ಗುರುವಾರ , ಏಪ್ರಿಲ್ 15, 2021
24 °C

ಮಹಾರಾಷ್ಟ್ರ ರಾಜ್ಯ ಫಲಕ ತೆರವಿಗೆ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ವಿಶ್ವ ಕನ್ನಡ ಸಮ್ಮೇಳನಕ್ಕೆ ಪೂರ್ವದಲ್ಲಿ ಬೆಳಗಾವಿ ನಗರದ ಹೊರ ಭಾಗದ ಕಂಗ್ರಾಳಿ ಹಾಗೂ ಯಳ್ಳೂರು ಗ್ರಾಮಗಳಲ್ಲಿ ಹಾಕಲಾಗಿರುವ ‘ಮಹಾರಾಷ್ಟ್ರ ರಾಜ್ಯ’ ಫಲಕವನ್ನು ಜಿಲ್ಲಾಡಳಿತ ತೆರವುಗೊಳಿಸಬೇಕು. ಇಲ್ಲದೇ ಹೋದಲ್ಲಿ ಸಮ್ಮೇಳನ ಉದ್ಘಾಟನಾ ದಿನದಂದು (ಮಾರ್ಚ್ 11) ರಕ್ಷಣಾ ವೇದಿಕೆಯ ಕಾರ್ಯಕರ್ತರು ಅಂತಹ ಎಲ್ಲ ಫಲಕಗಳನ್ನು ತೆರವುಗೊಳಿಸಲಿದ್ದಾರೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ಶುಕ್ರವಾರ ಇಲ್ಲಿ ತಿಳಿಸಿದರು.‘ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಎಲ್ಲ ಕಡೆಗಳಲ್ಲಿ ಕನ್ನಡದ ವಾತಾವರಣ ಇರಬೇಕು. ‘ಮಹಾರಾಷ್ಟ್ರ ರಾಜ್ಯ’ ಎಂಬ ಫಲಕವನ್ನು ಮಡಿಲಲ್ಲಿ ಇಟ್ಟುಕೊಂಡು ಸಮ್ಮೇಳನ ಮಾಡಿದರೆ ಅದಕ್ಕೆ ಅರ್ಥವಿಲ್ಲ. ಕಾರಣ ಅಂತಹ ಫಲಕಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಕಾನೂನು ಕ್ರಮ ಜರುಗಿಸಬೇಕು. ಇಲ್ಲದೇ ಹೋದಲ್ಲಿ ರಕ್ಷಣಾ ವೇದಿಕೆಯ ಕಾರ್ಯಕರ್ತರು ಅದನ್ನು ತೆರವುಗೊಳಿಸಲಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಕಾರ್ಯಕರ್ತರ ಪಡೆ

‘ವಿಶ್ವ ಕನ್ನಡ ಸಮ್ಮೇಳನವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಕರವೇ ವತಿಯಿಂದ ಎರಡು ಸಾವಿರಕ್ಕೂ ಅಧಿಕ ಸ್ವಯಂ ಸೇವಕರು ಶ್ರಮಿಸಲಿದ್ದಾರೆ. ಜತೆಗೆ 25 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಅವರು ವಿವರಿಸಿದರು.‘ವಿಶ್ವಕನ್ನಡ ಸಮ್ಮೇಳನ ಬೆಳಗಾವಿಯಲ್ಲಿ ನಡೆಯಬೇಕು ಎಂಬುದು ಕರ್ನಾಟಕ ರಕ್ಷಣಾ ವೇದಿಕೆಯ ಆಶಯವಾಗಿತ್ತು. ಅದರಂತೆ ಸಮ್ಮೇಳನ ನಡೆಯುತ್ತಿದೆ. ಸಮ್ಮೇಳನದಲ್ಲಿ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ದೊರೆಯಬೇಕು. ಇದೊಂದು ರಾಜಕೀಯ ಪಕ್ಷದ ಇಲ್ಲವೇ ಸರ್ಕಾರಿ ಕಾರ್ಯಕ್ರಮ ಆಗಬಾರದು ಎಂಬುದು ರಕ್ಷಣಾ ವೇದಿಕೆಯ ಆಶಯವಾಗಿದೆ’ ಎಂದು ಅವರು ತಿಳಿಸಿದರು.ಬೇಡಿಕೆಗಳು

 ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ಗಡಿ ಭಾಗದ ಕನ್ನಡ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಬೆಳಗಾವಿ ಭಾಗದಲ್ಲಿ ಇನ್ಫೋಸಿಸ್ ಶಾಖೆಯನ್ನು ಈ ಕೂಡಲೇ ಆರಂಭಿಸಬೇಕು. ಸಂಸ್ಥೆಯ ವತಿಯಿಂದ ಈ ಭಾಗದ ಕನ್ನಡ ಶಾಲೆಗಳನ್ನು ದತ್ತು ತೆಗೆದುಕೊಳ್ಳಬೇಕು. ಗಡಿ ಸಮಸ್ಯೆಗೆ ಪರಿಹಾರ ದೊರೆಯಬೇಕು ಎಂಬೆಲ್ಲ ಆಶಯಗಳನ್ನು ಕರವೇ ಹೊಂದಿದೆ’ ಎಂದು ನಾರಾಯಣ ಗೌಡ ಹೇಳಿದರು.ವಿರೋಧ ಇಲ್ಲ

 ‘ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಅವರು ಈ ಹಿಂದೆ ಕನ್ನಡಿಗರು ಮತ್ತು ಕನ್ನಡ ನಾಡಿನ ಬಗ್ಗೆ ಹೇಳಿಕೆ ನೀಡಿದ ಸಂದರ್ಭಗಳಲ್ಲಿ ರಕ್ಷಣಾ ವೇದಿಕೆ ಬಲವಾಗಿ ವಿರೋಧಿಸಿತ್ತು. ಪ್ರಸ್ತುತ ಅವರ ನಿಲುವು ಸಾಕಷ್ಟು ಬದಲಾಗಿದ್ದು, ತಮ್ಮ ಸಂಸ್ಥೆಯಲ್ಲಿ ಸಾಕಷ್ಟು ಕನ್ನಡಿಗರಿಗೆ ಉದ್ಯೋಗ ನೀಡಿದ್ದಾರೆ. ಜತೆಗೆ ಸಾಮಾಜ ಸೇವೆ ಉದ್ದೇಶದಿಂದ ಸಂಸ್ಥೆಯ ವತಿಯಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಹೀಗಾಗಿ ನಾರಾಯಣಮೂರ್ತಿ ಅವರು ವಿಶ್ವ ಕನ್ನಡ ಸಮ್ಮೇಳನ ಉದ್ಘಾಟಿಸುವುದಕ್ಕೆ ರಕ್ಷಣಾ ವೇದಿಕೆಯ ವಿರೋಧ ಇಲ್ಲ’ ಎಂದು ತಿಳಿಸಿದರು. 

 

  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.