ಮಂಗಳವಾರ, ಏಪ್ರಿಲ್ 20, 2021
26 °C

ಮಹಾವೀರರ ತೈಲಚಿತ್ರ ಶೋಭಾಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್:  ಮಹಾವೀರ ಜಯಂತಿಯ ನಿಮಿತ್ತ ನಗರದಲ್ಲಿ ಶನಿವಾರ ಸಂಭ್ರಮದ ಮಧ್ಯೆ ಪಲ್ಲಕ್ಕಿ ಶೋಭಾಯಾತ್ರೆ ಹಾಗೂ ಮಹಾವೀರರ ತೈಲಚಿತ್ರದ ಮೆರವಣಿಗೆ ನಡೆಯಿತು.

ನಗರದ ಶಹಾಗಂಜ್‌ನಲ್ಲಿ ಇರುವ ಜೈನ ಮಂದಿರದಲ್ಲಿ ಬೆಳಿಗ್ಗೆ ಬೀದರ್ ವಾಯುಪಡೆ ತರಬೇತಿ ಕೇಂದ್ರದ ಅಧಿಕಾರಿ ಪ್ರತೀಕ ಜೈನ್ ಧ್ವಜಾರೋಹಣ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು.

ಅಲ್ಲಿಂದ ಆರಂಭವಾದ ಮೆರವಣಿಗೆಯು ಚೌಬಾರಾ, ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತ, ಕ್ರಾಂತಿ ಗಣೇಶ ಮೂಲಕ ಮರಳಿ ಜೈನ ಮಂದಿರಕ್ಕೆ ಆಗಮಿಸಿ ಸಮಾವೇಶಗೊಂಡಿತ್ತು.

ಅಲಂಕೃತ ವಾಹನದಲ್ಲಿ ಮಹಾವೀರರ ತೈಲಚಿತ್ರ ಇರಿಸಲಾಗಿತ್ತು. ಧ್ವನಿವರ್ಧಕಗಳಲ್ಲಿ ಭಕ್ತಿಗೀತೆಗಳು ಮೊಳಗಿದ್ದವು. ಕಳಸ ಹೊತ್ತ ಮಹಿಳೆಯರು ಮೆರವಣಿಗೆಯ ಮೆರುಗು ಹೆಚ್ಚಿಸಿದರು. ಮಕ್ಕಳು ಆರತಿ ಹಿಡಿದು ಸಾಗಿದ್ದರು.

ಮೆರವಣಿಗೆ ಜೈನ್ ಮಂದಿರಕ್ಕೆ ಆಗಮಿಸಿದ ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತಾದಿಗಳು ಮಹಾವೀರರ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಪಂಚಾಮೃತ ಅಭಿಷೇಕ ಮಾಡಿ ಕೃತಜ್ಞರಾದರು.

ದೇವಸ್ಥಾನದಲ್ಲಿ ಧ್ವನಿವರ್ಧಕಗಳಲ್ಲಿ ಭಕ್ತಿ ಗೀತೆಗಳು ಮೊಳಗಿದ್ದವು. ಭಕ್ತರು ಶ್ರದ್ಧೆ, ಭಕ್ತಿಯೊಂದಿಗೆ ಪೂಜೆಯಲ್ಲಿ ತೊಡಗಿದ್ದರು. ಹೀಗಾಗಿ ದೇವಸ್ಥಾನದ ಪರಿಸರದಲ್ಲಿ ಇಡೀ ದಿನ ಭಕ್ತಿಮಯ ವಾತಾವರಣ ನಿರ್ಮಾಣ ಆಗಿತ್ತು.

ಸಾಯಂಕಾಲ ನಡೆದ ತೊಟ್ಟಿಲು ಕಾರ್ಯಕ್ರಮದಲ್ಲಿ ನೂರಾರು ಜನ ಪಾಲ್ಗೊಂಡಿದ್ದರು. ನಂತರ ನಡೆದ ವಿಚಾರಗೋಷ್ಠಿಯಲ್ಲಿ ಮಹಾವೀರರು ಹಾಗೂ ಜೈನ್ ಧರ್ಮದ ಕುರಿತು ಪ್ರಮುಖರು ಮಾತನಾಡಿದರು. ಮಹಾವೀರರ ಅಹಿಂಸಾ ತತ್ವಗಳು ಪ್ರಸ್ತುತ ವಿಶ್ವಕ್ಕೆ ಅಗತ್ಯ ಇವೆ.

ಹೀಗಾಗಿ ಎಲ್ಲರು ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಸಾಹಿತಿ ಎಂ.ಜಿ. ಗಂಗನಪಳ್ಳಿ, ಉಪನ್ಯಾಸಕ ಬಿ.ಎ. ಖಿದ್ರಾಪುರೆ, ಜೈನ್ ಮಂದಿರದ ಅಧ್ಯಕ್ಷ ಜಿನೇಂದ್ರ ಟಿಕ್ಕೆ, ಜಿಲ್ಲಾ ಜೈನ ಮಿಲನ ಕಾರ್ಯದರ್ಶಿ ವಿಜಯಕುಮಾರ ಜೈನ ಮತ್ತಿತರರು ಉಪಸ್ಥಿತರಿದ್ದರು. ನಂತರ ಜೈನ ಧರ್ಮದ ಕುರಿತು ವಿಡಿಯೋ ಪ್ರದರ್ಶನ ನಡೆಯಿತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.