ಶನಿವಾರ, ಮೇ 8, 2021
18 °C

ಮಹಾನ್ ವ್ಯಕ್ತಿಗಳ ಜಯಂತಿಗಳಿಗೆ ರಜೆ ಬೇಡ: ಜಾಫರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಮಹಾನ್ ವ್ಯಕ್ತಿಗಳ ಜಯಂತಿಯಂದು ರಜೆ ನೀಡುವುದರಿಂದ ಯಾವುದೇ ಸಾಧನೆಯಾಗುವುದಿಲ್ಲ. ಅದರಿಂದ ಸರ್ಕಾರಿ ನೌಕರರಿಗೆ ಅನುಕೂಲವಾದರೆ, ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಆದ್ದರಿಂದ ರಜೆ ನೀಡಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಪಿ.ಸಿ. ಜಾಫರ್ ಹೇಳಿದರು.ನಗರದ ಕಲಾ ಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ  ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. `ಜಯಂತಿ ಇತ್ಯಾದಿ ಹೆಸರಿನಲ್ಲಿ ರಜೆ ಹೆಚ್ಚಳವಾಗುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಏಪ್ರಿಲ್ ತಿಂಗಳಿನಲ್ಲಿಯೇ ಇಂತಹ ಬಹಳಷ್ಟು ಕಾರ್ಯಕ್ರಮಗಳನ್ನು ಮಾಡುತಿದ್ದೇವೆ.ನಾಯಕರನ್ನು ಜಾತಿಗೆ ಸೀಮಿತಗೊಳಿಸದೇ ಎಲ್ಲರ ಜಯಂತಿಯನ್ನು, ಎಲ್ಲರೂ ಸೇರಿಕೊಂಡು ಒಟ್ಟಿಗೆ ಮಾಡುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕಿದೆ~ ಎಂದು ಅವರು ಅಭಿಪ್ರಾಯಪಟ್ಟರು.`ಶಿವಾಜಿ ಅವರು ಮರಾಠಾ ಶಕ್ತಿಯ ಪ್ರತೀಕವಾಗಿದ್ದಾರೆ. ಎಲ್ಲ ವರ್ಗಗಳಿಗೆ ಸಮಾನ ಅವಕಾಶ ನೀಡಲಾಗುತ್ತದೆ ಎಂಬುದನ್ನು ಸಾರುವ ದೃಷ್ಟಿಯಿಂದ ರಾಜ್ಯದಲ್ಲಿ ಶಿವಾಜಿ ಜಯಂತಿಯನ್ನು ಮೊದಲ ಬಾರಿಗೆ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ~ ಎಂದು ಹೇಳಿದರು.`ಶಿವಾಜಿ ಅವರು ಒಳ್ಳೆಯ ಆಡಳಿತಗಾರರಾಗಿದ್ದರು. ಬೇರೆಯವರಿಗೂ ನಮ್ಮ ಜತೆಗೆ ಬದುಕುವ ಹಕ್ಕಿದೆ ಎಂಬ ಮನೋಭಾವ ಹೊಂದಿದ್ದರು. ಯುದ್ಧದಲ್ಲಿ ಸೋತವರಿಗೂ ಗೌರವ ಕೊಡುವ ಮೂಲಕ ಅವರ ಆತ್ಮಗೌರವ ಕಾಪಾಡುತ್ತಿದ್ದರು. ಮಾನವ ಕುಲದ ಮೌಲ್ಯಗಳನ್ನು ಎತ್ತಿ ಹಿಡಿದಿದ್ದರು~ ಎಂದರು.ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಎ.ಎಸ್. ನಾಗರಾಜ್ ಮಾತನಾಡಿ, ಹಿಂದೂ ಸಾಮ್ರಾಜ್ಯವನ್ನು ಕಟ್ಟಿದ ಕೀರ್ತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ. ಯುವಕರಲ್ಲಿ ರಾಷ್ಟ್ರಾಭಿಮಾನ ಬೆಳೆಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಬಾಲ್ಯದಲ್ಲಿ ಮುಸ್ಲಿಂ ರಾಜರು ನಡೆಸಿದ ದಾಳಿಯನ್ನು ನೋಡಿಕೊಂಡ ಬೆಳೆದ ಶಿವಾಜಿ ಮಹಾರಾಜರು, ನಂತರ ದಿನಗಳಲ್ಲಿ ಅವರ ವಿರುದ್ಧ ಪ್ರಬಲವಾದ ಹಿಂದೂ ಸಾಮ್ರಾಜ್ಯ ಕಟ್ಟುವಲ್ಲಿ ಯಶಸ್ವಿಯಾದರು. ಚಿಕ್ಕಂದಿನಿಂದಲೇ ಅವರು ಧಾರ್ಮಿಕತೆ ಬೆಳೆಸಿಕೊಂಡಿದ್ದರು ಎಂದು ಅವರು ಹೇಳಿದರು.ಮಂಡ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವೇಗೌಡ ಅಧ್ಯಕ್ಷತೆ ವಹಿಸಿ ಕೊಂಡಿದ್ದರು. ನಗರಸಭೆ ಅಧ್ಯಕ್ಷ ಎಂ.ಪಿ. ಅರುಣ್‌ಕುಮಾರ್, ನಗರಸಭೆ ಸದಸ್ಯ ಶ್ರೀಧರ್, ಅಪರ ಜಿಲ್ಲಾಧಿಕಾರಿ ಪಿ.ಸಿ. ಜಯಣ್ಣ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠ ಎ.ಎನ್. ರಾಜಣ್ಣ, ಪುಟ್ಟಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.ಜನಪ್ರತಿನಿಧಿಗಳ ಗೈರು: ಶಿವಾಜಿ ಜಯಂತಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ 15ಕ್ಕೂ ಹೆಚ್ಚು ಹೆಸರು ಮುದ್ರಿಸಲಾಗಿತ್ತು. ನಗರಸಭೆ ಅಧ್ಯಕ್ಷ ಅರುಣ್‌ಕುಮಾರ್ ಮಾತ್ರ ಆಗಮಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.