ಥಳಗಳಲ್ಲಿ ವಾಹನ ಚಾಲಕರಿಗೆ ಪಥ ನಿಯಮ ಪಾಲನೆಯನ್ನು ಸೋಮವಾರದಿಂದ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ.ಕ್ವೀನ್ಸ್ ಪ್ರತಿಮೆ ವೃತ್ತದಲ್ಲಿ ಈ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ, `ವೃತ್ತ ಅಥವಾ ಜಂಕ್ಷನ್‌ಗಳಲ್ಲಿ ಎಡ ಭಾಗದ ಸಂಚಾರವನ್ನು ಮುಕ್ತಗೊಳಿಸಿ ಚಾಲಕರಿಗೆ ಅನುಕೂಲ ಮಾಡಿಕೊಡುವುದು ಪಥ ನಿಯಮ ಪಾಲನೆಯ ಮುಖ್ಯ ಉದ್ದೇಶವಾಗಿದೆ. ಈ ನಿಯಮವನ್ನು ನಗರದ ಇತರೆ ಜಂಕ್ಷನ್‌ಗಳು ಹಾಗೂ ವೃತ್ತಗಳಿಗೂ ಹಂತ ಹಂತವಾಗಿ ವಿಸ್ತರಿಸಲಾಗುತ್ತದೆ~ ಎಂದರು.ನಗರದ ಪ್ರಮುಖ ಸ್ಥಳಗಳಾದ ಕ್ವೀನ್ಸ್ ಪ್ರತಿಮೆ ವೃತ್ತ, ಅನಿಲ್ ಕುಂಬ್ಳೆ ವೃತ್ತ, ಕಾವೇರಿ ಎಂಪೋರಿಯಂ ಜಂಕ್ಷನ್, ವೆಬ್ಸ್ ಜಂಕ್ಷನ್, ಟ್ರಿನಿಟಿ ವೃತ್ತ, ಬಸವೇಶ್ವರ ವೃತ್ತ, ಶಿವಾನಂದ ವೃತ್ತ, ಭಾಷ್ಯಂ ವೃತ್ತ, ಸೌತ್ ಎಂಡ್ ವೃತ್ತ, ಕಬ್ಬನ್ ರಸ್ತೆ ಜಂಕ್ಷನ್, ಯೂಕೋ ಬ್ಯಾಂಕ್ ಜಂಕ್ಷನ್ (ಫೋರಂ ಮಾಲ್ ಬಳಿ) ಮತ್ತು ಕೋರಮಂಗಲದ ಸೋನಿ ವರ್ಲ್ಡ್ ಜಂಕ್ಷನ್‌ನಲ್ಲಿ ವಾಹನ ಚಾಲಕರು ಪಥ ನಿಯಮ ಪಾಲನೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ನಿಯಮ ಪಾಲಿಸದ ಚಾಲಕರ ವಿರುದ್ಧ ಆರಂಭದಲ್ಲಿ ಒಂದು ತಿಂಗಳ ಕಾಲ ದೂರು ದಾಖಲಿಸುವುದಿಲ್ಲ. ಒಂದು ತಿಂಗಳ ನಂತರ ದೂರು ದಾಖಲಿಸಿ ದಂಡ ವಿಧಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.ಚಾಲಕರು ಪಥ ನಿಯಮ ಉಲ್ಲಂಘಿಸುವುದರಿಂದ ಸಂಚಾರ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಚಾಲಕರು ಶಿಸ್ತುಬದ್ಧವಾಗಿ ಈ ನಿಯಮವನ್ನು ಪಾಲಿಸಿದರೆ ಸಂಚಾರ ಸಮಸ್ಯೆಯೇ ಉದ್ಭವಿಸುವುದಿಲ್ಲ. ಈ ಬಗ್ಗೆ ಇಲಾಖೆಯ ಸಿಬ್ಬಂದಿ, ಪ್ರಮುಖ ವೃತ್ತ ಹಾಗೂ ಜಂಕ್ಷನ್‌ಗಳಲ್ಲಿ ಚಾಲಕರಿಗೆ ಅರಿವು ಮೂಡಿಸಲಿದ್ದಾರೆ ಎಂದು ಮಿರ್ಜಿ ತಿಳಿಸಿದರು.ಇದೇ ಸಂದರ್ಭದಲ್ಲಿ ವಿವಿಧ ಸಂಚಾರ ಪೊಲೀಸ್ ಠಾಣೆಗಳ ಸಿಬ್ಬಂದಿ ನಗರದ ಹಲವೆಡೆ ಬೈಕ್ ರ‌್ಯಾಲಿ ನಡೆಸಿ ಪಥ ನಿಯಮ ಪಾಲನೆಯ ಬಗ್ಗೆ ಚಾಲಕರಲ್ಲಿ ಅರಿವು ಮೂಡಿಸಿದರು. ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ.ಎಂ.ಎ.ಸಲೀಂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.