ಸೋಮವಾರ, ಮೇ 16, 2022
29 °C

ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಸ್ಥಾನ.ಮೀಸಲಾತಿ ನಿಗದಿ: ಗರಿಗೆದರಿದ ಲೆಕ್ಕಾಚಾರ.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಮಹಾನಗರ ಪಾಲಿಕೆಯ ಮುಂದಿನ ಅವಧಿಗೆ ಮೇಯರ್ ಮತ್ತು ಉಪಮೇಯರ್ ಹುದ್ದೆಗಳ ಮೀಸಲಾತಿಯನ್ನು ಸರ್ಕಾರ ಗುರುವಾರ ಪ್ರಕಟಿಸಿದ್ದು, ಈ ಹಿನ್ನೆಲೆಯಲ್ಲಿ ಕುರ್ಚಿ ಯಾರ ಪಾಲಾಗಲಿದೆ ಎಂಬ ಲೆಕ್ಕಾಚಾರಗಳು ಗರಿಗೆದರತೊಡಗಿವೆ.ಮೇಯರ್ ಹುದ್ದೆಯು ಹಿಂದುಳಿದ ವರ್ಗ ‘ಎ’ಗೆ ಹಾಗೂ ಉಪಮೇಯರ್ ಸ್ಥಾನ ಹಿಂದುಳಿದ ವರ್ಗ ‘ಬಿ’ ಮಹಿಳೆಗೆ ಮೀಸಲಾಗಿವೆ. ಈ ಮೀಸಲಾತಿ ಯಾರಿಗೆ ಅದೃಷ್ಟ ತಂದು ಕೊಡುತ್ತದೆ ಎಂಬ ಜಿಜ್ಞಾಸೆ ಆರಂಭವಾಗಿದೆ.ಉಪಮೇಯರ್ ಸ್ಥಾನಕ್ಕೆ ಸದಸ್ಯೆ ಜ್ಯೋತಿ ಪಾಟೀಲ್ ಅವರ ಹೆಸರು ಮಾತ್ರ ಕೇಳಿ ಬರುತ್ತಿದೆ. ಮೀಸಲಾತಿಯ ಪ್ರಕಾರ ಅವರಿಗೆ ಕುರ್ಚಿ ಅನಾಯಾಸವಾಗಿ ಒಲಿಯಬಹುದು ಎನ್ನುತ್ತವೆ ಮೂಲಗಳು.ಮೇಯರ್ ಸ್ಥಾನಕ್ಕೆ 4 ಜನರ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ. ಸದಸ್ಯರಾದ ಎಚ್.ಎನ್. ಗುರುನಾಥ್, ಎಂ.ಎಸ್. ವಿಠಲ್, ಮಹೇಶ ರಾಯಚೂರ್ ಮತ್ತು ಮಾಜಿ ಉಪಮೇಯರ್ ಪಿ.ಎಸ್. ಜಯಣ್ಣ ಅವರ ಹೆಸರು ಕೇಳಿಬಂದಿವೆ.ವರಿಷ್ಠರು ಸಮುದಾಯವನ್ನು ಪರಿಗಣಿಸಿದರೆ ಕುರುಬ ಜನಾಂಗಕ್ಕೆ ಸೇರಿದ ಗುರುಮೂರ್ತಿ ಅವರಿಗೆ ಮೇಯರ್ ಕುರ್ಚಿ ಹತ್ತಿರವಾಗಬಹುದು. ಸಂಘ ಪರಿವಾರದಲ್ಲಿ ದುಡಿದವರು ಎಂಬ ಹಿನ್ನೆಲೆಯೇ ಮಾನದಂಡವಾದರೆ ಎಂ.ಎಸ್. ವಿಠಲ್ ಅವರಿಗೂ ಅವಕಾಶ ಒದಗಿ ಬರಬಹುದು ಎಂಬ ವಿಶ್ಲೇಷಣೆಯಿದೆ.ಇನ್ನು ಪಿ.ಎಸ್. ಜಯಣ್ಣ ಅವರು ಒಂದು ಬಾರಿ ಉಪಮೇಯರ್ ಕುರ್ಚಿಯಲ್ಲಿ ಕುಳಿತು ಆಡಳಿತ ನಡೆಸಿದ್ದಾರೆ. ಅವರಿಗೆ ಮೇಯರ್ ಸ್ಥಾನ ದಕ್ಕೀತೆ ಎಂಬ ಪ್ರಶ್ನೆ ಈಗ ಎದುರಾಗಿದೆ. ಯುವ ಸದಸ್ಯ ಮಹೇಶ್ ರಾಯಚೂರ್ ಅವರ ಹೆಸರು ಕೇಳಿ ಬಂದಿದೆಯಾದರೂ ಅವಕಾಶ ಅವರಿಗೆ ಸುಲಭವಾಗಿ ಒಲಿಯುತ್ತದೆ ಎನ್ನುವಂತಿಲ್ಲ ಎಂದು ಪಾಲಿಕೆಯ ಮೂಲಗಳು ಹೇಳುತ್ತವೆ.ಆದರೆ ಲಾಬಿಯಲ್ಲಿ ಯಾರೂ ಹಿಂದೆ ಬಿದ್ದಿಲ್ಲ. ಫೆ. 25ಕ್ಕೆ ಚುನಾವಣೆ ನಿಗದಿಯಾಗಿದ್ದು, ಜಿಲ್ಲೆಯ ವರಿಷ್ಠರ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದಾರೆ. ಸಚಿವ ಎಸ್.ಎ. ರವೀಂದ್ರನಾಥ್, ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ಪಕ್ಷದ ಇತರ ಮುಖಂಡರು ಯಾವ ತೀರ್ಮಾನಕ್ಕೆ ಬರುತ್ತಾರೆ ಎಂಬುದು ಸದ್ಯದ ಕುತೂಹಲ.ಕಳೆದ ಅವಧಿಯ ಮೀಸಲಾತಿಯ ಪ್ರಕಾರ ಕೊನೆಯ 4 ತಿಂಗಳು ಮೇಯರ್ ಕುರ್ಚಿಯಲ್ಲಿ ಕುಳಿತಿದ್ದ ಎಂ.ಜಿ. ಬಕ್ಕೇಶ್ ಅಧಿಕಾರದಿಂದ ನಿರ್ಗಮಿಸುವ ದಿನಗಳು ಹತ್ತಿರವಾಗತೊಡಗಿದ್ದು ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗೆ ಮೂರ್ನಾಲ್ಕು ದಿನಗಳಲ್ಲಿ ಚಿತ್ರಣ ಸ್ಪಷ್ಟವಾಗುವ ನಿರೀಕ್ಷೆಯಿದೆ.ಈ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಟಿ. ಗುರುಸಿದ್ದನಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿ, ‘ಮೇಯರ್, ಉಪಮೇಯರ್ ಆಯ್ಕೆ ವಿಚಾರವಾಗಿ ಯಾವುದೇ ಚರ್ಚೆ ನಡೆದಿಲ್ಲ. ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಪಕ್ಷದ ಸಂಘಟನೆ, ಬೆಂಗಳೂರಿನಲ್ಲಿ ಫೆ. 20ರಂದು ನಡೆಯುವ ಪಕ್ಷದ ಸಮ್ಮೇಳನದ ಬಗ್ಗೆ ಮಾತ್ರ ನಾವು ಚರ್ಚೆ ನಡೆಸುತ್ತಿದ್ದೇವೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.