ಶುಕ್ರವಾರ, ಮೇ 7, 2021
26 °C

ಮಹಾಲೆ ಗಣಪನಿಗೆ ಆಭರಣದ ಅಲಂಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಕೋಲಾ: 1924ರ ವೇಳೆಗೆ ಪ್ರತಿಷ್ಠಾಪನೆಗೊಂಡ ಇಲ್ಲಿನ ಮಹಾಲೆ ಕುಟುಂಬದ ಗಣೇಶನಿಗೆ ಸಾರ್ವತ್ರಿಕ ಮೌಲ್ಯ ಪ್ರಾಪ್ತವಾಗಿದ್ದು, ಸ್ವಾತಂತ್ರ್ಯ ಚಳವಳಿಯ ವಿದ್ಯಮಾನಗಳೊಂದಿಗೆ ಮಹಾಲೆ ಗಣಪತಿ ಉತ್ಸವ ತಳಕು ಹಾಕಿಕೊಂಡಿದೆ. ಚಳವಳಿ ಪ್ರಖರವಾಗಿದ್ದ ಈ ಭಾಗದಲ್ಲಿ ರಾಷ್ಟ್ರೀಯತೆಯೇ ಧರ್ಮವೆಂದು ಭಾವಿಸಿದ್ದ ಪುಂಡಲೀಕ ಮಹಾಲೆಯವರು ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಜೊತೆಗೆ ತಾವು ತಯಾರಿಸಿ ಪ್ರತಿಷ್ಠಾಪಿಸುತ್ತಿದ್ದ ಗಣೇಶನ ಮೂರ್ತಿಯ ಅಕ್ಕ ಪಕ್ಕದಲ್ಲಿ ಸ್ವಾತಂತ್ರ್ಯ ಹೋರಾಟದ ಘಟನಾವಳಿಗಳನ್ನು ಬಿಂಬಿಸುವಂತಹ  ಚಿತ್ರಗಳು, ರಾಷ್ಟ್ರೀಯ ನಾಯಕರ ಮಣ್ಣಿನ ಪ್ರತಿಮೆಗಳನ್ನು ಸಿದ್ಧಪಡಿಸಿ ಪ್ರದರ್ಶಿಸುವ ಮೂಲಕ ಹೋರಾಟಕ್ಕೆ ವಿಸ್ತೃತವಾದ ಆಯಾಮವನ್ನು ಒದಗಿಸಿದರು. ಇವುಗಳನ್ನು ನೋಡಲೆಂದೇ ಹಳ್ಳಿ ಹಳ್ಳಿಗಳಿಂದ ತಂಡೋಪತಂಡವಾಗಿ ಜನರು ನಗರಕ್ಕೆ ಬರತೊಡಗಿದರು.ಇದರಿಂದಾಗಿ ವಸಾಹತುಶಾಹಿ ಪೊಲೀಸರು ಪುಂಡಲೀಕ ಮಹಾಲೆಯವರನ್ನು ಚಳವಳಿಯನ್ನು ಪ್ರಚೋದಿಸಿದ ಆರೋಪದ ಮೇಲೆ ಸೆರೆಮನೆಗೆ ತಳ್ಳಿದ್ದರು. ಸಹಜವಾಗಿ ಮಹಾಲೆ ಗಣಪನು ಮಹಾಜನತೆಯ ಗಣಪತಿಯೆಂಬ ಎಂಬ ಹೆಸರನ್ನು ಗಳಿಸಿಕೊಂಡನು.  ನಂತರದ ದಿನಗಳಲ್ಲಿ  ಇಷ್ಟಾರ್ಥ ಸಿದ್ಧಿ ವಿನಾಯಕನೆಂಬ ಪ್ರತೀತಿಗೆ ಒಳಗಾದ ಮಹಾಲೆ ಗಣಪತಿಗೆ ಸಾರ್ವಜನಿಕರು ಶ್ರದ್ಧಾ ಭಕ್ತಿಗಳಿಂದ ಹರಕೆ ಹೊತ್ತುಕೊಂಡು ತಮ್ಮ ಶಕ್ತ್ಯಾನುಸಾರವಾಗಿ ಚಿನ್ನ, ಬೆಳ್ಳಿ ಮುಂತಾದ ಬೆಲೆ ಬಾಳುವ ಆಭರಣಗಳನ್ನು ಅರ್ಪಿಸಲು ಮುಂದಾದರು. 

ಇದೀಗ ಸಂಪೂರ್ಣ ಚಿನ್ನದ ಆಭರಣಗಳಿಂದ, ವಜ್ರಖಚಿತವಾದ ಬಂಗಾರದ ಕಿರೀಟದಿಂದ ಅಲಂಕೃತನಾಗಿರುವ ಈ ಗಣೇಶನಿಗೆ  12 ದಿನಗಳ ಕಾಲ ಆರಾಧನೆ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.