ಮಂಗಳವಾರ, ಮಾರ್ಚ್ 9, 2021
23 °C

ಮಹಾಶಿವರಾತ್ರಿ ಉತ್ಸವಕ್ಕೆ ಇರ್ಪು ಸಜ್ಜು

ಪ್ರಜಾವಾಣಿ ವಾರ್ತೆ/ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಮಹಾಶಿವರಾತ್ರಿ ಉತ್ಸವಕ್ಕೆ ಇರ್ಪು ಸಜ್ಜು

ಗೋಣಿಕೊಪ್ಪಲು:  ದಕ್ಷಿಣ ಕೊಡಗಿನ  ಪ್ರಸಿದ್ಧ ತೀರ್ಥಕ್ಷೇತ್ರ ಇರ್ಪು ರಾಮೇಶ್ವರ ದೇವಸ್ಥಾನ ಶಿವರಾತ್ರಿ ಉತ್ಸವಕ್ಕೆ ಸಜ್ಜುಗೊಂಡಿದೆ. ದೇವಸ್ಥಾನಕ್ಕೆ ಸುಣ್ಣ ಬಣ್ಣ ಹಚ್ಚಿ ಅಲಂಕರಿಸಲಾಗಿದೆ.ಭಕ್ತಾದಿಗಳು ಬಳಸುವ ದೇವಸ್ಥಾನ ಮುಂಭಾಗದ ಶೌಚಾಲಯಗಳನ್ನು ಸ್ವಚ್ಛಗೊಳಿಸ ಲಾಗಿದೆ. ಪ್ರವಾಸಿಗರ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಇರ್ಪು ಜಲಪಾತದ ಬಳಿ ಭಕ್ತರು ಸ್ನಾನ ಮಾಡುವಾಗ ಯಾವುದೇ ಅಪಾಯ ಸಂಭವಿಸದಂತೆ ಅರಣ್ಯ ಇಲಾಖೆಯವರು ಬಿದಿರಿನ ತಟ್ಟೆ ಹಾಕಿದ್ದಾರೆ. ಜಲಪಾತಕ್ಕೆ ಹೋಗುವ ಮಾರ್ಗದ ಮೆಟ್ಟಿಲುಗಳು ಜಾರದಂತೆ ಸುಭದ್ರಗೊಳಿಸಿದ್ದಾರೆ.ರಾಮೇಶ್ವರ ದೇವಸ್ಥಾನದಲ್ಲಿರುವ ಶಿವಲಿಂಗಕ್ಕೆ ಫೆ. 27ರ ಶಿವರಾತ್ರಿಯಂದು ಶ್ರದ್ಧಾಭಕ್ತಿಯಿಂದ  ಭಕ್ತಾದಿಗಳು ಪೂಜೆ ಪುರಸ್ಕಾರಗಳನ್ನು ನಡೆಸಲಿದ್ದಾರೆ. 28ರ ಬೆಳಿಗ್ಗೆಯಿಂದ ಸಂಜೆವರೆಗೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ.ಪೌರಾಣಿಕ ಹಿನ್ನೆಲೆ:  ತ್ರೇತಾಯುಗದಲ್ಲಿ ಶ್ರೀರಾಮಚಂದ್ರನು ರಾವಣನನ್ನು ಸಂಹರಿಸಿ ಸೀತೆಯನ್ನು ಬಿಡಿಸಿಕೊಂಡು ಲಕ್ಷ್ಮಣನ ಜೊತೆ ಬ್ರಹ್ಮಗಿರಿ ಪರ್ವತದ ತಪ್ಪಲಿನಲ್ಲಿ ಬರುತ್ತಿದ್ದಾಗ ಶಿವರಾತ್ರಿ ಸಮೀಪಿಸಿತು. ಆಗ ಶಿವನನ್ನು ಪೂಜೆ ಮಾಡಲು ಲಿಂಗವಿಲ್ಲದ ಕಾರಣ ಹನುಮಂತನಿಗೆ ಕಾಶಿಯಿಂದ ಲಿಂಗವನ್ನು ತರಲು ಹೇಳುತ್ತಾನೆ. ಹನುಮಂತ ಕಾಶಿಗೆ ಲಿಂಗ ತರಲು ವಾಯು ಮಾರ್ಗದಲ್ಲಿ ಹಾರಿ ಮರಳಿ ಲಿಂಗವನ್ನು ತರುವಾಗ ದೇವ ಕನ್ನಿಕೆಯರು ಸ್ನಾನ ಮಾಡುತ್ತಿದ್ದರು. ಸ್ನಾನ ಮುಗಿಯುವವರೆಗೆ ಕಾದು ಲಿಂಗವನ್ನು ತರುವ ವೇಳೆಗೆ  ಸುಸ್ತಾದ ರಾಮ ಮರಳಿನಿಂದ ಶಿವಲಿಂಗವನ್ನು ತಯಾರಿಸಿ ಪೂಜೆ ಮಾಡಿದ್ದನು.ತಾನು ಕಷ್ಟಪಟ್ಟ ತಂದ ಲಿಂಗ ಸಾರ್ಥಕವಾಗಲಿಲ್ಲ ಎಂದು ಬೇಸರಗೊಂಡ ಹನುಮಂತ  ಪಕ್ಕದಲ್ಲೆ ಇದ್ದ  ಬೆಟ್ಟಕ್ಕೆ ಹಾರಿ ಸಿಟ್ಟಿನಿಂದ ಬಾಲವನ್ನು ಬಡಿದನು. ಇದನ್ನು ಕಂಡ ರಾಮ  ಹನುಮಂತನಿಗೆ ಸಮಾಧಾನ ಹೇಳಿ  ‘ನೀನು ತಂದ ಲಿಂಗವನ್ನು ಇಲ್ಲಿಂದ ಮೂರು ಹೆಜ್ಜೆ ಮುಂದೆ ಸ್ಥಾಪನೆ ಮಾಡು' ಎಂದು ಹೇಳಿದನು. ಅದರಂತೆ  ಇರ್ಪುವಿನಿಂದ  ಮೂರು ಹೆಜ್ಜೆ ಇಟ್ಟು ಹೇರ್ಮಾಡು ಎಂಬ ಸ್ಥಳದಲ್ಲಿ ಲಿಂಗವನ್ನು  ಸ್ಥಾಪಿಸಿದನು. ಹೆಗಲಿನಿಂದ ಲಿಂಗವನ್ನು ತಂದ ಕಾರಣ ಆ ಜಾಗಕ್ಕೆ ’ಹೇರ್ಮಾಡು’ ಎಂಬ ಹೆಸರು ಬಂತು ಎಂದು ಹಿರಿಯರು ಹೇಳುತ್ತಾರೆ.  ರಾಮ ಪೂಜೆಗೆ ನೀರು ತರಲು ಲಕ್ಷ್ಮಣನಿಗೆ ಹೇಳುತ್ತಾನೆ. ಆಗ ಲಕ್ಷ್ಮಣ ಬೆಟ್ಟಕ್ಕೆ ಬಾಣಬಿಟ್ಟು  ನೀರು ಬರಿಸುತ್ತಾನೆ. ನೀರು ಭೂಮಿಯಿಂದ ಚಿಮ್ಮಿ ಎರಡು ಭಾಗವಾಗಿ ಹರಿಯುತ್ತದೆ. ಅದರ ಒಂದು ಭಾಗವನ್ನು ಲಕ್ಷ್ಮಣತೀರ್ಥವೆಂತಲೂ ಮತ್ತೊಂದು ಭಾಗವನ್ನು ರಾಮತೀರ್ಥ ಎಂದೂ ಕರೆಯಲಾಯಿತು. ಮಲೆಯಾಳಂನಲ್ಲಿ ‘ಇರ್’ ಎಂದರೆ ಎರಡು ಎಂದರ್ಥ, ‘ಪೋ ’ಎಂದರೆ ಹೊಳೆ ಎಂದರ್ಥ. ಈ ಕಾರಣದಿಂದ  ರಾಮೇಶ್ವರ ಕ್ಷೇತ್ರಕ್ಕೆ ‘ಇರ್ಪು’ ಎಂಬ  ಹೆಸರು ಬಂದಿತು ಎನ್ನುತ್ತಾರೆ ದೇವಸ್ಥಾನ ಸಮಿತಿ ಸದಸ್ಯ ಅಜ್ಜಮಾಡ ಪಿ. ಕುಶಾಲಪ್ಪ.ಇದರ ಮೇಲ್ಭಾಗದಲ್ಲಿ ಹನುಮಂತ ಬೆಟ್ಟ, ಮುನಿಕಲ್ಲು ಗುಹೆ, ಭೀಮಕಲ್ಲು, ಬ್ರಿಟಿಷ್‌ ಬಂಗಲೆ, ಕಾಟಿಮಾಳ, ಚೆಂಡುಮಾಳ ಮೊದಲಾದ ಸ್ಥಳಗಳಿವೆ. ಅರಣ್ಯ ಇಲಾಖೆ ಅನುಮತಿ ಪಡೆದು ಇವುಗಳನ್ನೆಲ್ಲ ನೋಡಬಹುದು. ಬೆಟ್ಟದ ಮೇಲೆ ವನ್ಯಜೀವಿಗಳು ಬಹಳಷ್ಟು ಇರುವುದರಿಂದ ಬೆಟ್ಟ ಏರಲು ಅರಣ್ಯ ಇಲಾಖೆ ಅನುಮತಿ ಕಡ್ಡಾಯವಾಗಿರುತ್ತದೆ.ಬೆಟ್ಟದ ನೆತ್ತಿಯೇರಿ ನೋಡಿದರೆ ಅದರ ಮತ್ತೊಂದು ಬದಿಯಲ್ಲಿ ಕೇರಳದ ತಿರುನೆಲ್ಲಿ  ಕಾಣುತ್ತದೆ. ಪ್ರವಾಸಿಗರ ಸ್ವರ್ಗ ಎನ್ನಿಸಿರುವ ಇರ್ಪು ಹುಣಸೂರಿನಿಂದ ನಾಗರಹೊಳೆ ಮಾರ್ಗವಾಗಿ 55 ಕಿಮೀ, ಗೋಣಿಕೊಪ್ಪಲಿನಿಂದ 35 ಕಿಮೀ ದೂರದಲ್ಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.